7

ಅಪಸ್ಮಾರ - ಇರಲಿ ಅರಿವು

Published:
Updated:
ಅಪಸ್ಮಾರ - ಇರಲಿ ಅರಿವು

ಅಪಸ್ಮಾರವು ಅನಾದಿಕಾಲದಿಂದಲೂ ಮನುಕುಲಕ್ಕೆ ತಿಳಿದಿರುವಂತಹ ವ್ಯಾಧಿ. ಮೊದಮೊದಲು ಅದಕ್ಕೆ ಅಗೋಚರಶಕ್ತಿಗಳು ಕಾರಣವೆಂದು ತಿಳಿದು, ಧಾರ್ಮಿಕ ಆಚರಣೆಗಳ ಮುಖಾಂತರ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿತ್ತು. ರೋಗಗ್ರಸ್ತರನ್ನು ಸಾಮಾಜಿಕವಾಗಿ ಕೀಳಾಗಿ ಕಾಣಲಾಗುತ್ತಿತ್ತು. ಆದರೆ, ಕ್ರಿ.ಪೂ. 4500-1500ರಲ್ಲಿಯೇ ಭಾರತೀಯ ವೈದ್ಯಕೀಯ ಪದ್ಧತಿಗಳಲ್ಲಿ ಮೂರ್ಛೆರೋಗವು ಜೈವಿಕ ಹಾಗೂ ಮೆದುಳಿನ ರಚನಾತ್ಮಕ ತೊಂದರೆಯಿಂದ ಉಂಟಾಗುತ್ತದೆ ಎಂಬ ಪರಿಕಲ್ಪನೆಯಿತ್ತು.

ಚರಕಸಂಹಿತೆಯಲ್ಲಿ ಮೂರ್ಛೆರೋಗವನ್ನು ಅಪಸ್ಮಾರವೆಂದು ಸಂಬೋಧಿಸಲಾಗಿದೆ. ಅದರರ್ಥ ಪ್ರಜ್ಞೆ ತಪ್ಪುವುದೆಂದು. ತದನಂತರ ಪಶ್ಚಿಮದಲ್ಲಿ, ಹಿಪೊಕ್ರೆಟಿಸ್‌ ತನ್ನ ಸಿದ್ಧಾಂತದಲ್ಲಿಯೂ ಅಪಸ್ಮಾರಕ್ಕೆ ಕಾರಣವಾಗುವ ವೈಜ್ಞಾನಿಕ ತಳಹದಿಯ ಬಗ್ಗೆ ಉಲ್ಲೇಖಿಸಿದ್ದಾನೆ.

19ನೇ ಶತಮಾನದ ಆದಿಯಲ್ಲಿ, ಲಂಡನ್‌ನ ನರರೋಗತಜ್ಞ ಹ್ಯುಲಿಂಗ್ಸ್ ಜಾಕ್ಸನ್‌ರವರು ಮೆದುಳಿನಲ್ಲಿ ಹಠಾತ್ತಾಗಿ ಉಂಟಾಗುವ ವಿದ್ಯುತ್‌ ಸಂಕೇತಗಳ ಪ್ರವಾಹದಿಂದಾಗಿ ಅಪಸ್ಮಾರ ಉಂಟಾಗುತ್ತದೆ ಎಂದು ಸಂಶೋಧನೆಯ ಮೂಲಕ ಸಾಬೀತುಪಡಿಸಿದರು.

1920ರಲ್ಲಿ, ಜರ್ಮನಿಯ ಮನೋರೋಗತಜ್ಞ ಹ್ಯಾನ್ಸ್ ಬರ್ಗರ್, ಮೆದುಳಿನಿಂದ ಉತ್ಪತ್ತಿಯಾಗುವ ವಿದ್ಯುತ್ ಸಂಕೇತಗಳನ್ನು ದಾಖಲಿಸಿಕೊಳ್ಳುವ ವ್ಯವಸ್ಥೆಯನ್ನು ಕಂಡುಹಿಡಿದ (ಇಲೆಕ್ಟ್ರೋಎನ್ಸೆಫಲೋಗ್ರಾಫಿ). ಇದರಿಂದ ಅಪಸ್ಮಾರದ ರೋಗನಿರ್ಧಾರ ಸುಲಭವಾಯಿತು.

20ನೇ ಶತಮಾನದ ಪ್ರಥಮಾರ್ಧದಲ್ಲಿ, ಫಿನೋಬಾರ್ಬಿಟೋನ್ (Phenobarbitone) ಹಾಗೂ ಫೆನಿಟೋಯಿನ್ (Phenytoin) ಎಂಬ ಔಷಧಗಳ ಆವಿಷ್ಕಾರದಿಂದ ಅಪಸ್ಮಾರದ ಚಿಕಿತ್ಸೆ ಇನ್ನಷ್ಟು ಸುಲಭವಾಯಿತು. 20ನೇ ಶತಮಾನದ ಉತ್ತರಾರ್ಧದಲ್ಲಿ, ಸಿ.ಟಿ. ಸ್ಕ್ಯಾನ್, ಎಂಆರ್‌ಐ, ಸ್ಪೆಕ್ಟ್ ಮುಂತಾದ ಸ್ಕ್ಯಾನಿಂಗ್ ಪ್ರಕಾರಗಳಿಂದ ಎಲ್ಲ ರೀತಿಯ ಅಪಸ್ಮಾರಗಳನ್ನು ಸುಲಭವಾಗಿ ಹಾಗೂ ಕ್ಷಿಪ್ರವಾಗಿ ಕಂಡುಹಿಡಿಯಬಹುದಾಗಿದೆ.

ಭಾರತದಲ್ಲಿ ಒಂದು ಅಂದಾಜಿನ ಪ್ರಕಾರ ಒಂದು ಕೋಟಿ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸುಮಾರು ಶೇ1.9ರಷ್ಟು ಹಾಗೂ ನಗರಗಳಲ್ಲಿ ಶೇ.0.6 ಜನರಲ್ಲಿ ಮೂರ್ಛೆರೋಗವಿದೆ. ಬೆಂಗಳೂರಿನ ಸುತ್ತಮುತ್ತಲಿನ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಸಿದ ಬರ್ನ್ಸ್‌ ಸಮೀಕ್ಷೆಯ ಪ್ರಕಾರ 1000ಕ್ಕೆ 11.9 ಜನರು ಮೂರ್ಛೆರೋಗದಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಸಾಮಾನ್ಯವಾಗಿ ಸಂಪೂರ್ಣ ದೇಹದ ಮೇಲೆ ಪರಿಣಾಮ ಬೀರುವ ವಿಧ: ಈ ಬಗೆಯಲ್ಲಿ, ಕೈ ಕಾಲು ಹಾಗೂ ಸಂಪೂರ್ಣ ದೇಹ ಸ್ವಾಧೀನ ಕಳೆದುಕೊಂಡು, ವಿಪರೀತ ಚಲನೆ ಉಂಟಾಗುತ್ತದೆ. ಕಣ್ಣುಗುಡ್ಡೆಗಳು ಮೇಲಕ್ಕೆ ಹೊರಳಿ, ನಾಲಿಗೆ ಕಚ್ಚಿಕೊಳ್ಳುವ ಸಾಧ್ಯತೆಯಿರುತ್ತದೆ. ಪ್ರಜ್ಞಾಹೀನ ಸ್ಥಿತಿಯಲ್ಲೇ, ಮಲ-ಮೂತ್ರಗಳ ವಿಸರ್ಜನೆಯಾಗಬಹುದು. ವ್ಯಕ್ತಿಗೆ ಕೆಲವು ಸಮಯದವರೆಗೆ ಗೊಂದಲ ಉಂಟಾಗಬಹುದು.

ದೇಹದ ಒಂದು ಒಂದು ಭಾಗವನ್ನು ಮಾತ್ರ ಪರಿಣಾಮ ಬೀರುವ ವಿಧ ಈ ಬಗೆಯಲ್ಲಿ ದೇಹದ ಒಂದು ಭಾಗ ಮಾತ್ರ ವಿಪರೀತ ಚಲನೆಯಲ್ಲಿರುತ್ತದೆ.

ಅಪೂರ್ಣ ವಿಧ: ಈ ಬಗೆಯಲ್ಲಿ ವ್ಯಕ್ತಿಯ ನಡೆವಳಿಕೆ ವಿಚಿತ್ರವಾಗರುತ್ತದೆ. ಆತ ಆ ಸಮಯದಲ್ಲಿ ಕಳೆದುಹೋದವರಂತೆ ನಟಿಸಬಹುದು, ಅಲ್ಲಿಂದ ಎದ್ದು ಓಡಿ ಹೋಗಬಹುದು, ಇಲ್ಲವೇ ಸಾಮಾಜಿಕವಾಗಿ ಅಸಂಬದ್ಧವಾಗಿ ನಡೆದುಕೊಳ್ಳಬಹುದು.

ಜ್ವರಕ್ಕೆ ಸಂಬಂಧಿಸಿದ ಅಪಸ್ಮಾರ ((Febri*e Seizure): ಇದು ಸರ್ವೇ ಸಾಮಾನ್ಯವಾಗಿದ್ದು, ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಜ್ವರದಿಂದ ದೇಹದ ಉಷ್ಣತೆ ಹೆಚ್ಚಿದಾಗ ಮೂರ್ಛೆರೋಗ ಕಾಣಿಸಿಕೊಳ್ಳುತ್ತದೆ. ಜ್ವರವಿದ್ದಾಗ ಕೂಡಲೇ ತಾಪಮಾನವನ್ನು ನಿಯಂತ್ರಣಕ್ಕೆ ತರುವುದರಿಂದ ಮೂರ್ಛೆಯನ್ನು ನಿಯಂತ್ರಿಸಬಹುದು.

ಬಿಸಿನೀರಿನಿಂದಾಗುವ ಮೂರ್ಛೆರೋಗ (Hot water Epi*epsy): ಇದೊಂದು ವಿಶಿಷ್ಟ ರೀತಿಯ ಮೂರ್ಛೆರೋಗವಾಗಿದ್ದು, ವ್ಯಕ್ತಿಯು ಬಿಸಿನೀರಿನಿಂದ ತಲೆಸ್ನಾನ ಮಾಡಿದಾಗ ಮೂರ್ಛೆಹೋಗುತ್ತಾನೆ. ಇದು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಕಂಡುಬಂದಿದ್ದು, ಮೊದಲ ಬಾರಿಗೆ, ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯು ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿದೆ. ಇದಕ್ಕೆ ನಿಖರವಾದ ಕಾರಣಗಳಿನ್ನೂ ತಿಳಿದುಬಂದಿಲ್ಲವಾದರೂ, ಜೆನೆಟಿಕ್ ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ ಎನ್ನಿಸುತ್ತದೆ.

ಗುಣ–ಲಕ್ಷಣಗಳು: ಬಿಸಿನೀರಿನಿಂದ ತಲೆಸ್ನಾನ ಮಾಡಿದಾಗ ಪ್ರಜ್ಞೆ ತಪ್ಪುವುದು, ಕೈಕಾಲುಗಳ ವಿಪರೀತ ಚಲನೆ, ಅಸ್ವಾಭಾವಿಕ ನಡೆವಳಿಕೆ ಮುಂತಾದವು ಕಂಡುಬರುತ್ತದೆ. ಆ ಘಟನೆಯ ಬಗ್ಗೆ ನೆನಪೂ ಇಲ್ಲದಿರಬಹುದು. ಈ ಕಾಯಿಲೆಯಿದ್ದವರು, ಬಿಸಿನೀರಿನಿಂದ ತಲೆಯ ಮೇಲೆ ಸ್ನಾನ ಮಾಡದೇ ಇರುವುದರಿಂದ ಹಾಗೂ ಕೆಲವು ಔಷಧೋಪಚಾರಗಳಿಂದ ನಿಯಂತ್ರಣದಲ್ಲಿಡಬಹುದು.

ವ್ಯಕ್ತಿಯು ಮೂರ್ಛೆ ಹೋಗಿದ್ದನ್ನು ಕಂಡಾಗ ಏನು ಮಾಡಬೇಕು?

* ವ್ಯಕ್ತಿಯನ್ನು ಅಪಾಯಕಾರಿ ಜಾಗ/ವಸ್ತುಗಳಿಂದ (ಬೆಂಕಿ, ಎತ್ತರದ ಪ್ರದೇಶ, ರಸ್ತೆ, ಇತ್ಯಾದಿ). ದೂರ ಕೊಂಡೊಯ್ಯಿರಿ ಹಾಗೂ ಇನ್ನಿತರರನ್ನು ಸಹಾಯಕ್ಕಾಗಿ ಕರೆಯಿರಿ.

* ಲಭ್ಯವಿರುವ ಮೆತ್ತನೆಯ ವಸ್ತುವಿನ ಮೇಲೆ ವ್ಯಕ್ತಿಯ ತಲೆಯನ್ನಿರಿಸಿ.

* ವ್ಯಕ್ತಿಯ ಸುತ್ತಲೂ ಗುಂಪುಗೂಡಬೇಡಿ, ಸರಿಯಾಗಿ ಗಾಳಿಯಾಡಲು ಅವಕಾಶ ಮಾಡಿಕೊಡಿ.

* ಕನ್ನಡಕವಿದ್ದರೆ ತೆಗೆಯಿರಿ. ಬಟ್ಟೆಗಳು ಬಿಗಿಯಾಗಿದ್ದರೆ ಸಡಿಲಗೊಳಿಸಿ.

* ವ್ಯಕ್ತಿಯು ನಾಲಿಗೆ ಕಚ್ಚಿಕೊಳ್ಳುವುದನ್ನು ತಪ್ಪಿಸುವ ಸಲುವಾಗಿ ಅವನ ಬಾಯಲ್ಲಿ ಬಟ್ಟೆ ಅಥವಾ ಕೈಯನ್ನು ತುರುಕಬೇಡಿ.

* ವ್ಯಕ್ತಿಯು ಚೇತರಿಸಿಕೊಂಡ ನಂತರ, ಆತನ ಜೊತೆಯೇ ಇದ್ದು ಧೈರ್ಯ ತುಂಬಿ.

* ತಕ್ಷಣವೇ ವೈದ್ಯಕೀಯ ಸಹಾಯಕ್ಕಾಗಿ ಕರೆ ಮಾಡಿ.

* ಲೋಹದ ವಸ್ತುಗಳಿಂದ ಫಿಟ್ಸ್ ನಿಲ್ಲುವುದಿಲ್ಲ. ಹಾಗಾಗಿ ಕೀಲಿ, ರಾಡ್ ಮುಂತಾದವುಗಳನ್ನು ವ್ಯಕ್ತಿಯ ಕೈಗೆ ಕೊಡಬೇಡಿ.

* ಫಿಟ್ಸ್‌ನ್ನು ನಿಯಂತ್ರಿಸಲು ವ್ಯಕ್ತಿಯ ಮೇಲೆ ಬಲ ಪ್ರಯೋಗ ಮಾಡಬೇಡಿ

ಮೂರ್ಛೆರೋಗಕ್ಕೆ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಏನಾಗುವುದು?

ಪದೇ ಪದೇ ಮೂರ್ಛೆ ಹೋಗುವುದರಿಂದ, ಮೆದುಳು ಹಾಗೂ ನರಮಂಡಲಕ್ಕೆ ರಚನಾತ್ಮಕ ಊನತೆ ಉಂಟಾಗುವುದರಿಂದ, ಜ್ಞಾಪಕಶಕ್ತಿ, ಯೋಚನೆ ಮಾಡುವ ವೇಗ ಕುಂಠಿತಗೊಳ್ಳುತ್ತದೆ. ಇದರಿಂದ ಶೈಕ್ಷಣಿಕ ಹಿನ್ನಡೆತ, ಕಾರ್ಯಕ್ಷೇತ್ರದಲ್ಲಿ ತೊಂದರೆಗಳು, ಆತ್ಮಹತ್ಯೆ ಹಾಗೂ ಅಪಘಾತಗಳು ಹೆಚ್ಚುತ್ತವೆ. ಮೂರ್ಛೆರೋಗದಿಂದ ಬಳಲುತ್ತಿರುವವರಲ್ಲಿ ಶೇ.30 ರಷ್ಟು ಜನರಲ್ಲಿ ಮನೋರೋಗಗಳು ಕಾಣಿಸಿಕೊಳ್ಳುತ್ತವೆ. ಅವು ಖಿನ್ನತೆ, ಆತಂಕದ ಕಾಯಿಲೆಗಳಿಂದ ಸೈಕೋಸಿಸ್‌ನಂತಹ ಮಾರಕ ಕಾಯಿಲೆಗಳೂ ಆಗಿರಬಹುದು.

ಮೂಳೆ ಸವೆತ, ಮುರಿತ, ನ್ಯುಮೋನಿಯ ಇನ್ನೂ ಮುಂತಾದ ಕಾಯಿಲೆಗಳು ಉಂಟಾಗಬಹುದು. ಚಿಕ್ಕ ಮಕ್ಕಳಲ್ಲಿ ಮೂರ್ಛೆರೋಗವನ್ನು ನಿಯಂತ್ರಣದಲ್ಲಿಡದಿದ್ದಲ್ಲಿ, ಮೆದುಳಿನ ಬೆಳವಣಿಗೆ ಕುಂಠಿತವಾಗಿ ಬುದ್ಧಿಮಾಂದ್ಯತೆ ಉಂಟಾಗಬಹುದು. ಮಾತ್ರೆಗಳನ್ನು ಸೂಚನೆಯಂತೆ, ತೆಗೆದುಕೊಳ್ಳದಿದ್ದರೆ ನಿಯಮಿತ ಅವಧಿಗಿಂತ ಹೆಚ್ಚು ದಿನಗಳವರೆಗೆ ಮಾತ್ರೆಗಳನ್ನು ಸೇವಿಸಬೇಕಾಗಬಹುದು. ಹೀಗಾಗಿ, ಮಾತ್ರೆಗಳ ಅಡ್ಡಪರಿಣಾಮಗಳೂ ಹೆಚ್ಚಾಗಬಹುದು.

ಆಧುನಿಕ ಚಿಕಿತ್ಸೆಗಳು

ಕಿಟೋಜೆನಿಕ್ ಆಹಾರ ಪದ್ಧತಿ (Hot water Epi*epsy): ಚಿಕಿತ್ಸೆಗೆ ಸ್ಪಂದಿಸದ ಅಪಸ್ಮಾರದ ಪ್ರಕರಣಗಳಲ್ಲಿ, ಕಿಟೋಜೆನಿಕ್ ಆಹಾರ ಪದ್ಧತಿಯನ್ನು ಅನುಸರಿಸಲು ಸೂಚಿಸಲಾಗುತ್ತದೆ. ಈ ಪದ್ಧತಿಯಲ್ಲಿ ಹೆಚ್ಚಿನ ಕೊಬ್ಬಿನಂಶ, ಕಡಿಮೆ ಶರ್ಕರಪಿಷ್ಟ (ಕಾರ್ಬೋಹೈಡ್ರೆಟ್) ಹಾಗೂ ನಿಯಂತ್ರಿತ ಪ್ರಮಾಣದಲ್ಲಿ ಪ್ರೋಟೀನ್ ಸೇವಿಸಲಾಗುತ್ತದೆ. ಒಂದು ಶತಮಾನದಿಂದ, ಈ ಆಹಾರಪದ್ಧತಿಯ ಅರಿವಿದ್ದರೂ, ಚಿಕಿತ್ಸೆಗೆ ಸ್ಪಂದಿಸದ ಮೂರ್ಛೆರೋಗದ ಚಿಕಿತ್ಸೆಗೆ ಇದರ ಉಪಯೋಗ ಇತ್ತೀಚಿಗಷ್ಟೆ ಪ್ರವರ್ಧಮಾನಕ್ಕೆ ಬರುತ್ತಿದೆ. ಈ ಆಹಾರಪದ್ಧತಿಯು, ಅತ್ಯಂತ ಕಟ್ಟುನಿಟ್ಟಾಗಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿಯೇ ಅನುಸರಿಸಬೇಕಾಗುತ್ತದೆ. ಅನೇಕ ಸಂಶೋಧನೆಗಳು, ಚಿಕಿತ್ಸೆಗೆ ಸ್ಪಂದಿಸದ ಮೂರ್ಛೆರೋಗವು ಕಿಟೋಜೆನಿಕ್ ಆಹಾರಪದ್ಧತಿಗೆ ಸ್ಪಂದಿಸುತ್ತದೆ ಎಂದು ರುಜುವಾತು ಮಾಡಿವೆ.

ಮೆದುಳಿನ ಶಸ್ತ್ರಚಿಕಿತ್ಸೆ: ವಿದ್ಯುತ್ ಸಂಕೇತ ಅನಿಯಂತ್ರಿತವಾಗಿ ಉತ್ಪತ್ತಿಯಾಗುತ್ತಿರುವ ಮೆದುಳಿನ ಭಾಗವನ್ನು (Epi*epstogenic Focus) ಶಸ್ತ್ರಚಿಕಿತ್ಸೆಯ ಮೂಲಕ ಶಾಂತಗೊಳಿಸಲಾಗುತ್ತದೆ. ಹೀಗಾಗಿ ಮೂರ್ಛೆರೋಗದ ಸಂಕೀರ್ಣತೆ ಹಾಗೂ ಅವಧಿ ಕಡಿಮೆಯಾಗುತ್ತದೆ. ಶಸ್ತ್ರಚಿಕಿತ್ಸೆ ಸಂಕೀರ್ಣವಾಗಿರುವುದರಿಂದ ಹಾಗೂ ವಿಶೇಷ ಪರಿಣತಿಯ ಅವಶ್ಯಕತೆಯಿರುವುದರಿಂದ ಈ ಚಿಕಿತ್ಸಾ ವಿಧಾನವನ್ನು ಕೊನೆಯ ಅಸ್ತ್ರವಾಗಿ ಮಾತ್ರ ಬಳಸಲಾಗುತ್ತದೆ.

ಚಿಕಿತ್ಸೆಯ ಅಂತರ (Treatment Gap): ಭಾರತೀಯ ವೈದ್ಯಕೀಯ ಕ್ಷೇತ್ರ ಇಂದು ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ರಾಷ್ಟ್ರಗಳ ಪೈಕಿ ಒಂದಾಗಿದೆ. ಆದರೆ ಅಪಸ್ಮಾರದಂತಹ ಸಾಮಾನ್ಯ ಹಾಗೂ ಅನಾದಿ ಕಾಲದಿಂದಲೂ ಇರುವಂತಹ ರೋಗದ ಬಗ್ಗೆ ಜನರಲ್ಲಿ ಇನ್ನೂ ಸಂಪೂರ್ಣ ಮಾಹಿತಿ ಹಾಗೂ ಚಿಕಿತ್ಸೆ ತೆಗೆದುಕೊಳ್ಳುವ ಮನೋಭಾವವಿಲ್ಲದಿರುವುದು ದುರಂತ. ಇತ್ತೀಚೆಗೆ ಮಾಧ್ಯಮಗಳಲ್ಲಿ ಸುದ್ದಿ ಮಾಡುವ (ಜೈಕಾ ವೈರಸ್, ಇಬೊಲಾ ವೈರಸ್, ಬ್ಲೂವೇಲ್ ಚಾಲೆಂಜ್) ರೋಗಗಳಿಗೆ ಮಾತ್ರವೇ ಸರ್ಕಾರ, ಮಾಧ್ಯಮ ಹಾಗೂ ಜನತೆಯಿಂದ ಗಮನ ದೊರೆಯುತ್ತಿದೆ. ಅತಿ ಗಂಭೀರವಾದ ಸಮಸ್ಯೆಗಳಿಗೆ ತಕ್ಕ ಮಟ್ಟಿನ ಸ್ಪಂದನೆ ಸಿಗುತ್ತಿಲ್ಲ.

ಭಾರತದಲ್ಲಿ, ಅಪಸ್ಮಾರದ ಪ್ರಕರಣಗಳಲ್ಲಿ ಚಿಕಿತ್ಸೆಯ ಅಂತರ ಅತಿಯಾಗಿದೆ. ಗ್ರಾಮೀಣ ಭಾಗದಲ್ಲಿ ಇದುವರೆಗೂ ತೃಪ್ತಿದಾಯಕ ಚಿಕಿತ್ಸಾ ಹಾಗೂ ಮಾಹಿತಿ ಸೇವೆಗಳು ಲಭ್ಯವಿಲ್ಲ. ಗ್ರಾಮೀಣ ಭಾಗದಲ್ಲಿ ಚಿಕಿತ್ಸೆಯ ಅಂತರ ಅತಿ ಹೆಚ್ಚು ಅಂದರೆ ಶೇ.90ರಷ್ಟು ಹಾಗೂ ನಗರಗಳಲ್ಲಿ ಪ್ರದೇಶಗಳಲ್ಲಿ ಶೇ.22 ರಷ್ಟಿದೆ.

ಇತ್ತೀಚಿಗೆ, ಸರಕಾರವು ಎಲ್ಲ ಪ್ರಾಥಮಿಕ ಆರೋಗ್ಯ ಕೆಂದ್ರಗಳಲ್ಲಿ ಅಪಸ್ಮಾರದ ಚಿಕಿತ್ಸೆಗೆ ಅವಶ್ಯಕವಿರುವ ಮೂಲಭೂತ ಔಷಧಗಳನ್ನು ಒದಗಿಸುತ್ತಿದೆಯಾದರೂ, ಇನ್ನೂ ಸಮರ್ಪಕವಾಗಿ, ಆಧುನಿಕ ಔಷಧೋಪಚಾರ ಹಾಗೂ ಸಮಾಲೋಚನೆ ಒದಗಿಸಲು ಕ್ರಮ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ, ಖಾಸಗಿ ಆರೋಗ್ಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮತ್ತು ಸರ್ಕಾರೇತರ ಸಂಘ-ಸಂಸ್ಥೆಗಳ ಬೆಂಬಲದೊಂದಿಗೆ ಅಪಸ್ಮಾರದ ಬಗ್ಗೆ ಜಾಗೃತಿ ಹಾಗೂ ಸೂಕ್ತ ಚಿಕಿತ್ಸೆಯನ್ನು ಎಲ್ಲೆಡೆ ದೊರೆಯುವಂತೆ ಮಾಡಬೇಕು.

ಅಪಸ್ಮಾರಕ್ಕೆ ಕಾರಣಗಳು: ಮೆದುಳಿನ ಬೆಳವಣಿಗೆ ಸರಿಯಾಗಿ ಆಗಿಲ್ಲದಿರುವದು, ಗಡ್ಡೆ ಬೆಳೆದಿರುವುದು, ಮೆದುಳಿನ ನಂಜು, ಮೆದುಳಿನ ಅಂಗಾಂಶಕ್ಕೆ ಗಾಯವಾದಾಗ, ದೇಹದಲ್ಲಿ ಲವಣಾಂಶಗಳ ಮಟ್ಟದಲ್ಲಿ ಏರುಪೇರಾದಾಗ, ಅತಿಯಾಗಿ ಜ್ವರ ಬಂದಾಗ ಹಾಗೂ ಇನ್ನಿತರ ಅನೇಕ ಕಾರಣಗಳಿವೆ. ಆದರೆ ಸುಮಾರು ಪ್ರಕರಣಗಳಲ್ಲಿ ಕಾರಣವನ್ನು ಪತ್ತೆ ಹಚ್ಚಲಾಗುವುದಿಲ್ಲ

ಮೊದಲ ಬಾರಿಗೆ ಮೂರ್ಛೆರೋಗ ಬಂದಾಗ

* ಅಸಡ್ಡೆ ಮಾಡದೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಕೆಲವೊಮ್ಮೆ ಮೂರ್ಛೆರೋಗವು ಗಂಭೀರ ಕಾಯಿಲೆಯ ಮುನ್ಸೂಚನೆಯಾಗಿರುತ್ತದೆ. (ಮೆದುಳಿನ ಟ್ಯೂಮರ್ ಇತ್ಯಾದಿ)

* ಸೂಚಿಸಿದ ಎಲ್ಲ ಪರೀಕ್ಷೆ, ಸ್ಕ್ಯಾನ್‌ಗಳನ್ನು ಮಾಡಿಸಿ. (ಸಿಟಿ, ಎಂಆರ್‌ಐ, ಈಈಜಿ)

* ವೈದ್ಯರ ಸೂಚನೆಯಂತೆ ಮಾತ್ರೆಗಳನ್ನು ಕಟ್ಟುನಿಟ್ಟಾಗಿ ತೆಗೆದುಕೊಳ್ಳಿ.

*–ಡಾ. ಶಿವಾನಂದ ಬಿ. ಹಿರೇಮಠ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry