7

ಚಿಕಿತ್ಸೆಗಾಗಿ ಸರದಿಯಲ್ಲಿ ಕಾಯುವ ಸಂಕಷ್ಟ

Published:
Updated:
ಚಿಕಿತ್ಸೆಗಾಗಿ ಸರದಿಯಲ್ಲಿ ಕಾಯುವ ಸಂಕಷ್ಟ

ರಾಯಚೂರು: ಖಾಸಗಿ ಆಸ್ಪತ್ರೆಗಳಲ್ಲಿ ಸರದಿಯಿಲ್ಲದೆ ಚಿಕಿತ್ಸೆ ಪಡೆಯುತ್ತಿದ್ದ ಜನರು ಸರ್ಕಾರಿ ಆಸ್ಪತ್ರೆಗಳಲ್ಲಿ ಗುರುವಾರ ಸರದಿಯಲ್ಲಿ ಕಾದು ನಿಂತುಕೊಳ್ಳುವ ಅನಿವಾರ್ಯ ಸಂಕಷ್ಟ ಎದುರಿಸುವಂತಾಯಿತು.

ಬಡವರು, ಮಧ್ಯಮವರ್ಗದವರು ಹಾಗೂ ಶ್ರೀಮಂತಿಕೆ ಹಿನ್ನೆಲೆಯ ಜನರೆಲ್ಲರೂ ಚಿಕಿತ್ಸೆಗಾಗಿ ನೋಂದಾಯಿಸಿಕೊಳ್ಳಲು ಹಾಗೂ ಚಿಕಿತ್ಸೆ ಪಡೆಯುವುದಕ್ಕಾಗಿ ಕಾಯಬೇಕಾಯಿತು. ಜಿಲ್ಲೆಯ ವಿವಿಧ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲೂ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಪ್ರಮುಖವಾಗಿ ಜಿಲ್ಲಾಸ್ಪತ್ರೆ ರಿಮ್ಸ್‌ನಲ್ಲಿ ಚಿಕಿತ್ಸೆಗಾಗಿ ಬಂದಿದ್ದ ಹೊರ ರೋಗಿಗಳ ಸಂಖ್ಯೆ ದುಪ್ಪಟ್ಟಾಗಿತ್ತು.

ಗುರುವಾರ ಬೆಳಿಗ್ಗೆಯಿಂದಲೆ ರಿಮ್ಸ್‌ ಆವರಣದಲ್ಲಿ ಜನಸಂಚಾರ ಚುರುಕಾಗಿತ್ತು. ಆ್ಯಂಬುಲೆನ್ಸ್‌ಗಳ ಸದ್ದು ಹಾಗೂ ಚಿಕಿತ್ಸೆಗಾಗಿ ವಿವಿಧ ವಾಹನಗಳಲ್ಲಿ ಬರುತ್ತಿದ್ದ ಜನರು, ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳ ಸಂಚಾರವು ಎಂದಿಗಿಂತಲೂ ಗಮನ ಸೆಳೆಯುವಂತಿತ್ತು.

ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಲಭ್ಯವಿಲ್ಲ ಎನ್ನುವ ಸುದ್ದಿಯು ಸಾಕಷ್ಟು ಪ್ರಚಾರ ಪಡೆದಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳ ಎದುರು ಎಂದಿನಂತೆ ಜನರು ಕಾಯುತ್ತಿದ್ದ ದೃಶ್ಯ ಕಂಡು ಬರಲಿಲ್ಲ. ರಾಯಚೂರಿನ ಡಾಕ್ಟರ್ಸ್‌ ಲೇನ್‌ ಮಾರ್ಗದಲ್ಲಿ ಎಲ್ಲ ಆಸ್ಪತ್ರೆಗಳ ಬಾಗಿಲು ಮುಚ್ಚಿದ್ದರಿಂದ ವಾತಾವರಣವು ಬಿಕೋ ಎನ್ನುತಿತ್ತು. ಕೆಲವು ಔಷಧಿ ಅಂಗಡಿಗಳು ತೆರೆದಿದ್ದವು. ಆದರೆ ಎಂದಿನಂತೆ ಔಷಧಿ ಖರೀದಿಸುವ ಜನರು ಇರಲಿಲ್ಲ.

ರೋಗಿಗಳ ಸಂಖ್ಯೆ ಭಾರಿ ಹೆಚ್ಚಳ: ಜಿಲ್ಲೆಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ನೋಂದಣಿಯಾದ ಹೊರರೋಗಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ನಾಲ್ಕು ತಾಲ್ಲೂಕು ಆಸ್ಪತ್ರೆಗಳು ಹಾಗೂ ಒಂದು ಜಿಲ್ಲಾಸ್ಪತ್ರೆ (ರಿಮ್ಸ್‌)ನಲ್ಲಿ ನವೆಂಬರ್‌ 11 ರಂದು ಒಟ್ಟು 2,948 ಹೊರ ರೋಗಿಗಳು ನೋಂದಾಯಿಸಿಕೊಂಡಿದ್ದರು.

ನವೆಂಬರ್‌ 16 ರಂದು ನೋಂದಣಿಯಾದ ರೋಗಿಗಳ ಸಂಖ್ಯೆ ಒಟ್ಟು 4,330 ಇದೆ. ರಿಮ್ಸ್‌ನಲ್ಲಿ ನವೆಂಬರ್‌ 16 ರಂದು 1,547 ಹೊರರೋಗಿಗಳು ನೋಂದಾಯಿಸಿ

ಕೊಂಡಿದ್ದಾರೆ.

ಜಿಲ್ಲೆಯಲ್ಲಿ ಮೂವರ ಸಾವು 

ವಿವಿಧ ಕಾರಣಕ್ಕಾಗಿ ಜಿಲ್ಲೆಯಲ್ಲಿ ಗುರುವಾರ ಮೂವರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಗಳು ನಡೆಸುತ್ತಿರುವ ಆಸ್ಪತ್ರೆ ಬಂದ್‌ ಹೋರಾಟಕ್ಕೂ ಈ ಸಾವುಗಳಿಗೂ ಸಂಬಂಧವಿಲ್ಲ.

ರಿಮ್ಸ್‌ ಆಸ್ಪತ್ರೆಯಲ್ಲಿ ಈ ಮೊದಲೆ ದಾಖಲಾಗಿದ್ದ 65 ವರ್ಷ ಮೇಲ್ಪಟ್ಟಿದ್ದ ಇಬ್ಬರು ಒಳರೋಗಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಲಿಂಗಸುಗೂರು ತಾಲ್ಲೂಕಿನ ಮುದಗಲ್‌ನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ವಿಷ ಸೇವಿಸಿದ್ದರು. ಮುದಗಲ್‌ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಆನಂತರ ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ವ್ಯಕ್ತಿ ಮೃತಪಟ್ಟಿದ್ದಾರೆ.

ಶೇ 20ರಷ್ಟು ರೋಗಿಗಳು ಹೆಚ್ಚಳ

ಜಿಲ್ಲೆಯ ವಿವಿಧ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸಂಖ್ಯೆ ಹಾಗೂ ದಾಖಲಾದ ರೋಗಿಗಳ ಸಂಖ್ಯೆಯು ಸಾಮಾನ್ಯ ದಿನಗಳಿಗಿಂತ ಶೇ 20 ರಷ್ಟು ಹೆಚ್ಚಾಗಿದೆ. ಎಲ್ಲಿಯೂ ಸಾವಿನ ಘಟನೆಗಳು ನಡೆದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಸೀರ್‌ ಹೇಳಿದರು.

ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಸಮರ್ಪಕವಾಗಿ ಚಿಕಿತ್ಸೆ ಲಭ್ಯವಾಗುತ್ತಿದೆ. ಔಷಧಿಯಾಗಲಿ, ಹಾಸಿಗೆ ವ್ಯವಸ್ಥೆಯಲ್ಲಾಗಲಿ ಕೊರತೆ ಕಂಡು ಬಂದಿಲ್ಲ. ವೈದ್ಯರು ಹಾಗೂ ಸಿಬ್ಬಂದಿ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರತಿದಿನವೂ ಆಸ್ಪತ್ರೆಗಳಿಂದ ಅಂಕಿ–ಅಂಶಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದರು.

* * 

ಸಾಮಾನ್ಯ ದಿನಗಳಿಗಿಂತಲೂ ರೋಗಿಗಳ ಸಂಖ್ಯೆ ಹೆಚ್ಚಳ ವಾಗಿದೆ. ಸುಮಾರು 16 ರೋಗಿಗಳು ಗುರುವಾರ ಚಿಕಿತ್ಸೆ ಪಡೆದಿದ್ದಾರೆ. ಆಸ್ಪತ್ರೆಯಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಂಡಿದ್ದೇವೆ.

ಡಾ.ಕವಿತಾ ಪಾಟೀಲ

ರಿಮ್ಸ್‌ ಡೀನ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry