7

ಪಾಕ್‌ ಆಕ್ರಮಿತ ಕಾಶ್ಮೀರ ಫಾರೂಕ್‌ ಮಾತು ಅರ್ಥಹೀನ

Published:
Updated:
ಪಾಕ್‌ ಆಕ್ರಮಿತ ಕಾಶ್ಮೀರ ಫಾರೂಕ್‌ ಮಾತು ಅರ್ಥಹೀನ

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರು. ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ವಿಷಯವನ್ನು ಕೆದಕುವ ಮೂಲಕ ಸುದ್ದಿಯಲ್ಲಿದ್ದಾರೆ. ‘ಪಾಕ್‌ ಆಕ್ರಮಿತ ಕಾಶ್ಮೀರವು ಭಾರತದ ಭಾಗವೇ ಅಲ್ಲ. ಅದು ಪಾಕಿಸ್ತಾನಕ್ಕೆ ಸೇರಿದ್ದು’ ಎಂದು ಮೂರು ದಿನಗಳ ಹಿಂದೆ ಅವರು ಆಡಿದ ಮಾತು ಈಗ ಕಾವೇರಿಸಿದೆ. ‘ಪಾಕ್‌ ಆಕ್ರಮಿತ ಕಾಶ್ಮೀರ ನಮ್ಮ ಅವಿಭಾಜ್ಯ ಅಂಗ’ ಎಂದು ಹೇಳುತ್ತಲೇ ಬರಲಾಗುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು 1994ರಲ್ಲಿ ಸಂಸತ್‌ ನಿರ್ಣಯ ಸಹ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಈ ವಿಷಯವನ್ನು ಮತ್ತೆ ಪ್ರಸ್ತಾಪಿಸುವ ಅಗತ್ಯ ಈಗಂತೂ ಇರಲೇ ಇಲ್ಲ. ಹಾಗೆ ನೋಡಿದರೆ, ‘70 ವರ್ಷಗಳಿಂದಲೂ ಪಾಕ್‌ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆದುಕೊಳ್ಳಲು ಭಾರತಕ್ಕೆ ಆಗಿಲ್ಲ. ಈಗ ಅದರ ಬಗ್ಗೆ ಕೆಲವರು ಗುಟುರು ಹಾಕುತ್ತಿದ್ದಾರೆ. ಸಾಧ್ಯವಿದ್ದರೆ ಅದನ್ನು ವಾಪಸ್‌ ಪಡೆಯಲಿ. ಅದಕ್ಕಾಗಿ ಇನ್ನೆಷ್ಟು ದಿನಗಳು ಅಮಾಯಕರ ರಕ್ತ ಸುರಿಯಬೇಕು’ ಎಂಬ ಫಾರೂಕ್‌ ಅವರ ಹೇಳಿಕೆ ಬಗ್ಗೆ ಆಶ್ಚರ್ಯ ಪಡುವಂತಹುದು ಏನೂ ಇಲ್ಲ. ಏಕೆಂದರೆ ಅಧಿಕಾರದಲ್ಲಿ ಇದ್ದಾಗ ಒಂದು, ಅಧಿಕಾರ ಕೈತಪ್ಪಿದಾಗ ಇನ್ನೊಂದು ನಿಲುವು ತಳೆಯುವುದು ಅವರಿಗೆ ಹೊಸದೇನಲ್ಲ. ಅವರ ಹೇಳಿಕೆಯ ವಿರುದ್ಧ ನಾಗರಿಕರೊಬ್ಬರು ದೂರು ದಾಖಲಿಸಿದ್ದಾರೆ. ಇದು ಕೂಡ ಅವರಿಗೆ ಲೇವಡಿಯ ವಸ್ತುವಾಗಿದೆ. ‘ನನ್ನ ವಿರುದ್ಧ ದೂರು ದಾಖಲಿಸಿದ್ದು ಒಬ್ಬ ಮುಸ್ಲಿಂ. ಆತನನ್ನು ದೇವರೇ ಕಾಪಾಡಲಿ. ಭಾರತವೇನಾದರೂ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಕಸಿಯಲು ಹೋದರೆ ಪಾಕಿಸ್ತಾನವೇನೂ ಸುಮ್ಮನಿರುವುದಿಲ್ಲ. ಅವರ ಹತ್ತಿರವೂ ಬಾಂಬ್‌ಗಳಿವೆ. ಅವರೇನೂ ಬಳೆ ತೊಟ್ಟಿಲ್ಲ’ ಎಂಬ ಅವರ ಮಾತು ಒಬ್ಬ ಪ್ರಬುದ್ಧ ರಾಜಕಾರಣಿಯ ಬಾಯಿಂದ ಬರುವಂಥದ್ದಲ್ಲ. ಅವರಿಗೆ ಉತ್ತರ ನೀಡುವ ಉತ್ಸಾಹದಲ್ಲಿ, ‘ಪಿಒಕೆಯನ್ನು ವಶಕ್ಕೆ ಪಡೆಯಲು ಭಾರತ ಬಯಸಿದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಕೇಂದ್ರ ಸಚಿವ ಹಂಸರಾಜ್‌ ಅಹಿರ್‌ ಆಡಿದ ಮಾತುಗಳಲ್ಲಿ ಕೂಡ ವಿನಾಕಾರಣ ಉನ್ಮಾದ, ಭಾವನಾತ್ಮಕ ದನಿಯೇ ಎದ್ದು ಕಾಣುತ್ತದೆ. ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪಿಸುವ ಪ್ರಯತ್ನವಾಗಿ ಮಾತುಕತೆಗೆ ಕೇಂದ್ರ ಸರ್ಕಾರ ಚಾಲನೆ ಕೊಟ್ಟಿರುವಾಗ ಅದಕ್ಕೆ ಪೂರಕವಾದ ವಾತಾವರಣ ಕಲ್ಪಿಸುವುದು ಅಗತ್ಯ. ಅದನ್ನು ಬಿಟ್ಟು, ಪ್ರಚೋದನಕಾರಿ ಹೇಳಿಕೆ ಕೊಡುವುದರಿಂದ ಏನೂ ಲಾಭವಿಲ್ಲ. ಜನರನ್ನು ವಿನಾಕಾರಣ ಎತ್ತಿಕಟ್ಟುವುದು ಸಮಸ್ಯೆಯನ್ನೇನೂ ಪರಿಹರಿಸುವುದಿಲ್ಲ.

