ಸೋಮವಾರ, ಮಾರ್ಚ್ 8, 2021
31 °C

ಧರ್ಮ ಸಂಸತ್ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸಿ: ಪೇಜಾವರ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧರ್ಮ ಸಂಸತ್ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸಿ: ಪೇಜಾವರ ಸ್ವಾಮೀಜಿ

ಉಡುಪಿ: ‘ಕೃಷ್ಣ– ಅರ್ಜುನರು ಒಂದಾಗಿ ರಥವೇರಿ ಜಯವನ್ನು ಘೋಷಿಸಿದಂತೆ ಹಿಂದೂ ಧರ್ಮಕ್ಕೂ ವಿಜಯ ಪ್ರಾಪ್ತಿಯಾಗಲಿದೆ’ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಇದೇ 24,25 ಮತ್ತು 26ರಂದು ಉಡುಪಿಯಲ್ಲಿ ನಡೆಯಲಿರುವ ಧರ್ಮ ಸಂಸತ್ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಆರಂಭಿಸಿರುವ ‘ಸುಧರ್ಮ ರಥ’ ಯಾತ್ರೆಯ ನಗರ ಸಂಚಾರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

ವಿಶ್ವ ಹಿಂದೂ ಪರಿಷತ್ ರಥ ಇದ್ದ ಹಾಗೆ. ಸಮಗ್ರ ಹಿಂದೂ ಸಮಾಜವೇ ಅರ್ಜನನಂತೆ ಹಾಗೂ ಸಂತರೆಲ್ಲ ಕೃಷ್ಣನಂತೆ. ಧರ್ಮ ಸಂಸತ್ ಕಾರ್ಯಕ್ರಮದ ಯಶಸ್ಸಿಗೆ ದಲಿತರೂ ಸೇರಿದಂತೆ ಎಲ್ಲ ಸಮಾಜದವರು ಶ್ರಮಿಸಬೇಕು. ಮೂರು ದಿನಗಳ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸಿ ಕೃಷ್ಣನ ಕೃಪೆಗೆ ಪಾತ್ರರಾಗಬೇಕು ಎಂದು ಅವರು ಹೇಳಿದರು.

ನಗರದಲ್ಲಿ ಸುತ್ತಾಡಲಿರುವ ರಥ: ಉಡುಪಿ, ಕಾರ್ಕಳ ಹಾಗೂ ಕುಂದಾಪುರ ತಾಲ್ಲೂಕಿನ ಬಹುತೇಕ ಎಲ್ಲ ಊರುಗಳಲ್ಲಿ ಧರ್ಮ ರಥ ಸಂಚರಿಸಿದೆ. ಅಲ್ಲಲ್ಲಿ ಸಣ್ಣ ಸಭೆಗಳನ್ನು ಸಹ ನಡೆಸಿ ಧರ್ಮ ಸಂಸತ್‌ನ ಉದ್ದೇಶ ಹಾಗೂ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವಂತೆ ಆಹ್ವಾನವನ್ನೂ ನೀಡಲಾಗಿದೆ.

ಈಗ ಉಡುಪಿ ನಗರ ಸಭೆ ವ್ಯಾಪ್ತಿಯಲ್ಲಿ ರಥ ಸಂಚರಿಸಲಿದೆ. ಎಲ್ಲ 35 ವಾರ್ಡ್‌ಗಳಲ್ಲಿ ಪ್ರಚಾರ ನಡೆಸಲಿದೆ. ಮಾಜಿ ಶಾಸಕರಾದ ಕೆ. ರಘುಪತಿ ಭಟ್, ಮುಖಂಡರಾದ ಬೈಕಾಡಿ ಸುಪ್ರಸಾದ ಶೆಟ್ಟಿ, ಕೆ. ಉದಯ್ ಕುಮಾರ್ ಶೆಟ್ಟಿ, ಬಜರಂಗದಳದ ಸಂಚಾಲಕ ಶರಣ್ ಪಂಪವೆಲ್, ದಿನೇಶ್‌ ಮೆಂಡ್ ಇದ್ದರು.

ಉಡುಪಿಯಲ್ಲಿ ನಡೆಯುವ ಧರ್ಮ ಸಂಸತ್‌ನಲ್ಲಿ ದೇಶದ ವಿವಿಧ ರಾಜ್ಯಗಳ ಸುಮಾರು 2 ಸಾವಿರ ಸಂತರ ಭಾಗವಹಿಸುವ ನಿರೀಕ್ಷೆ ಇದೆ. 26ರಂದು ಬೃಹತ್ ಹಿಂದೂ ಸಮಾಜೋತ್ಸವ ನಡೆಯಲಿದ್ದು ಅಪಾರ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇದೆ. ಹಿಂದೂ ಧರ್ಮದ ಕುರಿತು ಕೆಲವು ಪ್ರಮುಖ ನಿರ್ಣಯಗಳು ಹೊರ ಬೀಳುವ ಸಾಧ್ಯತೆ ಇದೆ.

* * 

ಎಚ್‌ಪಿ, ಹಿಂದೂಗಳು ಹಾಗೂ ಸಂತರು ಒಂದಾಗುತ್ತಿದ್ದು ಹಿಂದೂ ಧರ್ಮಕ್ಕೆ ಗೆಲುವು ಸಿಗಲಿದೆ.

ವಿಶ್ವೇಶತೀರ್ಥ ಸ್ವಾಮೀಜಿ,

ಪೇಜಾವರ ಮಠ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.