7

ವೈದ್ಯ–ರೋಗಿ ಸಂಬಂಧಕ್ಕೆ ಧಕ್ಕೆ

Published:
Updated:
ವೈದ್ಯ–ರೋಗಿ ಸಂಬಂಧಕ್ಕೆ ಧಕ್ಕೆ

ವೈದ್ಯರ ಪ್ರತಿಭಟನೆ ಕುರಿತು ಎರಡು ವಾರಗಳಿಂದ ಮಾಧ್ಯಮಗಳಲ್ಲಿ ಬಂದಿರುವ ಪ್ರತಿಕ್ರಿಯೆಗಳನ್ನು ಗಮನಿಸಿದ್ದೇನೆ. ಅವನ್ನು ನೋಡಿದಾಗ ಅವರ‍್ಯಾರಿಗೂ ಮಸೂದೆಯ ಬಗ್ಗೆ ಅಥವಾ ವೈದ್ಯರ ಮುಷ್ಕರದ ಉದ್ದೇಶ ಏನು ಎಂಬುದು ತಿಳಿದಿಲ್ಲ ಎನಿಸುತ್ತದೆ. ಅದರಲ್ಲಿಯೂ ಅಖಿಲಾ ವಾಸನ್ ಅವರ ಲೇಖನ ‘ಖಾಸಗಿ ಆಸ್ಪತ್ರೆಗಳ ಸ್ವಹಿತಾಸಕ್ತಿ’ (ಚರ್ಚೆ, ನ.14) ಓದಿದ ನಂತರ ಕೆಲವು ಅಂಶಗಳನ್ನು ಸ್ಪಷ್ಟಪಡಿಸುವುದು ಅಗತ್ಯವೆನಿಸಿ ಈ ಬರಹ.

ವೈದ್ಯ ವೃತ್ತಿಯ ಘನತೆ ಮತ್ತು ಅದರ ಮೌಲ್ಯಗಳನ್ನು ಕಾಪಾಡುವ ಉದ್ದೇಶದಿಂದ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ), ವೃತ್ತಿಯಲ್ಲಿ ಲೋಪ ಮಾಡಿದವರನ್ನು ಶಿಕ್ಷಿಸಲು ಕಠಿಣ ನಿಯಮಗಳನ್ನು ರೂಪಿಸಿದೆ. ವೈದ್ಯರಿಂದ ಲೋಪವಾಗಿದ್ದರೆ ರೋಗಿಗಳು ಗ್ರಾಹಕರ ವೇದಿಕೆಗೆ ದೂರು ನೀಡಿಯೂ ನ್ಯಾಯ ದೊರಕಿಸಿಕೊಳ್ಳಬಹುದು. ಇವೆರಡೂ ಬೇಡವೆಂದರೆ ಕ್ರಿಮಿನಲ್ ಮತ್ತು ಸಿವಿಲ್ ನ್ಯಾಯಾಲಯಗಳ ಮೆಟ್ಟಿಲನ್ನೂ ಹತ್ತಬಹುದು.

ರೋಗಿಯು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು 1976ರಲ್ಲಿಯೇ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆಯನ್ನು ರೂಪಿಸಲಾಗಿದೆ. ನರ್ಸಿಂಗ್ ಹೋಂಗಳ ನಿಯಂತ್ರಣಕ್ಕಾಗಿ 2007ರಲ್ಲಿ ಮತ್ತೊಂದು ಕಾಯ್ದೆಯನ್ನು ತರಲಾಯಿತು. ಅದರ ಪ್ರಕಾರ ಎಲ್ಲಾ ನರ್ಸಿಂಗ್ ಹೋಂಗಳ ನೋಂದಣಿ ಮತ್ತು ನರ್ಸಿಂಗ್ ಹೋಂಗಳಲ್ಲಿ ವಿಧಿಸುವ ಶುಲ್ಕಗಳ ಪಟ್ಟಿಯನ್ನು ಹೊರಗಡೆ ಪ್ರದರ್ಶಿಸುವುದು ಕಡ್ಡಾಯ. ಎಲ್ಲಾ ನರ್ಸಿಂಗ್ ಹೋಂಗಳು ಇದನ್ನು ಪಾಲಿಸುತ್ತಿವೆ.

ಈಗಿನ ಆರೋಗ್ಯ ಮಂತ್ರಿಗಳು, ತಮ್ಮ ಯಾವುದೋ ಕಹಿ ಅನುಭವದ ಹಿನ್ನೆಲೆಯಲ್ಲಿ 2007ರ ಕೆಪಿಎಂಇ ಕಾಯ್ದೆಗೆ ತಿದ್ದುಪಡಿ ತರಲು ಮುಂದಾದರು. ಈ ಬಗ್ಗೆ ಚಿಂತನೆ ನಡೆಸಿ, ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ವಿಕ್ರಮ್‍ಜಿತ್ ಸೇನ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ಸರ್ಕಾರ ರಚಿಸಿತು. ಸಮಿತಿಯಲ್ಲಿ ನರ್ಸಿಂಗ್ ಹೋಂಗಳ ಪ್ರತಿನಿಧಿಗಳು, ಭಾರತೀಯ ವೈದ್ಯಕೀಯ ಸಂಘ ಮತ್ತು ಸಾರ್ವಜನಿಕ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು. ಹೀಗೆ ಎಲ್ಲರೂ ಸೇರಿ ಸುಮಾರು 7- 8 ಸಭೆಗಳನ್ನು ನಡೆಸಿ, ಒಂದು ಒಪ್ಪಂದಕ್ಕೆ ಬರಲಾಯಿತು. ಅದಕ್ಕೆ ಅನುಗುಣವಾಗಿ ಸೇನ್ ಅವರು ಸಮಗ್ರ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದರು.

ಆದರೆ ಆದದ್ದೇನು? ಈ ವರದಿ ಸರ್ಕಾರಕ್ಕೆ ಹಿಡಿಸಲಿಲ್ಲ. ವೈದ್ಯರೆಂದರೆ ‘ಲಜ್ಜೆಗೆಟ್ಟವರು, ಧನದಾಹಿಗಳು’ ಎಂಬ ಪೂರ್ವಗ್ರಹ ಆರೋಗ್ಯ ಸಚಿವರಲ್ಲಿ ಇದ್ದಿರಬಹುದು. ಇದನ್ನು ಅವರು ಸಾರ್ವಜನಿಕ ವೇದಿಕೆಗಳಲ್ಲಿ ಮಾತ್ರವಲ್ಲದೆ ಸದನದಲ್ಲೂ ಹೇಳಿದ ದಾಖಲೆಗಳಿವೆ. ಹಾಗಾಗಿ ಖಾಸಗಿ ವೈದ್ಯರಿಗೆ ಮೂಗುದಾರ ಹಾಕಲೇಬೇಕೆಂದು ನಿರ್ಧರಿಸಿ, ಸೇನ್ ಅವರ ವರದಿಯನ್ನು ಮೂಲೆಗೆಸೆದು ತನ್ನದೇ ಮಸೂದೆಯನ್ನು ಸರ್ಕಾರ ಸಿದ್ಧಪಡಿಸಿದೆ.

ಮಸೂದೆಯಲ್ಲಿ ಏನಿದೆ?: ಈ ಮಸೂದೆ ಪ್ರಕಾರ ಜಿಲ್ಲಾ ಮಟ್ಟದಲ್ಲಿ ರೋಗಿಗಳ ಕುಂದುಕೊರತೆ ಆಲಿಸುವ ಸಮಿತಿ ರಚಿಸಬೇಕು. ಆ ಸಮಿತಿಯಲ್ಲಿ 5 ಜನ ಸದಸ್ಯರಿರುತ್ತಾರೆ. ಅವರಲ್ಲಿ ಒಬ್ಬರು ವೈದ್ಯರು. ಉಳಿದವರಿಗೆ ವೈದ್ಯವಿಜ್ಞಾನದ ಗಂಧವೂ ಇರಬೇಕಿಲ್ಲ. ಜಿಲ್ಲಾ ಪಂಚಾಯಿತಿ ಸಿ.ಇ.ಒ. ಅದಕ್ಕೆ ಅಧ್ಯಕ್ಷರು.

ಈ ಸಮಿತಿಗೆ ಇರುವ ಅಧಿಕಾರವಾದರೂ ಏನು? ರೋಗಿಯು ಕೊಡುವ ದೂರುಗಳನ್ನು ದಾಖಲಿಸಿಕೊಂಡು ಸಂಬಂಧಪಟ್ಟ ವೈದ್ಯರನ್ನು ತನ್ನ ಮುಂದೆ ಕರೆಯಿಸುವುದು. ಅವರನ್ನು ವಿಚಾರಣೆಗೊಳಪಡಿಸಿ ಸೂಕ್ತವೆನಿಸಿದ ತೀರ್ಮಾನ ತೆಗೆದುಕೊಳ್ಳುವುದು. ವಿಶೇಷವೆಂದರೆ ಸಮಿತಿಯ ಮುಂದೆ ವೈದ್ಯರು ಸ್ವತಃ ವಾದ ಮಂಡಿಸಬೇಕು, ವಕೀಲರ ಸಹಾಯ ಪಡೆಯುವಂತಿಲ್ಲ. ವೈದ್ಯರ ತಪ್ಪು ಸಾಬೀತಾದರೆ ಅದರ ತೀವ್ರತೆಯನ್ನಾಧರಿಸಿ ₹ 25,000 ದಿಂದ ₹ 5 ಲಕ್ಷದವರೆಗೆ ದಂಡ ವಿಧಿಸಬಹುದು. ಅಲಕ್ಷ್ಯದಿಂದ ಅಥವಾ ಬೇರೆ ಕಾರಣಗಳಿಂದ ರೋಗ ಉಲ್ಬಣಗೊಂಡರೆ ಅಥವಾ ರೋಗಿ ಮರಣ ಹೊಂದಿದರೆ 3 ರಿಂದ 7 ವರ್ಷ ಜೈಲು ಶಿಕ್ಷೆ. ಇದರ ವಿರುದ್ಧ ವೈದ್ಯರು ಬೇರೆ ನ್ಯಾಯಾಲಯಕ್ಕೆ ಅಪೀಲು ಹೋಗುವ ಹಾಗಿಲ್ಲ.

ರೋಗಿಯ ಸನ್ನದು ಏನು?: ರೋಗಿ ಎಷ್ಟೇ ಹೊತ್ತು ಮಾತನಾಡಿದರೂ ವೈದ್ಯ ಆಲಿಸಲೇಬೇಕು. ಇಲ್ಲದಿದ್ದಲ್ಲಿ ರೋಗಿಯು ಜಿಲ್ಲಾ ಸಮಿತಿಗೆ ದೂರು ನೀಡಬಹುದು. ಅದರಿಂದ ವೈದ್ಯರಿಗೆ ದಂಡ ಮತ್ತು ಶಿಕ್ಷೆ. ರೋಗಿ ಹೆಚ್ಚು ಹೊತ್ತು ಕಾಯಬೇಕಾಗಿ ಬಂದಾಗ ‘ವೈದ್ಯರು ನನ್ನನ್ನು ಕಾಯಿಸಿದರು’ ಎಂದು ಜಿಲ್ಲಾ ಸಮಿತಿಗೆ ದೂರು ನೀಡಬಹುದು. ಆಗಲೂ ವೈದ್ಯರು ವಿಚಾರಣೆಗಾಗಿ ಕೈಕಟ್ಟಿ ಸಮಿತಿಯ ಮುಂದೆ ನಿಲ್ಲಬೇಕು. ಅದು ಸಾಬೀತಾದಲ್ಲಿ ದಂಡ. ವೈದ್ಯರು ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಹಣ ತೆಗೆದುಕೊಂಡರೆ ಅದಕ್ಕೂ ದಂಡ ಅಥವಾ ಶಿಕ್ಷೆ.

ಸರ್ಕಾರ ನಿಗದಿಪಡಿಸುವ ಶುಲ್ಕ ಎಲ್ಲರಿಗೂ ಒಂದೇ. ಅಂದರೆ, ಅದೇ ದಿನ ವೃತ್ತಿಗೆ ಸೇರಿದ ವೈದ್ಯರಿಗೂ ಒಂದೇ, 20 ವರ್ಷಗಳ ಅನುಭವವಿರುವ ವೈದ್ಯರಿಗೂ ಒಂದೇ. ಒಂದು ಗಂಟೆ ವೈದ್ಯರೊಂದಿಗೆ ಸಮಯ ಕಳೆದರೂ ಒಂದೇ ಶುಲ್ಕ, 10 ನಿಮಿಷ ಕಳೆದರೂ ಒಂದೇ ಶುಲ್ಕ. ತನ್ನ ಬಳಿಗೆ ಬಂದಾಕ್ಷಣ ವೈದ್ಯರು ರೋಗಿಗೆ ಚಿಕಿತ್ಸೆಗೆ ಎಷ್ಟು ಶುಲ್ಕ ಆಗುತ್ತದೆ ಎಂದು ಹೇಳಬೇಕು. ಚಿಕಿತ್ಸೆಯ ಅವಧಿ ಹೆಚ್ಚಾದರೂ ಆ ಶುಲ್ಕವನ್ನು ರೋಗಿಯಿಂದ ವಸೂಲು ಮಾಡುವ ಹಾಗಿಲ್ಲ.

ಇನ್ನೊಂದು ಮುಖ್ಯವಾದ ಅಂಶವೆಂದರೆ ರೋಗಿಯು ವೈದ್ಯರ ಅಲಕ್ಷ್ಯದಿಂದ ಅಥವಾ ಇನ್ನಾವುದೋ ಕಾಯಿಲೆಯ ಉಲ್ಬಣದಿಂದ ಮರಣ ಹೊಂದಿದರೆ ಅದಕ್ಕೆ ವೈದ್ಯರಿಗೆ 3 ವರ್ಷದಿಂದ 7 ವರ್ಷ ಜೈಲು ಶಿಕ್ಷೆ ಕೊಡಬಹುದು. ಹಾಗೆಯೇ ಚಿಕಿತ್ಸೆಯ ವೆಚ್ಚವನ್ನು ರೋಗಿಯ ಕಡೆಯವರಿಂದ ವಸೂಲು ಮಾಡುವಂತಿಲ್ಲ. ಅದನ್ನು ಸರ್ಕಾರಕ್ಕೆ ಬರೆದು ತರಿಸಿಕೊಳ್ಳಬೇಕು.

ಹೀಗೆ ಹಲವಾರು ಕಲಂಗಳನ್ನು ಮಸೂದೆಗೆ ಸೇರಿಸುವ ಮೂಲಕ ಸರ್ಕಾರ, ವೈದ್ಯರನ್ನು ಕೊಲೆಗಡುಕರಿಗಿಂತ ಕೀಳಾಗಿ ಸಿದೆ. ಈಗಿನ ಮಸೂದೆ ಜಾರಿಯಾದರೆ, ವೈದ್ಯ-ರೋಗಿ ನಡುವಿನ ಸಂಬಂಧ ಹಾಳಾಗುವುದರಲ್ಲಿ ಸಂದೇಹವಿಲ್ಲ.

ಕರ್ನಾಟಕದ ಜನಾರೋಗ್ಯ ಚಳವಳಿಯ ಕಾರ್ಯಕರ್ತೆ ಅಖಿಲಾ ವಾಸನ್ ಅವರು, ಸರ್ಕಾರಿ ಆಸ್ಪತ್ರೆಗಳು ಸೇವೆಯೊಂದಿಗೆ ರೋಗ ತಡೆಯುವಿಕೆ, ರೋಗದ ನಿಯಂತ್ರಣ, ಆರೋಗ್ಯವರ್ಧನೆ, ರೋಗಗಳ ಬಗ್ಗೆ ಕಣ್ಗಾವಲು... ಹೀಗೆ ಹಲವಾರು ಮಜಲುಗಳಲ್ಲಿ ತೊಡಗಿಸಿಕೊಳ್ಳುತ್ತವೆ ಎಂದು ಹೇಳಿದ್ದಾರೆ. ನರ್ಸಿಂಗ್‌ ಹೋಂಗಳು ಸಹ ಈ ಕಾರ್ಯಕ್ರಮಗಳಲ್ಲಿ ಕೈಜೋಡಿಸುತ್ತವೆ ಎಂಬುದನ್ನು ಅವರು ಮರೆತಿದ್ದಾರೆ.

ಖಾಸಗಿ ವೈದ್ಯರಲ್ಲೂ ಕೆಲವು ಲೋಪದೋಷಗಳಿರಬಹುದು. ಇಂಥವು ಎಲ್ಲಾ ಕ್ಷೇತ್ರಗಳಲ್ಲೂ ಇರುತ್ತವೆ. ಆದರೆ ಅವು ಉದ್ದೇಶಪೂರ್ವಕ ಅಲ್ಲ. ಆದರೆ, ಈ ವಿಧದ ಕರಾಳ ಶಾಸನವನ್ನು ಒಪ್ಪಿಕೊಂಡು ಜೈಲುವಾಸ ಅನುಭವಿಸಲು ವೈದ್ಯಸಮೂಹ ಸಿದ್ಧವಿಲ್ಲ. ನ್ಯಾಯಮೂರ್ತಿ ವಿಕ್ರಮ್‍ಜಿತ್ ಸೇನ್ ಅವರ ವರದಿಯನ್ನು ಸರ್ಕಾರ ಅಕ್ಷರಶಃ ಜಾರಿಗೆ ತಂದರೆ ವೈದ್ಯ ಸಮೂಹ ಅದನ್ನು ಖಂಡಿತ ಸ್ವೀಕರಿಸುತ್ತದೆ ಎಂಬುದು ನನ್ನ ಅನಿಸಿಕೆ.

(ಲೇಖಕ ಮಾನಸಿಕ ರೋಗ ತಜ್ಞ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry