ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾದಿ ಉಡುಪಿನ ಸೌಂದರ್ಯ

Last Updated 16 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಪಾಶ್ಚಾತ್ಯ ಛಾಯೆ ದಕ್ಕಿದ ರವಿಕೆ, ಕಪ್ಪು, ಬಿಳಿ ಬಣ್ಣದ ಚುಕ್ಕೆಯಂತಿರುವ ವಿನ್ಯಾಸದ ಲಂಗ ತೊಟ್ಟು ಬಳುಕುತ್ತಾ ರ‍್ಯಾಂಪ್‌ ಏರಿದಳು ಲಲನೆ. ಲಂಗದಿಂದ ಸೊಂಟ ಬಳಸಿದ್ದ ಪಟ್ಟಿ, ರವಿಕೆಯಿಂದ ಭುಜ ಸೇರಿದ್ದ ಕಪ್ಪನೆಯ ಎಳೆ ದಿರಿಸಿಗೆ ಆಧುನಿಕ ನೋಟ ನೀಡಿತ್ತು. ಹಿಂದೆಯೇ ಬಂದ ಪುರುಷನದ್ದು ಉದ್ದದ ಕಪ್ಪು ನಿಲುವಂಗಿ. ಮುಂಭಾಗದಲ್ಲಿ ತೆರೆದಂತಿದ್ದ ನಿಲುವಂಗಿ ಹೆಜ್ಜೆಗೆ ತಕ್ಕಂತೆ ಬಳುಕುತ್ತಿತ್ತು. ಸೀಳಿದ ಎದೆ ತೋರುತ್ತಿದ್ದ ಅಂಗಿಯ ಮೇಲೆ ಚುಕ್ಕೆಚುಕ್ಕೆ ವಿನ್ಯಾಸ, ಪಾರದರ್ಶಕ ಒಳನೋಟ.

ಫ್ಯಾಷನ್‌ ಕ್ಷೇತ್ರದ ಜನಪ್ರಿಯ ವಿನ್ಯಾಸಗಾರರಾಗಿರುವ ಹೇಮಂತ್‌ ತ್ರಿವೇದಿ ವಿನ್ಯಾಸದ ದಿರಿಸುಗಳಿವು. ಕಪ್ಪು ಬಿಳಿ ಬಣ್ಣಗಳಿಗೇ ಹೆಚ್ಚು ಪ್ರಾಧಾನ್ಯವಿದ್ದ ಈ ಬಟ್ಟೆಗಳಲ್ಲಿ ಅಲ್ಲಲ್ಲಿ ಕೆಂಪು, ಹಳದಿ, ಕಂದು ಬಣ್ಣದ ಛಾಯೆಗಳಿದ್ದವು. ಕೆಲವು ದಿರಿಸುಗಳನ್ನು ಕಂದು ಕಪ್ಪು ಮಿಶ್ರಿತ ಬಣ್ಣಗಳಲ್ಲಿಯೂ ವಿನ್ಯಾಸಗೊಳಿಸಲಾಗಿತ್ತು.

ಮಹಿಳೆ ಹಾಗೂ ಪುರುಷರ ದಿರಿಸಿನಲ್ಲಿ ವಿಭಿನ್ನತೆ ಎದ್ದು ಕಾಣುತ್ತಿತ್ತು. ಕುರ್ತಾಗಳೊಂದಿಗೆ ಬಳಸುವ ಉದ್ದನೆಯ ಶಲ್ಯದ ವಿನ್ಯಾಸ ಚೆಲುವು ಹೆಚ್ಚಿಸಿತ್ತು. ಹಣೆಗೊಂದು ಕಪ್ಪು ನಾಮ, ಕಾಲಲ್ಲಿ ಖಾದಿ ಶೂಗಳು ವಿಶೇಷ ಎನಿಸಿದವು. ಮಹಿಳೆಯರ ದಿರಿಸಿನಲ್ಲಿ ವಿನ್ಯಾಸದ ವೈವಿಧ್ಯ ಎದ್ದು ಕಾಣುತ್ತಿತ್ತು. ಸಾಂಪ್ರದಾಯಿಕ ಗೂಂಘಟ್‌ನಿಂದ ಹಿಡಿದು ಆಧುನಿಕ ವಿನ್ಯಾಸದ, ಪಾಶ್ಚಾತ್ಯ ಸ್ಪರ್ಶ ಇರುವ ದಿರಿಸುಗಳ ಮಾದರಿಯಲ್ಲಿಯೂ ತಯಾರಾದ ಉಡುಪು ಅಲ್ಲಿತ್ತು.

ಖಾದಿ ಎಂದಾಕ್ಷಣ ಜುಬ್ಬಾ, ಸೀರೆ, ಚೀಲ ಇಷ್ಟೇ ಮನಸ್ಸಿಗೆ ಬರುವುದು. ಆದರೆ ಇಲ್ಲಿ ಇಂದಿನ ಫ್ಯಾಷನ್‌ ಟ್ರೆಂಡ್‌ಗೆ ಹೊಂದಿಕೊಳ್ಳುವಂಥ ಎಲ್ಲ ಬಗೆಯ ಉಡು‍ಪುಗಳು ಇದ್ದುದು ಕಂಡುಬಂತು. ಜಾಕೆಟ್‌, ಲಾಂಗ್‌ ಓವರ್‌ ಕೋಟ್‌, ಪಲಾಜೊ, ಗೌನ್‌ ಮುಂತಾದ ವಿನ್ಯಾಸಗಳಿದ್ದವು. ಅಲ್ಲದೆ ರಾಜಸ್ತಾನಿ ದಿರಿಸು ಎಂದೇ ಖ್ಯಾತಿ ಗಳಿಸಿರುವ ಗೂಂಘಟ್‌, ಗಾಗ್ರಾ ಚೋಲಿಗಳೂ ಇದ್ದವು. ದಿರಿಸುಗಳಲ್ಲಿ ಬಣ್ಣ ವೈವಿಧ್ಯ ಹೆಚ್ಚಿರಲಿಲ್ಲವಾದರೂ ದೇಸೀ ಸೊಗಡಿನ ಬಟ್ಟೆಯ ವಿನ್ಯಾಸ ವೈವಿಧ್ಯ ಹೆಚ್ಚು ಖುಷಿ ನೀಡಿತು.

ಇದೇ ಸಂದರ್ಭ ಮಾತಿಗೆ ಸಿಕ್ಕ ಫ್ಯಾಷನ್ ತರಬೇತುದಾರ ಪ್ರಸಾದ್ ಬಿದಪ್ಪ, ‘ಖಾದಿ ಎಂದರೆ ಭಾರತೀಯ ವಸ್ತ್ರೋದ್ಯಮ ಶ್ರೀಮಂತಿಕೆಯ ದ್ಯೋತಕ. ಇತ್ತೀಚೆಗೆ ಖಾದಿ ಧರಿಸುವವರು ಕಡಿಮೆಯಾಗುತ್ತಿದ್ದಾರೆ. ಮುಂದಿನ ಪೀಳಿಗೆಗೆ ಈ ಸಂಸ್ಕೃತಿಯ ಪರಿಚಯವೇ ಇರುವುದಿಲ್ಲ. ಇದು ಹೀಗೇ ಮುಂದುವರಿದರೆ ಈಗಿರುವ ಕೆಲವೇ ಕೆಲವು ಕುಶಲಕರ್ಮಿಗಳೂ ಮುಂದೆ ಇಲ್ಲವಾಗುತ್ತಾರೆ' ಎಂದು ಬೇಸರ ತೋಡಿಕೊಂಡರು.

‘ಖಾದಿ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ರಾಜಸ್ತಾನ್‌ ಸರ್ಕಾರದೊಂದಿಗೆ ಯೋಜನೆ ರೂಪಿಸಿದೆವು. ಈಗಾಗಲೇ ಪ್ರಖ್ಯಾತಿ ಪಡೆದ ವಸ್ತ್ರ ವಿನ್ಯಾಸಕರೊಂದಿಗೆ ಕೈಜೋಡಿಸಿ ರಾಜಸ್ತಾನದ ಕುಶಲಕರ್ಮಿಗಳ ಸಹಯೋಗದಲ್ಲಿ ಸಮಕಾಲೀನ ಶೈಲಿಯನ್ನು ಉಳಿಸಿಕೊಂಡು ಖಾದಿಯಲ್ಲಿ ವಸ್ತ್ರವಿನ್ಯಾಸ ಮಾಡಿಕೊಡುವಂತೆ ಕೇಳಿದೆವು. ಪರಂಪರಾಗತವಾಗಿ ಬಂದ ಬ್ಲಾಕ್‌ ಪ್ರಿಂಟಿಂಗ್‌ ಅಷ್ಟೇ ಅಲ್ಲ, ವಿಭಿನ್ನ ವಿನ್ಯಾಸದ ಬ್ಲಾಕ್‌ ಪ್ರಿಂಟಿಂಗ್‌ ಅನ್ನು ನಾವೇ ಹೊಸದಾಗಿ ಸೃಷ್ಟಿಸಿದೆವು. ಇದುವರೆಗೆ ಖಾದಿಯಲ್ಲಿ ಕೆಲಸ ಮಾಡದ ವಿನ್ಯಾಸಕಾರರು ಖಾದಿಯಲ್ಲಿ ಮೂಡುವ ಎಂಬ್ರಾಯ್ಡರಿ ಸೌಂದರ್ಯ ಕಂಡು ಖುಷಿಪಟ್ಟರು.

‘ಖಾದಿಯಲ್ಲಿ ಮೂರು ಬಗೆ ಇದೆ, ಖಾದಿ ಸಿಲ್ಕ್‌, ಖಾದಿ ಕಾಟನ್‌ ಹಾಗೂ ಖಾದಿ ವುಲ್ಲನ್‌. ಖಾದಿ ವುಲ್ಲನ್‌ ಬಳಸಿ ವಿನ್ಯಾಸ ಮಾಡಿದ ದಿರಿಸುಗಳೂ ಅದ್ಭುತವಾಗಿ ಮೂಡಿ ಬಂದಿವೆ. ಅಲ್ಲದೆ ಇವು ಕೈಯಲ್ಲೇ ಮಾಡಿದ ನೈಸರ್ಗಿಕ ಬಟ್ಟೆಗಳಾಗಿರುವುದರಿಂದ ಧರಿಸಿದರೆ ದೇಹಕ್ಕೂ ಒಳ್ಳೆಯದು. ಮಕ್ಕಳ ಕೋಮಲ ಚರ್ಮಕ್ಕೂ ಖಾದಿ ಒಳ್ಳೆಯದು. ನಮ್ಮ ಈ ಹೊಸ ಯೋಜನೆಯಲ್ಲಿ ಖಾದಿಯಿಂದ ಎಲ್ಲಾ ಶೈಲಿಯ, ಎಲ್ಲಾ ವಯೋಮಾನದವರಿಗೆ ಸರಿ ಹೊಂದುವ ಫ್ಯಾಷನೆಬಲ್‌ ಉಡುಪುಗಳ ವಿನ್ಯಾಸವಿದೆ. ನಮ್ಮ ದೇಶದ ಸಂಸ್ಕೃತಿಯನ್ನು ಅಳಿಯಲು ಬಿಡದೆ ಉಳಿಸುವುದು ನಮ್ಮ ಉದ್ದೇಶ’ ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT