7

ಗಡಿಭಾಗದ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಿ

Published:
Updated:

ತುಮಕೂರು: ‘ಗಡಿಭಾಗದ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅಲ್ಲಿಯ ಜನರಲ್ಲಿ ಕನ್ನಡದ ಮೇಲೆ ಅಭಿಮಾನ ಮೂಡುವಂತೆ ಮಾಡಬೇಕಿದೆ’ ಎಂದು ಲೇಖಕಿ ಎಂ.ಸಿ.ಲಲಿತಾ ತಿಳಿಸಿದರು.

ನಗರದ ಅನನ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಅಕ್ಕನ ಬಳಗ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಕನ್ನಡ ಗೀತೆಗಳ ಗಾಯನ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ನಾಡಿಗೆ ಹೊಂದಿಕೊಂಡಿರುವ ಗಡಿ ಭಾಗಗಳಲ್ಲಿ ಇಂದಿಗೂ ಸಮಸ್ಯೆಗಳು ಜೀವಂತವಾಗಿವೆ. ಈ ಸಮಸ್ಯೆಗಳನ್ನು ನಿವಾರಣೆ ಮಾಡುತ್ತಲೇ ಅಲ್ಲಿನ ಜನರನ್ನು ಕನ್ನಡದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಬೇಕು. ದುರದೃಷ್ಟವೆಂದರೆ ಇಲ್ಲಿಂದ ಆ ಭಾಗಕ್ಕೆ ಹೋಗುವ ಕನ್ನಡಿಗರು ಅವರ ಭಾಷೆಯಲ್ಲಿ ಮತ್ತು ಅವರದ್ದೇ ಧಾಟಿಯಲ್ಲಿ ಮಾತನಾಡುವ ಮೂಲಕ ಅಲ್ಲಿನ ಭಾಷೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದು ನಿಲ್ಲಬೇಕು’ ಎಂದರು.

ಅನೇಕ ಕವಿಗಳು ತಮ್ಮ ಕವನಗಳಲ್ಲಿ ವಿಶೇಷವಾಗಿ ಕನ್ನಡ ನಾಡು, ನುಡಿಯ ಬಗ್ಗೆ ಚಿತ್ರಿಸಿದ್ದಾರೆ. ಇವುಗಳನ್ನು ಓದುವ, ಹಾಡುವ ಗೀಳು ಬೆಳೆಸಿಕೊಂಡಾಗ ಕನ್ನಡದ ಬಗ್ಗೆ ವಿಶೇಷ ಅಭಿಮಾನ ಮೂಡಲು ಸಹಾಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಇಂತಹ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚು ಆಗಬೇಕಿದೆ ಎಂದರು.

ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಶರಣಬಸವರಾಜಪ್ಪ ಮಾತನಾಡಿ, ನಮ್ಮ ರಾಷ್ಟ್ರದಲ್ಲಿ 15 ಭಾಷೆಗಳು ಅಧಿಕೃತವಾಗಿವೆ. ಇವುಗಳಲ್ಲಿ ಕೆಲವಕ್ಕೆ ಲಿಪಿ ಇಲ್ಲ. ಇನ್ನೂ ಕೆಲವು ಭಾಷೆ ಮಾತಿಗಷ್ಟೆ ಸೀಮಿತವಾಗಿವೆ. ಆದರೆ ಕನ್ನಡಕ್ಕೆ ಲಿಪಿ ಮತ್ತು ಭಾಷೆ ಎರಡೂ ಇದ್ದು, ಇದಕ್ಕೆ ತನ್ನದೇ ಆದ ವಿಶೇಷ ಪರಂಪರೆ ಇದೆ. ಹೀಗಾಗಿ ಕನ್ನಡವನ್ನು ಪ್ರೀತಿಸುವ, ಬೆಳೆಸುವತ್ತ ಎಲ್ಲರೂ ಮುಂದಾಗಬೇಕು ಎಂದರು.

ಕೆಲವರು ಭಾಷೆಯನ್ನು ಉಚ್ಚರಿಸುವಾಗ ಯಡವಟ್ಟು ಮಾಡುತ್ತಾರೆ. ಇಂತಹ ಪ್ರಯೋಗದಿಂದ ಕನ್ನಡ ಭಾಷೆಗೆ ಕುತ್ತು ಬರಲಿದೆ. ಆದ್ದರಿಂದ ಯಾರೇ ಆಗಲಿ ಕನ್ನಡ ಭಾಷೆಯನ್ನು ಬಳಸುವಾಗ ಸ್ವಚ್ಛತೆ ಮತ್ತು ಶುದ್ಧತೆ ಇರಲಿ. ಕನ್ನಡದ ಪ್ರೀತಿ ಕೇವಲ ನವೆಂಬರ್ ತಿಂಗಳಿಗೆ ಸೀಮತವಾಗದಿರಲಿ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry