ಗುರುವಾರ , ಮಾರ್ಚ್ 4, 2021
29 °C

ಚಿಣ್ಣರ ಕುಂಚದಲ್ಲಿ ಅರಳಿದ ಹಲವು ಬಿಂಬಗಳು

ಸುಬ್ರಮಣ್ಯ ಎಚ್.ಎಂ. Updated:

ಅಕ್ಷರ ಗಾತ್ರ : | |

ಚಿಣ್ಣರ ಕುಂಚದಲ್ಲಿ ಅರಳಿದ ಹಲವು ಬಿಂಬಗಳು

ವಿಪರೀತ ವಾಯುಮಾಲಿನ್ಯ ತಡೆಯಲಾಗದೆ ನಾಡಿನ ಹಸು, ಎಮ್ಮೆ, ಕುರಿ, ಮೇಕೆ, ಕಾಡಿನ ಹುಲಿ, ಸಿಂಹ, ಆನೆಗಳು ಮುಖಕ್ಕೆ ಮಾಸ್ಕ್ ತೊಟ್ಟಿವೆ. ಮಾನವರಾದ ನಿಮಗೆ ಮಾತ್ರ ಮಾಲಿನ್ಯವೇ? ನಿಮ್ಮ ಸಂಕುಲದ ನಮಗೂ ಮಾಲಿನ್ಯವಾಗುವುದಿಲ್ಲವೇ? ಹೀಗೆ ನಾಡಿನ ಮತ್ತು ಕಾಡಿನ ಪ್ರಾಣಿಗಳೆಲ್ಲಾ ಒಮ್ಮೆಲೆ ಮನುಷ್ಯನಿಗೆ ತರಾಟೆಗೆ ತೆಗೆದುಕೊಳ್ಳುವ ದೃಶ್ಯ ಯಾವುದೋ ಸಿನಿಮಾದ ಕಲ್ಪನೆ ಅಥವಾ ಕಾರ್ಟೂನ್‌ನದ್ದು ಅಲ್ಲ; ಮಕ್ಕಳ ಕುಂಚದಲ್ಲಿ ಅರಳಿರುವ ಅಪರೂಪದ ಕಲಾಕೃತಿಗಳ ವಸ್ತು ವಿಷಯ.

ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಹೆರಿಟೇಜ್ ಫೌಂಡೇಷನ್ ವತಿಯಿಂದ ‘ಚೇತನಾ’ ಹೆಸರಿನಲ್ಲಿ ಏರ್ಪಡಿಸಿರುವ ಚಿತ್ರಕಲಾ ಪ್ರದರ್ಶನದಲ್ಲಿ ಬೆಂಗಳೂರಿನ 40 ಶಾಲೆಯ 1ರಿಂದ 12 ವಯಸ್ಸಿನ ಮಕ್ಕಳು ಬಿಡಿಸಿರುವ 35 ಕಲಾಕೃತಿಗಳು ಪ್ರದರ್ಶನಗೊಂಡಿವೆ. ನಮ್ಮ ಸುತ್ತಲಿನ ಹಲವು ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿರುವುದು ಈ ಪ್ರದರ್ಶನದ ಹೆಗ್ಗಳಿಕೆ.

ಬೆಂಗಳೂರಿನಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿರುವ ಕಸದ ಸಮಸ್ಯೆ, ಮಳೆ ಬಂದರೆ ಬೋಟ್ ಉಪಯೋಗಿಸಬೇಕಾಗುವ ನಗರ ನಿರ್ಮಾಣ ಅವಾಂತರ, ಕೆರೆಗಳ ಒತ್ತುವರಿ, ನದಿಗಳ ಸಂರಕ್ಷಣೆ, ಕಾಂಕ್ರಿಟೀಕರಣದಿಂದ ನಗರ ಪರಿಸರದ ವೈಪರೀತ್ಯ ಸೇರಿದಂತೆ ಜಾಗತಿಕ ತಾಪಮಾನದವರೆಗೂ ಪರಿಸರದ ಮೇಲಿನ ದಬ್ಬಾಳಿಕೆ ಮತ್ತು ಅದರಿಂದ ಎದುರಾಗುವ ಪರಿಣಾಮಗಳ ಸೂಕ್ಷ್ಮತೆಯನ್ನು ಚಿಣ್ಣರ ಈ ಕಲಾಕೃತಿಗಳು ತೆರೆದಿಟ್ಟಿವೆ.

ಇನ್ನು ಶಬ್ದಮಾಲಿನ್ಯಕ್ಕೆ ಹೆದರಿದ ಪ್ರಾಣಿ – ಪಕ್ಷಿಗಳ ಸಂಕಷ್ಟ, ಜಲ ಮಾಲಿನ್ಯದಿಂದ ಕೆರೆ – ನದಿಗಳಲ್ಲಿ ಸಾವಿರಾರು ಜಲಚರಗಳು ಸಾವನ್ನಪ್ಪಿ ಪರಿಸರ ಅಸಮತೋಲನವುಂಟಾಗಿರುವ ಬಗ್ಗೆ ರಚಿಸಲಾಗಿರುವ ಕಲಾಕೃತಿಗಳು ಎಚ್ಚರಿಕೆಯ ರೂಪಕದಂತೆ ಕಾಣುತ್ತವೆ.

ಚಿಣ್ಣರು ಸಾಮಾಜಿಕವಾಗಿಯೂ ಹಲವು ಸಮಸ್ಯೆಗಳನ್ನು ತಮ್ಮ ಕಲಾಕೃತಿಗಳಲ್ಲಿ ಬಿಂಬಿಸಿದ್ದಾರೆ. ವರದಕ್ಷಿಣೆ ಭೂತ, ರೈತರ ಆತ್ಮಹತ್ಯೆ, ಹೆಣ್ಣಿನ ಆತ್ಮಗೌರವ, ಸಾಮಾಜಿಕ ಸ್ಥಾನಮಾನದ ಚಿತ್ರಗಳು ದೊಡ್ಡವರನ್ನು ಬೆರಗುಗೊಳಿಸುತ್ತವೆ.

ಮಕ್ಕಳ ಮೇಲೆ ತಂತ್ರಜ್ಞಾನ ತಂದೊಡ್ಡಿರುವ ದುಷ್ಪರಿಣಾಮಗಳ ಬಗ್ಗೆಯೂ ಚಿತ್ರಿಸಿರುವ ಕೆಲ ಚಿತ್ರಗಳು ಎಲ್ಲರ ಗಮನ ಸೆಳೆಯುತ್ತವೆ. ಬ್ಲೂವೆಲ್ ಗೇಮ್‌ ಉಂಟು ಮಾಡಿರುವ ಗಂಭೀರ ಸಮಸ್ಯೆ, ಮೊಬೈಲ್ ಗೀಳಿನಿಂದ ಓದಿನ ಮೇಲಿನ ಪರಿಣಾಮ, ವಿಡಿಯೊ ಗೇಮ್‌ಗಳಿಗೆ ದಾಸರಾಗಿ ಬಾಲ್ಯ ಮರೆತಿರುವ ಈ ತಲೆಮಾರಿನ ಮಕ್ಕಳ ತಲ್ಲಣಗಳ ಕುರಿತ ಚಿತ್ರಗಳು ನೋಡುಗರನ್ನು ಚಕಿತಗೊಳಿಸಲಾರದೆ ಇರಲಾರವು.

‘ಪ್ರತಿ ವರ್ಷವೂ ಹೆರಿಟೇಜ್ ಫೌಂಡೇಷನ್, ಮಕ್ಕಳಲ್ಲಿನ ಸೃಜನಶೀಲತೆ ಅರಳಲು ಇಂತಹ ಭಿನ್ನ ಪ್ರಯೋಗ ನಡೆಸುತ್ತಿದೆ. ಈ ಮೂಲಕ ಕಲೆ, ಸಂಸ್ಕೃತಿ ಬೆಳೆಸಲು ಪ್ರೋತ್ಸಾಹಿಸುವುದು ಪ್ರಮುಖ ಧ್ಯೇಯ’ ಎನ್ನುತ್ತಾರೆ ಸಂಸ್ಥೆಯ ಅಧ್ಯಕ್ಷೆ ಚಂದ್ರಿಕಾ ಬಿ.

ಸ್ಥಳ: ವೆಂಕಟಪ್ಪ ಆರ್ಟ್ ಗ್ಯಾಲರಿ, ಸಮಯ: ಬೆಳಿಗ್ಗೆ 10ರಿಂದ ಸಂಜೆ 5.30, ನ.18ಕ್ಕೆ ಕೊನೆ. ಪ್ರವೇಶ: ಉಚಿತ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.