ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವು-ನಂಬುಗೆಯ ತಕ್ಕಡಿ ತೂಗಲಿ ಸಮವಾಗಿ

Last Updated 17 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನಿನ್ನೆ ಮೊನ್ನೆವರೆಗೆ ಸೆರಗ್ಹಿಡಿದು ಹಿಂದೆ ಮುಂದೆ ಸುತ್ತಿ, ತನ್ನ ಅಮ್ಮನಿಗೆ ತಿಳಿದಷ್ಟು ಬೇರೆ ಯಾರಿಗೂ ತಿಳಿದಿಲ್ಲ ಎಂದುಕೊಂಡಿದ್ದ ಮಗು, ಈಗ ಎದೆಯತ್ತರಕ್ಕಿಂತ ಹೆಚ್ಚು ಬೆಳೆದು ‘ನಿನಗೇನು ಗೊತ್ತು?’ ಎಂಬ ಭಾವನೆ ಬೆಳೆಸಿಕೊಂಡದ್ದನ್ನು ಕಂಡಾಗ ಅದ್ಯಾವುದೋ ತಮಗೆ ನಿಲುಕದ ಪ್ರಪಂಚಕ್ಕೆ ಪ್ರವೇಶ ಪಡೆದಿದ್ದಾರೆ ಎಂಬ ಕಳವಳ ಹೆತ್ತವರಿಗೆ ಮೂಡುತ್ತದೆ. ಹೌದು, ಇಂದಿನ ಹದಿಹರೆಯದ ಜಗತ್ತೇ ಬೇರೆ - ಅವರ ಆಲೋಚನೆಗಳಿಗೆ ಸರಿಸಾಟಿಯಾಗದ ಯಾರಿಗೂ ಅಲ್ಲಿ ಪ್ರವೇಶವಿಲ್ಲ.

ಅಮ್ಮನದ್ದು ಹೇರ್ ಡೈಯಿಂಗ್, ಅವಳದ್ದೂ ಅದೇ - ಆದರೆ ಅದು ಹೇರ್ ಕಲರಿಂಗ್, ಬ್ಲೀಚಿಂಗ್. ಯಾವುದನ್ನು ಕಲಿಯುವುದಕ್ಕೂ ಯಾರ ಹಂಗೂ ಇಲ್ಲ. ಯೂಟ್ಯೂಬ್‌ನಂಥ ದ್ರೋಣಾಚಾರ‍್ಯರನ್ನು ಕಣ್ಣೆದುರು ಇಟ್ಟುಕೊಂಡು ಎಲ್ಲವನ್ನೂ ಕಲಿಯುವ ಏಕಲವ್ಯರು. ಹರಿದ ಅಂಗಿ, ಪ್ಯಾಂಟು ಭಿಕ್ಷುಕರಿಗೆಂದು ಅಮ್ಮ ಎತ್ತಿಟ್ಟಿದ್ದರೆ - ಅಂಥವುಗಳನ್ನು ಮಾಲ್‌ಗಳಲ್ಲಿ ‘ಇದೇ ಇಂದಿನ ಫ್ಯಾಷನ್’ ಎಂದು ಸಾವಿರಾರು ರೂಪಾಯಿ ಕೊಟ್ಟು ಖರೀದಿಸುವ ಆಧುನಿಕರು.

ಅಪ್ಪ, ಅಮ್ಮ ಇಂದು ಓದುವ ನ್ಯೂಸ್ ಪೇಪರಿನ ಸುದ್ದಿ ಅವರಿಗೆ ಎರಡು ದಿನದ ಹಿಂದೆಯೇ ಓದಿ ಬಿಟ್ಟ ಹಳಸಲು. ಇವತ್ತು ಇಂದೇನೋ ಓದಿ ಕಾಲಕ್ಕೆ ತಕ್ಕಂತೆ ‘ಅಪ್‌ಡೇಟ್’ ಆದವರು. ಜ್ಯೂಸು, ಮಿಲ್ಕ್‌ಶೇಕುಗಳಿಗಿಂತ ‘mojito’ವನ್ನು ಸವಿಯುವ ನಾಲಗೆ ಅವರದ್ದು. mojitoದಲ್ಲಿ ‘ಜೆ’ ಸೈಲೆಂಟ್. ಅದಕ್ಕೆ ‘ಮೊಯಿಟೋ’ ಎಂದೇ ಪ್ರನೌನ್ಸ್ ಮಾಡಬೇಕು ಎಂದು ಉಳಿದವರನ್ನು ಸೈಲೆಂಟಾಗಿಸುವ ಭಾಷಾನಿಪುಣರು.

ತನ್ನೆದುರು ಕೂತು ಕೈ ಬಾಯಿ ಹಾರಿಸಿ ಮಾತನಾಡುವವನಿಗಿಂತ fb, ವಾಟ್ಸ್ಯಾಪ್‌ಗಳಲ್ಲಿ ಎಮೋಜಿಗಳನ್ನು ಉಪಯೋಗಿಸಿ ಭಾವಪ್ರಪಂಚಕ್ಕೆ ತೆರೆದುಕೊಳ್ಳುವ ಮಂದಿಯೇ ಅವರ ನಿಜವಾದ ಸ್ನೇಹಿತರು. ಇಂದಿನ ‘ಕ್ಲೌಡ್ ಟೆಕ್ನಾಲಜಿ’ ಬಗ್ಗೆ ಸಮರ್ಥವಾಗಿ ಮಾತನಾಡುವ ಚತುರಮತಿಗಳು ಅವರಾಗಿದ್ದರೆ, ಪೋಷಕರು ಮಾತ್ರ ಕ್ಲೌಡ್ ಎಂದರೆ ‘ಮೋಡ’ ಎಂಬ ಅರ್ಥವನ್ನು ಬಿಟ್ಟು ಇನ್ನೂ ಹೊರಬಂದಿಲ್ಲ. ಅವರ ಮಾತಿನ ಸರಕೇ ಬೇರೆ - ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಮಷೀನ್ ಲಾಂಗ್ವೇಜ್, ಆಸ್ಕರ್ ವಿಜೇತ ಚಿತ್ರಗಳು, ಬಳಕೆಗೆ ಬಂದ ಹೊಸ ಹೊಸ ಆಪ್‌ಗಳು – ಹೀಗೆ...

ಈ ಹಿನ್ನೆಲೆಯಲ್ಲಿ, ಮುಗ್ಧತೆಯ ಪೊರೆಯನ್ನು ನಿಧಾನವಾಗಿ ಒಡೆದುಕೊಂಡು ಇಂಥ ಪ್ರಪಂಚವನ್ನು ಎದುರುಗೊಳ್ಳುವ, ಇನ್ನೇನು 2–3 ವರ್ಷಗಳಲ್ಲಿ ಹದಿಹರೆಯಕ್ಕೆ ಕಾಲಿಡುವ ಮಗಳು ನನ್ನ ಕಣ್ಣೆದುರಿಗಿದ್ದಾಳೆ. ‘ಇನ್ನೂ ಹತ್ತರ ಪೋರಿ’ ಎಂದು ನಾನು ಅಸಡ್ಡೆ ಮಾಡುವಂತಿಲ್ಲ. ಇಲ್ಲಿಯವರೆಗಿನ ನೆಮ್ಮದಿ ಇನ್ನು ಮುಂದೆಯೂ ಇರಬಹುದೆಂದು ನಾನೆಂದುಕೊಳ್ಳುವಂತಿಲ್ಲ. ಅವಳಲ್ಲಾಗುವ ಬದಲಾವಣೆಗೆ ತಕ್ಕಂತೆ ನಾನೂ ಬದಲಾಗಬೇಕು.

ಅದಕ್ಕೆ ಬೇಕಾದ ತಯಾರಿಯನ್ನೂ ಕೂಡ ನಾನೇ ಮಾಡಬೇಕು. ಆಕೆಯೊಂದಿಗೆ ಸರಿಸಮವಾಗಿ ಅಲ್ಲದಿದ್ದರೂ, ಕೊನೆ ಪಕ್ಷ ಅವಳು ಬಿದ್ದಾಗ ಅವಳನ್ನು ಎತ್ತಿಹಿಡಿಯುವ ಅಂತರದಲ್ಲಿ, ಅವಳ ಬೆನ್ನೆಲುಬಾಗಿ ಓಡುವುದನ್ನು ಕಲಿಯಬೇಕು. ಮೊದಲೆಲ್ಲಾ ಬಣ್ಣ ಬಣ್ಣದ ಬೊಟ್ಟುಗಳನ್ನು, ನನ್ನದೋ, ಅವಳದ್ದೋ ಒಟ್ಟಿನಲ್ಲಿ ನಾನಾ ಸೈಜಿನ ಬಳೆಗಳನ್ನು ಧರಿಸಿ ಸಂಭ್ರಮಿಸುತ್ತಿದ್ದವಳು ಈಗಲೂ ಹಾಗೇ ಮಾಡಲಿ ಎಂದು ನಾನು ನಿರೀಕ್ಷಿಸುವುದಿಲ್ಲ.

ಹಾಗೆಯೇ ಈಗ ಹಣೆಗೆ ಬೊಟ್ಟು ಇಡುತ್ತಿಲ್ಲ, ಕೈಗೆ ಬಳೆ ತೊಡುತ್ತಿಲ್ಲ ಎಂದು ಆಕ್ಷೇಪಿಸುವುದೂ ಇಲ್ಲ. ಹಾಗೆ ಆಕ್ಷೇಪಿಸುವುದೂ ಸರಿ ಎಂದು ನನಗೆ (ಮತ್ತು ಅವಳಿಗೂ) ತೋರುವುದಿಲ್ಲ. (ಇಂಥದೇ ಸಂಧಿಗ್ಧವನ್ನು, ಸುಮಾರು 20 ವರ್ಷಗಳ ಹಿಂದೆ ನನ್ನಮ್ಮನೂ - ಆದರೆ ಸ್ವಲ್ಪ ಭಿನ್ನ ರೀತಿಯಲ್ಲಿ - ಎದುರಿಸಿದ್ದಿರಬಹುದು. ರಿಲೇ ಓಟದಲ್ಲಿ ಒಬ್ಬರ ಕೈಯಿಂದ ಒಬ್ಬರ ಕೈಗೆ ಪಾಸಾಗುವ ಬ್ಯಾಟನ್‌ನಂತೆ ಇಂಥ Dilemmaಗಳು ಪೀಳಿಗೆಯಿಂದ ಪೀಳಿಗೆಗೆ ಪಾಸಾಗುತ್ತವೆ.) ಅದಕ್ಕೇ ಇರಬೇಕು (ಎಂದು ನಾನಂದುಕೊಂಡಿದ್ದೇನೆ) ಯಾವುದೇ ಕಾರ‍್ಯಕ್ರಮಗಳಿಗೆ ಹೊರಟಾಗ, ನಾ ಹೇಳುವ ಮುಂಚೆಯೇ ಬೊಟ್ಟು, ಬಳೆಗಳನ್ನು ತೊಟ್ಟು ರೆಡಿಯಾಗಿ ಬಿಡುತ್ತಾಳೆ. ಇಂಥ ಕೊಡುಕೊಳ್ಳುವಿಕೆಯಿಂದ ಭವಿಷ್ಯದಲ್ಲಿ ಎರಡು ಪೀಳಿಗೆಗಳ ಸಂಬಂಧ ಹುಳಿಯಾಗದಂತೆ ಕಾಪಿಟ್ಟುಕೊಳ್ಳಬಹುದೆಂದು ಅನಿಸುತ್ತದೆ.

ಅಕ್ಕಸಾಲಿಗನ ತಕ್ಕಡಿಯಲ್ಲಿ ಗುಲಗಂಜಿ ತೂಕವೂ ಬಹಳ ಪರಿಣಾಮ ಬೀರುವಂತೆ ಈ ಸಣ್ಣ ಸಣ್ಣ ಹೊಂದಾಣಿಕೆಗಳೂ ಸಂಬಂಧದಲ್ಲಿ ಕಂದಕಗಳೇಳದಂತೆ ರಕ್ಷಿಸುತ್ತವೆ. ‘ನನ್ನ ಮಕ್ಕಳು ಹಾಗೆ ಮಾಡುವುದಿಲ್ಲ’ ಎಂಬ ನಂಬಿಕೆ, ‘ನಾನು ಹೀಗೆ ಮಾಡಿದರೆ ಅಪ್ಪ ಅಮ್ಮನಿಗೆ ಇಷ್ಟವಾಗಲಿಕ್ಕಿಲ್ಲ’ ಎಂಬ ಅರಿವು ಪರಸ್ಪರರಲ್ಲಿ ಇದ್ದರೆ ಹೊಂದಾಣಿಕೆಯ ತಕ್ಕಡಿ ಸಮವಾಗಿ ತೂಗುತ್ತದೆ. ಆಗಲೇ ಎರಡು ಧ್ರುವಗಳನ್ನು ಜೋಡಿಸುವ ಸೇತುವೆ ತನ್ನಿಂತಾನೆ ನಿರ್ಮಾಣವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT