ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯಾಗ್ರಹಕ್ಕೆ ನಾಟಕದ ಹಾದಿ

Last Updated 17 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಗ್ರಾಮೀಣ ಕರಕುಶಲ ಉತ್ಪನ್ನಗಳಿಗೆ ಸುಂಕ ವಿಧಿಸುವುದನ್ನು ವಿರೋಧಿಸುತ್ತಿರುವ ಪ್ರಸನ್ನ ಅವರು ಇದೀಗ ತಮ್ಮ ಹೋರಾಟಕ್ಕೆ ರಂಗಸ್ಪರ್ಶ ನೀಡಿದ್ದಾರೆ. ಇದೇ ಆಶಯದಿಂದ ಅವರು ರಚಿಸಿರುವ ‘ತಾಯವ್ವ’ ಸಂಗೀತ ನಾಟಕವು ನ.21ರಂದು (ಮಂಗಳವಾರ) ಪ್ರದರ್ಶನಗೊಳ್ಳುತ್ತಿದೆ.

ಜಿ.ಎಸ್‌.ಟಿ. ವಿರೋಧಿಸಿ ನ.21ರಂದು ಗ್ರಾಮಸೇವಾ ಸಂಘವೂ ‘ಕರ ನಿರಾಕರಣೆ ಸತ್ಯಾಗ್ರಹ’ ಸಂಘಟಿಸಿದೆ. ಸತ್ಯಾಗ್ರಹದ ಭಾಗವಾಗಿ ಈ ನಾಟಕ ರೂಪುಗೊಂಡಿದೆ. ‘ಉದ್ದೇಶ ಉಳ್ಳವರು ಸಿರಿಯಿಂದ ಬಿಡಿಸಿಕೊಂಡು ಸರಳ ಜೀವನ ನಡೆಸಬೇಕು, ಬಡವರು ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು’ ಎನ್ನುವುದು ಈ ನಾಟಕದ ಮೂಲ ಆಶಯ ಎನ್ನುತ್ತಾರೆ ಪ್ರಸನ್ನ.

ಬಡ ಚಮ್ಮಾರನ ಅಮ್ಮ ತಾಯವ್ವ ಹಾಗೂ ಬೂರ್ಜ್ವಾ ಈ ನಾಟಕದ ಪ್ರಮುಖ ಪಾತ್ರಗಳು. ಬೂರ್ಜ್ವಾ ಪಾತ್ರವು ಆರಂಭದಲ್ಲಿ ಸೂಟುಬೂಟಿನೊಂದಿಗೆ ಕಾಣಿಸಿಕೊಳ್ಳುತ್ತದೆ. ನಾಟಕ ಕೊನೆಯ ಘಟ್ಟ ಮುಟ್ಟುವ ಹೊತ್ತಿಗೆ ಸಿರಿತನವನ್ನು ಕಳಚಿಕೊಂಡಿರುತ್ತದೆ.

‘ಸಮಾಜದಲ್ಲಿ ಇನ್ನು ಮುಂದೆ ಸಾಂಸ್ಕೃತಿಕ ಹೋರಾಟಗಳು ಮುಖ್ಯ ಭೂಮಿಕೆ ವಹಿಸಲಿವೆ. ಸಾಂಸ್ಕೃತಿಕ ಹೋರಾಟದ ಸಣ್ಣ ದನಿಯ ಮೂಲಕವೇ ರಾಜಕೀಯದ ರಾಕ್ಷಸ ದನಿಯನ್ನು ಪ್ರಶ್ನಿಸಬೇಕಿದೆ. ಸತ್ಯಾಗ್ರಹದ ಭಾಗವಾಗಿ ಈ ನಾಟಕವನ್ನು ನ.21ರಂದು ಪ್ರದರ್ಶಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧೆಡೆ ಪ್ರದರ್ಶನ ನೀಡುವ ಆಲೋಚನೆ ಇದೆ’ ಎನ್ನುತ್ತಾರೆ ಪ್ರಸನ್ನ.

ನಾಟಕಕ್ಕೆ ಸಂಗೀತ ನೀಡಿರುವ ಗಾಯಕಿ ಎಂ.ಡಿ.ಪಲ್ಲವಿ ಅವರೇ ತಾಯವ್ವನ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ. ಗಾಯಕ ಚಿಂತನ್ ವಿಕಾಸ್ ಅವರು ಖಳನಾಗಿ, ಹಿರಿಯ ನಟ ಎಂ.ಸಿ.ಆನಂದ್ ಅವರು ಬೂರ್ಜ್ವಾ (ಇದು ಹಾಸ್ಯಗಾರನ ಪಾತ್ರವೂ ಹೌದು) ಆಗಿ ಅಭಿನಯಿಸುತ್ತಿದ್ದಾರೆ. ನಟಿ ಸಿತಾರಾ ಅವರದು ಹಾಸ್ಯಗಾರ್ತಿಯ ಪಾತ್ರ.

ವಸ್ತ್ರವಿನ್ಯಾಸದಲ್ಲಿ ಶೇಖರ್, ರಂಗವಿನ್ಯಾಸದಲ್ಲಿ ಶಶಿಧರ ಅಡಪ ಹಾಗೂ ಬೆಳಕಿನ ನಿರ್ವಹಣೆಯಲ್ಲಿ ಅನಾವರಣ ರವಿ ಅವರ ಪರಿಶ್ರಮವಿದೆ. ‘ಕೆಳವರ್ಗದ ಯುವಕರ ವಾದ್ಯ ತಂಡವು’ (ಬ್ಯಾಂಡ್) ನಾಟಕಕ್ಕೆ ಹಿನ್ನೆಲೆ ಸಂಗೀತ ಒದಗಿಸಿದೆ.

ಪ್ರವೇಶ ಶುಲ್ಕ ₹251. ನಾಟಕದ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾರುತ್ತಿಲ್ಲ. ‘₹250ರ ನಂತರದ ಶುಲ್ಕಕ್ಕೆ ತೆರಿಗೆ ಪಾವತಿಸಬೇಕು. ಆದರೆ ನಾವು ತೆರಿಗೆ ಪಾವತಿಸುತ್ತಿಲ್ಲ. ಇದೂ ಸಹ ಕರ ನಿರಾಕರಣೆ ಸತ್ಯಾಗ್ರಹದ ಒಂದು ಭಾಗ’ ಎನ್ನುತ್ತಾರೆ ಸಂಘಟಕರು. → v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT