ಸೋಮವಾರ, ಮಾರ್ಚ್ 8, 2021
30 °C

ಕೊಡಗು ರೈಲು ಮಾರ್ಗ: ಅರಣ್ಯ ನಾಶದ ಆತಂಕ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

ಕೊಡಗು ರೈಲು ಮಾರ್ಗ: ಅರಣ್ಯ ನಾಶದ ಆತಂಕ

ಮಡಿಕೇರಿ: ಉದ್ದೇಶಿತ ಎರಡು ರೈಲು ಮಾರ್ಗಗಳಿಗೆ ಕೊಡಗು ಜಿಲ್ಲೆಯಲ್ಲಿ ಪರ– ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಯೋಜನೆಗಳ ಅನುಷ್ಠಾನವು ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.

ಕಳೆದ ರೈಲ್ವೆ ಬಜೆಟ್‌ನಲ್ಲಿ ಮೈಸೂರು– ತಲಶ್ಯೇರಿ ರೈಲು ಮಾರ್ಗದ ಸಮೀಕ್ಷೆಗೆ ಅನುಮೋದನೆ (ಅಂದಾಜು 182 ಕಿ.ಮೀ) ಸಿಕ್ಕಿತ್ತು. ನ. 9ರಂದು ಕರ್ನಾಟಕ ಹಾಗೂ ಕೇರಳ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಯೋಜನೆ ಅನುಷ್ಠಾನ ಕುರಿತು ಚರ್ಚೆ ನಡೆಸಿರುವುದು ಜಿಲ್ಲೆಯಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಮೈಸೂರು– ಪಿರಿಯಾಪಟ್ಟಣ– ತಿತಿಮತಿ– ಬಾಳೆಲೆ– ಕುಟ್ಟ– ಮಾನಂದವಾಡಿ – ಕೂತುಪರಂಬು ಮೂಲಕ ಕೇರಳದ ತಲಶ್ಯೇರಿಗೆ ತಲುಪುವ ಮಾರ್ಗವಿದು. ‘ಕೊಡಗಿನ ಮೂಲಕ ಈ ರೈಲು ಮಾರ್ಗ ಹಾದು ಹೋದರೆ ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಲಿದೆ. ಬೆಟ್ಟಗುಡ್ಡಗಳು ಬರಿದಾಗಲಿವೆ’ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

2016ರಲ್ಲಿ ಸುರೇಶ್‌ ಪ್ರಭು ಅವರು ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ 84 ಕಿ.ಮೀ ಉದ್ದದ ಮೈಸೂರು– ಕುಶಾಲನಗರ ನಡುವಿನ ಮತ್ತೊಂದು ಮಾರ್ಗಕ್ಕೆ ಹಸಿರು ನಿಶಾನೆ ಸಿಕ್ಕಿತ್ತು. ಮೊದಲ ಹಂತದಲ್ಲಿ ₹ 667 ಕೋಟಿ ಅನುದಾನ ಮಂಜೂರು ಮಾಡಲಾಗಿತ್ತು. ಎರಡು ಬಾರಿ ಈ ಮಾರ್ಗದ ಸಮೀಕ್ಷೆಯೂ ನಡೆದಿದೆ. ಭೂಸ್ವಾಧೀನ, ಹಳಿ ನಿರ್ಮಾಣ ಕಾರ್ಯ ಇನ್ನೂ ಆರಂಭಗೊಂಡಿಲ್ಲ. ಇದೇ ಮಾರ್ಗವನ್ನು ಮಡಿಕೇರಿ ತನಕವೂ ಮುಂದುವರಿಸಬೇಕು ಎನ್ನುವ ಪ್ರಸ್ತಾವ ಕೇಂದ್ರದ ಮುಂದಿದೆ.

‘ಕೊಡಗಿಗೆ ರೈಲು ಸಂಪರ್ಕ ಕಲ್ಪಿಸುವುದಿದ್ದರೆ ಗಡಿಭಾಗವಾದ ಕುಶಾಲನಗರಕ್ಕೆ ಸೀಮಿತಗೊಳಿಸಲಿ. ಮಡಿಕೇರಿಗೆ ವಿಸ್ತರಿಸಿದರೆ ಆನೆಕಾಡು ಮೀಸಲು ಅರಣ್ಯ, ಕೆದಕಲ್‌, ಸುಂಟಿಕೊಪ್ಪ ಸಮೀಪ ಸಾವಿರಾರು ಎಕರೆ ಕಾಫಿ ತೋಟ ನಾಶವಾಗಲಿದೆ. ಸಾವಿರಾರು ಮರಗಳ ಹನನವಾಗಲಿದೆ, ಕಾವೇರಿ ಕಣಿವೆಯಲ್ಲಿ ಮಳೆ ಕೊರತೆ ಕಾಡಲಿದೆ’ ಎಂದು ಪರಿಸರ ಪ್ರೇಮಿಗಳು ಎಚ್ಚರಿಸಿದ್ದಾರೆ.

ಆರ್‌.ಗುಂಡೂರಾವ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೊಡಗಿಗೆ ರೈಲು ಮಾರ್ಗದ ಕೂಗು ಎದ್ದಿತ್ತು. ಮೂರು ದಶಕಗಳಿಂದಲೂ ಈ ಭಾಗದ ಜನರು ರೈಲಿಗಾಗಿ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. 2016ರಲ್ಲಿ ಅದಕ್ಕೆ ಒಪ್ಪಿಗೆ ಸಿಕ್ಕಿದ್ದರಿಂದ ಯೋಜನೆ ಪರವಾಗಿರುವ ಸಂಘಟನೆಗಳು ಹರ್ಷ ವ್ಯಕ್ತಪಡಿಸಿದ್ದವು.

ಪ್ರವಾಸೋದ್ಯಮಕ್ಕೆ ಪೂರಕವಾಗಲಿದ್ದು ಕಾಫಿ, ಪುಷ್ಪೋದ್ಯಮಕ್ಕೆ ವರವಾಗಲಿದೆ ಎಂದು ಭಾವಿಸಲಾಗಿತ್ತು. ರೈಲು ಸಂಪರ್ಕವಿಲ್ಲದ ಕಾರಣ ಕೃಷಿ ಉತ್ಪನ್ನಗಳನ್ನು ಮುಂಬೈ, ಕೋಲ್ಕತ್ತ ಮತ್ತಿತರ ನಗರಗಳಿಗೆ ಸಾಗಣೆ ಮಾಡಲು ಸಾಧ್ಯವಾಗುತ್ತಿಲ್ಲ. ಆದಷ್ಟು ಬೇಗ ಈ ಯೋಜನೆ ಸಾಕಾರಗೊಳ್ಳಬೇಕು ಎಂದು ಕೆಲವು ಸಂಘಟನೆಗಳು ಆಗ್ರಹಿಸುತ್ತಿವೆ.

ಕೊಡಗಿನ ಮೂಲಕ ಹಾದು ಹೋಗುವ ತಲಶ್ಯೇರಿ ಮಾರ್ಗಕ್ಕೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಆಸಕ್ತಿ ತೋರಿಸಿದ್ದು, ರೈಲ್ವೆ ಮಂಡಳಿ ಸದಸ್ಯರೊಂದಿಗೆ ಮಾತುಕತೆ ನಡೆಸಿ ಭೂಸ್ವಾಧೀನ, ವೆಚ್ಚದ ಅಂದಾಜು ಪಟ್ಟಿ ತಯಾರಿಸುವಂತೆ ಕೋರಿದ್ದಾರೆ. ಈ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ಬೆಂಗಳೂರಿನಲ್ಲಿ ಒಂದು ಸುತ್ತಿನ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

‘ಕೊಡಗಿಗೆ ರೈಲು ಯೋಜನೆ ಬೇಡವೆಂಬ ಹೋರಾಟಗಳು ನಡೆಯುತ್ತಿರುವ ಈ ವೇಳೆಯಲ್ಲಿ ಎರಡು ರಾಜ್ಯಗಳ ಅಧಿಕಾರಿಗಳು ಚರ್ಚೆ ನಡೆಸಿರುವುದು ಸರಿಯಲ್ಲ. ಯೋಜನೆ ತಡೆಹಿಡಿಯಬೇಕು‘ ಎಂದು ಶಾಸಕ ಕೆ.ಜಿ.ಬೋಪಯ್ಯ ಆಗ್ರಹಿಸಿದ್ದಾರೆ.

ಕೊಡಗಿಗೆ ರೈಲು ಸಂಪರ್ಕ ಹಿಂದಿಗಿಂತಲೂ ಈಗ ಅಗತ್ಯವಾಗಿದೆ. ಅರಣ್ಯನಾಶದ ನೆಪವೊಡ್ಡಿ ಯೋಜನೆಗೆ ಅಡ್ಡಿಪಡಿಸುವುದು ಸಲ್ಲದು

-ಎ.ಕೆ.ಸುಬ್ಬಯ್ಯ, ಹಿರಿಯ ವಕೀಲ

ಕೇರಳಕ್ಕೆ ವಿದ್ಯುತ್‌ ಮಾರ್ಗ ಎಳೆಯಲು 65 ಸಾವಿರ ಮರ ಕಡಿಯಲಾಗಿತ್ತು. ಈ ಯೋಜನೆ ಅರಣ್ಯವೇ ನಾಶಮಾಡಲಿದೆ

-ಸಿ.ಪಿ.ಮುತ್ತಣ್ಣ, ಅಧ್ಯಕ್ಷ, ವೈಲ್ಡ್‌ಲೈಫ್‌ ಸೊಸೈಟಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.