ಶುಕ್ರವಾರ, ಫೆಬ್ರವರಿ 26, 2021
31 °C

ಶುಕ್ರವಾರ 17–11–1967

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶುಕ್ರವಾರ 17–11–1967

ರಾಜಕೀಯಕ್ಕಾಗಿ ರಾಜ್ಯಪಾಲರ ಬಳಕೆ ಇಲ್ಲ

ನವದೆಹಲಿ, ನ. 16– ಪಶ್ಚಿಮ ಬಂಗಾಳ ಮುಖ್ಯಮಂತ್ರಿಗೆ ರಾಜ್ಯ ಶಾಸಕಾಂಗದಲ್ಲಿ ಬಹುಮತ ಬೆಂಬಲವಿರಲಾರದೆಂದು ಸಂದೇಹ ತಲೆದೋರಿದರೆ ಅದನ್ನು ರಾಜ್ಯಪಾಲರು ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆಯೆಂದು ಗೃಹ ಸಚಿವ ಶ್ರೀ ವೈ.ಬಿ. ಚವಾಣರು ಇಂದು ಲೋಕಸಭೆಯಲ್ಲಿ ಘೋಷಿಸಿ ವಿಧಾನಮಂಡಲ ಅಧಿವೇಶನ ಕರೆಯುವಂತೆ ಕಾರ್ಯಾಂಗದ ಮುಖ್ಯಸ್ಥರಿಗೆ ಸಲಹೆ ನೀಡಲು ರಾಜ್ಯಪಾಲರಿಗೆ ಹಕ್ಕಿದೆಯೆಂದು ಸಮರ್ಥಿಸಿದರು.

ರಾಜ್ಯಪಾಲರ ನೇಮಕದ ವಿರುದ್ಧ ಮತ ಸೂಚಿಸಲು ಮುಖ್ಯಮಂತ್ರಿಗೆ ಹಕ್ಕಿಲ್ಲವೆಂದು ಇದೇ ಸಮಯದಲ್ಲಿ ಶ್ರೀ ಚವಾಣರು ವಾದ ಮಾಡಿ, ನಿಯೋಜಿತ ರಾಜ್ಯಪಾಲ ಶ್ರೀ ನಿತ್ಯಾನಂದ ಕನುಂಗೋರವರೊಡನೆ ಬಿಹಾರ ಮುಖ್ಯಮಂತ್ರಿ ಅಸಹಕಾರ ಧೋರಣೆ ತಳೆದರೆ ಸಂವಿಧಾನಾತ್ಮಕ ಆಡಳಿತ ವ್ಯವಸ್ಥೆಗೆ ಚ್ಯುತಿಯಾಗುತ್ತದೆಂದು ಎಚ್ಚರಿಕೆ ನೀಡಿದರು.

**

ಶ್ರೀಮಂತ ಅಮಾತ್ಯರು

ನವದೆಹಲಿ, ನ. 16– ಸಂಪತ್ತು ತೆರಿಗೆ ಕೊಡುವವರಲ್ಲಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಮತ್ತು ಇತರ ಐವರು ಕೇಂದ್ರ ಸಚಿವರು ಸೇರಿದ್ದಾರೆ.

1966–67 ರಲ್ಲಿ ಶ್ರೀಮತಿ ಗಾಂಧಿ 1,338 ರೂಪಾಯಿಗಳ ತೆರಿಗೆ ಪಾವತಿ ಮಾಡಿದರು. ಸಂಪುಟದ ಇತರ ಐಶ್ವರ್ಯವಂತ ಸಚಿವರೆಂದರೆ ಶ್ರೀಗಳಾದ ಸತ್ಯನಾರಾಯಣ ಸಿನ್ಹ, ಫಕ್ರುದ್ದೀನ್‌ ಆಲಿ ಅಹಮದ್‌, ಕೆ.ಕೆ. ಷಾ, ದಿನೇಶ್‌ ಸಿಂಗ್‌ ಮತ್ತು ಡಾ. ಕರಣ್‌ಸಿಂಗ್‌.

**

ಸುಂಟಿಕೊಪ್ಪದ ಬಳಿ ಕೆರೆಯಲ್ಲಿ ನಾಲ್ವರು ಯುವತಿಯರ ಶವ ಪತ್ತೆ

ಮಡಿಕೇರಿ, ನ. 16– ಸುಂಟಿಕೊಪ್ಪದ ಬಳಿ ಇರುವ ಎಸ್ಟೇಟ್‌ವೊಂದರ ಕೆರೆಯಲ್ಲಿ ನಾಲ್ವರು ಯುವತಿಯರ ಶವಗಳು ಮಂಗಳವಾರ ಪತ್ತೆಯಾದವು ಎಂದು ಇಲ್ಲಿಗೆ ಬಂದ ವರದಿಗಳ ಪ್ರಕಾರ ಗೊತ್ತಾಗಿದೆ.

ಚಿಕ್ಕಂದಿನಿಂದಲೂ ಅಪ್ತ ಗೆಳತಿಯರಾಗಿದ್ದ ಸೋಲಿಮ (18), ಮುತ್ತು (17), ಕಮಲಾಕ್ಷಿ (17) ಮತ್ತು ಲಕ್ಷ್ಮಿ (15) ಒಟ್ಟಿಗೇ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದರೆಂದು ಹೇಳಲಾಗಿದೆ. ಅವರು ಕೆಲಸ ಮಾಡುವ ಸ್ಥಳ ಇತ್ತೀಚೆಗೆ ಬದಲಾವಣೆಯಾಗಿತ್ತು. ಸುಂಟಿಕೊಪ್ಪದಲ್ಲಿ ಅವರ ಶವಗಳ ಮಹಜರ್‌ ನಡೆಯಿತು.

**

ಮಾಕಳಿ ಕಾಡಿನಲ್ಲಿ ಆನೆಗಳ ಬೀಡು

ಬೆಂಗಳೂರು, ನ. 16– ಸುತ್ತಮುತ್ತಲಿನ ಗ್ರಾಮಗಳ ಜನರು ಆನೆಗಳು ತಮ್ಮ ಗ್ರಾಮದ ಕಡೆಗೆ ಬರುವುದನ್ನು ಅಡ್ಡಿ ಮಾಡುತ್ತಿರುವುದರಿಂದ ಆನೆಗಳ ಹಿಂಡು ಚನ್ನಪಟ್ಟಣ ತಾಲ್ಲೂಕಿನ ಮಾಕಳಿ ಅರಣ್ಯ ಪ್ರದೇಶದಲ್ಲಿಯೇ ತಾತ್ಕಾಲಿಕವಾಗಿ ಬೀಡು ಬಿಟ್ಟಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.