ಗುರುವಾರ , ಫೆಬ್ರವರಿ 25, 2021
20 °C

ನಿರೀಕ್ಷೆ ಹೆಚ್ಚಿಸಿದ ವೈದ್ಯಕೀಯ ಕಾಲೇಜು

ಹರ್ಷವರ್ಧನ ಪಿ.ಆರ್. Updated:

ಅಕ್ಷರ ಗಾತ್ರ : | |

ನಿರೀಕ್ಷೆ ಹೆಚ್ಚಿಸಿದ ವೈದ್ಯಕೀಯ ಕಾಲೇಜು

ಹಾವೇರಿ: 2018–19ನೇ ಸಾಲಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು (ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ಆರಂಭಗೊಳ್ಳಬೇಕಾದರೆ, ಡೀನ್ (ಪ್ರಾಚಾರ್ಯ ಅಥವಾ ಆಡಳಿತಾಧಿಕಾರಿ) ನೇಮಕ ಹಾಗೂ ಅನುದಾನ ಬಿಡುಗಡೆ ತ್ವರಿತವಾಗಿ ಆಗಬೇಕಾಗಿದೆ.

2018–19ನೇ ಸಾಲಿನಲ್ಲಿ ತರಗತಿ ಆರಂಭಿಸುವ ಕುರಿತು ಭಾರತೀಯ ವೈದ್ಯಕೀಯ ಮಂಡಳಿಯ (ಐಎಂಸಿ) ಮೂರು ತಜ್ಞರ ತಂಡವು ಸೋಮವಾರ ನಗರಕ್ಕೆ ಭೇಟಿ ನೀಡಿ ಮೂಲ ಸೌಕರ್ಯ ಹಾಗೂ ಬೋಧನಾ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದೆ.

ಕೋಲ್ಕತ್ತಾದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಅಂಗಕ್ರಿಯಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಉತ್ಪಲ್‌ ಕುಮಾರ್‌ ದತ್ತಾ ಸಂಚಾಲಕತ್ವದ ಗುಜರಾತ್ ಭಾವನಗರ ಸರ್ಕಾರಿ ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗದ ಪ್ರೊಫೆಸರ್ ಡಾ. ಜೆ.ಆರ್. ಗೊಹಿಲ್‌ ಮತ್ತು ಸೂರತ್ ಮುನ್ಸಿಪಲ್‌ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ವಿಧಿವಿಜ್ಞಾನ ಪ್ರಯೋಗಾಲಯದ ಪ್ರೊಫೆಸರ್ ಡಾ. ಎಂ.ಐ. ಶೇಖ್ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಭೇಟಿ ನೀಡಿದ ತಂಡವನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ನಾವು ಪ್ರತಿಕ್ರಿಯೆ ನೀಡುವುದಿಲ್ಲ. ಸಂಬಂಧಿತರಿಗೆ ವರದಿ ನೀಡುತ್ತೇವೆ. ಸ್ಥಳೀಯ ಅಥವಾ ಸಂಬಂಧಿತ ಸಂಸ್ಥೆಯ ಮುಖ್ಯಸ್ಥರು ವಿವರ ನೀಡಬಹುದು’ ಎಂದು ಪ್ರತಿಕ್ರಿಯಿಸಿದರು.

ಸಿದ್ಧತೆ: ‘ಐಎಂಸಿ ಪ್ರಕಾರ ಕನಿಷ್ಠ 25 ಎಕರೆ ಜಾಗ ಬೇಕು. ಜಿಲ್ಲಾಡಳಿತವು ನಗರ (ದೇವಗಿರಿ ಯಲ್ಲಾಪುರ) ವ್ಯಾಪ್ತಿಯೊಳಗೆ 50 ಎಕರೆ ಜಾಗವನ್ನು ಗುರುತಿಸಿದ್ದು, 34 ಎಕರೆಯನ್ನು ಈಗಾಗಲೇ ನೀಡಿದೆ. ಆರಂಭಿಕ ವರ್ಷದ ಮೂರು ವಿಭಾಗಗಳು (ಅಂಗರಚನಾ ಶಾಸ್ತ್ರ, ಅಂಗಕ್ರಿಯಾ ಶಾಸ್ತ್ರ, ಜೀವ ರಾಸಾಯನ ವಿಜ್ಞಾನ) ಹಾಗೂ ಆಡಳಿತ ಕಚೇರಿಗೆ ಬೇಕಾದ ಮೂಲ ಸೌಕರ್ಯಗಳನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕಲ್ಪಿಸಲಾಗಿದೆ. ಇಲ್ಲಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗುವುದು. ಅಗತ್ಯ ಪೀಠೋಪಕರಣಗಳನ್ನು ಒದಗಿಸಲಾಗುವುದು. ಜಿಲ್ಲಾಡಳಿತ ಸಂಪೂರ್ಣ ಸನ್ನದ್ಧವಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಮಾಹಿತಿ ನೀಡಿದರು.

‘ಕಾಲೇಜು ಡೀನ್‌ ನೇಮಕಾತಿಯನ್ನು ವೈದ್ಯಕೀಯ ಶಿಕ್ಷಣ ಸಚಿವಾಲಯ ಮಾಡುತ್ತದೆ. ಬಹುತೇಕ ಸಂದರ್ಭದಲ್ಲಿ ಸಮೀಪದ ವೈದ್ಯಕೀಯ ಸಂಸ್ಥೆಯ ಮುಖ್ಯಸ್ಥರನ್ನು ನಿಯೋಜಿಸುತ್ತದೆ. ಹುಬ್ಬಳ್ಳಿಯಲ್ಲಿ ಕಿಮ್ಸ್‌ ಹಾಗೂ ಗದಗದಲ್ಲಿ ವೈದ್ಯಕೀಯ ಕಾಲೇಜು ಇರುವುದು ನಮಗೆ ಪೂರಕವಾಗಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಐಎಂಸಿ ಸೂಚನೆ ಅನ್ವಯ ಅಗತ್ಯ ಸಿಬ್ಬಂದಿ ಹಾಗೂ ಮೂಲ ಸೌಕರ್ಯವನ್ನು ರಾಜ್ಯ ಸರ್ಕಾರ ಕಲ್ಪಿಸಲಿದೆ. ಜಿಲ್ಲಾಡಳಿತವು ಅಗತ್ಯ ಕ್ರಮ ಕೈಗೊಳ್ಳಲಿದೆ’ ಎಂದು ಅವರು ವಿವರಿಸಿದರು.

‘ಸೋಮವಾರ ಭೇಟಿ ನೀಡಿದ್ದ ಐಎಂಸಿ ತಂಡಕ್ಕೆ ಮೂಲಸೌಕರ್ಯಗಳನ್ನು ತೋರಿಸಲಾಗಿದೆ. ಅಲ್ಲದೇ, ಅವರು ಮಂಡಿಸಿದ ಬೇಡಿಕೆಗಳ ಕುರಿತು ಜಿಲ್ಲಾಡಳಿತದ ಮೂಲಕ ಸರ್ಕಾರದ ಗಮನಕ್ಕೆ ತರುತ್ತವೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ನಾಗರಾಜ ನಾಯಕ್ ತಿಳಿಸಿದರು.

ಕಾಂಗ್ರೆಸ್‌ಗೆ ಗುಳಿಗೆ, ಬಿಜೆಪಿಗೆ ಟಾನಿಕ್’

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾವೇರಿ ವೈದ್ಯಕೀಯ ಕಾಲೇಜು ಘೋಷಣೆಯಾಗಿತ್ತು. ಆದರೆ, ಯಾವುದೇ ಕ್ರಮ ಕೈಗೊಳ್ಳದ ಕಾರಣ ಘೋಷಣೆಗೆ ಸೀಮಿತಗೊಂಡಿತು. ಆ ಬಳಿಕ ಬಂದ ಕಾಂಗ್ರೆಸ್ ಸರ್ಕಾರವು ಗದಗ ಮತ್ತಿತರ ಕಾಲೇಜುಗಳ ಕುರಿತು ತೋರಿದ ಉತ್ಸುಕತೆಯನ್ನು ಹಾವೇರಿಗೆ ನೀಡಲಿಲ್ಲ.

ಹೀಗಾಗಿ ವೈದ್ಯಕೀಯ ಕಾಲೇಜು ವಿಚಾರವು ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ‘ನುಂಗಲಾರದ ಗುಳಿಗೆ’ಯಾದರೆ, ಬಿಜೆಪಿ, ಜೆಡಿಎಸ್ ಮತ್ತಿತರ ಮುಖಂಡರಿಗೆ ಚುನಾವಣೆಗೆ ‘ಟಾನಿಕ್’ ಸಿಕ್ಕಿದಂತಾಗಿದೆ. ಈ ನಡುವೆಯೇ ರಾಜ್ಯ ಸರ್ಕಾರ ಇನ್ನೂ ಅನುದಾನ ಬಿಡುಗಡೆ ಮಾಡಿಲ್ಲ ಎಂಬ ವಿಚಾರವು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾವೇರಿದೆ.

ದಿಕ್ಕು ದಿಶೆ ಇಲ್ಲದ ಹಾವೇರಿ!

ಜಿಲ್ಲಾ ಕೇಂದ್ರವಾದ ಹಾವೇರಿಯಲ್ಲಿ ದಿಕ್ಕಿಗೊಂದು ಕಚೇರಿಗಳು ಇರುವ ಕಾರಣ, ‘ದಿಕ್ಕು ದಿಶೆ ಇಲ್ಲದ ಹಾವೇರಿ’ ಎಂದು ಜನಪ್ರತಿನಿಧಿಗಳೇ ಬಣ್ಣಿಸಿದ್ದರು. ಈ ಸಮಸ್ಯೆ ವೈದ್ಯಕೀಯ ಕಾಲೇಜಿಗೂ ಉದ್ಭವಿಸಿದೆ.

ವಿದ್ಯಾರ್ಥಿಗಳ ಅಧ್ಯಯನ ದೃಷ್ಟಿಯಿಂದ ವೈದ್ಯಕೀಯ ಕಾಲೇಜಿನ 5 ಕಿ.ಮೀ. ವ್ಯಾಪ್ತಿಯೊಳಗೆ ಆಸ್ಪತ್ರೆ ಇರಬೇಕು ಎಂಬ ನಿಯಮ ಇದೆ. ಆದರೆ, ಹಾವೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯು ನಗರ ಕೇಂದ್ರದಲ್ಲಿದ್ದರೆ, ವೈದ್ಯಕೀಯ ಕಾಲೇಜಿಗೆ ಮೀಸಲಾದ ಜಾಗವು 5 ಕಿ.ಮೀ. ಅಂತರದ ದೇವಗಿರಿ ಯಲ್ಲಾಪುರದಲ್ಲಿದೆ.

ಇತ್ತ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ದೇವಗಿರಿ ಯಲ್ಲಾಪುರಕ್ಕೆ ಸ್ಥಳಾಂತರಿಸಿದರೆ, ಬರುವ ರೋಗಿಗಳಿಗೆ ಸಮಸ್ಯೆಯಾಗಲಿದೆ. ಸ್ಥಳಾಂತರಿಸದಿದ್ದರೆ, ಸರ್ಕಾರಿ ಕಾಲೇಜಿನಲ್ಲಿರುವ ಆಸ್ಪತ್ರೆಗೆ ಹೋಗುವ ರೋಗಿಗಗಳು ಯಾರು? ಎಂಬ ಪ್ರಶ್ನೆ ಈಗ ತಜ್ಞರನ್ನು ಕಾಡುತ್ತಿದೆ.

* * 

ಜಾಗ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಮುಂದಿನ ವರ್ಷ ತರಗತಿ ಆರಂಭಗೊಳ್ಳುವ ನಿರೀಕ್ಷೆ ಇದೆ

ಡಾ.ವೆಂಕಟೇಶ್ ಎಂ.ವಿ.

ಜಿಲ್ಲಾಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.