ಯುದ್ಧವೊಂದೇ ಎಲ್ಲಕ್ಕೂ ಮದ್ದು ಎಂಬ ಕಾಲಘಟ್ಟದಲ್ಲಿ ನಾವಿಲ್ಲ. ಕಾಶ್ಮೀರಿಗಳ ಮನವೊಲಿಕೆ, ಸಂಧಾನವೇ ಸರಿಯಾದ ಹಾದಿ ಎಂಬುದು ವಾಸ್ತವವೂ ಹೌದು. ಪಾಕ್‌ ಆಕ್ರಮಿತ ಕಾಶ್ಮೀರವನ್ನು ಮತ್ತೆ ಪಡೆಯಬೇಕು ಎಂಬ ಉದ್ದೇಶ ಇಟ್ಟುಕೊಂಡು ಭಾರತ ಯಾವುದೇ ಯುದ್ಧ ನಡೆಸಿಲ್ಲ. 1965, 71 ಮತ್ತು 99ರ ಯುದ್ಧಗಳಲ್ಲಿ ಪಾಕಿಸ್ತಾನದ ದುಸ್ಸಾಹಸಗಳಿಗೆ ತಿರುಗೇಟು ಕೊಟ್ಟಿದೆ ಅಷ್ಟೇ. ಅದು ಫಾರೂಕ್‌ ಅಬ್ದುಲ್ಲಾ ಅವರ ಗಮನದಲ್ಲಿ ಇರಬೇಕಾಗಿತ್ತು. ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕು ಎನ್ನುವುದಾದರೆ ಅವರು ಸಂಧಾನ ಮಾತುಕತೆಗಳಿಗೆ ಸಕ್ರಿಯವಾಗಿ ಸ್ಪಂದಿಸಬೇಕು. ಹಿಂಸೆಯಿಂದ ಪ್ರಯೋಜನ ಇಲ್ಲ ಎಂಬುದನ್ನು ಕಾಶ್ಮೀರಿ ಯುವಜನರಿಗೆ ಮನವರಿಕೆ ಮಾಡಬೇಕು. ಕಾಶ್ಮೀರದ ಅಭಿವೃದ್ಧಿಗೆ ಇದುವರೆಗಿನ ಎಲ್ಲ ಕೇಂದ್ರ ಸರ್ಕಾರಗಳು ನೀಡಿದ ಸಹಾಯವನ್ನು ನೆನಪಿಸಬೇಕು. ಆದರೆ ಸದಾ ಸುದ್ದಿಯಲ್ಲೇ ಇರಬೇಕು ಎನ್ನುವವರಿಗೆ ಇವೆಲ್ಲ ಹೇಗೆ ರುಚಿಸುತ್ತವೆ? ಇನ್ನಾದರೂ ಫಾರೂಕ್‌ ಅಬ್ದುಲ್ಲಾ ಹೊಣೆಯರಿತು ಮಾತನಾಡಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry