ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಅಭಿಯಾನಕ್ಕೆ ಚಾಲನೆ

Last Updated 16 ನವೆಂಬರ್ 2017, 10:41 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನ.30ರಿಂದ ಒಂದು ತಿಂಗಳು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಡೆಯಲಿದ್ದು, 2018ರ ಜನವರಿ 1ಕ್ಕೆ 18 ವರ್ಷ ತುಂಬುವ ಹೊಸ ಮತದಾರರು ಹೆಸರು ನೋಂದಾಯಿಸಬಹುದು ಎಂದು ಹೇಳಿದರು.

ಈ ಹಿಂದೆ ಜಿಲ್ಲೆಯಲ್ಲಿ 1,563 ಬೂತ್‌ಗಳಿದ್ದವು. ಈ ಬಾರಿ 5 ಹೊಸ ಬೂತ್‌ಗಳನ್ನು ಸೇರಿಸಲಾಗಿದೆ. ಒಟ್ಟಾರೆ 11,78,924 ಮತದಾರರಿದ್ದಾರೆ. ಹಿಂದಿನ ಚುನಾವಣೆಗಳ ವೇಳೆ ಮತದಾರರ ಪಟ್ಟಿಯಲ್ಲಿ ಸಾಕಷ್ಟು ಗೊಂದಲಗಳಾಗಿದ್ದವು. ಹೀಗಾಗಿ ಮುಂದಿನ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಗೊಂದಲಕ್ಕೆ ಆಸ್ಪದ ಇರಬಾರದು ಎಂಬ ಕಾರಣಕ್ಕೆ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಪರಿಷ್ಕರಿಸಲಾಗುತ್ತಿದೆ ಎಂದರು.

ಹಳೆ ಮತದಾರರ ಹೆಸರು ಅಥವಾ ವಿವರದಲ್ಲಿ ಯಾವುದೇ ತಿದ್ದುಪಡಿಯ ಅಗತ್ಯವಿದ್ದರೆ ಅರ್ಜಿ ಸಲ್ಲಿಸಬಹುದು. ಜತೆಗೆ ಊರು, ಮತಗಟ್ಟೆ ಅಥವಾ ವಿಧಾನಸಭಾ ಕ್ಷೇತ್ರದ ವಿವರ ಬದಲಾವಣೆ ಮಾಡಬೇಕಿದ್ದರೆ, 18 ವರ್ಷ ತುಂಬಿದ್ದರೂ ಈವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸದ, ಪಟ್ಟಿಯಲ್ಲಿ ಭಾವಚಿತ್ರ ಸೇರ್ಪಡೆ ಬಯಸುವವರು ಅರ್ಜಿ ಸಲ್ಲಿಸಬಹುದು ಎಂದು ವಿವರಿಸಿದರು.

ಬಿಎಲ್‌ಒ ನೇಮಕ: ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಸರ್ಕಾರಿ ಶಾಲಾ ಶಿಕ್ಷಕರು, ಗ್ರಾಮ ಲೆಕ್ಕಿಗರು ಹಾಗೂ ಅಂಗನವಾಡಿ ಬೋಧಕರನ್ನು ಮತಗಟ್ಟೆ ಹಂತದ ಅಧಿಕಾರಿಗಳಾಗಿ (ಬಿಎಲ್‌ಒ) ನೇಮಕ ಮಾಡಲಾಗಿದೆ. ಎಲ್ಲಾ ಬಿಎಲ್‌ಒ ಹಾಗೂ ತಹಶೀಲ್ದಾರ್‌ ಕಚೇರಿಯಲ್ಲಿ ಅರ್ಜಿ ವಿತರಿಸಲಾಗುತ್ತದೆ. ಅಲ್ಲದೇ, ಕೇಂದ್ರ ಚುನಾವಣಾ ಆಯೋಗದ www.voterreg.kar.nic.in ವೆಬ್‌ಸೈಟ್‌ ವಿಳಾಸದ ಮೂಲಕವೂ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.

ಬಿಎಲ್‌ಒಗಳು ಸಾರ್ವಜನಿಕರು ಸಲ್ಲಿಸಿದ ಅರ್ಜಿ ಹಾಗೂ ಪೂರಕ ದಾಖಲೆ ಪತ್ರಗಳನ್ನು ಪರಿಶೀಲಿಸಿ, ಸಹಾಯಕ ಮತದಾರರ ನೊಂದಣಾಧಿಕಾರಿಗೆ ಕಳುಹಿಸಿಕೊಡುತ್ತಾರೆ. ಒಬ್ಬ ಮತದಾರ ಒಂದು ಮತಗಟ್ಟೆ ವ್ಯಾಪ್ತಿಯಲ್ಲಿ ಮಾತ್ರ ಹೆಸರು ಸೇರ್ಪಡೆ ಮಾಡಬಹುದು. ರಾಜ
ಕೀಯ ಪಕ್ಷಗಳು ಬೂತ್‌ ಮಟ್ಟದಲ್ಲಿ ಏಜೆಂಟರನ್ನು ನೇಮಿಸಿ, ಯಾವುದೇ ಮತದಾರರ ಹೆಸರು ಸೇರಿಸಬೇಕಿದ್ದರೆ, ಮತದಾರರ ಪಟ್ಟಿಯಲ್ಲಿ ಲೋಪದೋಷವಿದ್ದರೆ ಮತ್ತು ಅನಧಿಕೃತ ಮತದಾರರ ಬಗ್ಗೆ ಬಿಎಲ್‌ಒಗಳಿಗೆ ಮಾಹಿತಿ ನೀಡಬಹುದು ಎಂದು ತಿಳಿಸಿದರು.

ಜಾದೂ ಪ್ರದರ್ಶನ: ಯುವ ಮತದಾರರ ಹೆಸರು ಸೇರ್ಪಡೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿ ಗ್ರಾಮದಲ್ಲೂ ಜಾದೂ ಪ್ರದರ್ಶನ ನಡೆಸಲಾಗುತ್ತದೆ ಮತ್ತು ಕರಪತ್ರ ಹಂಚಲಾಗುತ್ತದೆ.

ತಿಮವಾಗಿ 2018ರ ಜ.12ರಂದು ಜಿಲ್ಲೆಯ ಪರಿಷ್ಕೃತ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಉಪ ವಿಭಾಗಾಧಿಕಾರಿ ಶುಭಾ ಕಲ್ಯಾಣ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT