ಶನಿವಾರ, ಮಾರ್ಚ್ 6, 2021
28 °C

ದೆಹಲಿಯ ಸರ್ಕಾರಿ, ಖಾಸಗಿ ಶಾಲೆ–ಕಾಲೇಜುಗಳಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆಗೆ ಎನ್‌ಜಿಟಿ ನಿರ್ದೇಶನ

ಪಿಟಿಐ Updated:

ಅಕ್ಷರ ಗಾತ್ರ : | |

ದೆಹಲಿಯ ಸರ್ಕಾರಿ, ಖಾಸಗಿ ಶಾಲೆ–ಕಾಲೇಜುಗಳಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆಗೆ ಎನ್‌ಜಿಟಿ ನಿರ್ದೇಶನ

ನವದೆಹಲಿ: ದೆಹಲಿಯಲ್ಲಿನ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆಯನ್ನು ಇನ್ನೆರಡು ತಿಂಗಳೊಳಗಾಗಿ ಮಾಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ(ಎನ್‌ಜಿಟಿ) ಗುರುವಾರ ನಿರ್ದೇಶನ ನೀಡಿದೆ.

ಶಾಲಾ ಕಾಲೇಜುಗಳು ತಮ್ಮದೇ ವೆಚ್ಚದಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಬೇಕು ಮಂಡಳಿ ಹೇಳಿದೆ.

ಮಳೆನೀರು ಸಂಗ್ರಹ ವ್ಯವಸ್ಥೆಯನ್ನು ನಿಗದಿತ ಅವಧಿಯೊಳಗೆ ಸ್ಥಾಪಿಸಲು ವಿಫಲವಾದ ಯಾವುದೆ ಸಂಸ್ಥೆಯು ₹5 ಲಕ್ಷ ಪರಿಸರ ಪರಿಹಾರವನ್ನು ಪಾವತಿಸಲು ಜವಾಬ್ದಾರರಾಗಿರಬೇಕು ಎಂದು ಎನ್‌ಜಿಟಿಯ ಅಧ್ಯಕ್ಷರಾದ ಸ್ವತಂತ್ರ ಕುಮಾರ್‌ ಅವರ ನೇತೃತ್ವದ ಪೀಠ ಹೇಳಿದೆ.

ಶಾಲೆಗಳು ಮತ್ತು ಕಾಲೇಜುಗಳು ನಿರ್ದೇಶನ ಸಮಿತಿಯ ಆದೇಶಗಳನ್ನು ಪಾಲಿಸಬೇಕು. ಸಮಿತಿಯು ಶಾಲಾ ಆವರಣವನ್ನು ಪರಿಶೀಲಿಸುತ್ತದೆ ಮತ್ತು ವ್ಯವಸ್ಥೆಯನ್ನು ನಿರ್ವಹಿಸಲು ಸಂಸ್ಥೆಗಳಿಗೆ ಅನುಮತಿ ನೀಡುತ್ತದೆ ಎಂದು ಹೇಳಿದೆ.

ದೆಹಲಿ ಸರ್ಕಾರದ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯಲ್ಲಿ, ದೆಹಲಿ ಜಲ ಮಂಡಳಿ, ಪಿಡಬ್ಲ್ಯುಡಿ, ಕೇಂದ್ರ ಅಂತರ್ಜಲ ಪ್ರಾಧಿಕಾರ ಮತ್ತು ಇತರ ಅಧಿಕಾರಿಗಳು ಇರಲಿದ್ದಾರೆ ಎಂದು ತಿಳಿಸಿದೆ.

ಸಮಿತಿಯು ತಿಂಗಳಿಗೆ ಎರಡು ಬಾರಿ ಭೇಟಿ ನೀಡಬೇಕು ಮತ್ತು ಶಾಲೆಗಳು ಹಾಗೂ ಕಾಲೇಜುಗಳು ತ್ವರಿತವಾಗಿ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು ಪೀಠ ತಿಳಿಸಿದೆ.

‘ಒಂದು ವೇಳೆ ಮಳೆನೀರು ಸಂಗ್ರಹ ವ್ಯವಸ್ಥೆಯನ್ನು ಸ್ಥಾಪಿಸಲು ಸಾಧ್ಯವಿಲ್ಲದಿದ್ದರೆ, ಆ ಸಂಸ್ಥೆಯು ಗುರುವಾರದಿಂದ ಒಂದು ವಾರದೊಳಗೆ ಸಮಿತಿಯನ್ನು ಸಂಪರ್ಕಿಸಬೇಕು. ಆ ಸಮಿತಿಯು ಸ್ಥಳ ಪರಿಶೀಲಿಸುತ್ತದೆ. ‘ಸ್ಥಳ ಪರಿಶೀಲನೆಯ ನಂತರ, ಅಂತಹ ವ್ಯವಸ್ಥೆಯನ್ನು ಸ್ಥಾಪಿಸುವ ಸಾಧ್ಯತೆ ಇಲ್ಲ ಎಂದು ಕಂಡುಬಂದರೆ, ಸಮಿತಿಯು ವಿನಾಯಿತಿ ಪ್ರಮಾಣಪತ್ರವನ್ನು ನೀಡಬಹುದು’ ಎಂದು ಪೀಠ ಹೇಳಿದೆ.

ಸರ್ಕಾರಿ ಇಲಾಖೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ವಸತಿ ಸಮುಚ್ಚಯಗಳು ಮಳೆ ನೀರು ಸಂಗ್ರಹ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿಲ್ಲ ಅಥವಾ ಇದರ ಕಾರ್ಯಚಟುವಟಿಕೆಗಳಿಲ್ಲದ ವ್ಯವಸ್ಥೆಗಳನ್ನು ಹೊಂದಿವೆ ಎಂದು ದೂರಿ ಅಂತರ್ಜಲ ಸಂರಕ್ಷಣೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಯ ಮಹೇಶ್‌ ಚಂದ್ರ ಸಕ್ಸೇನಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಎನ್‌ಜಿಟಿ ಈ ನಿರ್ದೇಶ ನೀಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.