ಗುರುವಾರ , ಫೆಬ್ರವರಿ 25, 2021
29 °C

ಗೊಂದಲಕ್ಕೆ ಕಾರಣವಾದ ಗೌಡರ ವರ್ಕ್‌ಶಾಪ್‌ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೊಂದಲಕ್ಕೆ ಕಾರಣವಾದ ಗೌಡರ ವರ್ಕ್‌ಶಾಪ್‌ ಭೇಟಿ

ಹುಬ್ಬಳ್ಳಿ: ಇಲ್ಲಿನ ನೈರುತ್ಯ ರೈಲ್ವೆ ವಲಯದ ವರ್ಕ್‌ ಶಾಪ್‌ಗೆ ಗುರುವಾರ ಭೇಟಿ ನೀಡಲು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಗೆ ರೈಲ್ವೆ ಅಧಿಕಾರಿಗಳು ಅನುಮತಿ ನೀಡದ ಕಾರಣ ಕೆಲ ಕಾಲ ಗೊಂದಲ ಉಂಟಾಯಿತು.

ಹುಬ್ಬಳ್ಳಿಗೆ ಬಂದಿದ್ದ ಅವರು, ಬೆಳಿಗ್ಗೆ ವರ್ಕ್‌ಶಾಪ್‌ಗೆ ಭೇಟಿ ನೀಡುವ ಸಲುವಾಗಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ (ಜಿಎಂ) ದೂರವಾಣಿ ಕರೆ ಮಾಡಿ, ಅನುಮತಿ ಕೋರಿದರು.

‘ವರ್ಕ್‌ಶಾಪ್‌ ಸ್ಥಳ ನಿಷೇಧಿತ ಪ್ರದೇಶವಾಗಿದೆ. ಇಷ್ಟಕ್ಕೂ ಅಲ್ಲಿಗೆ ಯಾವ ಕಾರಣಕ್ಕೆ ಭೇಟಿ ನೀಡುತ್ತೀರಾ? ಭೇಟಿ ನೀಡಲೇಬೇಕಾದರೆ, ಪತ್ರ ಬರೆದು ಅನುಮತಿ ಪಡೆಯಬೇಕು ಎಂದು ಪ್ರಧಾನ ವ್ಯವಸ್ಥಾಪಕರು ಗೌಡರಿಗೆ ಸಲಹೆ ನೀಡಿದರು. ಆ ಪ್ರಕಾರ ಗೌಡರ ದೆಹಲಿ ಕಚೇರಿಯಿಂದ ಇ–ಮೇಲ್‌ನಲ್ಲಿ ಅನುಮತಿ ಕೋರಿ ಪತ್ರ ಕೂಡ ತರಿಸಿದರು. ಅದರ ನಂತರ ರೈಲ್ವೆ ಪ್ರಧಾನ ವ್ಯವಸ್ಥಾಪಕರ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ’ ಎಂದು ಶಾಸಕ ಎನ್‌.ಎಚ್‌.ಕೋನರಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದರಿಂದ ಬಸವರಾಜ ಹೊರಟ್ಟಿ ಹಾಗೂ ನನಗೆ ಬೇಸರ ಆಯಿತು. ನಂತರ ಗೌಡರನ್ನು ಕರೆದುಕೊಂಡು ವರ್ಕ್‌ಶಾಪ್‌ಗೆ ಹೋದೆವು. ಅಲ್ಲಿಗೆ ಹೋದಾಗ ಅಧಿಕಾರಿಗಳು ಒಳಗೆ ಕರೆದೊಯ್ಯಲು ಮೀನಮೇಷ ಎಣಿಸಿದರು. ಇನ್ನು ಗಲಾಟೆ ಆಗುತ್ತದೆಂದು ತಿಳಿದ ಅಧಿಕಾರಿಗಳು ಓಡಿ ಬಂದು ಗೌಡರನ್ನು ಸ್ವಾಗತಿಸಿದರು’ ಎಂದು ಕೋನರಡ್ಡಿ ತಿಳಿಸಿದರು.

ಮಾಹಿತಿ ನೀಡಲು ಹಿಂದೇಟು: ಗೌಡರು ಪ್ರಧಾನಿಯಾಗಿದ್ದ ಕಾಲದಲ್ಲಿ ವರ್ಕ್‌ಶಾಪ್‌ ಆಧುನೀಕರಣಕ್ಕಾಗಿ ₹50 ಕೋಟಿ ಮಂಜೂರು ಮಾಡಿದ್ದರು. ಅದರ ಪರಿಣಾಮ ಏನೆಲ್ಲ ಆಗಿದೆ ಎಂಬುದನ್ನು ನೋಡಲು ಅವರು ಆಸಕ್ತಿ ಹೊಂದಿದ್ದರು. ಅಂದು ಅವರು ಹಾಕಿದ್ದ ಅಡಿಗಲ್ಲು ಎಲ್ಲಿದೆ ಎಂಬುದು ಕೂಡ ಅಲ್ಲಿನ ಅಧಿಕಾರಿಗಳಿಗೆ ಗೊತ್ತಿರಲಿಲ್ಲ. ಅಂತಿಮವಾಗಿ ಅಲ್ಲಿನ ಕನ್ನಡಿಗ ಅಧಿಕಾರಿಗಳು ಅಡಿಗಲ್ಲು ತೋರಿಸಿದರು. ಅದನ್ನು ನೋಡಿ ಗೌಡರಿಗೆ ಖುಷಿ ಆಯಿತು’ ಎಂದು ಅವರು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.