7

ತೈಲದ ಥೈಲಿಯಾಚೆ ಸೌದಿ ಸಲ್ಮಾನ್ ಕನಸು

ಸುಧೀಂದ್ರ ಬುಧ್ಯ
Published:
Updated:
ತೈಲದ ಥೈಲಿಯಾಚೆ ಸೌದಿ ಸಲ್ಮಾನ್ ಕನಸು

ಕಳೆದ ಹದಿನೈದು ದಿನಗಳಲ್ಲಿ ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಮೂರು ವಿದ್ಯಮಾನಗಳು ನಡೆದವು. ಒಂದು, ಉತ್ತರ ಕೊರಿಯಾದ ಅಣ್ವಸ್ತ್ರ ದಾಳಿಯ ಬೆದರಿಕೆ, ಮೊಂಡಾಟದ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಪಾನ್, ದಕ್ಷಿಣ ಕೊರಿಯಾ, ಚೀನಾ, ವಿಯೆಟ್ನಾಂ ಮತ್ತು ಫಿಲಿಪ್ಪೀನ್ಸ್ ದೇಶಗಳಿಗೆ ಭೇಟಿ ಇತ್ತು ಬಂದರು. ಅಮೆರಿಕ ಅಧ್ಯಕ್ಷರ ಮುಖ್ಯ ಉದ್ದೇಶ ಅಪೆಕ್ ಮತ್ತು ಆಸಿಯಾನ್ ಶೃಂಗಸಭೆಯಲ್ಲಿ ಭಾಗವಹಿಸುವುದು ಆಗಿತ್ತಾದರೂ, ಉತ್ತರ ಕೊರಿಯಾವನ್ನು ನಿಗ್ರಹಿಸುವಂತೆ ಚೀನಾ ಮೇಲೆ ಒತ್ತಡ ಹೇರುವುದು ಕೂಡ ಟ್ರಂಪ್ ಪ್ರವಾಸದ ಆಶಯವಾಗಿತ್ತು. ಉತ್ತರ ಕೊರಿಯಾ ಮತ್ತು ಅಮೆರಿಕ ನಡುವೆ ವೈರತ್ವ ಹೊಸ ಮಜಲು ತಲುಪಿರುವ ಕಾಲಘಟ್ಟದಲ್ಲಿ ಅಮೆರಿಕ ಅಧ್ಯಕ್ಷರ ಈ ಪ್ರವಾಸ ಜಗತ್ತಿನ ಗಮನ ಸೆಳೆಯಿತು. ಎರಡನೆಯದು, ಚೀನಾದ ವೇಗಕ್ಕೆ ಕಡಿವಾಣ ಹಾಕಲು ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ಮತ್ತು ಭಾರತ ಒಟ್ಟಾಗಿ ನಿಂತದ್ದು. ಇದಕ್ಕೆ ಚೀನಾ ಕಳವಳಗೊಂಡು ಪ್ರತಿಕ್ರಿಯಿಸಿತು.

ಇನ್ನು, ಅತ್ತ ಮಧ್ಯಪ್ರಾಚ್ಯ ರಾಜಕೀಯದಲ್ಲಿ ಹೊಸ ಅಲೆ ಎಬ್ಬಿಸಿದ್ದು ಕಟ್ಟಾ ಸಂಪ್ರದಾಯವಾದಿ ರಾಷ್ಟ್ರ ಸೌದಿ ಅರೇಬಿಯಾ. ನವೆಂಬರ್ 4ರ ಶನಿವಾರ, ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ರಿಟ್ಸ್ ಕಾರ್ಲ್ಟನ್ ಎಂಬ ಐಷಾರಾಮಿ ಹೊಟೇಲ್ ‘ಅನಿವಾರ್ಯ ಕಾರಣದಿಂದ ಬಹುತೇಕ ಕೋಣೆಗಳನ್ನು ಕಾಯ್ದಿರಿಸಲಾಗಿದೆ, ಹೊಟೇಲಿಗೆ ಹೆಚ್ಚಿನ ಭದ್ರತೆಯ ಅವಶ್ಯಕತೆ ಇರುವುದರಿಂದ ಅತಿಥಿಗಳಿಗೆ ವಸತಿ ಒದಗಿಸಲು ಸಾಧ್ಯವಾಗುತ್ತಿಲ್ಲ. ಕ್ಷಮಿಸಿ’ ಎಂಬ ಫಲಕವನ್ನು ತಗುಲಿ ಹಾಕಿತು. ಅದಾದ ಕೆಲವೇ ಗಂಟೆಗಳಲ್ಲಿ ರಾಜಧಾನಿಯ ವಿವಿಧ ಭಾಗಗಳಿಂದ ಅತೀ ಪ್ರಭಾವಿಗಳನ್ನು, ಶ್ರೀಮಂತರನ್ನು ಬಂಧಿಸಿ ಹೊಟೇಲಿಗೆ ಕರೆತಂದು ಗೃಹಬಂಧನದಲ್ಲಿ ಇಡಲಾಯಿತು. ಹಾಗೆ ಬಂಧನಕ್ಕೊಳಗಾದವರಲ್ಲಿ ಸೌದಿ ರಾಜಮನೆತನದ 11 ರಾಜಕುಮಾರರು ಇದ್ದರು, ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿದ್ದ ಸೌದಿ ಮೂಲದ ಉದ್ಯಮಿಗಳಿದ್ದರು.

ಈ ಮೂರು ವಿದ್ಯಮಾನಗಳ ಪೈಕಿ ಮೊದಲೆರಡು ಬೆಳವಣಿಗೆಗಳಿಂದ ಯಾರಿಗೆ ಲಾಭ, ಚೀನಾದ ಮುಂದಿನ ಕಾರ್ಯತಂತ್ರ ಏನಿರುತ್ತದೆ, ಜಾಗತಿಕ ರಾಜಕೀಯ ಸಮೀಕರಣದಲ್ಲಿ ಏನೆಲ್ಲಾ ಏರುಪೇರಾಗಬಹುದು ಎಂಬುದನ್ನು ನೋಡಲು ಕೊಂಚ ಸಮಯ ಬೇಕು. ಆದರೆ ಸೌದಿಯಲ್ಲಾಗುತ್ತಿರುವ ಕ್ಷಿಪ್ರ ಬದಲಾವಣೆಯಂತೂ, ಮಧ್ಯಪ್ರಾಚ್ಯದಮಟ್ಟಿಗೆ ಈಗಾಗಲೇ ಕಂಪನ ಉಂಟುಮಾಡಿದೆ. ಧರ್ಮಗ್ರಂಥ, ಪ್ರವಾದಿ, ಷರಿಯಾ ಕಾನೂನಿನ ಹೊರತಾಗಿ ಯಾವ ಬದಲಾವಣೆಯೂ ಸಾಧ್ಯವಿಲ್ಲ ಎಂಬಂತಿದ್ದ ದೇಶದಲ್ಲಿ ಮೊಹಮದ್ ಬಿನ್ ಸಲ್ಮಾನ್ ಎಂಬ 32ರ ಯುವರಾಜ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದ್ದಾರೆ. ‘ವಿಷನ್ 2030’ ಎಂಬ ಯೋಜನಾ ನಕ್ಷೆಯನ್ನು ಪ್ರಕಟಿಸಿದ್ದಾರೆ. ತನ್ಮೂಲಕ ಮಹಿಳೆಯರ ಮತ್ತು ಯುವಕರ ಮನ ಗೆದ್ದಿದ್ದಾರೆ.

ಹಾಗೆ ನೋಡಿದರೆ, ಈ ಬೆಳವಣಿಗೆ ಸೌದಿಗೆ ಅನಿವಾರ್ಯವಾಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. 2014ರಿಂದ 2016ರ ಅವಧಿಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಳಿತ ಕಂಡಾಗ, ಸೌದಿ ಅರೇಬಿಯಾದ ಆಯವ್ಯಯಕ್ಕೆ ದೊಡ್ಡ ಪೆಟ್ಟು ಬಿದ್ದಿತ್ತು. ಉದ್ಯೋಗ ನಷ್ಟವಾದವು. ಅದೇ ಸಮಯಕ್ಕೆ ತನ್ನ ಪ್ರತಿಸ್ಪರ್ಧಿಗಳನ್ನೆಲ್ಲಾ ಮೂಲೆಗಟ್ಟಿ ಯುವರಾಜನ ಪಟ್ಟಕ್ಕೆ ಬಂದಿದ್ದ ಸಲ್ಮಾನ್, ವಿಷನ್ 2030 ಎಂಬ ಕಾರ್ಯಸೂಚಿ ಮುಂದಿಟ್ಟರು. ಅದನ್ನು ‘ಮಹತ್ವಾಕಾಂಕ್ಷೆಯ ಆದರೆ ತಲುಪಬಹುದಾದ ಗಮ್ಯ’ ಎಂದು ಕರೆದರು. ಸಲ್ಮಾನ್ ಕನಸಿನ ಮುಖ್ಯ ಆಶಯ ಎಂದರೆ ತೈಲ ಕೇಂದ್ರಿತ ಆರ್ಥಿಕತೆಯಿಂದ ಹೊರಬರುವುದು, ಭ್ರಷ್ಟಾಚಾರ ನಿಗ್ರಹ, ಉದಾರವಾದಿ ಚಿಂತನೆಯನ್ನು, ಪರಧರ್ಮ ಸೈರಣೆಯನ್ನು ಸಮಾಜದಲ್ಲಿ ಬೆಳೆಸುವುದು. ಮಧ್ಯಪ್ರಾಚ್ಯದಲ್ಲಿ ಸೌದಿ ಪ್ರಾಬಲ್ಯವನ್ನು ವಿಸ್ತರಿಸುವುದು.

ಸಲ್ಮಾನ್, ತಮ್ಮ 2030ರ ಕನಸಿಗೆ ಪೂರಕವಾಗಿ ಈಗಾಗಲೇ ಹಲವು ಹೆಜ್ಜೆಗಳನ್ನು ಇಟ್ಟಿದ್ದಾರೆ. ಸುಮಾರು 26 ಸಾವಿರ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲು 50 ಸಾವಿರ ಕೋಟಿ ಡಾಲರ್ (ಸುಮಾರು ₹ 32 ಲಕ್ಷ ಕೋಟಿ) ಮೊತ್ತವನ್ನು ತೆಗೆದಿರಿಸಿದ್ದಾರೆ. ಇದರ ಮುಖ್ಯ ಉದ್ದೇಶ ಸೌರ ಶಕ್ತಿ, ಆಹಾರ ಸಂಸ್ಕರಣೆ, ಜೈವಿಕ ತಂತ್ರಜ್ಞಾನ ಮತ್ತು ಮನರಂಜನಾ ಕ್ಷೇತ್ರಕ್ಕೆ ಉತ್ತೇಜನ ಕೊಡುವುದು, ಉತ್ಪಾದನಾ ಘಟಕಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿಸುವುದು; ತನ್ಮೂಲಕ ಆರ್ಥಿಕತೆಯನ್ನು ಬಲಪಡಿಸುವುದು. ಜೊತೆಗೆ ಕಟ್ಟುಪಾಡುಗಳ ಮುಸುಕು ಸರಿಸುವ ಪ್ರಯತ್ನವೂ ನಡೆದಿದೆ. ಸಮಾಜವನ್ನು ನಿಯಂತ್ರಿಸುತ್ತಿದ್ದ ಮೌಲ್ವಿಗಳ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ. ಮಹಿಳೆಯರು ವಾಹನ ಚಾಲನೆ ಮಾಡುವುದಕ್ಕೆ ಇದ್ದ ನಿರ್ಬಂಧವನ್ನು ರದ್ದುಪಡಿಸಲಾಗಿದೆ. ‘ಇಸ್ಲಾಂ ಮಾತ್ರವೇ ಶ್ರೇಷ್ಠ ಎಂದು ಪ್ರತಿಪಾದಿಸುವುದನ್ನು ಬಿಡಿ’ ಎಂದು ಮೌಲ್ವಿಗಳಿಗೆ ತಾಕೀತು ಮಾಡಲಾಗಿದೆ. ಜಿಹಾದ್ ಬೋಧಿಸದ, ಸೈರಣೆಗೆ ಪ್ರಾಶಸ್ತ್ಯ ನೀಡುವ ಇಸ್ಲಾಮಿನ ಸೌಮ್ಯ ಆವೃತ್ತಿಯನ್ನು ಸೌದಿ ಅಳವಡಿಸಿಕೊಳ್ಳಲಿದೆ ಎಂದು ಸಲ್ಮಾನ್ ಘೋಷಿಸಿದ್ದಾರೆ.

ಇನ್ನು, ಸೌದಿಯ ಮಟ್ಟಿಗೆ ದೊಡ್ಡ ಸಮಸ್ಯೆ ಎಂದರೆ ಭ್ರಷ್ಟಾಚಾರ. ಸರ್ಕಾರ ಮಾಡಿಕೊಳ್ಳುವ ಯಾವುದೇ ಯೋಜನಾ ಕರಾರಿನ ಶೇಕಡ 10 ರಿಂದ 25 ಭಾಗ ವಿಲಾಸಿ ಬದುಕನ್ನು ಮೈಗೂಡಿಸಿಕೊಂಡಿರುವ ರಾಜವಂಶದ ಪ್ರಮುಖರಿಗೆ ಮತ್ತು ಪ್ರಭಾವಿಗಳಿಗೆ ಹೋಗುತ್ತಿದೆ. ಈ ವಿಷಯ ಆಡಳಿತದ ಚುಕ್ಕಾಣಿ ಹಿಡಿದ ಸೌದಿ ದೊರೆಗೆ ತಿಳಿದಿರಲಿಲ್ಲ ಎಂದಲ್ಲಾ, ದಾಯಾದಿಗಳು ಅಧಿಕಾರಕ್ಕೆ ಸಂಚು ತಂದಾರು ಎಂಬ ಭಯದಿಂದ ಕಣ್ಪಟ್ಟಿ ಕಟ್ಟಿಕೊಂಡು ಕೂರಬೇಕಾದ ಸ್ಥಿತಿ ಇತ್ತು. ಸಲ್ಮಾನ್ ಯುವರಾಜನಾಗುತ್ತಲೇ ಕುಟುಂಬದ ಸದಸ್ಯರನ್ನು ಸಂಪುಟದಿಂದ ದೂರ ಇಟ್ಟರು. ಕೇವಲ ರಕ್ಷಣಾ ಪಡೆಗಳ ಉಸ್ತುವಾರಿಯನ್ನಷ್ಟೇ ರಾಜವಂಶದ ಅಧೀನದಲ್ಲಿ ಉಳಿಸಿಕೊಳ್ಳಲಾಯಿತು. ಭ್ರಷ್ಟಾಚಾರ ನಿಗ್ರಹಕ್ಕೆ ಕ್ರಮ ಕೈಗೊಳ್ಳಲಾಯಿತು. ಅದರ ಮುಂದುವರಿದ ಭಾಗವಾಗಿಯೇ ನವೆಂಬರ್ 4ರ ಕಾರ್ಯಾಚರಣೆ ನಡೆದಿದೆ.

ಇದು ನಿಜಕ್ಕೂ ಭ್ರಷ್ಟ ನಿಗ್ರಹ ಕಾರ್ಯಾಚರಣೆಯೇ? ಈವರೆಗೆ ಸೌದಿ ರಾಜಮನೆತನದಲ್ಲಿ ಸಿಂಹಾಸನದ ಸುತ್ತಾ ನಾಟಕೀಯ ಬೆಳವಣಿಗೆಗಳು ಸಾಕಷ್ಟಾಗಿವೆ. ಹಿಂದಿನ ನಾಲ್ಕು ಯುವರಾಜರು ಸೌದಿ ದೊರೆಯಾಗುವ ಮೊದಲೇ ಲೋಕ ತ್ಯಜಿಸಿದ್ದಾರೆ. ಹಾಗಾಗಿ ಸಲ್ಮಾನ್ ನಿರ್ದೇಶನದಲ್ಲಿ ಆದ ನವೆಂಬರ್ 4ರ ದಾಳಿ ಮತ್ತು ಬಂಧನ, ಅಧಿಕಾರ ಕೇಂದ್ರೀಕರಿಸಿಕೊಳ್ಳುವ ಮತ್ತೊಂದು ನಾಟಕೀಯ ಬೆಳವಣೆಗೆಯೇ? ಕಾದು ನೋಡಬೇಕು.

ಇದೆಲ್ಲದರಾಚೆಗೆ ಅರಬ್ ಜಗತ್ತಿನಲ್ಲಿ ಸುನ್ನಿ ರಾಷ್ಟ್ರಗಳ ನಾಯಕತ್ವವನ್ನು ಹೆಗಲಿಗೇರಿಸಿಕೊಳ್ಳುವ ಬಯಕೆ ಸಲ್ಮಾನ್ ಅವರಿಗೆ ಇದ್ದಂತಿದೆ. ಹಾಗಾಗಿ ಇರಾನ್ ತನ್ನ ಎದುರಾಳಿ ಎಂದು ಘೋಷಿಸಿದ್ದಾರೆ. ಇರಾನ್ ಜೊತೆ ಗುರುತಿಸಿಕೊಂಡಿರುವ ಕತಾರ್ ದೇಶವನ್ನು ರಾಜತಾಂತ್ರಿಕವಾಗಿ ಏಕಾಂಗಿಯಾಗಿಸಲು ಸೌದಿ ಈಗಾಗಲೇ ಪ್ರಯತ್ನಿಸಿದೆ. ಲೆಬನಾನ್ ಪ್ರಧಾನಿ ಸಾದ್ ಹರೀರಿ, ಕಳೆದ ವಾರ ಸೌದಿಗೆ ಬಂದವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಣ್ಮರೆಯಾಗಿದ್ದಾರೆ. ‘ತನ್ನ ಪ್ರಧಾನಿಯನ್ನು ಸೌದಿ ಒತ್ತೆಯಾಳು ಮಾಡಿಕೊಂಡಿದೆ’ ಎಂದು ಲೆಬನಾನ್ ಆರೋಪಿಸಿದೆ. ಹೀಗೆ ಮಧ್ಯಪ್ರಾಚ್ಯದಲ್ಲಿ ಪ್ರಾಬಲ್ಯ ವಿಸ್ತರಿಸಿಕೊಳ್ಳುವತ್ತ ಸಲ್ಮಾನ್ ಇಡುತ್ತಿರುವ ಪ್ರತೀ ಹೆಜ್ಜೆಗೆ ಅಮೆರಿಕದ ಬೆಂಬಲವಿದೆ. ಅರಬ್ ಜಗತ್ತಿನ ಮಟ್ಟಿಗೆ ಸೌದಿ ಅರೇಬಿಯಾದ ಏಳಿಗೆಯಲ್ಲಿ ಅಮೆರಿಕದ ಹಿತಾಸಕ್ತಿ ಇದೆ. ಹಾಗಾಗಿ ಆ ವಲಯದಲ್ಲಿ ಇರಾನ್ ಹಿಡಿತ ಬಲವಾಗದಂತೆ ನೋಡಿಕೊಳ್ಳಲು ಸೌದಿಯನ್ನು ಅಮೆರಿಕ ಬಳಸಿಕೊಳ್ಳುತ್ತಿದೆ.

ಆದರೆ ನಿಜಕ್ಕೂ ಅರಬ್ ಜಗತ್ತಿನ ನಾಯಕತ್ವ ನಿಭಾಯಿಸುವ ಸಾಮರ್ಥ್ಯ ಸೌದಿಗೆ ಇದೆಯೇ? ಹಾಗನಿಸುವುದಿಲ್ಲ. ಅಮೆರಿಕದ ರಕ್ಷಣಾ ಸಾಮಾಗ್ರಿಗಳ ದೊಡ್ಡ ಗ್ರಾಹಕನಾಗಿ ಸೌದಿ ಅರೇಬಿಯಾ ಇದ್ದರೂ, ಸಾಮರಿಕವಾಗಿ ಅದು ದೊಡ್ಡ ಶಕ್ತಿಯಲ್ಲ. ಸೌದಿಯ ನ್ಯಾಷನಲ್ ಗಾರ್ಡ್ ತನ್ನ ರಾಜಮನೆತನವನ್ನು ರಕ್ಷಿಸಿಕೊಳ್ಳಲಷ್ಟೇ ಶಕ್ತವಾಗಿದೆ. ಹಾಗಾಗಿಯೇ ಸೌದಿ ನೇರ ಸೆಣಸಾಟಕ್ಕೆ ಇಳಿಯದೇ ತನ್ನ ಗಡಿ ರಕ್ಷಣೆಯ ಹೊಣೆಯನ್ನು ಅಮೆರಿಕದ ಹೆಗಲಿಗೆ ಹಾಕಿ, ಕೇವಲ ಆರ್ಥಿಕ ಶಕ್ತಿಯನ್ನು ಬಳಸಿ ಉಗ್ರರನ್ನು ಪೋಷಿಸಿ ಪರೋಕ್ಷ ಯುದ್ಧವನ್ನಷ್ಟೇ ವೈರಿರಾಷ್ಟ್ರಗಳ ವಿರುದ್ಧ ಇದುವರೆಗೆ ಮಾಡಿಕೊಂಡು ಬಂದಿದೆ. ಹೀಗಿರುವಾಗ ಇರಾನ್ ಮತ್ತು ಮಿತ್ರ ರಾಷ್ಟ್ರಗಳನ್ನು ಸೌದಿ ತನ್ನ ಸ್ವಂತ ಬಲದಲ್ಲಿ ಎದುರಿಸುವುದು ಕಠಿಣವೇ.

ಉಳಿದಂತೆ, ಸೌದಿಯ ಆಂತರಿಕ ವಿಷಯಗಳ ಬಗ್ಗೆ ಅರಬ್ ಜಗತ್ತು ಕಟುವಾಗಿ ಪ್ರತಿಕ್ರಿಯಿಸದಿದ್ದರೂ ಸೌದಿಯ ವಿದೇಶಾಂಗ ನೀತಿಯಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಒಂದುವೇಳೆ ಅಮೆರಿಕದೊಂದಿಗಿನ ಸ್ನೇಹವನ್ನು ಅರಬ್ ಜಗತ್ತು ಸಹಿಸಿದರೂ, ಯಹೂದಿ ರಾಷ್ಟ್ರವಾದ ಇಸ್ರೇಲ್ ಜೊತೆಗಿನ ಸಲುಗೆಯನ್ನು ಮಾತ್ರ ಅದು ತಾಳುವುದಿಲ್ಲ. ಸಲ್ಮಾನ್ ಒಂದೊಮ್ಮೆ ಇಸ್ರೇಲ್ ಜೊತೆ ಕೈ ಕುಲುಕಲು ಮುಂದಾದರೆ ಅದು ಅವರ ಪ್ರಾಣಕ್ಕೇ ಅಪಾಯ ಉಂಟು ಮಾಡಬಲ್ಲದು ಎಂದು ಹೇಳಲಾಗುತ್ತಿದೆ.

ನಿಜ, ಅರಬ್ ಜಗತ್ತಿನ ಇತಿಹಾಸದಲ್ಲಿ ಮತೀಯ ಕಟ್ಟುಪಾಡುಗಳನ್ನು ಮುರಿದು ಸುಧಾರಣೆ ತರಲು ಯತ್ನಿಸಿದವರು, ಇಸ್ರೇಲ್ ಜೊತೆ ಸ್ನೇಹ ಬಯಸಿದವರು ಬದುಕಿ ಬಾಳಿದ ಉದಾಹರಣೆ ಇಲ್ಲ. 1950ರ ದಶಕದಲ್ಲಿ ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯಾಗಬೇಕು ಎಂಬ ಆಶಯದೊಂದಿಗೆ ಪ್ರಯತ್ನ ಆರಂಭಿಸಿದ್ದ ಜೋರ್ಡನ್ ದೊರೆ ಅಬ್ದುಲ್ಲಾರನ್ನು ಅರಬ್ ಜಗತ್ತಿನ ಮಧ್ಯಮ ಮಾರ್ಗಿ ಸೌಮ್ಯ ನಾಯಕ ಎಂದು ಪಶ್ಚಿಮ ದೇಶಗಳು ಕರೆದಿದ್ದವು. ಇಸ್ರೇಲ್ ಜೊತೆಗೆ ಪ್ರತ್ಯೇಕ ಶಾಂತಿ ಒಪ್ಪಂದಕ್ಕೆ ಅಬ್ದುಲ್ಲಾ ಮುಂದಾಗುತ್ತಾರೆ ಎಂದು ಎದುರು ನೋಡಲಾಗಿತ್ತು, ಆದರೆ ಅದೇ ಕಾರಣದಿಂದ ಅವರನ್ನು ಜೆರುಸಲೆಮ್‌ನಲ್ಲಿ ಹತ್ಯೆ ಮಾಡಲಾಯಿತು. 11 ವರ್ಷ ಈಜಿಪ್ಟ್ ಅಧ್ಯಕ್ಷರಾಗಿ ಹಲವು ಮಹತ್ವದ ಬದಲಾವಣೆ ತಂದ ಅನ್ವರ್ ಸಾದತ್, ಈಜಿಪ್ಟಿನ ಆರ್ಥಿಕ ಮತ್ತು ರಾಜಕೀಯ ರಂಗದಲ್ಲಿ ಕ್ರಾಂತಿ ತರಲು ಪ್ರಯತ್ನಿಸಿದ್ದರು. ಖಾಸಗಿ ಹೂಡಿಕೆಗೆ ಅವಕಾಶ ಕಲ್ಪಿಸಿದರು, ಮುಕ್ತ ಮಾರುಕಟ್ಟೆಯ ವ್ಯವಸ್ಥೆ ತಂದರು.

1967ರ ಆರು ದಿನಗಳ ಯುದ್ಧದಲ್ಲಿ ಇಸ್ರೇಲ್ ವಶಪಡಿಸಿಕೊಂಡಿದ್ದ ಸಿನಾಯ್ ಪರ್ಯಾಯ ದ್ವೀಪವನ್ನು ಮರಳಿ ಪಡೆಯಲು 1973ರ ‘ಯಾಮ್ ಕಿಪ್ಪೂರ್ ಯುದ್ಧ’ಕ್ಕೆ ಈಜಿಪ್ಟ್ ಮುಂದಾಗಿದ್ದು ಅನ್ವರ್ ಕಾಲದಲ್ಲೇ. ಆಗ ಅರಬ್ ಜಗತ್ತು ಅನ್ವರ್ ಸಾದತ್ ಅವರನ್ನು ಶ್ರೇಷ್ಠ ನಾಯಕ ಎಂದು ಕೊಂಡಾಡಿತ್ತು. ಆದರೆ ಆ ಹೊಗಳಿಕೆಯಲ್ಲೇ ಕಳೆದು ಹೋಗದೇ, ಇಸ್ರೇಲಿನ ಜೊತೆ ಅನ್ವರ್ ಮಾತುಕತೆಗೆ ಕುಳಿತರು. ಈಜಿಪ್ಟ್-ಇಸ್ರೇಲ್ ಶಾಂತಿ ಒಪ್ಪಂದವಾಯಿತು. ಆ ಕಾರಣಕ್ಕಾಗಿಯೇ ಅವರಿಗೆ ನೊಬೆಲ್ ಪ್ರಶಸ್ತಿಯೂ ಬಂತು. ಆದರೆ ಇಸ್ರೇಲಿನೊಂದಿಗೆ ಶಾಂತಿ ಮಾತುಕತೆಗೆ ಕುಳಿತಿದ್ದನ್ನು ಅರಬ್ ಜಗತ್ತು ಸಹಿಸಲಿಲ್ಲ. ‘ಅರಬ್ ಲೀಗ್’ನಿಂದ ಹತ್ತು ವರ್ಷಗಳ ಅವಧಿಗೆ ಈಜಿಪ್ಟನ್ನು ಬಹಿಷ್ಕರಿಸಲಾಯಿತು. ಇಸ್ರೇಲ್ ಜೊತೆಗಿನ ಸ್ನೇಹ, ಅನ್ವರ್ ಹತ್ಯೆಗೆ ನಾಂದಿಯಾಯಿತು. ಅದರ ಮರುವರ್ಷ ಹತ್ಯೆಯಾದ ಲೆಬನಾನ್ ನಾಯಕ ಬಷೀರ್ ಜೆಮೀಲ್ ಅವರದ್ದೂ ಅದೇ ಕತೆ. ಇಸ್ರೇಲ್ ಬಗ್ಗೆ ತಳೆದ ಮೃದು ಧೋರಣೆ ಅವರ ಪ್ರಾಣಕ್ಕೆ ಎರವಾಯಿತು.

ಹಾಗಾಗಿ, ಸೌದಿ ಯುವರಾಜ ಸಲ್ಮಾನರಲ್ಲಿ ಬದಲಾವಣೆ ತರುವ ಉತ್ಸಾಹ ಇರಬಹುದು ನಿಜ, ಆದರೆ ಎದುರಿಗೆ ಸವಾಲಿನ ಕುದಿಹೊಂಡವೂ ಇದೆ. ಸೌದಿ ಇದಾಗಲೇ ಯಮೆನ್ ಜೊತೆ ಗುದ್ದಾಡುತ್ತಿದೆ. ನೆರೆಯ ರಾಷ್ಟ್ರಗಳಾದ ಇರಾಕ್, ಸಿರಿಯಾಗಳು ಅಸ್ಥಿರಗೊಂಡಿವೆ. ಕತಾರ್ ಮತ್ತು ಇರಾನ್ ಜೊತೆಗಿನ ಮುನಿಸು ಸದ್ಯಕ್ಕೆ ಬಗೆಹರಿಯುವಂತೆ ಕಾಣುವುದಿಲ್ಲ. ಈ ಬಾಹ್ಯ ಕಾದಾಟಗಳ ಜೊತೆ ಆಂತರಿಕವಾಗಿ ಸಮಾಜ ಸುಧಾರಣೆಗೂ ಸಲ್ಮಾನ್ ಮುಂದಾಗಿದ್ದಾರೆ. ವಹಾಬಿ ಪಂಥ ಅನುಸರಿಸುವ ಸೌದಿಯ ಕಟ್ಟಾ ಸುನ್ನಿ ಮುಸಲ್ಮಾನರಲ್ಲಿ ಗಂಡು– ಹೆಣ್ಣು ಸಾಮಾಜಿಕವಾಗಿ ಬೆರೆಯುವ ವಾತಾವರಣ ಇಲ್ಲ. ಸಂಗೀತ ಮತ್ತು ಸಿನಿಮಾಗಳಿಗೆ ನಿರ್ಬಂಧವಿದೆ. ಇಸ್ಲಾಮ್ ಹೊರತಾಗಿ ಇನ್ನೊಂದು ಮತ ಪಂಥದ ಬಹಿರಂಗ ಆಚರಣೆಗೆ ಆಸ್ಪದವಿಲ್ಲ. ಅಂತಲ್ಲಿ ಸುಧಾರಣೆಯ ಹೆಜ್ಜೆಗಳನ್ನಿಡುವ ಮೂಲಕ ಮೂಲಭೂತವಾದಿಗಳ ವೈರತ್ವವನ್ನಷ್ಟೇ ಅಲ್ಲ, ತನ್ನದೇ ವಂಶದ ಅಧಿಕಾರ ಆಕಾಂಕ್ಷಿಗಳ, ಉದ್ಯಮಿಗಳ ದ್ವೇಷವನ್ನು ಸಲ್ಮಾನ್ ಕಟ್ಟಿಕೊಂಡಿದ್ದಾರೆ.

ಈ ಎಲ್ಲಾ ಹಗೆ, ದ್ವೇಷವನ್ನೂ ದಾಟಿ ಸಲ್ಮಾನ್ ಯಶಸ್ವಿಯಾದರೆ, ಸೌದಿ ಮಹಿಳೆಯರಿಗೆ ಸಮಾನ ನಾಗರಿಕ ಹಕ್ಕುಗಳು ದೊರೆತರೆ, ಯಾವ ಅಂಜಿಕೆ ಇಲ್ಲದೇ ಸಿನಿಮಾ, ಮಾರುಕಟ್ಟೆ ಎಂದು ಅವರು ಓಡಾಡಿಕೊಂಡು ಇರುವಂತಾದರೆ, ಮುಲ್ಲಾಗಳ ಧಾರ್ಮಿಕ ಕಟ್ಟುಪಾಡುಗಳು ಕೊಂಚ ಸಡಿಲಾದರೆ, ಆಜಾನ್ ಜೊತೆಗೆ ಭಜನೆ ಪ್ರಾರ್ಥನೆಗಳೂ ಕೇಳಿಬಂದರೆ, ತೈಲದ ಥೈಲಿಯಾಚೆ ಸೌದಿ ಆರ್ಥಿಕವಾಗಿ ಬೆಳೆದರೆ, ಇಷ್ಟೆಲ್ಲಾ ಮಾಡಿಯೂ ಸಲ್ಮಾನ್ ಕೆಲವು ವರ್ಷ ಜೀವಂತ ಉಳಿದರೆ ಅರಬ್ ಜಗತ್ತಿನಲ್ಲಿ ಹೊಸ ಸೂರ್ಯ ಉದಯಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry