ಹೂಡಿಕೆಗೆ ಇದು ಪ್ರಶಸ್ತ ತಾಣ

7

ಹೂಡಿಕೆಗೆ ಇದು ಪ್ರಶಸ್ತ ತಾಣ

Published:
Updated:
ಹೂಡಿಕೆಗೆ ಇದು ಪ್ರಶಸ್ತ ತಾಣ

ಅಲ್ಲೊಂದು ಇಲ್ಲೊಂದು ಮನೆ, ಕಣ್ಣು ಹಾಯಿಸಿದೆಡೆ ಕೃಷಿಭೂಮಿ... ಹಿಂದೊಮ್ಮೆ ಹೊಸಕೋಟೆ ಹೀಗಿತ್ತು. ಆದರೆ ಈಗ ಹೊಸಕೋಟೆ ಹೀಗಿಲ್ಲ. ಈ ಪ್ರದೇಶದ ಹಳೆಯ ರೂಪ ಕಳಚಿ, ಹಲವು ಬಡಾವಣೆಗಳು ನಿರ್ಮಾಣವಾಗಿವೆ. ರಿಯಾಲ್ಟಿ ದೃಷ್ಟಿಯಿಂದ ವಸತಿ ಹಾಗೂ ವಾಣಿಜ್ಯ ಎರಡೂ ಕ್ಷೇತ್ರದಲ್ಲಿಯೂ ಹೊಸಕೋಟೆ ಭರವಸೆಯ ತಾಣವಾಗಿ ಬದಲಾಗಿದೆ.

ನಗರದ ಪೂರ್ವ ಭಾಗದಿಂದ 25 ಕಿ.ಮೀ. ಅಂತರದಲ್ಲಿರುವ ಹೊಸಕೋಟೆಯ ಚಿತ್ರಣ ಐಟಿಪಿಎಲ್‌ ಬಂದ ನಂತರ ಸಂಪೂರ್ಣ ಬದಲಾಯಿತು. ಕೆಲವೇ ಸಾವಿರ ರೂಪಾಯಿಗಳಿಗೆ ಸಿಗುತ್ತಿದ್ದ ನಿವೇಶನಗಳಿಗೆ ಚಿನ್ನದ ಬೆಲೆ ಬಂತು. ಈಗ ಇಲ್ಲಿ ಹದಿನೈದಕ್ಕೂ ಹೆಚ್ಚು ಬಡಾವಣೆಗಳಿವೆ. ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ಪಟ್ಟಣವಾದರೂ, ಬೆಂಗಳೂರು ನಗರಕ್ಕೆ ಸಮೀಪ. ಜೊತೆಗೆ ಭೂಮಿಯೂ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವ ಕಾರಣ ಹೂಡಿಕೆಗೆ ಪ್ರಶಸ್ತ ತಾಣ ಎನಿಸಿಕೊಂಡಿದೆ.

ಹೊಸಕೋಟೆ ಸುತ್ತಮುತ್ತ ಸಾಕಷ್ಟು ಸಂಖ್ಯೆಯಲ್ಲಿ ದೊಡ್ಡ ಕೈಗಾರಿಕೆಗಳು ಇವೆ. ಕೈಗಾರಿಕೆಗಳಲ್ಲಿ ಕೆಲಸ ಮಾಡಲೆಂದು ವಲಸೆ ಬಂದವರಿಗೆ ಸೂರು ಒದಗಿಸುವ ಸಲುವಾಗಿ ರಿಯಲ್‌ ಎಸ್ಟೇಟ್ ಉದ್ಯಮ ಚುರುಕುಗೊಂಡಿತು. ಇಪ್ಪತ್ತು ವರ್ಷಗಳ ಹಿಂದೆ ಹದಿನೈದು ಸಾವಿರಕ್ಕೆ 30X40 ನಿವೇಶನ ದೊರಕುತ್ತಿತ್ತು. ಈಗ ಇದೇ ಅಳತೆಯ ಜಾಗಕ್ಕೆ ₹30 ಲಕ್ಷಕ್ಕೂ ಹೆಚ್ಚಿನ ಮೊತ್ತ ಪಾವತಿಸಬೇಕಿದೆ. ಸುಮಾರು ನಾಲ್ಕು ವರ್ಷಗಳಲ್ಲಿ ಆಶ್ಚರ್ಯ ಎನ್ನುವಷ್ಟರ ಮಟ್ಟಿಗೆ ಉದ್ಯಮ ಏರುಗತಿ ದಾಖಲಿಸಿತು. ನಂತರ ಅದೇ ಪರಿಸ್ಥಿತಿಯಲ್ಲಿ ನಿಂತುಬಿಟ್ಟಿತು.

‘ತಾಲ್ಲೂಕಿನ ಹಲವೆಡೆ ಮೂಲಸೌಕರ್ಯ ಸರಿಯಿಲ್ಲ. ಉದ್ಯಮ ಕಳೆಗುಂದಲೂ ಇದೂ ಒಂದು ಕಾರಣ ಇರಬಹುದು’ ಎಂದು ಭೂ ವ್ಯವಹಾರ ಬಲ್ಲವರು ಅಭಿಪ್ರಾಯಪಡುತ್ತಾರೆ.

‘ಇಲ್ಲಿ ಶಾಲೆಗಳು, ಆಸ್ಪತ್ರೆಗಳಿವೆ. ಈ ಭಾಗದಲ್ಲಿ ಅಪಾರ್ಟ್‌ಮೆಂಟ್‌ಗಳು, ನಿವೇಶನಗಳು, ವಿಲ್ಲಾಗಳು ಎಲ್ಲಾ ವರ್ಗಗಳಿಗೂ ಅನುಕೂಲವಾಗುವಂತೆ ಬೆಳೆದಿವೆ. ಆದರೆ ಸುಸಜ್ಜಿತವಾದ ರಸ್ತೆ ವ್ಯವಸ್ಥೆಯಿಲ್ಲ. ಒಂದೆರಡು ಬಡಾವಣೆ ಹೊರತುಪಡಿಸಿ ಹೊಸಕೋಟೆಯ ಯಾವ ರಸ್ತೆಯಲ್ಲಿಯೂ ತಿರುಗುವುದಕ್ಕೆ ಸಾಧ್ಯವಿಲ್ಲ. ವಿಪರೀತ ಎನ್ನುವಷ್ಟರ ಮಟ್ಟಿಗೆ ನೀರಿನ ಸಮಸ್ಯೆ ಇದೆ. ಐದು–ಹತ್ತು ದಿನಕ್ಕೊಮ್ಮೆ ಕಾವೇರಿ ನೀರು ಬಿಡುತ್ತಾರೆ. ಮನರಂಜನೆಯ ಆಯ್ಕೆಗಳಿಲ್ಲ. ಅದ್ಯಾವುದೋ ಸ್ಕೀಮ್‌ನಲ್ಲಿ ದುಡ್ಡು ಬಂತಂತೆ. ಅದು ಮತ್ತೆ ಸರ್ಕಾರಕ್ಕೆ ಹೋಗುತ್ತದೆ ಎಂದು ಟಿ.ಎಚ್‌. ಬಡಾವಣೆಯ ರಸ್ತೆಯೊಂದನ್ನು ಸರಿಮಾಡಿದ್ದಾರೆ’ ಎನ್ನುತ್ತಾರೆ ರಿಯಲ್‌ ಎಸ್ಟೇಟ್‌ ಉದ್ಯಮಿ ಎಚ್‌.ಸಿ ಷಣ್ಮುಗಂ.

ನೋಟು ಅಮ್ಯಾನೀಕರಣದ ನಂತರ ಇಲ್ಲಿಯ ಭೂ ವ್ಯವಹಾರ ಮಂಕಾಗಿದೆ. ಕೋಟಿಗಟ್ಟಲೆ ರೂಪಾಯಿ ಸುರಿದು ಬಡಾವಣೆ ಅಭಿವೃದ್ಧಿಪಡಿಸಿರುವ ಉದ್ಯಮಿಗಳು ಗ್ರಾಹಕರಿಗಾಗಿ ಕಾಯುತ್ತಿದ್ದಾರೆ.

‘ನೋಟು ರದ್ಧತಿಯ ನಂತರ ರಿಯಲ್‌ಎಸ್ಟೇಟ್‌ ವ್ಯವಹಾರ ಶೇ 90ರಷ್ಟು ಕುಸಿತ ಕಂಡಿದೆ. ದೊಡ್ಡ ಬಿಲ್ಡರ್‌ಗಳು ಆನ್‌ಲೈನ್ ಮಾರ್ಕೆಟಿಂಗ್‌ ಮಾಡುತ್ತಾರೆ. ಆದರೆ ನಮ್ಮಂಥ ಮಧ್ಯಮ ಮಟ್ಟದ ಬಿಲ್ಡರ್‌ಗಳಿಗೆ ಇದು ಸಾಧ್ಯವಾಗುವುದಿಲ್ಲ. ನಾವು ಸ್ಥಳೀಯ ಮತ್ತು ಮಧ್ಯಮ ವರ್ಗದ ಗ್ರಾಹಕರನ್ನು ಅವಲಂಬಿಸಿರುತ್ತೇವೆ. ಮನೆ ಬಾಡಿಗೆಗೆ ಬರುವವರ ಸಂಖ್ಯೆಯೂ ಕಡಿಮೆಯಾಗಿದೆ’ ಎನ್ನುತ್ತಾರೆ ಅವರು.

ರಿಯಲ್‌ ಎಸ್ಟೇಟ್ ವ್ಯವಹಾರ ಮಂದಗತಿಯಲ್ಲಿ ನಡೆಯುತ್ತಿದ್ದರೂ, ನಿವೇಶನ, ಫ್ಲಾಟ್‌ ಬೆಲೆ ಕಡಿಮೆಯಾಗಿಲ್ಲ. ಹಾಗಂತ ಹೆಚ್ಚೂ ಆಗಿಲ್ಲ. ಮರುಮಾರಾಟ ಮತ್ತು ಹೂಡಿಕೆ ಮಾಡಿರುವವರು ಬೇರೆ ವಿಧಿ ಇಲ್ಲದೆ ಬಂದಷ್ಟು ಬರಲಿ ಎಂಬ ಉದ್ದೇಶಕ್ಕೆ ₹5 ಲಕ್ಷ ಕಡಿಮೆ ಮಾಡಿ ಮಾರಿರುವುದೂ ಇದೆ. ಹಾಗಾಗಿ ಈಗ ₹25 ಲಕ್ಷಕ್ಕೆ ಎರಡು ಕೋಣೆಯ ಅಪಾರ್ಟ್‌ಮೆಂಟ್‌ ದೊರಕುತ್ತಿದೆ. ಮನೆಯ ಬೆಲೆಯೂ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ. ಇನ್ನೂ ಕಡಿಮೆಯಾಗುವುದು ಸಾಧ್ಯವಿಲ್ಲ. ನಿವೇಶನದ ಬೆಲೆ ಚದರ ಅಡಿಗೆ ₹4000ದವರೆಗೂ ಇದೆ’ ಎಂದು ಅವರು ಮಾಹಿತಿ ನೀಡುತ್ತಾರೆ.

ಹೊಸಕೋಟೆ ಸುತ್ತಮುತ್ತ ನಾಲ್ಕು ವರ್ಷಗಳಿಂದ ಅಪಾರ್ಟ್‌ಮೆಂಟ್‌ ಸಂಸ್ಕೃತಿ ಆರಂಭವಾಯಿತು. ಮಾಲೂರು, ನರಸಾಪುರದಲ್ಲಿ ಕೈಗಾರಿಕೆಗಳು ಶುರುವಾದವು. ಬೆಂಗಳೂರಿನಲ್ಲಿ ಮನೆ ಮಾಡಿದರೆ, ಸಕಾಲಕ್ಕೆ ಕೆಲಸದ ಸ್ಥಳ ತಲುಪುವುದು ಕಷ್ಟ ಎಂದುಕೊಂಡ ಕಾರ್ಮಿಕರು ಅಪಾರ್ಟ್‌ಮೆಂಟ್‌ಗಳನ್ನು ಹುಡುಕಲು ಆರಂಭಿಸಿದರು. ಇದು ಭೂವ್ಯವಹಾರ ಚುರುಕಾಗಲು ಕಾರಣವಾಯಿತು.

‘ಕಳೆದ ನಾಲ್ಕು ವರ್ಷಗಳಿಂದ ಮಾರಾಟ ಚುರುಕಾಗಿತ್ತು. ಆದರೆ ನೋಟು ರದ್ಧತಿಯ ನಂತರ ಒಂದು ಫ್ಲಾಟ್‌ ಮಾರುವುದಕ್ಕೂ ಕಷ್ಟವಾಗುತ್ತಿದೆ. ಆದರೆ ಭೂಮಿ ಕೊಳ್ಳಬೇಕು ಎನ್ನುವವರಿಗೆ ಇದೊಂದು ಉತ್ತಮ ಅವಕಾಶ. ಇನ್ನು ಭೂ ಬೆಲೆ ಕಡಿಮೆಯಾಗುವುದಿಲ್ಲ. ಮುಂದೆ ಖಂಡಿತ ಏರಿಕೆ ಆಗುತ್ತದೆ. ಹಾಗಾಗಿ ಈಗಲೇ ಹೂಡಿಕೆ ಮಾಡುವುದು ಉತ್ತಮ’ ಎನ್ನುತ್ತಾರೆ ಇಲ್ಲಿಯ ಭೂ ವ್ಯವಹಾರ ಬಲ್ಲವರು.

ಅಗತ್ಯ ಸೌಕರ್ಯಗಳಿರುವ ಎರಡು ಕೋಣೆಯ ಮನೆಗೆ ₹13 ಸಾವಿರ, ಒಂದೇ ಕೋಣೆಯ ಮನೆಗೆ ₹8 ಸಾವಿರ ಬಾಡಿಗೆ ಇದೆ. ನೀರಿನ ಸೌಲಭ್ಯವಿಲ್ಲದ ಕಡೆ ₹6 ರಿಂದ 10 ಸಾವಿರದೊಳಗೆ ಮನೆಗಳು ಬಾಡಿಗೆಗೆ ಸಿಗುತ್ತವೆ.

ಬೆಂಗಳೂರು–ಚೆನ್ನೈ ರಾಷ್ಟ್ರೀಯ ಹೆದ್ದಾರಿ 4ರ ಹಾದಿಯಲ್ಲಿರುವುದು ಹೊಸಕೋಟೆ ಪಟ್ಟಣಕ್ಕೆ ಪ್ಲಸ್‌ ಪಾಯಿಂಟ್. ಮಾಲೂರಿನಲ್ಲಿ ಅನೇಕ ಕೈಗಾರಿಕೆ ಮತ್ತು ವಸತಿ ಯೋಜನೆಗಳು ಅಭಿವೃದ್ಧಿಯಾಗುತ್ತಿವೆ. ಮಾಲೂರು ಇಲ್ಲಿಂದ 18 ಕಿ.ಮೀ ದೂರದಲ್ಲಿದ್ದರೆ, ಐ.ಟಿ. ಕಂಪೆನಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ವೈಟ್‌ಫೀಲ್ಡ್‌ಗೆ ಕೇವಲ 15 ಕಿ.ಮೀ., ಬೂದಿಗೆರೆ ಕ್ರಾಸ್‌ ಏಳು ಕಿ.ಮೀ. ದೂರದಲ್ಲಿದೆ.

ಮುಂದಿನ ದಿನಗಳಲ್ಲಿ ಕೆ.ಆರ್‌.ಪುರಂವರೆಗೂ ಮೆಟ್ರೊ ರೈಲು ವಿಸ್ತರಣೆಯಾಗುವ ಸಾಧ್ಯತೆ ಇದೆ. ಹೊಸಕೋಟೆಯು ಹೂಡಿಕೆದಾರರ ಪ್ರಶಸ್ತ ಸ್ಥಳವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry