7

ವಾಸ್ತವ ಎದುರಿಸಲು ಸಿದ್ಧರಾಗುವುದು ಅಗತ್ಯ

ಪೃಥ್ವಿ ದತ್ತ ಚಂದ್ರ ಶೋಭಿ
Published:
Updated:

ಭಾರತದ ಯಾವ ಉನ್ನತ ಶಿಕ್ಷಣ ಸಂಸ್ಥೆಯೂ ಪ್ರಪಂಚದ ಮೊದಲ 100 ಶ್ರೇಯಾಂಕದ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಇಲ್ಲ ಎನ್ನುವುದರ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಇತ್ತೀಚೆಗೆ ಬಿಡುಗಡೆಯಾದ 2017ರ ಶ್ರೇಯಾಂಕ ಪಟ್ಟಿಯಲ್ಲಿ ಹಿಂದಿನ ವರ್ಷಗಳಿಗಿಂತಲೂ ಈ ಬಾರಿ ಭಾರತೀಯ ವಿಶ್ವವಿದ್ಯಾಲಯಗಳು ಸ್ವಲ್ಪ ಕೆಳಗಿಳಿದಿವೆ ಸಹ.

ಕಳೆದ ತಿಂಗಳು ಬಿಹಾರದ ಪಟ್ನಾ ವಿಶ್ವವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುವಾಗ, ಪ್ರಧಾನಿ ನರೇಂದ್ರ ಮೋದಿಯವರು ಸಹ ಭಾರತೀಯ ಪ್ರಾತಿನಿಧ್ಯ ಶ್ರೇಯಾಂಕ ಪಟ್ಟಿಯಲ್ಲಿ ಇಲ್ಲದಿರುವುದು ಒಂದು ಕಳಂಕ ಎಂದರು. ಬಿಜೆಪಿ ಸರ್ಕಾರ ಈ ಕುರಿತಾಗಿ ರೂಪಿಸುತ್ತಿರುವ ಹೊಸ ಯೋಜನೆಯೊಂದರ ಬಗ್ಗೆ ಅಲ್ಲಿ ಮಾತನಾಡಿದರು ಕೂಡ. ವಿಶ್ವಮಟ್ಟದ ಸಂಸ್ಥೆಗಳನ್ನು ಕಟ್ಟುವ ಸರ್ಕಾರದ ಯೋಜನೆಯ ಬಗ್ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಈಗಾಗಲೆ ಮಾತನಾಡಿದ್ದುದರಿಂದ ಪ್ರಧಾನಿಯವರು ಹೊಸ ವಿವರಗಳನ್ನು ಏನೂ ನೀಡುತ್ತಿರಲಿಲ್ಲ. ಆದರೆ ಸ್ವತಃ ಪ್ರಧಾನಿಯವರೇ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ನಮಗೆ ಇಲ್ಲಿ ಮುಖ್ಯವಾಗುತ್ತಿದೆ.

ಈ ಹೊಸ ಯೋಜನೆಯ ಪ್ರಕಾರ 10 ಸಾರ್ವಜನಿಕ ಮತ್ತು 10 ಖಾಸಗಿ ವಲಯದ ಉನ್ನತ ಶಿಕ್ಷಣ ಸಂಸ್ಥೆ- ವಿಶ್ವವಿದ್ಯಾಲಯಗಳನ್ನು ಆಯ್ಕೆ ಮಾಡಿ, ಅವುಗಳಿಗೆ ಸಂಪೂರ್ಣ ಸ್ವಾಯತ್ತತೆ ಹಾಗೂ  ₹ 10,000 ಕೋಟಿಗಳನ್ನು ಅನುದಾನವಾಗಿ ನೀಡಲು ಸರ್ಕಾರ ಉದ್ದೇಶಿಸಿದೆ. ಅಂದರೆ ಈ ಯೋಜನೆಯಡಿಯಲ್ಲಿ ಬರುವ ಸಂಸ್ಥೆಗಳ ಮೇಲೆ ಯು.ಜಿ.ಸಿ. ಅಥವಾ ಬೇರಾವ ನಿಯಂತ್ರಕರಿಗೂ ಮೇಲ್ವಿಚಾರಣೆಯ ಅಧಿಕಾರ ಇರುವುದಿಲ್ಲ. ಅಲ್ಲದೆ ನೇಮಕಾತಿ, ಮೀಸಲಾತಿ, ವೇತನಶ್ರೇಣಿ ಹಾಗೂ ಶುಲ್ಕಗಳಿಗೆ ಸಂಬಂಧಿಸಿದ ಸರ್ಕಾರದ ಯಾವ ನೀತಿ- ನಿಯಮಗಳೂ ಅನ್ವಯಿಸುವುದಿಲ್ಲ. ಯಾರನ್ನಾದರೂ ಅಧ್ಯಾಪಕರನ್ನಾಗಿ ನೇಮಿಸಬಹುದು, ಎಷ್ಟಾದರೂ ಸಂಬಳ ಕೊಡಬಹುದು, ಸರಿಯೆನಿಸಿದಲ್ಲಿ ಮುಂಬಡ್ತಿ ನೀಡಬಹುದು. ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಕೂಡ ಆಯ್ಕೆಯಾಗುವ 20 ಸಂಸ್ಥೆಗಳು ಸಂಪೂರ್ಣ ಸ್ವಾಯತ್ತತೆಯನ್ನು ಹೊಂದಿರುತ್ತವೆ. ವೃತ್ತಿಪರ ಕಾರ್ಯಕ್ರಮಗಳನ್ನು ನಡೆಸುವಾಗ ಸಹ ನಿಯಂತ್ರಕ ಸಂಸ್ಥೆಗಳ ಅನುಮತಿ ಪಡೆಯುವ ಅಗತ್ಯವಿಲ್ಲ.

ಈ ಪ್ರಮಾಣದ ಸ್ವಾಯತ್ತತೆಯನ್ನು ನೀಡುವುದು ಸರಿಯೇ – ಅಲ್ಲವೇ ಎನ್ನುವ ಚರ್ಚೆಯನ್ನು ನಾನು ಇಲ್ಲಿ ಮಾಡುವುದಿಲ್ಲ. ಕೇಂದ್ರ ಸರ್ಕಾರದ ಈ ಹೊಸ ಯೋಜನೆಯ ಪ್ರಸ್ತಾಪವನ್ನು ಇಲ್ಲಿ ಮಾಡಿದ್ದು ಒಂದು ನಿರ್ದಿಷ್ಟ ಕಾರಣದಿಂದ. ಈ ಯೋಜನೆಯನ್ನು ರೂಪಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವೂ ಒಂದು ನಿರ್ಣಯಕ್ಕೆ ಬಂದಿರುವಂತಿದೆ: ಭಾರತದಲ್ಲಿ ವಿಶ್ವಮಟ್ಟದ ಶ್ರೇಷ್ಠ ಶಿಕ್ಷಣ ಸಂಸ್ಥೆಗಳನ್ನು ಕಟ್ಟಬೇಕೆಂದರೆ, ಅವುಗಳಿಗೆ ಸಂಪೂರ್ಣ ಸ್ವಾಯತ್ತತೆಯನ್ನು ಕೊಡಲೇಬೇಕು ಮತ್ತು ಸಂಪನ್ಮೂಲಗಳನ್ನು ಹೇರಳವಾಗಿ ಒದಗಿಸಬೇಕು.

ಸೋಜಿಗದ ವಿಷಯವೆಂದರೆ, ಉತ್ಕೃಷ್ಟ ಸಂಸ್ಥೆಗಳನ್ನು ಕಟ್ಟಲು ಸಂಪೂರ್ಣ ಸ್ವಾಯತ್ತತೆ ಅತ್ಯಗತ್ಯ ಎನ್ನುವಾಗಲೇ, ಮಿಕ್ಕ ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ತಮ್ಮ ನಿಯಂತ್ರಕ ಅಧಿಕಾರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ಯು.ಜಿ.ಸಿ.ಗಳು ಉತ್ಸುಕವಾಗಿವೆ. ಇದರಲ್ಲಿ ರಾಜ್ಯ ಸರ್ಕಾರಗಳೂ ಹಿಂದೆ ಬೀಳುತ್ತಿಲ್ಲ. ಈಗ ಬೆಳಗಾವಿಯಲ್ಲಿ ನಡೆಯುತ್ತಿರುವ ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲಿ 2017ರ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಮಸೂದೆಯನ್ನು ಮತ್ತೆ ಕೈಗೆತ್ತಿಕೊಳ್ಳಲಾಗುತ್ತಿದೆ ಎನ್ನುವುದು ಗಮನಾರ್ಹವಾದುದು.

ಈ ಮಸೂದೆಯನ್ನು ಜೂನ್ ತಿಂಗಳ ಅಧಿವೇಶನದಲ್ಲಿ ವಿಧಾನಸಭೆಯು ಅಂಗೀಕರಿಸಿತ್ತು. ಆದರೆ ಸಮಯದ ಅಭಾವದ ಕಾರಣದಿಂದ ವಿಧಾನಪರಿಷತ್ತಿನಲ್ಲಿ ಮಸೂದೆಯನ್ನು ಮಂಡಿಸಲು ಆಗಿರಲಿಲ್ಲ. ಆಗ , ರಾಜ್ಯಸರ್ಕಾರವು ವಿಶ್ವವಿದ್ಯಾಲಯಗಳಿಂದ ಸ್ವಾಯತ್ತತೆಯನ್ನು ಕಸಿದುಕೊಳ್ಳುವ ಬಗ್ಗೆ ಮತ್ತು ಅವುಗಳ ದಿನನಿತ್ಯದ ಕಾರ್ಯಚಟುವಟಿಕೆಗಳಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಈ ಅಂಕಣವೂ ಸೇರಿದಂತೆ ಹಲವೆಡೆ ತೀವ್ರ ಆತಂಕ ವ್ಯಕ್ತವಾಗಿತ್ತು. ಆ ಹಿನ್ನೆಲೆಯಲ್ಲಿ ಮಸೂದೆಯ ಕುರಿತಾದ ಚರ್ಚೆಗಳನ್ನು ವಿವಿಧ ಪಾಲುದಾರರೊಡನೆ ನಡೆಸುವ ಮಾತುಗಳು ಕೇಳಿಬಂದವಾದರೂ, ಇದುವರೆಗೆ ಅಂತಹ ಯಾವ ಸಮಾಲೋಚನೆಯೂ ನನಗೆ ತಿಳಿದಂತೆ ನಡೆದಿಲ್ಲ. ಜೂನ್ ತಿಂಗಳಿನಲ್ಲಿ ಎತ್ತಲಾದ ಆಕ್ಷೇಪಣೆಗಳಿಗೆ ಯಾವ ಉತ್ತರವೂ ದೊರಕಿಲ್ಲ.

ಈಗ ಕಳೆದ ವಾರದಿಂದ ಮಸೂದೆಯು ಮತ್ತೆ ಚರ್ಚೆಗೆ ಒಳಗಾಗಿದ್ದರೆ, ಅದು ಕನ್ನಡ ವಿಶ್ವವಿದ್ಯಾಲಯದ ಸ್ಥಾನಮಾನದ ಕುರಿತಾಗಿ ಮಾತ್ರ. ಕನ್ನಡ ವಿಶ್ವವಿದ್ಯಾಲಯದ ವಿಶಿಷ್ಟವಾದ ಸಂಶೋಧನಕೇಂದ್ರಿತ ಕಾರ್ಯವೈಖರಿ, ನಾಡು-ನುಡಿಗಳಿಗೆ ಸಂಬಂಧಿಸಿದಂತೆ ಇರುವ ಹೊಣೆಗಾರಿಕೆಗಳು, ರಾಜ್ಯವ್ಯಾಪಿ ಭೌಗೋಳಿಕ ವ್ಯಾಪ್ತಿ ಮತ್ತು ವಿದ್ಯಾರ್ಥಿಗಳು ಕ್ಯಾಂಪಸ್ಸಿನಲ್ಲಿಯೇ ಇರುವ ವ್ಯವಸ್ಥೆ ಮೊದಲಾದ ಅಂಶಗಳನ್ನು ಲಕ್ಷಿಸಿ, ಅದನ್ನು ಈ ಸಾಮಾನ್ಯ ಮಸೂದೆಯೊಳಗೆ ತರಬಾರದೆಂಬ ವಾದವನ್ನು ಮುಂದಿಡಲಾಗಿದೆ. ಈ ವಾದದ ಬಗ್ಗೆ ಒಂದು ಹಂತದವರೆಗೆ ನನಗೆ ಸಹಾನುಭೂತಿಯಿದೆ. ಆದರೆ ಇಂದು ನಮ್ಮ ಸಮಸ್ಯೆಯಿರುವುದು ಇಲ್ಲಿ. ಈ ಮಸೂದೆ ಜಾರಿಗೊಂಡರೆ, ವಿಶ್ವವಿದ್ಯಾಲಯಗಳು ಇಂದಿನ ಸರ್ಕಾರಿ ಪದವಿ ಕಾಲೇಜುಗಳಿಗಿರುವ ಸ್ಥಾನದಲ್ಲಿರುತ್ತವೆ. ಇದು ಕನ್ನಡ ವಿಶ್ವವಿದ್ಯಾಲಯಕ್ಕೆ ಮಾತ್ರವಲ್ಲ, ಎಲ್ಲ ವಿಶ್ವವಿದ್ಯಾಲಯಗಳಿಗೂ ಆತಂಕವನ್ನು ಮೂಡಿಸಬೇಕಾಗಿರುವ ಸಂಗತಿ.

ಈ ಮಸೂದೆಯ ಉದ್ದೇಶಗಳನ್ನು ವಿವರಿಸುವಾಗ, ಉನ್ನತ ಶಿಕ್ಷಣ ಸಚಿವರು ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರಗಳಿಂದ ವಿಶ್ವವಿದ್ಯಾಲಯಗಳನ್ನು ಮುಕ್ತಗೊಳಿಸುವುದು ತಮ್ಮ ಗುರಿ ಎಂದು ಹಲವಾರು ಬಾರಿ ಹೇಳಿದ್ದಾರೆ. ಅವರ ಗುರಿ ವಿಶ್ವವಿದ್ಯಾಲಯಗಳ ಒಳಿತನ್ನು ಬಯಸುವ ಎಲ್ಲರೂ ಒಪ್ಪುವಂತಹುದು. ಆದರೆ ಈಗ 2 ಕಾರಣಗಳಿಂದ ಪ್ರಶ್ನೆಗಳನ್ನು ಎತ್ತಬೇಕಾಗಿದೆ.

ಮೊದಲನೆಯದು, ಸಚಿವರು ಗುರುತಿಸುತ್ತಿರುವ ಬಿಕ್ಕಟ್ಟುಗಳನ್ನು ಅವರು ಪ್ರಸ್ತಾಪಿಸುತ್ತಿರುವ ಪರಿಹಾರಗಳ ಮೂಲಕ ಶಮನ ಮಾಡಲು ಸಾಧ್ಯವೇ ಎಂಬುದು. ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತಗಳು ನಮ್ಮ ವ್ಯವಸ್ಥೆಯ ಎಲ್ಲ ವಲಯಗಳನ್ನೂ ಆಕ್ರಮಿಸಿಕೊಂಡಿವೆ, ವಿಶ್ವವಿದ್ಯಾಲಯಗಳನ್ನು ಮಾತ್ರವಲ್ಲ. ಯಾವುದಾದರೂ ಒಂದು ಇಲಾಖೆಯಲ್ಲಿ ಈ ಸಮಸ್ಯೆಗಳಿಲ್ಲ ಎಂದರೆ ಅದರ ಉಸ್ತುವಾರಿ ನೋಡಿಕೊಳ್ಳುವ ಸಚಿವರು ಇಲ್ಲವೆ ಅಧಿಕಾರಿಗಳ ವೈಯಕ್ತಿಕ ಪ್ರಾಮಾಣಿಕತೆ ಮತ್ತು ದಕ್ಷತೆಗಳಿಂದ ಇದು ಸಾಧ್ಯವಾಗಿರುತ್ತದೆ. ಉಳಿದಂತೆ ಹೊಸದೊಂದು ಪದರವನ್ನು ವ್ಯವಸ್ಥೆಯಲ್ಲಿ ರೂಪಿಸಿದರೆ, ಅದು ಭ್ರಷ್ಟತೆಗೆ ಮತ್ತಷ್ಟು ಆಸ್ಪದ ಕೊಡಬಹುದೇ ಹೊರತು ಹೆಚ್ಚಿನ ದಕ್ಷತೆಯನ್ನು ವ್ಯವಸ್ಥೆಗೆ ನೀಡುವುದಿಲ್ಲ. ಹಾಗಾಗಿ ಹೊಸ ಮಸೂದೆಯಿಂದ ರಚಿತವಾಗುವ ಬೋಧಕರ ಸಾಮಾನ್ಯ ನೇಮಕಾತಿ ಮಂಡಳಿಯಾಗಲಿ, ಉನ್ನತ ಶಿಕ್ಷಣ ಮೂಲಸೌಕರ್ಯ ಮಂಡಳಿಯಾಗಲಿ ಸಚಿವರು ಗುರುತಿಸುತ್ತಿರುವ ಬಿಕ್ಕಟ್ಟುಗಳನ್ನು ಪರಿಹರಿಸುತ್ತವೆ ಎನ್ನುವುದು ಕಷ್ಟ.

ನನ್ನ ಎರಡನೆಯ ಪ್ರಶ್ನೆಯು ಉನ್ನತ ಶಿಕ್ಷಣ ಕ್ಷೇತ್ರವು ಎದುರಿಸುತ್ತಿರುವ ಬಿಕ್ಕಟ್ಟುಗಳ ಸ್ವರೂಪವನ್ನು ಕುರಿತುದಾಗಿದೆ. ಈ ಹಿಂದೆಯೂ ಪ್ರಸ್ತಾಪಿಸಿರುವ ಎರಡು ಮುಖ್ಯ ಅಂಶಗಳನ್ನು ಮತ್ತೆ ಸಂಕ್ಷಿಪ್ತವಾಗಿ ಹೇಳಬಯಸುತ್ತೇನೆ. ಮೊದಲಿಗೆ, ನಮ್ಮ ವಿಶ್ವವಿದ್ಯಾಲಯಗಳು ತಾವು ನಡೆಸುತ್ತಿರುವ ಶೈಕ್ಷಣಿಕ ಕಾರ್ಯಕ್ರಮಗಳ ಶೈಕ್ಷಣಿಕ ಗುರಿಗಳೇನು ಎನ್ನುವುದರ ಬಗ್ಗೆ ಖಚಿತ ತಿಳಿವಳಿಕೆಯನ್ನು ಹೊಂದಿಲ್ಲ. ಎರಡನೆಯದಾಗಿ, ಹೊಸಜ್ಞಾನವನ್ನು ಸೃಷ್ಟಿಸುವಲ್ಲಿ ಮತ್ತು ಜಗತ್ತಿನ ಜ್ಞಾನಪರಂಪರೆಗಳೊಡನೆ ಯಾವುದೇ ಅರ್ಥಪೂರ್ಣ ಸಂಬಂಧವನ್ನೂ ಹೊಂದಿಲ್ಲ. ಈ ಮಾತು ಸಮಾಜವಿಜ್ಞಾನ ಮತ್ತು ಮಾನವಿಕವಿಜ್ಞಾನಗಳ ವಿಷಯದಲ್ಲಿ ವಿಶೇಷವಾಗಿ ಸತ್ಯ. ಹಾಗಾಗಿ ಕನ್ನಡ-ಕರ್ನಾಟಕಗಳ ಬಗ್ಗೆ ಕೂಡ ಗುಣಮಟ್ಟದ ಸಂಶೋಧನೆ, ಬರವಣಿಗೆ ಹೊರಬರುತ್ತಿಲ್ಲ. ಕನ್ನಡ- ಕರ್ನಾಟಕಗಳ ಬಗ್ಗೆ ಉತ್ತಮವಾದ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಾವು ರೂಪಿಸಲು ಸಾಧ್ಯವಾಗಿಲ್ಲ. ಈ ಮಾತಿಗೆ ಕನ್ನಡ ವಿಶ್ವವಿದ್ಯಾಲಯವೂ ಹೊರತಲ್ಲ.

ಕರ್ನಾಟಕದ ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ಪುನರ್‌ರಚನೆ ಮಾಡಬೇಕು ಎನ್ನುವ ಅನಿವಾರ್ಯವಂತೂ ನಮ್ಮ ಮುಂದಿದೆ. ಆ ಅನಿವಾರ್ಯವು ಕಳೆದ ಎರಡು ದಶಕಗಳಲ್ಲಿ ಆಗುತ್ತಿರುವ ತೀವ್ರಗತಿಯ ಬದಲಾವಣೆಗಳ ಕಾರಣದಿಂದ ಹುಟ್ಟುತ್ತಿದೆ. ಜಾಗತೀಕರಣ ಮತ್ತು ತಂತ್ರಜ್ಞಾನಗಳಲ್ಲಿ ಆಗುತ್ತಿರುವ ಆವಿಷ್ಕಾರಗಳ ಬಗ್ಗೆ ಸಹಜವಾದ ರೀತಿಯಲ್ಲಿ ದೇಶಾರೂಢಿ ಮಾತುಗಳನ್ನು ಇದುವರೆಗೂ ಆಡುತ್ತ ಬಂದಿದ್ದೇವೆ. ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದೆ. ಮನುಷ್ಯನ ಇತಿಹಾಸದಲ್ಲಿ ಮೊದಲ ಬಾರಿಗೆ ಮುಂಬರುವ ಒಂದು ಅಥವಾ ಎರಡು ದಶಕಗಳಲ್ಲಿ ಏನಾಗಬಹುದು ಎನ್ನುವುದರ ಬಗ್ಗೆ ನಮಗೆ ಯಾವ ನಿಖರ ಅಂದಾಜು ಸಿಗುತ್ತಿಲ್ಲ. ಹೊಸದಾಗಿ ಬರಬಹುದಾಗಿರುವ ತಂತ್ರಜ್ಞಾನಗಳಾವುವು, ಅವುಗಳು ನಮ್ಮ ವೃತ್ತಿಗಳನ್ನು, ಆರ್ಥಿಕ ವ್ಯವಸ್ಥೆಯನ್ನು ಹೇಗೆ ಬದಲಿಸಬಹುದು ಎನ್ನುವುದು ಖಚಿತವಾಗುತ್ತಿಲ್ಲ. ಉದಾಹರಣೆಗೆ, ಕೃತಕ ಬುದ್ಧಿಮತ್ತೆಯಿಂದ ಎಷ್ಟು ಲಕ್ಷ ಕೆಲಸಗಳು ಮನುಷ್ಯರ ಕೈಜಾರಬಹುದು ಎನ್ನುವುದಾಗಲಿ ಅಥವಾ ಉನ್ನತ ಶಿಕ್ಷಣ ಕ್ಷೇತ್ರದಲ್ಲಿಯೇ ತಂತ್ರಜ್ಞಾನದ ಬಳಕೆಯಿಂದ ಬೋಧಕರ ಅವಶ್ಯಕತೆ ಎಷ್ಟರ ಮಟ್ಟಿಗೆ ಕಡಿಮೆಯಾಗಬಹುದು ಎನ್ನುವುದಾಗಲಿ ನಮಗೆ ತಿಳಿಯುತ್ತಿಲ್ಲ.

ವೈದ್ಯಕೀಯ ಮತ್ತು ಜೀವಶಾಸ್ತ್ರ ಕ್ಷೇತ್ರಗಳಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಈಗ ಹುಟ್ಟುತ್ತಿರುವ ಮಕ್ಕಳು 120–140 ವರ್ಷಗಳವರೆಗೆ ಬದುಕುವುದು ಆಶ್ಚರ್ಯದ ಮಾತಾಗುವುದಿಲ್ಲ. ಈ ಮಕ್ಕಳು 80–100ನೆಯ ವಯಸ್ಸಿನವರೆಗೂ ಕೆಲಸ ಮಾಡುತ್ತಾರೆ ಹಾಗೂ ಈ ಅವಧಿಯಲ್ಲಿ ಕನಿಷ್ಠ 2–3 ವಿಭಿನ್ನ ವೃತ್ತಿಗಳಲ್ಲಿರುತ್ತಾರೆ. ಈಗಾಗಲೆ ಅಂತಹ ಪ್ರವೃತ್ತಿಯನ್ನು ನಾವು ಪ್ರತಿಷ್ಠಿತ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ನೋಡುತ್ತಿದ್ದೇವೆ. ಮುಂದೆ ಇದು ಮತ್ತಷ್ಟು ಸಾಮಾನ್ಯವಾಗುತ್ತದೆ. ಹೀಗೆ ಒಂದು ವಿಷಯದಲ್ಲಿ ಪದವಿ, ಒಂದು ವೃತ್ತಿಯಲ್ಲಿ ತೊಡಗಿಸಿಕೊಂಡು, ಒಂದು ಉದ್ಯೋಗದಲ್ಲಿ 30–40 ವರ್ಷಗಳ ಕಾಲ ತೊಡಗಿಸಿಕೊಳ್ಳುವ ವ್ಯವಸ್ಥೆಯಿಂದ ಬಹಳ ಕ್ಷಿಪ್ರವಾಗಿ ಯಾವುದೇ ಬಗೆಯ ಖಾತ್ರಿಗಳಿಲ್ಲದ ಭವಿಷ್ಯದೆಡೆಗೆ ಚಲಿಸುತ್ತಿದ್ದೇವೆ.

ಇಂತಹ ವಾಸ್ತವವನ್ನು ಎದುರಿಸಲು ನಮಗೆ ಬೇಕಾಗಿರುವ ಶಿಕ್ಷಣ ವ್ಯವಸ್ಥೆ ಎಂತಹುದು ಎನ್ನುವ ಚರ್ಚೆಯ ಮೂಲಕ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಮಸೂದೆ– 2017ನ್ನು ರೂಪಿಸಬೇಕಿತ್ತು. ಅಂತಹ ಚರ್ಚೆಯು ಈಗಲಾದರೂ ವಿಧಾನಮಂಡಲದಲ್ಲಿ ನಡೆಯಲಿ. ಹಾಗೆಯೇ ಇನ್ನೂ ಖಾಲಿಯಿರುವ ರಾಜ್ಯದ ಮೂರನೆಯ ಒಂದು ಭಾಗದಷ್ಟು ಕುಲಪತಿ ಹುದ್ದೆಗಳಿಗೆ, ಸಾವಿರಾರು ಬೋಧಕರ ಹುದ್ದೆಗಳಿಗೂ ಶೀಘ್ರವಾಗಿ ಅರ್ಹರ ನೇಮಕಾತಿಯಾಗಲಿ ಎಂದಷ್ಟೆ ನಾವು ಹೇಳಬಹುದಾಗಿರುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry