5

ಮಧುಮೇಹ ಹಾಗೂ ಮಹಿಳೆ

Published:
Updated:
ಮಧುಮೇಹ ಹಾಗೂ ಮಹಿಳೆ

ಮಧುಮೇಹ ಇಂದು ಜಾಗತಿಕ ಆರೋಗ್ಯ ಸಮಸ್ಯೆಯಾಗಿ ಇಡೀ ವಿಶ್ವವನ್ನು ಕಾಡುತ್ತಿದೆ. ಭಾರತವಂತೂ ಮಧುಮೇಹಿಗಳ ರಾಜಧಾನಿ ಎನ್ನುವುದು ಸರ್ವವಿದಿತ. 1991ರಿಂದಲೂ ವಿಶ್ವ ಆರೋಗ್ಯ ಸಂಸ್ಥೆ, ಐ.ಡಿ.ಎಫ್. (ಅಂತರರಾಷ್ಟ್ರೀಯ ಮಧುಮೇಹ ಸಂಸ್ಥೆ) ನೊಂದಿಗೆ ಸೇರಿ ಮಧುಮೇಹದ ಬಗ್ಗೆ ಮಾಹಿತಿ, ಶಿಕ್ಷಣ ನಿರ್ವಹಣೆಗೋಸ್ಕರವಾಗಿ ಪ್ರತಿಬಾರಿಯೂ ಒಂದೊಂದು ಘೋಷವಾಕ್ಯದೊಡನೆ ಆಚರಿಸುತ್ತಿದೆ. ಈ ವರ್ಷ – 2017ರ ಘೋಷವಾಕ್ಯ ‘ಮಹಿಳೆ ಹಾಗೂ ಮಧುಮೇಹ ಆರೋಗ್ಯಕರ ಭವಿಷ್ಯ ನಮ್ಮ ಹಕ್ಕು’.

ಇಂದು ವಿಶ್ವದಾದ್ಯಂತ ಸುಮಾರು 2ಕೋಟಿಗೂ ಹೆಚ್ಚು ಮಹಿಳೆಯರು ಮಧುಮೇಹದಿಂದ ಬಳಲುತ್ತಿದ್ದಾರೆ. 7ರಲ್ಲಿ ಒಬ್ಬ ಮಹಿಳೆಯ ಗರ್ಭಧಾರಣೆಯಲ್ಲಿ ಮಧುಮೇಹ ಉಂಟಾಗುತ್ತಿದೆ. ಸಂತಾನೋತ್ಪತ್ತಿ ವಯಸ್ಸಿನಲ್ಲಿ 5ರಲ್ಲಿ ಇಬ್ಬರು ಮಹಿಳೆಯರು ಮಧುಮೇಹದಿಂದ ಬಳಲುವಂತಾಗಿದೆ.

ಮಹಿಳೆಯರ ಸಾವಿಗೆ ಒಂಬತ್ತನೆಯ ಪ್ರಮುಖ ಕಾರಣ ಮಧುಮೇಹವೇ ಆಗಿದೆ. ಸಾಮಾನ್ಯ ಮಹಿಳೆಗಿಂತ 10ಪಟ್ಟು ಹೆಚ್ಚು ಹೃದಯ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಮಧುಮೇಹಿ ಮಹಿಳೆಯರಲ್ಲಿದೆ.

ಗರ್ಭಧಾರಣೆಯಲ್ಲಿ ಮಧುಮೇಹ ಉಂಟಾಗುವುದರಿಂದ ಗರ್ಭಪಾತ, ಜನ್ಮಜಾತ ವೈಕಲ್ಯಗಳು ಮಗುವಿನಲ್ಲಿ ಹೆಚ್ಚಾಗುವಿಕೆ, ಜೊತೆಗೆ ತಾಯಿ ಹಾಗೂ ಮಗು ಇಬ್ಬರಿಗೂ ಮುಂದೆ ಮಧುಮೇಹ ಬರುವ ಸಾಧ್ಯತೆ ಹೆಚ್ಚುತ್ತದೆ. ಆದ್ದರಿಂದ ಮಹಿಳೆಯು ಮಕ್ಕಳ ಹಾಗೂ ಇಡೀ ಕುಟುಂಬದ ದೀರ್ಘಾವದಿ ಆರೋಗ್ಯದ ಮೇಲೆ ಗುರುತರ ಪರಿಣಾಮ ಬೀರುತ್ತಾಳೆ.

ಪುರುಷಪ್ರದಾನ ಸಮಾಜದಲ್ಲಿ ಇಂದು ಮಹಿಳೆಯರಲ್ಲಿ ಮಧುಮೇಹ ಪತ್ತೆ ಹಚ್ಚುವಿಕೆ, ಸೂಕ್ತಚಿಕಿತ್ಸೆ ಹಾಗೂ ಮಧುಮೇಹ ತಡೆಗಟ್ಟಿ, ಒಟ್ಟಾರೆ ಮಹಿಳೆಯರ ಧನಾತ್ಮಕ ಆರೋಗ್ಯ ಕಾಪಾಡಿಕೊಳ್ಳಲು ತಡೆಯಾಗುತ್ತಿರುವುದನ್ನು ಮನಗಂಡು ಈ ಬಾರಿ ಮಧುಮೇಹ ದಿನಾಚರಣೆಯಲ್ಲಿ ಮಹಿಳೆಯನ್ನೇ ಕೇಂದ್ರಕರಿಸಲಾಗಿದೆ.

ಈ ಮೂಲಕ ಎಲ್ಲ ಮಧುಮೇಹಿ ಮಹಿಳೆಯರಿಗೂ ಸುಲಭ ಶಿಕ್ಷಣ ಹಾಗೂ ರಕ್ಷಣೆಯು ದೊರೆತು ಅವರ ಆರೋಗ್ಯಸ್ಥಿತಿಯಲ್ಲಿ ಉತ್ತಮ ಫಲಿತಾಂಶ ಕಂಡುಕೊಳ್ಳುವುದು ಇದರ ಉದ್ದೇಶ.

* ಮಹಿಳೆಯರಲ್ಲಿ ಮಧುಮೇಹ ತಡೆಗಟ್ಟಿ ಉತ್ತಮ ಆರೋಗ್ಯದ ಭವಿಷ್ಯಕ್ಕೆ ನಾಂದಿ ಹಾಡುವಲ್ಲಿ ನಾವೇನು ಮಾಡಬಹುದು?

ಮಹಿಳೆಯರು ಹಾಗೂ ಹದಿವಯಸ್ಸಿನ ಹುಡುಗಿಯರು ಉತ್ತಮ ದೈಹಿಕ ಚಟುವಟಿಕೆಯುಳ್ಳ ಆರೋಗ್ಯಪೂರ್ಣ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಕುಟುಂಬದಲ್ಲಿ ಸಕ್ಕರೆ ಕಾಯಿಲೆಯಿದ್ದರೆ ಹೆಚ್ಚು ಜಾಗರೂಕತೆಯಿಂದಿದ್ದು, ಸೊಂಟದ ಸುತ್ತಳತೆ 85 ಸೆಂ.ಮೀ. ಒಳಗಿರುವ ಹಾಗೆ ನೋಡಿಕೊಳ್ಳಬೇಕು. ಇಂದು ಮಹಿಳೆಯರಲ್ಲಿ ಬೊಜ್ಜಿನ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಅದರಲ್ಲಿಯೂ ಉದರದ ಬೊಜ್ಜು ಹೆಚ್ಚುತ್ತಿದ್ದು ಇದು ಮಧುಮೇಹಕ್ಕೆ ಮುಖ್ಯ ಕಾರಣವಾಗುತ್ತಿದೆ. ಇದಕ್ಕೆ ಕಾರಣಗಳು ಕಾರ್ಯದ ಒತ್ತಡದಿಂದ ಬೆಳಗಿನ ತಿಂಡಿ ಬಿಡುವುದು, ಜೊತೆಗೆ ಅನಿಯಮಿತ ಆಹಾರ ಸೇವನೆ, ಜಂಕ್‌ಫುಡ್ ಇನ್ನಿತರ ಅಪೌಷ್ಟಿಕ ಆಹಾರಸೇವನೆ ಇವೆಲ್ಲವೂ ದೀರ್ಘಾವಧಿಯಲ್ಲಿ ಬೊಜ್ಜು ಹಾಗೂ ಮಧುಮೇಹಕ್ಕೆ ಎಡೆಮಾಡಿಕೊಡುತ್ತದೆ.

ಹೆಚ್ಚಿನ ಮಹಿಳೆಯರಿಗಿಂದು ಶಾರೀರಿಕ ರಚನೆ, ಸಮತೂಕವೆಂದರೇನು, ನಿಯಮಿತ ಪೌಷ್ಟಿಕ ಆಹಾರದ ಲಾಭಗಳ ಬಗ್ಗೆ ಅರಿವಿಲ್ಲವಾದ್ದರಿಂದ ಅತಿ ತೂಕ ಹೊಂದಿ ಮಧುಮೇಹದಿಂದ ಬಳಲುವಂತಾಗುತ್ತಿದೆ. ಕೌಟುಂಬಿಕ ಕಾರ್ಯ, ಮಕ್ಕಳ ಲಾಲನೆ-ಪಾಲನೆ ದಿನಚರಿಯ ಬಗ್ಗೆ ಸದಾ ಚಿಂತಿಸುವ ಮಹಿಳೆಯರಲ್ಲಿ ತಮ್ಮ ಹೊಟ್ಟೆಯೊಳಗೆ ಏನು ಆಹಾರ ಸೇವಿಸಿದನೆಂಬ ಅರಿವೇ ಇರುವುದಿಲ್ಲ. ವೃತ್ತಿಪರ ಮಹಿಳೆಯರು ಉದ್ಯೋಗ, ಕುಟುಂಬ, ಇವೆಲ್ಲವನ್ನು ಸರಿದೂಗಿಸುವ ಹೆಣಗಾಟದಲ್ಲಿ ಹೆಚ್ಚು ಕ್ಯಾಂಟಿನ್ ಆಹಾರ ಸೇವಿಸುವಿಕೆ, ಬೇಕರಿ ತಿನಿಸುಗಳನ್ನು ಸೇವಿಸುವುದರಿಂದ ತೂಕ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಹದಿವಯಸ್ಸಿನವರಲ್ಲಿಯೂ ಹಾಗೂ ಪ್ರೌಢಾವಸ್ಥೆಯಲ್ಲಿಯೂ ಕಡಿಮೆ ದೈಹಿಕ ಚಟುವಟಿಕೆ, ಹೆಣ್ಣುಮಕ್ಕಳು ಕುಟುಂಬದಿಂದ ಹೊರಗಿರುವ ಪರಿಸ್ಥಿತಿ – ಅಂದರೆ ಉದ್ಯೋಗ, ಶಿಕ್ಷಣಕ್ಕಾಗಿ ಹಾಸ್ಟೆಲ್, ಪಿ.ಜಿ.ಗಳಲ್ಲಿ ವಾಸ – ಇವೆಲ್ಲವುಗಳಿಂದ ಹೆಚ್ಚು ಬೊಜ್ಜು ಶೇಖರಣೆಯಾಗಿ ಕ್ರಮೇಣ ಮಧುಮೇಹಕ್ಕೆ ಎಡೆಮಾಡಿಕೊಡುತ್ತಿದೆ.

ಶೇ.70ರಷ್ಟು ಸಂದರ್ಭಗಳಲ್ಲಿ ಟೈಪ್-2 ಮಧುಮೇಹವನ್ನು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದರಿಂದ ತಡೆಗಟ್ಟಬಹುದು. ಜೀವನಶೈಲಿ ಸುಧಾರಣೆಗೆ ಒತ್ತುಕೊಟ್ಟು ಮನೆಗೆಲಸಕ್ಕೆ ಹೊರತಾಗಿ ದಿನಾಲು ಕನಿಷ್ಠ 30 ನಿಮಿಷವಾದರೂ ವಾಕಿಂಗ್ ಮೊದಲಾದ ಉತ್ತಮ ದೈಹಿಕ ಚಟುವಟಿಕೆಗಳನ್ನು ಅತ್ಯಗತ್ಯವಾಗಿ ಮಾಡಬೇಕು.

ಗರ್ಭಧಾರಣೆ ಹಾಗೂ ಮಧುಮೇಹ: ವಿಶ್ವದಾದ್ಯಂತ ಗರ್ಭಧಾರಣೆ ಮಧುಮೇಹ ಬಾಧಿಸುವುದು ಶೇ. 3.5ರಷ್ಟಾದರೆ ಭಾರತದಲ್ಲಿ ಜಿ.ಡಿ.ಎಂ (ಗೆಸ್ಟೇಷನಲ್ ಡಯಾಬಿಟಿಸ್ ಮೆಲಿಟಸ್) ಪ್ರಮಾಣ ಶೇ. 16–18ರಷ್ಟು. ಗರ್ಭಧಾರಣೆಗೆ ಮೊದಲೇ ಮಧುಮೇಹವಿದ್ದಲ್ಲಿ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಸೂಕ್ತವಾಗಿ ನಿಯಂತ್ರಿಸಿಕೊಂಡು ಜೊತೆಗೆ ಆರು ವಾರಗಳ ಕಾಲ ಮೊದಲೇ ಫೋಲಿಕ್ ಆಸಿಡ್ ಮಾತ್ರೆಗಳನ್ನು ಸೇವಿಸಬೇಕು. ಆಗ ಗರ್ಭಧಾರಣೆಯಾದರೆ ಜನ್ಮಜಾತ ವೈಕಲ್ಯಗಳ ಸಂಭವ ಮಗುವಿನಲ್ಲುಂಟಾಗುವುದು ಕಡಿಮೆಯಾಗುತ್ತದೆ.

ಗರ್ಭಧಾರಣೆಯ ನಂತರವೂ ತಜ್ಞವೈದ್ಯರ ಸೂಕ್ತ ಸಲಹೆಯಮೇರೆಗೆ ನಿಯಮಿತ ಪ್ರಸವಪೂರ್ವ ತಪಾಸಣೆ ಮಾಡಿಸಿಕೊಂಡು, ಸೂಕ್ತ ಆಹಾರಕ್ರಮಗಳನ್ನು ಅಳವಡಿಸಿಕೊಂಡು, ನಿಯಮಿತ ದೈಹಿಕ ಚಟುವಟಿಕೆಗಳನ್ನು ಪಾಲಿಸಿ ಆರೋಗ್ಯಪೂರ್ಣ ಮಗುವನ್ನು ಹೊಂದಬಹುದು. ನಂತರ ಹುಟ್ಟುವ ಮಗುವಿಗೂ ಕನಿಷ್ಠ ಎರಡು ವರ್ಷಗಳ ಕಾಲ ಎದೆಹಾಲುಣಿಸಿ ನಂತರದ ದಿನಗಳಲ್ಲಿ ಬಾಲ್ಯದಿಂದಲೇ ಉತ್ತಮ ಆಹಾರಪದ್ಧತಿಯನ್ನು ಅಳವಡಿಸಿಕೊಟ್ಟರೆ ಮಗುವು ಕೂಡ ಉತ್ತಮ ಆರೋಗ್ಯವನ್ನು ಹೊಂದುತ್ತದೆ.

ಮಧುಮೇಹ ಮಹಿಳೆಯರಲ್ಲಿ ಪತ್ತೆಯಾದಲ್ಲಿ ಸೂಕ್ತ ಔಷಧಗಳ ಬಳಕೆ ಹಾಗೂ ಈ ಬಗ್ಗೆ ಮಾಹಿತಿ ಶಿಕ್ಷಣ ದೊರೆತು ಸ್ವಯಂ ನಿರ್ವಹಣೆ ಮಾಡಿಕೊಳ್ಳುವುದರ ಬಗ್ಗೆ ತಿಳಿದಿರಬೇಕು. ಮಧುಮೇಹದಿಂದ ಹೃದಯ, ಮೂತ್ರಪಿಂಡ, ಕಣ್ಣಿನ ಅಕ್ಷಿಪಟಲ, ಕಾಲಿನ ಸೂಕ್ಷ್ಮ ರಕ್ತನಾಳಗಳು ಇತ್ಯಾದಿಗಳ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿದಿದ್ದು ನಿಯಮಿತ ವೈದ್ಯಕೀಯ ತಪಾಸಣೆ ಹಾಗೂ ಸಲಹೆಗಳಿಂದ, ಮಹಿಳೆಯರು ಮಧುಮೇಹದೊಂದಿಗೂ ಉತ್ತಮ ಜೀವನವನ್ನು ನಡೆಸಬಹುದು.

*

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry