ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆ ನಿಯಂತ್ರಣ: ಕಣ್ಣೊರೆಸುವ ತಂತ್ರವೇ?

Last Updated 16 ನವೆಂಬರ್ 2017, 11:04 IST
ಅಕ್ಷರ ಗಾತ್ರ

ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಉದ್ದೇಶದ ತಿದ್ದುಪಡಿಮಸೂದೆಯನ್ನು ವಿರೋಧಿಸಿ ಖಾಸಗಿ ವೈದ್ಯರು ನಡೆಸುತ್ತಿರುವ ಹೋರಾಟ, ಅದನ್ನು ಜಾರಿಗೆ ತಂದೇ ತರುತ್ತೇನೆಂದು ಪಟ್ಟು ಹಿಡಿದಿರುವ ಆರೋಗ್ಯಮಂತ್ರಿ, ಹೈರಾಣಾಗಿರುವರೋಗಿಗಳು, ದಿನನಿತ್ಯ ಟಿ.ವಿ. ವಾಹಿನಿಗಳಲ್ಲಿನ ಪರ-ವಿರೋಧ ಚರ್ಚೆಗಳು... ಇವೆಲ್ಲದರ ನಡುವೆ ಕಳೆದುಹೋಗಿರುವ ಕೆಲವು ಪ್ರಮುಖ ವಿಷಯಗಳ ಬಗ್ಗೆ ಪ್ರಸ್ತಾಪಿಸಲು ಇಚ್ಛಿಸುತ್ತೇನೆ.

ಯಾವುದೇ ಜನಪರ ಸರ್ಕಾರಕ್ಕೆ ತನ್ನ ಜನರ ಆರೋಗ್ಯ ರಕ್ಷಣೆ ಎಲ್ಲಕ್ಕಿಂತ ಮುಖ್ಯವಾಗಿರಬೇಕಲ್ಲವೇ? ಈ ದೃಷ್ಟಿಯಿಂದ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಸರ್ಕಾರದಿಂದ ರಚಿತವಾದ ಜಸ್ಟಿಸ್ ಭೋರ್ ಸಮಿತಿ 1946ರಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ‘ಬಡವ- ಬಲ್ಲಿದ ಭೇದವಿಲ್ಲದೆ ಎಲ್ಲರಿಗೂ ಆರೋಗ್ಯ ಸಿಗಬೇಕು. ಈ ಜವಾಬ್ದಾರಿಯನ್ನು ಸಂಪೂರ್ಣವಾಗಿ ಸರ್ಕಾರವೇ ವಹಿಸಿಕೊಳ್ಳಬೇಕು’ ಎಂದು ಅಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು. ಅದರಂತೆ ಸ್ವಾತಂತ್ರ್ಯಾ
ನಂತರ ದೇಶದಲ್ಲಿ ಅಲ್ಪ ಮಟ್ಟಿಗೆ ಪ್ರಯತ್ನಗಳು ಸಹ ನಡೆದವು. ಹಾಗಾಗಿಯೇ 50-60ರ ದಶಕಗಳಲ್ಲಿ ಜನಸಾಮಾನ್ಯರಿಗೆ
ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಉಚಿತ ಚಿಕಿತ್ಸೆ ಲಭ್ಯವಿತ್ತು. ಅಲ್ಲಲ್ಲಿ ಇದ್ದ ಕೆಲವೇ ಕೆಲವು ನರ್ಸಿಂಗ್ ಹೋಂಗಳಿಗೆ ಅನುಕೂಲಸ್ಥರು ಮಾತ್ರ ಹೋಗುತ್ತಿದ್ದರು. ಅಲ್ಲಿಯೂ ಚಿಕಿತ್ಸೆ ದುಬಾರಿಯಾಗಿರಲಿಲ್ಲ. ಖಾಸಗಿ ಕ್ಲಿನಿಕ್‍ಗಳ ವೈದ್ಯರು ಜನಾನುರಾಗಿಗಳಾಗಿದ್ದರು, ಇವರು ‘ಕುಟುಂಬ ವೈದ್ಯ’ರ ಹೆಸರಿನಲ್ಲಿ ಕುಟುಂಬ ಮಿತ್ರರೂ ಆಗಿದ್ದರು.

ಆದರೆ ಕ್ರಮೇಣ, ಸರ್ಕಾರಗಳ ನಿರ್ಲಕ್ಷ್ಯದಿಂದ ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಕುಸಿಯಲಾರಂಭಿಸಿತು. ಖಾಸಗಿ ನರ್ಸಿಂಗ್ ಹೋಂಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗಿ, ಜನರು ಅಲ್ಲಿಗೆ ಹೋಗುವುದು ಅನಿವಾರ್ಯವಾಯಿತು. ಬಡ
ಜನರಿಗೆ ಅಲ್ಲಿನ ಚಿಕಿತ್ಸೆ ಕೈಗೆಟುಕದೆ ಹೋದರೂ, ಮಧ್ಯಮ ವರ್ಗದವರಿಗೆ ಅಷ್ಟೊಂದು ದುಬಾರಿಯೆನಿಸುತ್ತಿರಲಿಲ್ಲ.

90ರ ದಶಕದಲ್ಲಿ ಕೇಂದ್ರ- ರಾಜ್ಯ ಸರ್ಕಾರಗಳೆರಡೂ ಬಹಳ ಉತ್ಸಾಹದಿಂದ ಬರಮಾಡಿಕೊಂಡ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ನೀತಿಗಳು ವೈದ್ಯಕೀಯ ರಂಗದ ಚಹರೆಯನ್ನೇ ಬದಲಾಯಿಸಿದವು.

ಜಾಗತೀಕರಣವನ್ನು ಅಪ್ಪಿಕೊಂಡ ಸರ್ಕಾರಗಳು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಯ ತಮ್ಮ ಹೊಣೆಯನ್ನು ಹಂತಹಂತವಾಗಿ ಖಾಸಗಿಯವರ, ಕಾರ್ಪೊರೇಟ್ ಕುಳಗಳ ಹೆಗಲಿಗೆ ವರ್ಗಾಯಿಸಿದವು. ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕ, ಡೊನೇಷನ್-ಕ್ಯಾಪಿಟೇಷನ್ ಫೀ ಪಡೆದವು, ನೈಜ ಅರ್ಹತೆಯನ್ನು ಬದಿಗೊತ್ತಿ ಹಣವನ್ನೇ ಅರ್ಹತೆಯಾಗಿಸಿಕೊಂಡು ಶಿಕ್ಷಣವನ್ನು ಮಾರಿದವು. ಸ್ವಂತ ಆಸ್ಪತ್ರೆ ಇಲ್ಲದೆ ಸರ್ಕಾರಿ ಆಸ್ಪತ್ರೆಗಳನ್ನೇ ವಿದ್ಯಾರ್ಥಿಗಳ ತರಬೇತಿಗಾಗಿ ಪಡೆದು, ಬಡರೋಗಿಗಳನ್ನು ಬಳಸಿಕೊಂಡು, ಸರ್ಕಾರಕ್ಕೆ ಒಪ್ಪಂದದ ಪ್ರಕಾರ ನೀಡಬೇಕಾದ ಹಣವನ್ನು ನೀಡದೆ ವಂಚಿಸಿದವು. ಲಕ್ಷಗಟ್ಟಲೆ ಹಣ ಸುರಿದು ಎಂ.ಬಿ.ಬಿ.ಎಸ್., ಸ್ನಾತಕೋತ್ತರ ಪದವಿಗಳನ್ನು ಪಡೆಯುವ, ನಂತರ ಅದರ ಮೂರು–ನಾಲ್ಕು ಪಟ್ಟು ಹಣ ಸಂಪಾದಿಸುವ ಧನದಾಹಿ ವೈದ್ಯರ ಪಡೆಯನ್ನೇ ಸೃಷ್ಟಿಸಿದವು. ‘ಸೇವೆ’ ಎಂಬುದು ಮೂಲೆಗುಂಪಾಗಿ ಆರೋಗ್ಯ ಒಂದು ಉದ್ದಿಮೆಯಾಗಿ ಬದಲಾಗಿ ಹೋದುದರ ಬುನಾದಿ ಇಲ್ಲಿದೆ.

ಆರೋಗ್ಯ ಕ್ಷೇತ್ರದ ಖಾಸಗೀಕರಣದ ಇನ್ನೊಂದು ಮುಖವೆಂದರೆ ಈ ಕ್ಷೇತ್ರದೊಳಗೆ ಕಾರ್ಪೊರೇಟ್‍ ಸಂಸ್ಥೆಗಳ ಪ್ರವೇಶ. ಖಾಸಗಿ ನರ್ಸಿಂಗ್ ಹೋಂಗಳನ್ನು ವೈದ್ಯರೇ ನಡೆಸುತ್ತಿದ್ದು, ಅಲ್ಲಿ ಮಾನವೀಯತೆಗೆ ಅವಕಾಶವಿದೆ. ಕೆಲವೊಮ್ಮೆ ರಿಯಾಯಿತಿಯಲ್ಲಿ ಅಥವಾ ಉಚಿತವಾಗಿ ಚಿಕಿತ್ಸೆ ಸಿಗುವುದೂ ಉಂಟು. ಹಾಗಾಗಿ ಸರ್ಕಾರಿ ಆಸ್ಪತ್ರೆಯ ಕಳಪೆ ಸೇವೆಗಳಿಂದ ಬೇಸತ್ತ ಮಧ್ಯಮವರ್ಗದ ಜನರಿಗೆ ಇವು ಅಪ್ಯಾಯಮಾನ. ಆದರೆ, ಕಾರ್ಪೊರೇಟ್ ಜಗತ್ತು ಕಠೋರ ಮತ್ತು ಕಾರುಣ್ಯರಹಿತವಾದದ್ದು. ಅತ್ಯಧಿಕ ಲಾಭ ಒಂದೇ ಇಲ್ಲಿಯ ಧ್ಯೇಯ. ರೋಗಿಯ ಸ್ಥಿತಿ ಇಲ್ಲಿ ಲೆಕ್ಕಕ್ಕಿಲ್ಲ, ಮುಂಗಡ ಹಣ ಇಟ್ಟೇ ಇಲ್ಲಿ ಪ್ರವೇಶ. ಇಲ್ಲಿ ಕೆಲಸ ಮಾಡುವ ವೈದ್ಯರಿಗೆ ವ್ಯವಸ್ಥಾಪಕರು ವಿಧಿಸಿರುವ ‘ಟಾರ್ಗೆಟ್’ ಅನ್ನು ಅನಿವಾರ್ಯವಾಗಿ ತಲುಪುವ ಧಾವಂತ! ಹಾಗಾಗಿ ಬೇಕೋ ಬೇಡವೋ ಸಾಲುಸಾಲಾದ ಲ್ಯಾಬ್ ಪರೀಕ್ಷೆಗಳು, ವಿವಿಧ ‘ಸ್ಕ್ಯಾನ್’ಗಳಿಗೆ ರೋಗಿಗಳು ಒಳಗಾಗಬೇಕಾಗುತ್ತದೆ, ಒಳರೋಗಿಗಳಾಗಿ ಸೇರ್ಪಡೆಯಾಗಬೇಕಾಗುತ್ತದೆ, ಕೆಲವೊಮ್ಮೆ ಅನವಶ್ಯಕ ಶಸ್ತ್ರಚಿಕಿತ್ಸೆಗಳಿಗೂ ಒಳಗಾಗಬೇಕಾಗುತ್ತದೆ.

ಇಂಥ ಹೃದಯಹೀನ ಆಸ್ಪತ್ರೆಗಳ ಮೇಲೆ ಸರ್ಕಾರದ ನಿಯಂತ್ರಣ ಇಲ್ಲದೇ ಇರುವುದು ದಿಗ್ಭ್ರಮೆಗೊಳಿಸುವ ವಿಷಯವಲ್ಲವೇ? ಸರ್ಕಾರಿ ಆಸ್ಪತ್ರೆಗಳಿಗೆ ಸೌಕರ್ಯ, ವೈದ್ಯರು, ಇತರ ಸಿಬ್ಬಂದಿ ನೀಡದೆ ಅವನ್ನು ರೋಗಗ್ರಸ್ತವನ್ನಾಗಿಸಿ, ಕಾರ್ಪೊರೇಟ್ ವಲಯದ ಆಸ್ಪತ್ರೆಗಳಿಗೆ ಆರೋಗ್ಯ ಸೇವೆಯನ್ನು ‘ಹೊರಗುತ್ತಿಗೆ’ ನೀಡುತ್ತಿರುವ ಸರ್ಕಾರಗಳಿಗೆ ಆಸ್ಪತ್ರೆ ನಡೆಸಲು ಹಣವಿಲ್ಲವಂತೆ; ಆದರೆ ಬಡವರಿಗೆ ಆರೋಗ್ಯಸೇವೆ ನೀಡಲು ‘ಯಶಸ್ವಿನಿ’, ‘ರಾಜೀವ್‍ ಗಾಂಧಿ ವಿಮಾ ಯೋಜನೆ’ಯಂಥ ವಿಮಾ ಯೋಜನೆಗಳನ್ನು ಅನುಷ್ಠಾನ ಮಾಡುವ ಹೆಸರಿನಲ್ಲಿ ಕಾರ್ಪೊರೇಟ್ ಕುಳಗಳ ಮಡಿಲಿಗೆ ಹಾಕಲು ಹಣದ ಕೊರತೆ ಕಾಡುವುದಿಲ್ಲ!

ಸರ್ಕಾರ ಮಂಡಿಸಿರುವ ಮಸೂದೆ ಮೇಲ್ನೋಟಕ್ಕೆ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಿ ಜನರಿಗೆ ಒಳಿತನ್ನು ಮಾಡುವ ಉದ್ದೇಶ ಹೊಂದಿರುವಂತೆಯೇ ಕಾಣುತ್ತದೆ. ವಾಸ್ತವದಲ್ಲಿ ಇದು ಸಣ್ಣ- ಪುಟ್ಟ ಖಾಸಗಿ ಆಸ್ಪತ್ರೆಗಳನ್ನು ಮಾತ್ರ ನಿಯಂತ್ರಿಸುವಂತೆ ಇದೆ. ಜನರಿಗೆ ಕೊಂಚಮಟ್ಟಿಗೆ ಪರಿಹಾರ ನೀಡುವಂಥ ಇವುಗಳನ್ನು ನಡೆಸುವುದು ವೈದ್ಯರಿಗೆ ಕಷ್ಟಸಾಧ್ಯವಾಗಿಸಿ, ಅವುಗಳನ್ನು ಮುಚ್ಚುವಂತೆ ಮಾಡಿ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಲಾಭ ಮಾಡಿಕೊಡುವ ಉದ್ದೇಶವೇನಾದರೂ ಈ ಮಸೂದೆಯಲ್ಲಿ ಅಡಗಿದೆಯೇ ಎಂಬ ಪ್ರಶ್ನೆ ಇಲ್ಲಿ ಸಹಜವಾಗಿ ಏಳುತ್ತದೆ.

ನರ್ಸಿಂಗ್ ಹೋಂಗಳನ್ನು ‘ಫ್ರಾಂಚೈಸ್‌’ ಹೆಸರಿನಲ್ಲಿ ಕಾರ್ಪೊರೇಟ್‍ ವಲಯ ಗುಳುಂ ಮಾಡುತ್ತಿರುವುದು ಕಣ್ಣಿಗೆ ರಾಚುವಂತೆ ಇದೆ! ಒಂದೆಡೆ ಪತನದೆಡೆಗೆ ಸಾಗುತ್ತಿರುವ, ಬಹುತೇಕವಾಗಿ ಭ್ರಷ್ಟ ವ್ಯವಸ್ಥೆಯ ಭಾಗವಾಗಿ ಜನಸಾಮಾನ್ಯರನ್ನು ಕ್ಷೋಭೆಗೆ ದೂಡುತ್ತಿರುವ ಸರ್ಕಾರಿ ಆಸ್ಪತ್ರೆಗಳು, ಇನ್ನೊಂದೆಡೆ ಜನರನ್ನು ಶೋಷಿಸುತ್ತಿರುವ  ಕಾರ್ಪೊರೇಟ್ ಆಸ್ಪತ್ರೆಗಳು. ಇವುಗಳ ಮಧ್ಯೆ ಜನರಿಗೆ ಆಯ್ಕೆ ಎಲ್ಲಿದೆ? ಬದುಕಬೇಕಾದರೆ, ಜೀವವನ್ನಾದರೂ ಅಡವಿಟ್ಟು ಕಾರ್ಪೊರೇಟ್ ಆಸ್ಪತ್ರೆಗೇ ಹೋಗಬೇಕು ಎನ್ನುವ ಸ್ಥಿತಿಯನ್ನು ಸರ್ಕಾರ ಸೃಷ್ಟಿಸುತ್ತಿಲ್ಲವೇ? ಜೊತೆಗೆ, ವೈದ್ಯರು ಮತ್ತು ಇತರ ಸಿಬ್ಬಂದಿ ಸಹ ಕೇವಲ ಕಾರ್ಪೊರೇಟ್ ವಲಯದ ಕೈಗೊಂಬೆಗಳಾಗುವಂಥ ಪರಿಸ್ಥಿತಿ ಉದ್ಭವವಾಗುತ್ತಿಲ್ಲವೇ?

ಸಮಾಜವಾದಿ ರಾಷ್ಟ್ರವಾದ ಪುಟ್ಟ ಕ್ಯೂಬಾ, ದೈತ್ಯ ಅಮೆರಿಕದ ದಿಗ್ಬಂಧನಗಳನ್ನು ಎದುರಿಸುತ್ತಲೇ ತನ್ನ ನಾಗರಿಕರಿಗೆ ಉಚಿತ ಆರೋಗ್ಯ ಸೇವೆ ಒದಗಿಸುತ್ತಿದೆ. ಅದಕ್ಕೆ ಸಾಧ್ಯವಾಗಿರುವುದು ಭಾರತಕ್ಕೆ ಏಕೆ ಸಾಧ್ಯವಾಗುತ್ತಿಲ್ಲ? ಸರ್ಕಾರ ತನ್ನ ಆಸ್ಪತ್ರೆಗಳಲ್ಲಿ ಎಲ್ಲ ಆಧುನಿಕ ಸೌಲಭ್ಯಗಳನ್ನು, ವೈದ್ಯರು- ಮತ್ತಿತರ ಸಿಬ್ಬಂದಿ ಒದಗಿಸುತ್ತಾ, ಭ್ರಷ್ಟಾಚಾರವನ್ನು ಮಟ್ಟ ಹಾಕಿ ಜನರ ಆರೋಗ್ಯದ ಜವಾಬ್ದಾರಿಯನ್ನು ಹೊರುವಂತೆ ಜನರು ಆಗ್ರಹಿಸಬೇಕಾಗುತ್ತದೆ. ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಇರುವಷ್ಟೇ ಸೌಲಭ್ಯವುಳ್ಳ ಸರ್ಕಾರಿ ಆಸ್ಪತ್ರೆಗಳು ಲಭ್ಯವಿದ್ದರೆ ಜನರು ಅಲ್ಲಿಗೇ ಹೋಗುತ್ತಾರೆ. ಇದನ್ನು ಮಾಡುವ ಇಚ್ಛಾಶಕ್ತಿ ಸರ್ಕಾರಕ್ಕಿದೆಯೇ? ಇಲ್ಲದಿದ್ದಲ್ಲಿ ಈ ಮಸೂದೆ ಜನರ ಕಣ್ಣೊರೆಸುವ ತಂತ್ರವೆಂದುಕೊಂಡರೆ ತಪ್ಪಾದೀತೇ?

ಅಷ್ಟಲ್ಲದೆ, ಜನಪರ ಕಾಳಜಿಯುಳ್ಳ ವೈದ್ಯರು ಸಹ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಯ ವ್ಯಾಪಾರೀಕರಣದ ವಿರುದ್ಧ ಸಿಡಿದು ನಿಂತು, ಜನರ ಆರೋಗ್ಯದ ಗುರುತರ ಜವಾಬ್ದಾರಿ ನಿರ್ವಹಿಸುವ ತಮ್ಮ ಸಾಮಾಜಿಕ ಬದ್ಧತೆಯನ್ನು ಮೆರೆಯಲಿ ಎಂಬುದೇ ನನ್ನ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT