ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರೇಷನ್ ಗ್ಯಾಪ್ ಎಂದರೆ...

Last Updated 17 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮೊನ್ನೆ ಸಿಟ್ಟು ಹೆಚ್ಚಾಗಿ ಅಮ್ಮನಿಗೆ ಫೋನು ಹಚ್ಚಿದ್ದೆ. ‘ಅಮ್ಮಾ ನೋಡಮ್ಮಾ ನನ್ನ ಮಗಳು ಹೇಳಿದ ಮಾತು ಒಂದೂ ಕೇಳುವುದಿಲ್ಲ, ಎಲ್ಲದಕ್ಕೂ ತುಂಬಾ ಹಟ ಮಾಡುತ್ತಾಳೆ. ಚಿಕ್ಕದಾಗಿ ಕುಂಕುಮ ಇಡು ಎಂದರೆ ಇಡುವುದಿಲ್ಲ, ಬಳೆ ಹಾಕುವುದಿಲ್ಲ, ಹೂವಂತೂ ಮುಡಿಯುವುದೇ ಇಲ್ಲ, ಮನೆಯಲ್ಲಿ ಯಾವಾಗಲೂ ಒಂದು ಟೀಷರ್ಟ್‌, ಬರ್ಮುಡಾ ಹಾಕಿಕೊಂಡಿರುತ್ತಾಳೆ.

ದೊಡ್ಡ ಹುಡುಗಿಯಾಗಿದ್ದೀಯಾ ಕಾಲುಗಳು ಕಾಣದಂತೆ ಉದ್ದನೆಯ ಪ್ಯಾಂಟು ಹಾಕಿಕೋ ಎಂದರೆ ಕೇಳುವುದಿಲ್ಲ. ಕೂದಲು ಹಾಳಾಗುತ್ತವೆ, ತಲೆಗೆ ಎಣ್ಣೆ ಹಚ್ಚಿಕೋ ಎಂದರೆ ಹಚ್ಚುವುದಿಲ್ಲ. ಪ್ರತಿದಿನ ಬೆಳಿಗ್ಗೆ ಬೇಗನೆ ಏಳುವುದನ್ನು ರೂಢಿ ಮಾಡಿಕೋ ಎಂದರೆ ಕೇಳುವುದಿಲ್ಲ, ಒಂಬತ್ತಕ್ಕೇ ಏಳುತ್ತಾಳೆ.

ಯಾವಾಗಲೂ ಮೊಬೈಲಿನಲ್ಲಿಯೇ ಮುಳುಗಿರುತ್ತಾಳೆ. ಓದಲು ಹೇಳಿದರೆ ಸಿಟ್ಟು ಮಾಡಿಕೊಳ್ಳುತ್ತಾಳೆ, ಹೀಗಾದರೆ ಮುಂದೆ ಕೆಲಸಕ್ಕೆ ಸೇರಿದಾಗ ಹೇಗಮ್ಮಾ, ಸಂಸಾರ ಹೇಗೆ ಮಾಡುತ್ತಾಳಮ್ಮಾ? ನನಗಂತೂ ದೊಡ್ಡ ಚಿಂತೆಯಾಗಿದೆ. ನೀನು ಫೋನು ಮಾಡಿ ಸ್ವಲ್ಪ ಬುದ್ಧಿ ಹೇಳು’ ಎಂದೆ.

ಅಮ್ಮ ಜೋರಾಗಿ ನಗಲು ಪ್ರಾರಂಭಿಸಿದಳು. ನನ್ನ ಸಿಟ್ಟು ನೆತ್ತಿಗೇರಿತು. ‘ನಾನು ನನ್ನ ಕಷ್ಟ ಹೇಳಿಕೊಂಡರೆ ನಿನಗೆ ನಗು ಬಂತೇನು? ಹೋಗು ಇನ್ನು ಮೇಲೆ ನಿನಗೆ ಏನೂ ಹೇಳುವುದಿಲ್ಲ’ ಎಂದು ಮುಖ ಊದಿಸಿಕೊಂಡು ಕುಳಿತಿದ್ದನ್ನು ಅಮ್ಮ ಅಲ್ಲಿಂದಲೇ ಊಹಿಸಿರಬೇಕು.

‘ಅಯ್ಯೋ ಹುಚ್ಚಿ, ಇಷ್ಟಕ್ಕೆಲ್ಲಾ ಬೇಜಾರಾಗ್ತಾರೇನು? ನೋಡು ನೀನು ಇಷ್ಟು ವರ್ಷ ಸಂಸಾರದಲ್ಲಿ ಪಳಗಿಯೂ ಸಿಟ್ಟನ್ನು ಕಂಟ್ರೋಲ್ ಮಾಡುವುದಕ್ಕೆ ಆಗ್ತಾ ಇಲ್ಲ, ಅದಿನ್ನು ಈಗಿನ ಕಾಲಘಟ್ಟದಲ್ಲಿ ಬೆಳೆಯುತ್ತಿರುವ ಕೂಸು, ಅದರ ಸಿಟ್ಟು ನಿನಗಿಂತ ಹೆಚ್ಚೇ ಇರುತ್ತದೆ ಅಲ್ಲವೆ? ಸ್ವಲ್ಪ ಸಮಾಧಾನವಾಗಿ ಕುಳಿತು ಯೋಚಿಸಿ ನೋಡು – ನೀನು ಆ ವಯಸ್ಸಿನಲ್ಲಿ ಹೇಗಿದ್ದೆ ಅಂತಾ? ನಿನಗೇ ಅರ್ಥವಾಗುತ್ತದೆ’ ಎಂದು ಹೇಳಿ ಫೋನಿಟ್ಟಾಗ ಅಮ್ಮ ಹೇಳಿದ ದಿಕ್ಕಿನಲ್ಲಿ ಯೋಚಿಸತೊಡಗಿದೆ.

ಹೌದಲ್ಲ ಎನಿಸಿತು. ಹದಿಹರೆಯದಲ್ಲಿ ನಾನೂ ಸಹ ಹಾಗೇ ಇದ್ದೆ. ಕೆಲಸಕ್ಕೆ ಸಹಾಯ ಮಾಡಲು ಅಮ್ಮ ಕೂಗಿದರೆ, ನನಗೆ ಮೂಡಿಲ್ಲ, ಓದಬೇಕು, ಪ್ರಾಕ್ಟಿಕಲ್ ಬುಕ್ ಬರೆಯಬೇಕು, ಹೀಗೇ ನಾನಾ ರೀತಿಯ ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ. ಟೀವಿ ನೋಡಲು ಕುಳಿತರೆ ಮುಗಿಯಿತು, ಜಪ್ಪಯ್ಯಾ ಎಂದರೂ ಏಳುತ್ತಿರಲಿಲ್ಲ. ಅಮ್ಮ ‘ಆಫ್ ಮಾಡಿ ಓದಿಕೋ’ ಎಂದರೆ ಮುಖ ಉಫ್ ಮಾಡಿಕೊಂಡು, ಒಂದು ಪುಸ್ತಕ ಹಿಡಿದು ಅದರಲ್ಲಿ ಕಾದಂಬರಿಯನ್ನು ತೂರಿಸಿಕೊಂಡು ಓದುತ್ತಿದ್ದೆ. ಅಪ್ಪ ಬಂದ ಮೇಲೆ ನನ್ನನ್ನು ಸಮಾಧಾನ ಮಾಡಿ ಊಟಕ್ಕೆ ಕರೆಯುತ್ತಿದ್ದರು.

ಅಮ್ಮನ ಮೇಲೆ ಸಿಟ್ಟಾಗಿಯೇ ಊಟ ಮಾಡುತ್ತಿದ್ದೆ. ಡಿಗ್ರಿಯಲ್ಲಿ ಒಂದು ಸಬ್ಜೆಕ್ಟಿನಲ್ಲಿ ಫೇಲಾದ ಮೇಲೆಯೇ ಬುದ್ಧಿ ಬಂದಿದ್ದು. ಮನೆಗೆ ಬಂದ ಅತಿಥಿಗಳನ್ನು ಮಾತನಾಡಿಸಬೇಕೆಂದು ಅಮ್ಮನ ನಿಯಮ. ಬೇಕೆಂದೇ ಅತಿಥಿಗಳು ಬಂದ ಹೊತ್ತಿನಲ್ಲಿ ರೂಮಿನಲ್ಲಿ ಬಾಗಿಲು ಹಾಕಿಕೊಂಡು ಓದುವಂತೆಯೋ, ಮಲಗಿದಂತೆಯೋ ನಟಿಸಿ ತಪ್ಪಿಸಿಕೊಳ್ಳಲು ಹವಣಿಸುತ್ತಿದ್ದೆ.

ಅಮ್ಮ ಬಿಡದೆ ಎಳೆದುಕೊಂಡು ಹೋಗಿ ಕಾಫಿ, ತಿಂಡಿ ತಯಾರಿಯ ಕೆಲಸಕ್ಕೆ ನನ್ನನ್ನು ಹಚ್ಚಿ ನನ್ನ ಕೈಯಲ್ಲಿ ಅತಿಥಿ ಸತ್ಕಾರವನ್ನು ಮಾಡಿಸಿಯೇ ತೀರುತ್ತಿದ್ದುದು. ಹಾಗಾಗಿ ಅಮ್ಮನ ಮೇಲೆ ಸ್ವಲ್ಪ ಸಿಟ್ಟು ಜಾಸ್ತಿಯೇ ಇರುತ್ತಿತ್ತು. ಆದರೆ ಮದುವೆಯಾದ ನಂತರ ಗೊತ್ತಾಯಿತು ಅಂದು ಅಮ್ಮ ನನಗೆ ಕಲಿಸಿದ ಸಂಸ್ಕಾರ ನಾನಿಂದು ಉತ್ತಮ ಗೃಹಿಣಿಯಾಗಿರುವುದಕ್ಕೆ ಕಾರಣ ಎಂದು.

ಹಾಗೆ ನೋಡಿದರೆ ನನ್ನ ಮಗಳು ಎಷ್ಟೇ ಮೊಬೈಲಿನಲ್ಲಿ ಮುಳುಗಿದರೂ ಓದಬೇಕಾದ್ದನ್ನು ಓದಿ ಡಿಸ್ಟಿಂಕ್ಷನ್ನಿನಲ್ಲಿಯೇ ಪಾಸು ಮಾಡುತ್ತಾಳೆ. ಎಷ್ಟೇ ಮಾಡ್ ಆದರೂ ಸಂಪ್ರದಾಯಕ್ಕೆ ತಕ್ಕಂತೆ ಹಬ್ಬ, ಹರಿದಿನ, ಮದುವೆ ಮುಂಜಿಗಳಲ್ಲಿ ಸೀರೆ, ಕುರ್ತಾ, ಚೂಡಿದಾರ್ ಧರಿಸಿ ಭಾರತೀಯ ನಾರಿಯಂತೆ ಅಲಂಕರಿಸಿಕೊಂಡರೆ, ಉಳಿದ ಕಡೆಯಲ್ಲಿ ಆಧುನಿಕವಾಗಿ ಕಂಗೊಳಿಸುತ್ತಾಳೆ.

ಲೇಟಾಗಿ ಎದ್ದರೂ ಸಹ ಮನೆ ಕೆಲಸದಲ್ಲಿಯೂ ಸಹ ತನ್ನ ಕೈಲಾದಷ್ಟು ಸಹಾಯವನ್ನು ಹೇಳಿಸಿಕೊಳ್ಳದೆಯೇ ಮಾಡುತ್ತಾಳೆ. ಪ್ರತಿದಿನ ಎಣ್ಣೆ ಹಚ್ಚದಿದ್ದರೇನಂತೆ, ವಾರಕ್ಕೊಮ್ಮೆ ತಾನೇ ಬಟ್ಟಲಿನಲ್ಲಿ ಎಣ್ಣೆ ಕಾಸಿಕೊಂಡು ಬಂದು ಹಚ್ಚಿಸಿಕೊಂಡು ತಲೆಸ್ನಾನ ಮಾಡುತ್ತಾಳೆ. ಅತಿಥಿಗಳನ್ನು ಸತ್ಕರಿಸುವಲ್ಲಿ ಎಂದೂ ಹಿಂದೆ ಬಿದ್ದಿಲ್ಲ.

ಮಗಳ ಬಗ್ಗೆ ಇರುವ ಧನಾತ್ಮಕವಾದ ಸತ್ಯಾಂಶಗಳನ್ನು ಪರಾಂಬರಿಸದೆ, ಇಲ್ಲಗಳನ್ನೇ ತುಂಬಿಕೊಂಡು ಅಮ್ಮನಿಗೆ ಚಾಡಿ ಹೇಳಿದ್ದಕ್ಕೆ ನನಗೇ ನಾಚಿಕೆ ಎನಿಸಿತು. ಮಗಳ ಬಗ್ಗೆ ಹೆಮ್ಮೆ ಮೂಡಿತು.
-ನಳಿನಿ ಟಿ. ಭೀಮಪ್ಪ

*
ಅವರಿಗೂ ಸ್ವಲ್ಪ ಜಾಗ ಕೊಡಿ....
ಮೊಮ್ಮಗಳು ಪುಟ್ಟ ಚಡ್ಡಿಯನ್ನು ಹಾಕಿಕೊಂಡು ಮನೆಗೆ ಬಂದಳು. ಹರೆಯದ ಹುಡುಗಿ ನೋಡಲು ಮುದ್ದಾಗಿಯೇ ಕಾಣುತ್ತಿದ್ದಳು. ಮೊದಲು ಅಜ್ಜ ಮಾತನಾಡಿಸಿದವರೇ ‘ಅಯ್ಯೋ, ಯಾಕೆ ಮರಿ ಇಷ್ಟು ಪುಟ್ಟ ಚಡ್ಡಿ ಹಾಕಿಕೊಂಡಿದ್ದೀಯಾ, ನಿಮ್ಮ ಅಮ್ಮನಿಗೆ ಬುದ್ದಿ ಇದ್ದರೆ ತಾನೇ’ ಎಂದು ಗೊಣಗಿದರು. ‘ನೋಡಮ್ಮಾ, ನಾನೇನು ಮಾಡಲಿ, ಇವಳು ನನ್ನ ಮಾತು ಎಲ್ಲಿ ಕೇಳ್ತಾಳೆ,  ನಿನ್ನೆ ಇದನ್ನೇ ಹಾಕಿ ಕೊಂಡು ರಾತ್ರಿ ಎಂಟು ಗಂಟೆಗೆ ವಾಕ್ ಹೋಗ್ತೀನಿ ಅಂತಾಳೆ, ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲಾ’ ಎಂದು ತಾಯಿಯ ಹತ್ತಿರ ಅಲವತ್ತುಕೊಂಡಳು ಮಗಳು. 'ನನಗೆ ಇಷ್ಟವಾದದ್ದನ್ನು ಹಾಕುತ್ತೀನಿ, ಅದಕ್ಕೆ ಯಾರು ಕಾಮೆಂಟ್ ಮಾಡುವುದು ಬೇಕಿಲ್ಲಾ' ಎನ್ನುವುದು ಮೊಮ್ಮಗಳ ವಾದ.

'ಅಮ್ಮಾ ನಾನು, ನೀನು ಎಷ್ಟು ಮಾತಾಡ್ತೀವಿ ಅಲ್ಲವಾ? ಅವಳಿಗೆ ನನ್ನ ಹತ್ತಿರ ಮಾತನಾಡುವುದೇ ಬೇಸರ. ಸೆಕೆಂಡ್ ಪಿಯುಸಿ ಅಲ್ಲವಾ – ಒಳ್ಳೆ ಮಾರ್ಕ್ಸ್ ತೆಗೆದರೆ ಒಳ್ಳೆಯ ಕಡೆ ಸೀಟ್ ಸಿಕ್ಕುತ್ತದೆ. ಓದು ಅಂತ ಹೇಳಲೇಬಾರದು. ‘‘ನನಗೆಲ್ಲಾ ಗೊತ್ತು, ನೀ ಸುಮ್ಮನಿರು’’ ಎನ್ನುತ್ತಾಳೆ. ದಿನಕೊಬ್ಬ ಗೆಳತಿಯ ಜೊತೆ ಹೊರಗಡೆ ಹೋಗುತ್ತಾಳೆ, ಬರೀ ಪಾರ್ಟಿ, ಶಾಪಿಂಗ್ ಅಂತಾನೇ ಇರುತ್ತಾಳೆ. ನನಗೆ ಅವಳ ಹತ್ತಿರ ಹೇಗಿರಬೇಕೋ, ಹೇಗೆ ಮಾತನಾಡಬೇಕೋ ಗೊತ್ತಾಗ್ತಾ ಇಲ್ಲಮ್ಮ' ಎಂದು ತಾಯಿಯ ಹತ್ತಿರ ಬೇಸರಿಸಿಕೊಂಡಳು ಮಗಳು.

ಒಂದು ಬಾರಿ ಕೌನ್ಸಿಲಿಂಗ್‌ಗಾದರೂ ಕರೆದುಕೊಂಡು ಹೋಗೋಣವೆಂದರೆ ‘ನನಗಿಂತ ನಿನ್ನ ಮಗಳಿಗೆ ಕೌನ್ಸಿಲಿಂಗ್ ಬೇಕು, ಅವಳನ್ನು ಮೊದಲು ಕರೆದುಕೊಂಡು ಹೋಗು’ ಎಂದಳು ಅಜ್ಜಿಗೆ. ‘ಅವಳಿಗೆ ಹೇಳಿದರೆ ಕೇಳುವುದಿಲ್ಲ ಅಥವಾ ಪ್ರಯೋಜನವಿಲ್ಲ ಎಂದಾಗ ನೀನು ಮತ್ತೆ ಮತ್ತೆ ಅವಳಿಗೆ ಉಪದೇಶ ನೀಡುವುದು ಏಕೆ? ಸ್ವಲ್ಪ ದಿನ ನೀನು ಸುಮ್ಮನಿದ್ದು ಬಿಡು ಖಂಡಿತ ಎಲ್ಲಾ ಸರಿ ಹೋಗುತ್ತದೆ' ಎಂದು ಮಗಳಿಗೆ ಹೇಳಿತು ಹಿರಿಯ ಜೀವ. ನಿಜಕ್ಕೂ ಸ್ವಲ್ಪ ದಿನಗಳಾದ ನಂತರ ಪರಿಸ್ಥಿತಿ ಸ್ವಲ್ಪ ಹದಕ್ಕೆ ಬಂದಿತು. ಮೊಮ್ಮಗಳಿಗೆ ಒಳ್ಳೆಯ ಮಾರ್ಕ್ಸ್ ಬಂದಿತು, ಒಳ್ಳೆಯ ಕಾಲೇಜಿಗೆ ಸೀಟು ಸಿಕ್ಕಿತು.

‘ನನ್ನನ್ನು ನೋಡಿದರೆ ಮುಖ ಸಿಂಡರಿಸುತ್ತಾಳೆ, ತಿಂಡಿ ತೆಗೆದುಕೊಂಡು ಹೋಗಿ ಕೊಟ್ಟರೆ, ಅದೇನು ಹಾಗಿದೆ, ಬಾಯಿಯಲ್ಲಿ ಇಡುವ ಹಾಗಿಲ್ಲ, ನಿನ್ನ ಮುಖದ ಹಾಗೆಯೇ ಇದೆ ಎನ್ನುತ್ತಾಳೆ. ನೀನು ನನ್ನ ರೂಮಿಗೆ ಬಗ್ಗಿ ಬಗ್ಗಿ ನೋಡಿ ಗೂಢಚಾರಿಕೆ ಮಾಡುವುದು ಬೇಡ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಬಿಡುತ್ತಾಳೆ’ ಎಂದು ಅಳುತ್ತಾ ತಾಯಿ ಮಗಳ ಬಗ್ಗೆ ಹೇಳಿದಳು.

‘ಅಲ್ಲಾ ಮೇಡಂ ನಾವು ಎಲ್ಲ ಮಾಡುವುದು ಇವರಿಗಾಗಿಯೇ ಅಲ್ಲವೇ, ತಾಯಿ ಎನ್ನುವ ಪ್ರೀತಿಯೂ ಇಲ್ಲ ಭಯವೂ ಇಲ್ಲ’ ಎಂದು ತನ್ನ ಕಣ್ಣನ್ನು ಒರೆಸಿಕೊಂಡಳು. ನಾನು ಹೆಚ್ಚು ಮಾತನಾಡಲಿಲ್ಲ. ‘ನೀವು ನಿಮ್ಮ ಮಗಳ ಹತ್ತಿರ ಎಷ್ಟು ಮಾತನಾಡುತ್ತಿದ್ದೀರೋ ಅದರಲ್ಲಿ ಮೂರನೆಯ ಒಂದು ಭಾಗ ಮಾತನಾಡಿ ಸಾಕು. ಒಂದೆರಡು ವಾರ ಬಿಟ್ಟು ಬನ್ನಿ, ಮತ್ತೆ ಮಾತನಾಡೋಣ’ ಎಂದು ಹೇಳಿ ಕಳುಹಿಸಿದೆ.

ಮಗಳನ್ನು ಮಾತನಾಡಿಸಿದಾಗ ಮೊದಲಿಗೆ ಏನು ಹೇಳಲೇ ಇಲ್ಲ, ಹಾಗೆಯೇ ಮೆಲ್ಲಗೆ ಮಾತನಾಡಿಸುತ್ತಾ ಕೇಳಿದಾಗ ಹೇಳಿದ್ದು: 'ನನ್ನ ಕೋಣೆಗೆ ಬಂದು ಬಗ್ಗಿ ಬಗ್ಗಿ ನೋಡುತ್ತಾರೆ. ಬಾಗಿಲ ಸಂದಿಯಿಂದ ಇಣುಕುತ್ತಾರೆ. ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಾರೆ, ನನ್ನ ಎಲ್ಲಾ ವಿಷಯಕ್ಕೂ ಇಂಟರ್ ಫಿಯರ್ ಆಗುತ್ತಾರೆ. ನನಗೇನು ಅಷ್ಟು ಗೊತ್ತಾಗೋಲ್ವಾ; ಎಲ್ಲದಕ್ಕೂ ಇವರಿಗೆ ಅನುಮಾನ, ಮಗಳ ಮೇಲೆ ಅಷ್ಟು ನಂಬಿಕೆ ಬೇಡವೇ?' ಎಂದು ಸಿಡುಕಿದಳು. ಒಂದೆರಡು ವಾರ ಬಿಟ್ಟು ಬಂದಾಗ ತಾಯಿ ಸಮಾಧಾನಾವಾಗಿದ್ದರು. ಮಗಳನ್ನು ಮಾತನಾಡಿಸಿದಾಗ ಅವಳು 'ಮೆಲ್ಲಗೆ ಪಾಪ ನನ್ನ ಒಳ್ಳೆಯದಕ್ಕೆ ಅಮ್ಮ ನನ್ನನ್ನು ಗಮನಿಸುವುದು ಅಲ್ಲವೇ?' ಎಂದಳು.

ಒಟ್ಟಾರೆ ನನಗರ್ಥವಾದದ್ದು ಇಷ್ಟು – ಒಂದು ವಯಸ್ಸಿಗೆ ಬಂದ ಮೇಲೆ ಹರಯದ ಮಕ್ಕಳಿಗೆ ಉಪದೇಶ ಬೇಡ. ಅವರಿಗೂ ಸ್ವಲ್ಪ ಜಾಗ ಕೊಟ್ಟಾಗ ಖಂಡಿತ ಅವರು ಸರಿಯಾದ ದಾರಿಯಲ್ಲಿಯೇ ನಡೆದುಕೊಳ್ಳುತ್ತಾರೆ. ಒಮ್ಮೆ ನಮ್ಮ ಹರಯದ ದಿನಗಳನ್ನು ನೆನಪಿಸಿಕೊಂಡಾಗ ನಮಗೆ ಅವರ ಮನದ ಭಾವನೆಗಳ ಅರಿವಾಗಬಹುದು.
ಮಂಜುಳಾ ರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT