7

‘ಪದ್ಮಾವತಿ’...ಕಿತಾಪತಿ…ಜಟಾಪಟಿ!

Published:
Updated:
‘ಪದ್ಮಾವತಿ’...ಕಿತಾಪತಿ…ಜಟಾಪಟಿ!

ಸಿನಿಮಾ ಸೃಜನಶೀಲ ಮಾಧ್ಯಮ. ಇತಿಹಾಸದ ಯಾವುದೋ ಆಕರ ಬಳಸಿಕೊಂಡು ರೂಪುತಳೆದ ಹಲವು ಚಿತ್ರಕೃತಿಗಳು ನಮ್ಮೆದುರಲ್ಲಿವೆ. ಪುಟ್ಟಣ್ಣ ಕಣಗಾಲ್ ‘ನಾಗರಹಾವು’ ಸಿನಿಮಾ ನಿರ್ದೇಶಿಸಿದಾಗ, ಕಾದಂಬರಿಕಾರ ತರಾಸು ‘ಅದು ನಾಗರಹಾವಲ್ಲ; ಕೇರೆ ಹಾವು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು ಅನೇಕರಿಗೆ ನೆನಪಿನಲ್ಲಿದೆ.

ಸಿನಿಮಾ ತಯಾರಾದ ಮೇಲೆ ಅದಕ್ಕೆ ಪ್ರಮಾಣಪತ್ರ ಕೊಡಲು ದೇಶದಲ್ಲಿ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಇದೆ. ದೃಶ್ಯಗಳಿಗೆ ಅಥವಾ ಮಾತಿಗೆ ಕತ್ತರಿ ಹಾಕುವಂತೆ ತಾಕೀತು ಮಾಡುವ ಅಧಿಕಾರವೂ ಅದಕ್ಕೆ ಇದೆ. ಚಿತ್ರ ತಯಾರಕರು ಈ ಸೆನ್ಸಾರ್ ವ್ಯವಸ್ಥೆಯನ್ನೇ ಅಡಕತ್ತರಿ ಎಂದು ಭಾವಿಸಲು ಕೆಲವು ತಾಜಾ ಉದಾಹರಣೆಗಳಿವೆ. ಕಳೆದ ವರ್ಷ ‘ಉಡ್ತಾ ಪಂಜಾಬ್’ ಹಿಂದಿ ಸಿನಿಮಾದ 89 ದೃಶ್ಯಗಳಿಗೆ ಕತ್ತರಿ ಹಾಕುವಂತೆ ಪ್ರಮಾಣೀಕರಣ ಮಂಡಳಿ ಆದೇಶಿಸಿದ್ದನ್ನು ನೆನಪಿಸಿಕೊಳ್ಳಬಹುದು.

ಹೋದವರ್ಷ ‘ಯೇ ದಿಲ್ ಹೈ ಮುಷ್ಕಿಲ್’ ಹಿಂದಿ ಚಿತ್ರದಲ್ಲಿ ಪಾಕಿಸ್ತಾನದ ನಟ ಫವಾದ್ ಖಾನ್ ಅಭಿನಯಿಸಿದ್ದನ್ನೇ ಕೆಲವರು ವಿವಾದವನ್ನಾಗಿಸಿದ್ದರು. ಆ ಸಿನಿಮಾ ನಿರ್ದೇಶಕ ‘ಇನ್ನು ಮುಂದೆ ಪಾಕಿಸ್ತಾನದ ನಟರನ್ನು ಹಾಕಿಕೊಂಡು ಸಿನಿಮಾ ಮಾಡುವುದಿಲ್ಲ’ ಎಂದು ಮಾತು ಕೊಟ್ಟಮೇಲಷ್ಟೇ ಸಿನಿಮಾ ಬಿಡುಗಡೆಗೆ ಅವಕಾಶ ನೀಡಿದ್ದು.

ಗೋವಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗದಲ್ಲಿ ಮಲಯಾಳಂ ಚಿತ್ರ ‘ಎಸ್ ದುರ್ಗಾ’ ಹಾಗೂ ಮರಾಠಿ ಸಿನಿಮಾ ‘ನ್ಯೂಡ್’ ಪ್ರದರ್ಶನಗೊಳ್ಳಕೂಡದು ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯವೇ ತಡೆಹಿಡಿದಿರುವ ಸಂದರ್ಭ ಇದು. ಅರವಿಂದ್ ಕೇಜ್ರಿವಾಲ್ ಅವರನ್ನು ಕುರಿತ ‘ಎನ್ ಇನ್ ಸಿಗ್ನಿಫಿಕೆಂಟ್ ಮ್ಯಾನ್’ ಸಾಕ್ಷ್ಯಚಿತ್ರ ತಡೆಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಲಿಲ್ಲ.

ಇಂಥ ಕಾಲಘಟ್ಟದಲ್ಲಿ ‘ಪದ್ಮಾವತಿ’ ಹಿಂದಿ ಚಿತ್ರದ ವಿವಾದ ಸೃಜನಶೀಲ ಮಾಧ್ಯಮದ ದೊಡ್ಡ ಸಂಕಷ್ಟಕ್ಕೆ ಹಿಡಿದ ಕನ್ನಡಿಯಂತೆ ಕಾಣುತ್ತಿದೆ. ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ ಈ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿ ಶ್ರೀ ರಜಪೂತ ಕರ್ಣಿ ಸೇನಾ ಸಂಘಟನೆಯವರು, ಬಿಜೆಪಿಯ ಕೆಲವು ಶಾಸಕರು, ವರ್ಷದ ಪ್ರಾರಂಭದಿಂದಲೂ ಕ್ರುದ್ಧರಾಗಿದ್ದಾರೆ. ಡಿಸೆಂಬರ್ 1ರಂದು ಚಿತ್ರ ತೆರೆಕಾಣಲಿದೆ. ಆ ದಿನ ದೇಶದಾದ್ಯಂತ ಚಿತ್ರ ಬಿಡುಗಡೆಗೆ ಅವಕಾಶ ನೀಡದಂತೆ ಬಂದ್‌ಗೆ ಶ್ರೀ ರಜಪೂತ ಕರ್ಣಿ ಸೇನಾ ಸಂಘಟನೆ ಕರೆ ನೀಡಿದೆ.

ಸಿನಿಮಾ ನಿಷೇಧದ ದನಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೂ ಬೆಂಬಲ ಸೂಚಿಸಿರುವುದು ಸೃಜನಶೀಲ ಮಾಧ್ಯಮದ ಕಡುಮೋಹಿಗಳಿಗೆ ಕಹಿಯಾಗಿ ಪರಿಣಮಿಸಿದೆ.

ವಿವಾದ ಯಾಕೆ?

ರಜಪೂತ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಇತಿಹಾಸವನ್ನು ತಿರುಚಿ ಸಿನಿಮಾ ಚಿತ್ರಿಸಲಾಗಿದೆ ಎಂದು ಸಂಘಟನೆ ಹೇಳುತ್ತಾ ಬಂದಿದೆ. ‘ಅಲ್ಲಾವುದ್ದೀನ್ ಖಿಲ್ಜಿ ಹಾಗೂ ಪದ್ಮಾವತಿ ನಡುವೆ ಸರಸ–ಸಲ್ಲಾಪ ನಡೆಯುವ ಕನಸಿನ ದೃಶ್ಯ ಇದೆ. ಇದು ಸರಿಯಲ್ಲ’ ಎನ್ನುವುದು ಅದರ ತಕರಾರು.

ಏನೆಲ್ಲ ಅವಘಡಗಳಾದವು?

ಜೈಪುರದ ಜೈಗಡದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಹಂತದಲ್ಲಿಯೇ ಶ್ರೀ ರಜಪೂತ ಕರ್ಣಿ ಸೇನಾ ಸಂಘಟನೆಯವರು ದಾಳಿ ನಡೆಸಿದ್ದರು. ಸಂಜಯ್ ಲೀಲಾ ಬನ್ಸಾಲಿ ಹಾಗೂ ಚಿತ್ರತಂಡದ ಕೆಲವರ ಮೇಲೆ ಹಲ್ಲೆ ನಡೆಸಿ, ಸೆಟ್‌ ಹಾಳು ಮಾಡಿದ್ದರು. ಚಿತ್ರೀಕರಣದ ಪರಿಕರಗಳನ್ನು ಧ್ವಂಸ ಮಾಡಲೂ ಯತ್ನಿಸಿದ್ದರು. ಆಗ ಪೊಲೀಸರು ಪರಿಸ್ಥಿತಿ ಪ್ರಕೋಪಕ್ಕೆ ಹೋಗದಂತೆ ತಡೆದಿದ್ದರು. ಚಿತ್ತೋರ್ ಕೋಟೆಯಲ್ಲಿ 40 ವರ್ಷಗಳಷ್ಟು ಹಳೆಯ ಕನ್ನಡಿಗಳು ವಿಧ್ವಂಸಕ ಕೃತ್ಯಗಳಿಂದ ಒಡೆದುಹೋದದ್ದನ್ನು ಪ್ರಾಚ್ಯವಸ್ತು ಇಲಾಖೆ ದೃಢಪಡಿಸಿತು.

ಕೊಲ್ಹಾಪುರದ ಮಸಾಈಚೆ ತಠಾರ್‌ನಲ್ಲಿ ಇದೇ ವರ್ಷ ಮಾರ್ಚ್‌ನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಅಲ್ಲಿಗೆ 20–30 ಜನರ ತಂಡ ಪೆಟ್ರೋಲ್ ಬಾಂಬ್‌ಗಳು ಹಾಗೂ ಲಾಠಿಗಳನ್ನು ಹಿಡಿದು ದಾಳಿಇಟ್ಟರು. ಸೆಟ್‌ಗೆ ಬೆಂಕಿ ಹಚ್ಚಿದರು. ಅಲ್ಲಿದ್ದ ಕೆಲವು ಪ್ರಾಣಿಗಳಿಗೆ ಸುಟ್ಟಗಾಯಗಳಾದವು. ಅವು ದಿಕ್ಕಾಪಾಲಾಗಿ ಓಡಿದ್ದವು. ಸಿನಿಮಾ ಪಾತ್ರಧಾರಿಗಳ ವಸ್ತ್ರಗಳನ್ನೂ ರಜಪೂತ ಸಮುದಾಯದವರೆಂದು ಹೇಳಿಕೊಂಡವರು ಸುಟ್ಟಿದ್ದರು.

ಅಕ್ಟೋಬರ್‌ನಲ್ಲಿ ಚಿತ್ರದ ಮೊದಲ ಪೋಸ್ಟರ್‌ ಅನ್ನು ಕರಣ್ ಎಂಬ ಕಲಾವಿದ ರಂಗೋಲಿ ರೂಪದಲ್ಲಿ ಸೂರತ್‍ನಲ್ಲಿ ಸಿದ್ಧಪಡಿಸಿದ್ದರು. 48 ತಾಸಿನ ಕೆಲಸ ಅದು. ಸುಮಾರು 100 ಮಂದಿಯ ಗುಂಪು ಘೋಷಣೆಗಳನ್ನು ಕೂಗುತ್ತಾ ದಾಳಿ ಇಟ್ಟು, ರಂಗೋಲಿಯನ್ನು ನಿಮಿಷಗಳಲ್ಲೇ ಹಾಳುಮಾಡಿತು. ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಸಾಮಾಜಿಕ ಜಾಲತಾಣಗಳಲ್ಲಿ ಈ ಕೃತ್ಯವನ್ನು ಖಂಡಿಸಿ ಪೋಸ್ಟ್‌ಗಳನ್ನು ಹಾಕಿದರು.

ಕಥಾವಸ್ತುವಿನ ಕುರಿತು ಯಾರೆಲ್ಲ ಏನೇನು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ?

‘ಸಂಜಯ ಲೀಲಾ ಬನ್ಸಾಲಿ ಅವರಿಗೆ ಬೂಟಿನಲ್ಲಿ ಹೊಡೆದವರಿಗೆ ಬಹುಮಾನ’ – ಬಿಜೆಪಿ ಸದಸ್ಯರಾಗಿದ್ದ ಅಖಿಲೇಶ್ ಖಾಂಡೇಲ್‌ವಾಲ್ ಫೇಸ್‌ಬುಕ್‌ನಲ್ಲಿ ಈ ವರ್ಷ ಜನವರಿಯಲ್ಲಿ ಹೀಗೊಂದು ಪೋಸ್ಟ್‌ಹಾಕಿದರು. ಕಾಂಗ್ರೆಸ್ ಪಕ್ಷದವರು ಅದನ್ನು ವ್ಯಾಪಕವಾಗಿ ಟೀಕಿಸಿದರು.

ಬಿಜೆಪಿ ಮುಖಂಡ ರಾಜ್‌ ಕೆ. ಪುರೋಹಿತ್ ಚಿತ್ರವನ್ನು ನಿಷೇಧಿಸಬೇಕು ಎಂದು ಕೆಲವೇ ದಿನಗಳ ಹಿಂದೆ ಒತ್ತಾಯಿಸಿದರು. ‘ಪದ್ಮಾವತಿ ಸೆರಗು ತಲೆಗೆ ಸುತ್ತಿಕೊಳ್ಳದೆ ನರ್ತಿಸುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ’ ಎನ್ನುವ ವಾದ ಅವರದ್ದು.

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಸದಸ್ಯ ಅರ್ಜುನ್ ಗುಪ್ತಾ, ‘ಬನ್ಸಾಲಿ ದೇಶದ್ರೋಹದ ಕೆಲಸ ಮಾಡಿದ್ದಾರೆ. ಅವರನ್ನು ವಿಚಾರಣೆಗೆ ಒಳಪಡಿಸಬೇಕು’ ಎಂದು ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು.

ಜೈಪುರದ ಕರ್ಣಿ ಸೇನಾ ಜಿಲ್ಲಾ ಅಧ್ಯಕ್ಷ ನಾರಾಯಣ ದಿವ್ರಾಲಾ ಸಿನಿಮಾ ಬಿಡುಗಡೆ ಸುತರಾಂ ಸಾಧ್ಯವಿಲ್ಲ ಎಂದು ಪಟ್ಟುಹಿಡಿದಿದ್ದಾರೆ.

‘ಸಿನಿಮಾಟೊಗ್ರಫಿ ಕಾಯ್ದೆಯ ಅನ್ವಯ ಮೂರು ತಿಂಗಳವರೆಗೆ ಚಿತ್ರ ಬಿಡುಗಡೆಯನ್ನು ತಡೆಯುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ. ಪ್ರಧಾನಿ ನರೇಂದ್ರ ಮೋದಿ ಮಧ್ಯೆ ಪ್ರವೇಶಿಸಿ ಬಿಕ್ಕಟ್ಟು ಪರಿಹರಿಸಬೇಕು’ ಎನ್ನುವುದು ಕರ್ಣಿ ಸೇನಾ ಸಂಘಟನೆಯ ಸ್ಥಾಪಕ ಲೋಕೇಂದ್ರ ಕಲ್ಕಿ ಒತ್ತಾಯ.

ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ಪಡೆಯುವುದಕ್ಕೆ ಮೊದಲೇ ಸಮುದಾಯದವರಿಗೆ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸುವುದಾಗಿ ತಯಾರಕರು ತಿಳಿಸಿದ್ದರು. ಆದರೆ, ಆ ಮಾತಿಗೆ ಅವರು ತಪ್ಪಿದ್ದಾರೆ ಎಂದೂ ಲೋಕೇಂದ್ರ ದೂರಿದ್ದಾರೆ.

ಗೋಶಮಹಲ್ ಕ್ಷೇತ್ರದ ಬಿಜೆಪಿ ಶಾಸಕ ರಾಜಾ ಸಿಂಗ್ ಕೂಡ ಧಮಕಿ ಹಾಕುವ ಧಾಟಿಯಲ್ಲೇ ಚಿತ್ರ ತಯಾರಕರಿಗೆ ಎಚ್ಚರಿಕೆ ನೀಡಿದ್ದಾರೆ.

ಇತಿಹಾಸಕಾರರ ದೃಷ್ಟಿಕೋನವೇನು?

ರಾಜಸ್ಥಾನ ವಿಶ್ವವಿದ್ಯಾಲಯದ ಇತಿಹಾಸ್ ಪ್ರಾಧ್ಯಾಪಕ ಕೃಷ್ಣ ಗೋಪಾಲ್ ಶರ್ಮ ಹೀಗೆನ್ನುತ್ತಾರೆ: ‘ಪದ್ಮಿನಿಯು ರಾವಲ್ ರತನ್ ಸಿಂಗ್‌ನ 15ನೇ ಪತ್ನಿ. ಮದನ್ ಕುವರ್ ಪದ್ಮಿನಿ ಎಂದೂ ಅವಳನ್ನು ಕರೆಯುತ್ತಿದ್ದರು ಎನ್ನುವುದಕ್ಕೆ ಐತಿಹಾಸಿಕ ದಾಖಲೆಗಳಿವೆ. ಅವಳು ಶ್ರೀಲಂಕಾದವಳು. ಸ್ವಯಂವರದಲ್ಲಿ ಗೆದ್ದು, ರತನ್ ಸಿಂಗ್ ಅವಳನ್ನು ವಿವಾಹವಾಗಿದ್ದ. ಪದ್ಮಿನಿಯ ಸೌಂದರ್ಯಕ್ಕೆ ಖಿಲ್ಜಿ ಹೇಗೆ ಮನಸೋತ ಎನ್ನುವುದು ಒಂದು ಭ್ರಮೆ. ನೀರಿನ ಪ್ರತಿಬಿಂಬದಲ್ಲಿ ಪದ್ಮಿನಿಯನ್ನು ಖಿಲ್ಜಿ ನೋಡುವ ದೃಶ್ಯ ಚಿತ್ರದ ಪ್ರೋಮೊದಲ್ಲಿ ಇದೆ. ಮಲಿಕ್ ಮೊಹಮ್ಮದ್ ಜಾಯಸಿ ಬರೆದಿರುವ ‘ಪದ್ಮಾವತ್’ ಎಂಬ ಕಾವ್ಯದಲ್ಲಿ ಈ ದೃಶ್ಯದ ಬೇರುಗಳಿವೆ’.

ಚಿತ್ತೋರ್‌ಗಡದ ಸರ್ಕಾರಿ ಸ್ನಾತಕೋತ್ತರ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಲೋಕೇಂದ್ರ ಸಿಂಗ್ ಚಂದಾವತ್ ಬೇರೆಯದೇ ವಾದ ಮಂಡಿಸಿದ್ದಾರೆ: ‘ಜಾಯಸಿ ಬರೆದಿರುವ ಪದ್ಮಾವತ್‌ಪುರಾಣ ಕಾವ್ಯದಲ್ಲಿ ಪದ್ಮಿನಿಯು ಶ್ರೀಲಂಕಾದವಳು ಎಂಬ ಕಲ್ಪನೆ ತಪ್ಪೂ ಆಗಿರಬಹುದು. ಅವಳು ಬಿಕನೇರ್ ಹಾಗೂ ಜೈಸಲ್ಮೇರ್ ನಡುವೆ ಇದ್ದ ಪುಂಗಳ ಪ್ರದೇಶದಲ್ಲಿ ಜನಿಸಿದವಳು. ಜಾಯಸಿಯೇ ತನ್ನದು ಕಲ್ಪಿತ ಕಾವ್ಯ ಎಂದು ಕೂಡ ಹೇಳಿರುವುದರಿಂದ ಎಲ್ಲವೂ ಊಹೆಯೇ ಆಗುತ್ತದೆ’.

ಕಾವ್ಯನಿಷ್ಠ ಸಿನಿಮಾ ಇದು ಎಂದು ಬನ್ಸಾಲಿ ಹೇಳುತ್ತಿದ್ದರೂ ಬಿಡುಗಡೆಗೆ ಮೊದಲೇ ದೊಡ್ಡ ಅಪಸ್ವರ ಎತ್ತುತ್ತಿರುವವರಲ್ಲಿ ‘ವಸೂಲಿ ವೀರರೂ’ ಇದ್ದಾರೆ ಎಂಬ ಆರೋಪ ಇನ್ನೊಂದು ಕಡೆ ಕೇಳಿಬರುತ್ತಿದೆ. ಒಟ್ಟಿನಲ್ಲಿ ಸಿನಿಮಾ ಮಾಡಿ ಜಯಿಸುವುದು ಕಷ್ಟ ಎನ್ನುವಂಥ ಕಾಲ ಇದಾಗಿರುವುದು ವಿಪರ್ಯಾಸ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry