‘ತಪ್ಪು ಗ್ರಹಿಕೆಯಿಂದಾಗಿ ಸುಗ್ರೀವಾಜ್ಞೆಗೆ ವಿರೋಧ’

ನವದೆಹಲಿ: ‘ಕಂಬಳಕ್ಕೂ ಜಲ್ಲಿಕಟ್ಟು ಕ್ರೀಡೆಗೂ ಯಾವುದೇ ರೀತಿಯ ಸಾಮ್ಯತೆ ಇಲ್ಲ’ ಎಂದು ಸುಪ್ರೀಂ ಕೋರ್ಟ್ಗೆ ಗುರುವಾರ ತಿಳಿಸಿರುವ ರಾಜ್ಯ ಸರ್ಕಾರ, ‘ಕಂಬಳದಲ್ಲಿ ಬಳಸುವ ಕೋಣಗಳಿಗೆ ಹಿಂಸೆ ನೀಡಲಾಗುವುದಿಲ್ಲ’ ಎಂದು ವಿವರಿಸಿದೆ.
ರಾಜ್ಯದ ಕರಾವಳಿ ಭಾಗದ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳಕ್ಕೆ ಅವಕಾಶ ನೀಡದಂತೆ ಹಾಗೂ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಸುಗ್ರೀವಾಜ್ಞೆಯನ್ನು ವಿರೋಧಿಸಿ ‘ಪೆಟಾ ಇಂಡಿಯಾ’ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ರಾಜ್ಯ ಸರ್ಕಾರವು 62 ಪುಟಗಳ ಪ್ರತಿಕ್ರಿಯೆ ಸಲ್ಲಿಸಿದೆ.
ತಪ್ಪು ಗ್ರಹಿಕೆಯಿಂದ ಈ ಅರ್ಜಿ ಸಲ್ಲಿಸಲಾಗಿದೆ. ಕಂಬಳದಲ್ಲಿ ಪಾಲ್ಗೊಳ್ಳುವ ಕೋಣಗಳನ್ನು ಕ್ರೂರವಾಗಿ ನಡೆಸಿಕೊಳ್ಳಲಾಗುತ್ತದೆ ಎಂಬ ಆರೋಪದಲ್ಲಿ ಹುರುಳಿಲ್ಲ. ರಾಷ್ಟ್ರಪತಿಯವರ ಒಪ್ಪಿಗೆಯ ಮೇರೆಗೆ, ಅಗತ್ಯ ಮುನ್ನೆಚ್ಚರಿಕೆಯ ನಡುವೆಯೇ ರಾಜ್ಯದಲ್ಲಿ ಕಂಬಳಕ್ಕೆ ಅನುಮತಿ ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ.
ತಮ್ಮ ಗದ್ದೆಗಳನ್ನು ಹದಗೊಳಿಸಲು ರೈತರು ಕೋಣಗಳನ್ನು ಬಳಸುವುದು ವಾಡಿಕೆ. ಅಲ್ಲದೆ, ಅವುಗಳಿಗೆ ಯಾವುದೇ ರೀತಿಯ ನೋವಾಗದಂತೆ ಕೆಸರಿನಲ್ಲಿ ಓಡಿಸುವ ಸಂಪ್ರದಾಯವನ್ನು ಗ್ರಾಮೀಣ ಭಾಗದ ಜನರು ಮೊದಲಿನಿಂದಲೂ ಆಚರಿಸಿಕೊಂಡು ಬಂದಿದ್ದಾರೆ. ಕೆಸರು ಗದ್ದೆಯಲ್ಲಿ ಕೆಲಸ ಮಾಡುವ ಕೋಣಗಳನ್ನು ಕೆಸರಿನಲ್ಲಿ ಓಡಿಸುವುದರಿಂದ ಅವುಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗದು ಎಂದು ತಿಳಿಸಲಾಗಿದೆ.
ವಿಧಾನಸಭೆ ಮತ್ತು ಸಂಸತ್ತಿಗೆ ಕಾಯ್ದೆ ಜಾರಿಗೊಳಿಸುವ ಅಧಿಕಾರ ಇದೆ. ಕಂಬಳಕ್ಕೆ ಅವಕಾಶ ಕಲ್ಪಿಸುವ ಸಂಬಂಧ ಸಂವಿಧಾನದ ನಿಬಂಧನೆಗಳನ್ನೂ, ಮೂಲಭೂತ ಹಕ್ಕುಗಳನ್ನೂ ಉಲ್ಲಂಘಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಲ್ಲದೆ, ಕಂಬಳಕ್ಕೆ ಅವಕಾಶ ನೀಡಲು ಜಾರಿಗೆ ತಂದಿರುವ ಸುಗ್ರೀವಾಜ್ಞೆಯ ಬಗ್ಗೆ ಬೆಳಗಾವಿಯಲ್ಲಿ ನಡೆದಿರುವ ಚಳಿಗಾಲದ ಅಧಿವೇಶನದಲ್ಲಿ ವಿಸ್ತೃತ ಚರ್ಚೆ ನಡೆಸಲು ನಿರ್ಧರಿಸಲಾಗಿದೆ. ಈ ಚರ್ಚೆಯ ನಂತರ ಉಭಯ ಸದನಗಳ ಒಪ್ಪಿಗೆ ಪಡೆದು ಕಾನೂನು ರೂಪಿಸಲಾಗುತ್ತದೆ. ಹಾಗಾಗಿ ‘ಪೆಟಾ ಇಂಡಿಯಾ’ ಸಲ್ಲಿಸಿರುವ ಅರ್ಜಿಯು ಆತುರದ ನಿರ್ಧಾರವಾಗಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಶುಕ್ರವಾರ ‘ಪೆಟಾ ಇಂಡಿಯಾ’ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.