ಶನಿವಾರ, ಮಾರ್ಚ್ 6, 2021
19 °C
ಮತ್ತೊಂದು ಸುತ್ತಿನ ಚುನಾವಣೆ

ಕಗ್ಗಂಟಾಗಿ ಉಳಿದ ಐಸಿಜೆ ನ್ಯಾಯಮೂರ್ತಿ ಆಯ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಕಗ್ಗಂಟಾಗಿ ಉಳಿದ ಐಸಿಜೆ ನ್ಯಾಯಮೂರ್ತಿ ಆಯ್ಕೆ

ವಾಷಿಂಗ್ಟನ್‌ (ಪಿಟಿಐ): ಅಂತರರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ನ್ಯಾಯಮೂರ್ತಿ ಹುದ್ದೆಗೆ ಮರು ಆಯ್ಕೆ ಬಯಸಿದ್ದ ಭಾರತದ ದಲ್ವೀರ್ ಭಂಡಾರಿ ಮತ್ತು ಬ್ರಿಟನ್‌ನ ನ್ಯಾಯಮೂರ್ತಿ ಕ್ರಿಸ್ಟೋಫರ್‌ ಗ್ರೀನ್‌ವುಡ್ ಮಧ್ಯೆ ನಡೆದ ಚುನಾವಣೆಯಲ್ಲಿ ಮತ್ತೆ ಸ್ಪಷ್ಟ ಫಲಿತಾಂಶ ಹೊರಹೊಮ್ಮಿಲ್ಲ.

ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಇತ್ತೀಚೆಗೆ ಐದು ಸುತ್ತಿನ ಮತದಾನ ನಡೆಸಿದರೂ ಸ್ಪಷ್ಟ ಬಹುಮತ ಪಡೆಯಲು ಇಬ್ಬರೂ ವಿಫಲರಾದ ಕಾರಣ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ.

ಸಾಮಾನ್ಯ ಸಭೆಯಲ್ಲಿ ಭಾರತದ ನ್ಯಾಯಮೂರ್ತಿ ಮೇಲುಗೈ ಸಾಧಿಸಿದರೆ, ಭದ್ರತಾ ಮಂಡಳಿಯಲ್ಲಿ ಬ್ರಿಟನ್‌ ಅಭ್ಯರ್ಥಿ ಪಾರಮ್ಯ ಮೆರೆದರು.

ಇದರಿಂದಾಗಿ ಮತ್ತೊಮ್ಮೆ ಚುನಾವಣೆ ನಡೆಸುವ ಅನಿವಾರ್ಯತೆ ಎದುರಾಗಿದ್ದು, ಶೀಘ್ರದಲ್ಲಿಯೇ ಮತದಾನದ ದಿನಾಂಕ ಪ್ರಕಟಿಸಲಾಗುವುದು ಎಂದು ವಿಶ್ವಸಂಸ್ಥೆ ತಿಳಿಸಿದೆ.

ಭಾರತಕ್ಕೆ ಭದ್ರತಾ ಮಂಡಳಿ ಅಡ್ಡಿ:ಸಾಮಾನ್ಯ ಸಭೆಯಲ್ಲಿ ಭಾರತಕ್ಕೆ ಅಪೂರ್ವ ಬೆಂಬಲ ವ್ಯಕ್ತವಾಗಿದೆ. ಭಂಡಾರಿ ಅವರು 121 ಮತ ಪಡೆದು ಮೇಲುಗೈ ಸಾಧಿಸಿದರು. ಆದರೆ, ಭದ್ರತಾ ಮಂಡಳಿಯಲ್ಲಿ ಕೇವಲ ಐದು ಮತ ಪಡೆದ ಅವರ ಗೆಲುವಿಗೆ ಇನ್ನೂ ಮೂರು ಮತಗಳ ಕೊರತೆ ಎದುರಾಯಿತು.ಭದ್ರತಾ ಮಂಡಳಿಯಲ್ಲಿ 9 ಮತ ಪಡೆದು ಸ್ಪಷ್ಟ ಬಹುಮತ ಪಡೆದ ಬ್ರಿಟನ್‌ನ ಕ್ರಿಸ್ಟೋಫರ್‌, ಸಾಮಾನ್ಯ ಸಭೆಯಲ್ಲಿ ಕೇವಲ 68 ಮತ ಪಡೆದ ಕಾರಣ ಗೆಲುವಿನ ದಡ ಸೇರಲಾಗಲಿಲ್ಲ.

15 ಸದಸ್ಯರಿರುವ ಭದ್ರತಾ ಮಂಡಳಿಯಲ್ಲಿ ಗೆಲುವಿಗೆ 8 ಮತ ಮತ್ತು 193 ಸದಸ್ಯ ರಾಷ್ಟ್ರಗಳ ಸಾಮಾನ್ಯ ಸಭೆಯಲ್ಲಿ ಗೆಲ್ಲಲು 97 ಮತ ನಿಗದಿ ಮಾಡಲಾಗಿತ್ತು.

ಸಾಮಾನ್ಯ ಧ್ವನಿಗೆ ದೊರೆಯದ ಮನ್ನಣೆ: ‘ವಿಶ್ವಸಂಸ್ಥೆಯಲ್ಲಿ ಸಾಮಾನ್ಯ ಸಭೆಯ ಧ್ವನಿಯನ್ನು ಅನೇಕ ವರ್ಷಗಳಿಂದ ನಿರ್ಲಕ್ಷಿಸಲಾಗಿದೆ. ಸಾಮಾನ್ಯ ಸಭೆಯಲ್ಲಿ ಭಾರತಕ್ಕೆ ದೊರೆತ ಬಹುಮತವನ್ನು ಬ್ರಿಟನ್‌ ಗೌರವಿಸುವ ಬದಲು ಹತ್ತಿಕ್ಕಲು ಮುಂದಾಗಿದೆ’ ಎಂದು ವಿಶ್ವಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಒಂದು ಬಾರಿ ಐಸಿಜೆ ನ್ಯಾಯಮೂರ್ತಿಯಾಗಿ ಕೆಲಸ ಮಾಡಿರುವ ದಲ್ವೀರ್‌ ಭಂಡಾರಿ ಅವರನ್ನು ಒಂಭತ್ತು ವರ್ಷಗಳ ಮತ್ತೊಂದು ಅವಧಿಗೆ ಭಾರತ ನಾಮನಿರ್ದೇಶನ ಮಾಡಿದೆ.

* ಇದು ಕೇವಲ ಭಾರತಕ್ಕೆ ಆದ ಅನ್ಯಾಯವಲ್ಲ. ವಿಶ್ವದ ಬಹುಪಾಲು ರಾಷ್ಟ್ರಗಳ ಬಹುಮತದ ಧ್ವನಿ ಮನ್ನಣೆ ಸಿಕ್ಕಿಲ್ಲ.ಸಾಮಾನ್ಯ ಸಭೆಯ ನಿರ್ಣಯಕ್ಕೆ ಮನ್ನಣೆ ನೀಡಬೇಕು

– ಶಶಿ ತರೂರ್‌, ಕಾಂಗ್ರೆಸ್‌ ನಾಯಕ ಮತ್ತು ವಿಶ್ವಸಂಸ್ಥೆಯ ಮಾಜಿ ಅಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.