7

ಮುಗಾಬೆ ಯುಗಕ್ಕೆ ಅಂತ್ಯ ಹಾಡಿದರೇ ಗ್ರೇಸ್‌?

Published:
Updated:
ಮುಗಾಬೆ ಯುಗಕ್ಕೆ ಅಂತ್ಯ ಹಾಡಿದರೇ ಗ್ರೇಸ್‌?

ಚುನಾಯಿತ ಅಧ್ಯಕ್ಷನಾಗಿದ್ದರೂ ಸುಮಾರು ನಾಲ್ಕು ದಶಕಗಳ ಕಾಲ ಜಿಂಬಾಬ್ವೆಯನ್ನು ರಾಜನಂತೆ ಆಳಿದ, ದೇಶವನ್ನು ತನ್ನ ಬಿಗಿ ಹಿಡಿತದಲ್ಲಿ ಇರಿಸಿಕೊಂಡಿದ್ದ ರಾಬರ್ಟ್‌ ಮುಗಾಬೆ ಈಗ ಗೃಹಬಂಧನದಲ್ಲಿದ್ದಾರೆ. ರಾಜಧಾನಿಯನ್ನು ಸೇನೆಯು ನಿಯಂತ್ರಣಕ್ಕೆ ಪಡೆದುಕೊಂಡಿದೆ. ಮುಗಾಬೆ ಅವರು ಅಧಿಕೃತವಾಗಿ ಅಧಿಕಾರದಿಂದ ಕೆಳಗೆ ಇಳಿಯದಿದ್ದರೂ ಅವರ ಕೈಯಲ್ಲಿ ಈಗ ಯಾವುದೇ ಅಧಿಕಾರ ಇಲ್ಲ. ನಾಲ್ಕು ದಶಕ ದೇಶ ಆಳಿದ ವ್ಯಕ್ತಿಯ ವಿಧಿ ಒಂದೇ ವಾರದಲ್ಲಿ ಬದಲಾಗಿ ಹೋಯಿತು.

ಜಿಂಬಾಬ್ವೆ ಅಧ್ಯಕ್ಷ ಮುಗಾಬೆ ಅವರಿಂದ ಅಧಿಕಾರ ಕಸಿದುಕೊಳ್ಳಲು ಸೇನೆಯು ನೀಡಿದ ಕಾರಣವೇನು?

1980ರಿಂದ ಅಧಿಕಾರದಲ್ಲಿರುವ ಮುಗಾಬೆ ಅವರ ಸುತ್ತ ಇರುವ ಭ್ರಷ್ಟ ಜನರನ್ನು ಗುರಿಯಾಗಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ. ‘ಇದು ಸೇನಾ ಕ್ರಾಂತಿ ಅಲ್ಲವೇ ಅಲ್ಲ. ದೇಶದಲ್ಲಿನ ಭ್ರಷ್ಟ ಚಟುವಟಿಕೆಗಳಿಗೆ ತಡೆ ಒಡ್ಡುವ ಉದ್ದೇಶ ಈಡೇರಿದಕೂಡಲೇ ದೇಶದಲ್ಲಿ ಸಹಜ ಸ್ಥಿತಿ ನೆಲೆಯಾಗಲಿದೆ. ದೇಶದ ಹದಗೆಡುತ್ತಿರುವ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಸರಿಪಡಿಸುವುದು ನಮ್ಮ ಉದ್ದೇಶ. ಸರಿಪಡಿಸದಿದ್ದರೆ ಅದು ಹಿಂಸಾತ್ಮಕ ತಿರುವು ಪಡೆದುಕೊಳ್ಳಬಹುದು’ ಎಂದು ಸೇನೆಯು ಹೇಳಿದೆ.

ಮುಗಾಬೆ ಅವರ ಹೆಂಡತಿ ಗ್ರೇಸ್‌ ಅವರ ಮಹತ್ವಾಕಾಂಕ್ಷೆಗೆ ಕಡಿವಾಣ ಹಾಕುವುದು ಉದ್ದೇಶವೇ?

ತನ್ನ ಬಹುಕಾಲದ ಸಂಗಾತಿ ಮತ್ತು ಆಪ್ತ ಎಮರ್ಸನ್‌ ನನ್‌ಗವಾ ಅವರನ್ನು ಉಪಾಧ್ಯಕ್ಷ ಹುದ್ದೆಯಿಂದ ಈ ತಿಂಗಳ 8ರಂದು ಮುಗಾಬೆ ವಜಾ ಮಾಡಿದರು. 93ರ ಇಳಿ ವಯಸ್ಸಿನ ಮುಗಾಬೆ ಅವರಿಗೆ ಪಕ್ಷ ಮತ್ತು ಸರ್ಕಾರದಲ್ಲಿ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಕಳೆದ ಕೆಲವು ವರ್ಷಗಳಿಂದ ಜೋರಾಗಿ ಕೇಳಿ ಬರುತ್ತಿದೆ. 2015ರಲ್ಲಿ ಗ್ರೇಸ್‌ ಅವರನ್ನು ಝನು ಪಿಎಫ್‌ ಪಕ್ಷದ ಮಹಿಳಾ ಘಟಕದ ಮುಖ್ಯಸ್ಥೆಯನ್ನಾಗಿ ನೇಮಿಸಲಾಗಿತ್ತು. ಈಗ ಅವರನ್ನು ದೇಶದ ಉಪಾಧ್ಯಕ್ಷರನ್ನಾಗಿ ನೇಮಿಸುವುದಕ್ಕಾಗಿಯೇ ನನ್‌ಗವಾ ಅವರನ್ನು ವಜಾಮಾಡಲಾಗಿದೆ. ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಗ್ರೇಸ್‌ ಅವರನ್ನು ಝನು ಪಿಎಫ್‌ ಪಕ್ಷದಿಂದ ಕಣಕ್ಕಿಳಿಸುವ ಕಾರ್ಯತಂತ್ರದ ಭಾಗ ಇದು ಎಂದು ವಿಶ್ಲೇಷಿಸಲಾಗಿದೆ.

ಸೇನಾ ಕಾರ್ಯಾಚರಣೆಯ ಹಿಂದೆ ನನ್‌ಗವಾ ಅವರ ಕುಮ್ಮಕ್ಕು ಇದೆಯೇ?

ಕಳೆದ ವಾರ ಉಪಾಧ್ಯಕ್ಷ ಹುದ್ದೆಯಿಂದ ಉಚ್ಚಾಟನೆಗೊಂಡ ತಕ್ಷಣದಿಂದಲೇ ನನ್‌ಗವಾ ಅವರು ನಾಪತ್ತೆಯಾಗಿದ್ದರು. ಮುಗಾಬೆ ಅವರನ್ನು ಗೃಹಬಂಧನದಲ್ಲಿರಿಸಿ, ಅವರು ಸ್ಥಾನ ತೊರೆಯುವ ಮಾತುಕತೆ ಆರಂಭವಾದ ಬಳಿಕವಷ್ಟೇ ನನ್‌ಗವಾ ದೇಶಕ್ಕೆ ಮರಳಿದ್ದಾರೆ. ನನ್‌ಗವಾ ಅವರಿಗೆ ಸೇನೆಯ ಜತೆಗೆ ನಿಕಟ ಸಂಬಂಧ ಇದೆ. ಝನು ಪಿಎಫ್‌ ಪಕ್ಷವು ನನ್‌ಗವಾ ಅವರಿಗೆ ನಿಷ್ಠರಾಗಿರುವವರನ್ನು ಗುರಿಯಾಗಿಸಿಕೊಂಡಿರುವುದು ಸ್ಪಷ್ಟ. ಇದು ಹೀಗೆಯೇ ಮುಂದುವರಿದರೆ ಹಸ್ತಕ್ಷೇಪ ಅನಿವಾರ್ಯವಾಗುತ್ತದೆ ಎಂದು ಸೇನೆ ಹೇಳಿತ್ತು.

ಜಿಂಬಾಬ್ವೆಯ ‘ಕ್ರಾಂತಿ’ಯ  ಹಿಂದೆ ಚೀನಾದ ಕಾಣದ ಕೈಗಳ ಕೈವಾಡ ಇದೆಯೇ?

ಜಿಂಬಾಬ್ವೆಯಲ್ಲಿ ಅತ್ಯಂತ ಹೆಚ್ಚು ಹೂಡಿಕೆ ಮಾಡಿರುವ ದೇಶ ಚೀನಾ. ಬಹಳ ವರ್ಷಗಳಿಂದ ಜಿಂಬಾಬ್ವೆ ಜತೆಗೆ ಚೀನಾಕ್ಕೆ ವ್ಯಾಪಾರ ಮತ್ತು ರಾಜತಾಂತ್ರಿಕ ಸಂಬಂಧ ಇದೆ. ಜಿಂಬಾಬ್ವೆಯ ಬಿಕ್ಕಟ್ಟಿನಲ್ಲಿ ಚೀನಾದ ಪಾತ್ರ ಇದೆಯೇ ಎಂಬ ಅನುಮಾನ ಬರಲು ಕಾರಣ ಜಿಂಬಾಬ್ವೆಯ ಸೇನಾ ಮುಖ್ಯಸ್ಥ ಕಾನ್‌ಸ್ಟಾಂಟಿನೊ ಚಿವೆಂಗಾ ಅವರು ಚೀನಾಕ್ಕೆ ನೀಡಿದ ಭೇಟಿ. ಸೇನೆಯ ಟ್ಯಾಂಕುಗಳು ರಾಜಧಾನಿ ಹರಾರೆಯ ರಸ್ತೆಗಿಳಿಯುವುದಕ್ಕೆ ಒಂದು ವಾರ ಮೊದಲು ಚಿವೆಂಗಾ ಅವರು ಚೀನಾಕ್ಕೆ ಭೇಟಿ ನೀಡಿದ್ದರು. ಈಗಿನ ‘ಕ್ರಾಂತಿ’ಯ ಹಿಂದೆ ತನ್ನ ಪಾತ್ರ ಇಲ್ಲ ಎಂದು ಚೀನಾ ಹೇಳಿದೆ. ಹಿಂದೆ,

ಅಂತರರಾಷ್ಟ್ರೀಯ ಒತ್ತಡ ಇದ್ದಾಗಲೂ ಮುಗಾಬೆ ಅವರಿಗೆ ಚೀನಾ ಬೆಂಬಲ ನೀಡಿತ್ತು. ಮುಂದೆ, ಯಾವುದೇ ಸರ್ಕಾರ ಬಂದರೂ ಅದು ತನ್ನ ಪರವಾಗಿ ಇರುವಂತೆ ನೋಡಿಕೊಳ್ಳಲು ಚೀನಾ ಪ್ರಯತ್ನಿಸಬಹುದು ಎಂಬುದರಲ್ಲಿ ಅನುಮಾನ ಇಲ್ಲ.

ತಿರುಗೇಟು ನೀಡುವ ಸಾಮರ್ಥ್ಯ ಮುಗಾಬೆಗೆ ಇದೆಯೇ?

ಸೇನೆಯ ಅಚಲ ನಿಷ್ಠೆಯಿಂದಾಗಿಯೇ ಮುಗಾಬೆ ಅವರು ‘ನಿರಂಕುಶ’ ಆಡಳಿತ ನಡೆಸಲು ಸಾಧ್ಯವಾಗಿತ್ತು. ಆದರೆ, ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮೊಂದಿಗೆ ಇದ್ದ ಹಲವು ಮುಖಂಡರನ್ನು ಮುಗಾಬೆ ಅವರು ಪಕ್ಷದ ಹುದ್ದೆಗಳಿಂದ ಇತ್ತೀಚಿನ ವರ್ಷಗಳಲ್ಲಿ ವಜಾ ಮಾಡಿದ್ದಾರೆ. ಹೀಗೆ

ವಜಾಗೊಂಡವರು ಕಳೆದ ವರ್ಷ ಒಟ್ಟಾಗಿ ಸ್ಥೂಲವಾದ ಗುಂಪೊಂದನ್ನು ರಚಿಸಿಕೊಂಡು ಮುಗಾಬೆಗೆ ಪಾಠ ಕಲಿಸಲು ನಿರ್ಧರಿಸಿದ್ದರು. ಅದಲ್ಲದೆ, ಈಗ ಸೇನೆಯು ನನ್‌ಗವಾ ಅವರನ್ನು ಬೆಂಬಲಿಸುತ್ತಿದೆ. ನನ್‌ಗವಾ ಅವರ ಬದ್ಧ ವೈರಿ ಗ್ರೇಸ್‌. ಈಗ ಗ್ರೇಸ್‌ ಮಾತನ್ನಷ್ಟೇ ಕೇಳುವ ಮುಗಾಬೆ ಅವರು ಸೇನೆಯನ್ನು ಮತ್ತೆ ಒಲಿಸಿಕೊಳ್ಳುವುದು ಕಷ್ಟ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry