ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಬೆಲೆ ಏರಿಕೆ: ತತ್ತರಿಸಿದ ಗ್ರಾಹಕ

Last Updated 15 ನವೆಂಬರ್ 2017, 7:28 IST
ಅಕ್ಷರ ಗಾತ್ರ

ದಾವಣಗೆರೆ: ಅತಿವೃಷ್ಟಿ, ಬೆಳೆಗೆ ರೋಗ ಬಾಧೆ, ಇಳುವರಿ ಕುಂಠಿತ, ನೆರೆ ರಾಜ್ಯಗಳಿಗೆ ಹೆಚ್ಚಿದ ರಫ್ತು ಒಳಗೊಂಡಂತೆ ಹಲವು ಸಮಸ್ಯೆಗಳಿಂದಾಗಿ ತಿಂಗಳಿನಿಂದ ತರಕಾರಿ ಬೆಲೆಗಳು ಗಗನಮುಖಿಯಾಗಿದ್ದು, ಕೆ.ಜಿ. ತೂಕದಲ್ಲಿ ಖರೀದಿಸುವವರು ಅರ್ಧ ಕೆ.ಜಿಗೆ ಖರೀದಿಗೆ ಸೀಮಿತವಾಗಿದ್ದಾರೆ.

ನಿತ್ಯ ಕೊಳ್ಳಲೇ ಬೇಕಾದ ಅನಿವಾರ್ಯ ಗ್ರಾಹಕರಿಗಾದರೆ, ಖರೀದಿ ಮಾಡಿದ ವ್ಯಾಪಕ ತರಕಾರಿಯನ್ನು ಹೇಗೆ ಮಾರಾಟ ಮಾಡಬೇಕು ಎಂಬ ಚಿಂತೆ ಚಿಲ್ಲರೆ ವ್ಯಾಪಾರಿಗಳದ್ದಾಗಿದೆ.

ಕಳೆದ ಒಂದೂವರೆ ತಿಂಗಳ ಹಿಂದೆ ಟೊಮೆಟೊ ಬಾಕ್ಸ್‌ ಒಂದಕ್ಕೆ ₹ 150ಕ್ಕೆ ಇತ್ತು. ಈಗ ದಿಢೀರ್‌ ₹ 800ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಚಿಲ್ಲಾರೆ ಮಾರಾಟದಲ್ಲಿ ಕೆಜಿಗೆ ₹ 40 ರಿಂದ ₹ 50ಕ್ಕೆ ಮಾರಾಟವಾಗುತ್ತಿದೆ.

ಟೊಮೆಟೊ ನೆರೆ ರಾಜ್ಯಗಳಿಗೆ ಹೆಚ್ಚು ರಫ್ತಾಗುತ್ತಿದ್ದು, ಇದರಿಂದಾಗಿ ಮಾರುಕಟ್ಟೆಗೆ ಆವಾಕ ಕಡಿಮೆಯಾಗಿದೆ. ಹೀಗಾಗಿ ಬೆಲೆ ಏರಿಕೆಯಾಗಿದೆ. ಜತೆಗೆ ಬೀನ್ಸ್‌, ಕ್ಯಾರೇಟ್‌, ಈರುಳ್ಳಿ ಹಾಗೂ ವಿವಿಧ ಬಗೆಯ ಸೊಪ್ಪುಗಳ ದರದಲ್ಲಿಯೂ ಏರಿಕೆಯಾಗಿದೆ ಎಂದು ತರಕಾರಿಯ ಸಗಟು ವ್ಯಾಪಾರಿ ನೀಲಪ್ಪ ವಿಶ್ಲೇಷಿಸುತ್ತಾರೆ.

‘ಸೊಪ್ಪಿನ ಸಗಟು ವ್ಯಾಪಾರಿಗಳು ರೈತರಿಂದ ಪಾಲಕ್‌, ಮೆಂತೆ, ಕೆಂಪು ಸೊಪ್ಪು, ಹಾಗೂ ಸಬ್ಬಾಸಿಗೆ ಒಳಗೊಂಡಂತೆ 100 ಕಟ್ಟು ಸೊಪ್ಪುಗಳಿಗೆ ₹ 120ಕ್ಕೆ ಖರೀದಿಸಿ, ಚಿಲ್ಲಾರೆ ವ್ಯಾಪಾರಿಗಳಿಗೆ ₹ 300ಕ್ಕೆ ಮಾರಾಟ ಮಾಡುತ್ತಾರೆ. ಇದರಿಂದ ಗ್ರಾಹಕರೂ ಹೆಚ್ಚಿನ ಬೆಲೆ ತೆತ್ತು ಖರೀದಿಸಬೇಕಿದೆ’ ಎನ್ನುತ್ತಾರೆ ಸಾರಥಿ ಗ್ರಾಮದ ರಾಮಣ್ಣ.

ಗ್ರಾಹಕರ ಅಳಲು:
ಬೀದಿ ಬದಿ, ಕೈಗಾಡಿಗಳಲ್ಲಿ ಮಾರುವ ಚಿಲ್ಲರೆ ವ್ಯಾಪಾರಿಗಳು ಒಂದು ಕಟ್ಟು ಮೆಂತೆ, ಕೊತ್ತೊಂಬರಿ ಸೊಪ್ಪಿಗೆ ₹ 5ಕ್ಕೆ ಮಾರಾಟ ಮಾಡುತ್ತಾರೆ. ಇನ್ನೂ ಟೊಮೆಟೊ, ಬೀನ್ಸ್‌ ಇತರೆ ತರಕಾರಿಗಳನ್ನು ಸಗಟು ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ಕೆ.ಜಿ ಕೊಳ್ಳುವ ಬದಲು ಅರ್ಧ ಕೆ.ಜಿ ಕೊಂಡು ಅಡುಗೆ ಮಾಡುವಂತಾಗಿದೆ ಎನ್ನುತ್ತಾರೆ ಉಷಾ.

ನಿತ್ಯ ಬಿಸಿಲು, ದೂಳು ಎನ್ನದೇ ರಸ್ತೆ ಬದಿಯಲ್ಲಿಯೇ ಕುಳಿತು ತರಕಾರಿ ವ್ಯಾಪಾರ ಮಾಡುತ್ತೇವೆ. ಆದರೆ, ಖರೀದಿಸುವವರು ಸಂಖ್ಯೆ ಕಡಿಮೆಯಾಗಿದೆ ಎನ್ನುತ್ತಾರೆ ಚಿಲ್ಲರೆ ವ್ಯಾಪಾರಿ ಕಾವೇರಮ್ಮ.

ಟೊಮೆಟೊ ಬೆಳೆಗೆ ಬೆಂಕಿರೋಗ, ಕರಜಿಗಿ ಹುಳು, ಇಬ್ಬನಿಗೆ ಮುಟ್ರಾ ರೋಗ ಬಿದ್ದಿದೆ. ಹೀಗಾಗಿ ಎಕರೆಗೆ 1000 ಬಾಕ್ಸ್‌ ಬರುವ ಟೊಮೆಟೊ ಇಳುವರಿಯು ಕೇವಲ 300ಕ್ಕೆ ಕುಸಿದಿದೆ. ಹೀಗಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದು, ಬೆಲೆ ಏರಿಕೆಯಿಂದ ತುಸು ನೆಮ್ಮದಿಯಿಂದ ಇದ್ದಾರೆ ಎನ್ನುತ್ತಾರೆ ತರಕಾರಿ ಬೆಳೆಗಾರ ಮಾಯಕೊಂಡ ಗ್ರಾಮದ ಶಂಕರಪ್ಪ.

ತರಕಾರಿ ಮಾರಾಟ ದರ
ತರಕಾರಿ: ಚಿಲ್ಲರೆ ದರ, ಸಗಟು ದರ :

ಟೊಮೆಟೊ – ಕೆ.ಜಿ.ಗೆ ₹ 40 ರಿಂದ 50, ಬಾಕ್ಸ್‌ (24ಕೆಜಿ.)1ಕ್ಕೆ, ₹ 800.
ಹಸಿ ಮೆಣಸಿನಕಾಯಿ – ಕೆ.ಜಿ.ಗೆ ₹ 20, ₹ 16.
ಕ್ಯಾರೇಟ್‌ –  ಕೆ.ಜಿಗೆ ₹ 80, ₹ 60ರಿಂದ 70
ತೊಗರಿ–  ಕೆ.ಜಿ.ಗೆ ₹ 80, ₹ 60,
ಬೀನ್ಸ್‌– ಕೆ.ಜಿ.ಗೆ ₹60 ರಿಂದ 70 , ಸಗಟು ದರ: ₹ 40
ಎಲೆ ಕೋಸು– ಕೆ.ಜಿ.ಗೆ ₹ 30 , ₹ 26
ಸೀಮೆ ಬದನೆ ಕಾಯಿ–ಕೆ.ಜಿ.ಗೆ ₹ 20,  ₹ 14
ಜವಳಿಕಾಯಿ – ಕೆ.ಜಿ.ಗೆ ₹ 40–50 ,  ₹32
ಸವತೆ ಕಾಯಿ– ಕೆ.ಜಿ.ಗೆ  ₹ 30 , ₹ 25
ಆಲೂಗಡ್ಡೆ– ಕೆ.ಜಿ.ಗೆ ₹ 20,  ₹15
ಮೂಲಂಗಿ – ₹ 25, ₹ 18
ಅವರೆಕಾಯಿ– ಕೆ.ಜಿ.ಗೆ ₹ 50, ₹ 35–40
ಬದನೆ ಕಾಯಿ – ಕೆ.ಜಿ.ಗೆ ₹ 20, ₹ 15
ಈರುಳ್ಳಿ – ಕೆ.ಜಿ.ಗೆ ₹ 50, ₹ 35–40
ಈರೇಕಾಯಿ – ಕೆ.ಜಿಗೆ ₹ 40, ₹ 30

ಉಳಿದಂತೆ ಸೊಪ್ಪಿನ ದರಗಳು ಒಂದು ಕಟ್ಟು ₹ 5ರಂತೆ ಚಿಲ್ಲರೆ ವ್ಯಾಪಾರದ ದರದಲ್ಲಿ ಮಾರಾಟವಾಗುತ್ತಿವೆ.

* * 

ಅಕಾಲಿಕ ಮಳೆ, ರೋಗ ಬಾಧೆಯಿಂದಾಗಿ ತರಕಾರಿ ಬೆಳೆಗಳ ಇಳುವರಿ ಕುಂಠಿತವಾಗಿದೆ. ಮಾರುಕಟ್ಟೆಯಲ್ಲೂ  ಉತ್ತಮ ಬೆಲೆ ಸಿಗುತ್ತಿಲ್ಲ. 
ಅಂಜಿನಪ್ಪ, ತರಕಾರಿ ಬೆಳೆಗಾರ,
ಬೋರಗೊಂಡನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT