ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ದಿನದ ಪರದಾಟ ಮರೆಯಲಾರೆವು....

Last Updated 18 ನವೆಂಬರ್ 2017, 6:19 IST
ಅಕ್ಷರ ಗಾತ್ರ

ಬಳ್ಳಾರಿ: ‘ಅತ್ತ ಖಾಸಗಿ ಕ್ಲಿನಿಕ್‌ಗಳಿಲ್ಲ. ಡಯಾಗ್ನಿಸ್ಟಿಕ್‌ ಪ್ರಯೋಗಾಲಯಗಳಿಗೂ ಬೀಗ, ಇತ್ತ ಸರ್ಕಾರಿ ಆಸ್ಪತ್ರೆಗೆ ಬಂದರೆ ಅಲ್ಲಿಯೂ ಜನದಟ್ಟಣೆ. ಸಮಯಕ್ಕೆ ಸರಿಯಾಗಿ ವೈದ್ಯರು ದೊರಕದೆ ಪರದಾಟ..ಈ ಐದು ದಿನ ನಾವು ನರಕವನ್ನೇ ಕಂಡೆವು...’

ನಗರದ ಬೆಳಗಲ್‌ ರಸ್ತೆಯ ನಿವಾಸಿ ಲಕ್ಷ್ಮಿಬಾಯಿ ಶುಕ್ರವಾರ ತಮ್ಮ ಸಂಕಟವನ್ನು ಹೀಗೆ ವ್ಯಕ್ತಪಡಿಸಿದರು. ‘ಮಗನಿಗೆ ಜ್ವರ ಬಂದಿತ್ತು. ಮನೆ ಸುತ್ತಮುತ್ತ ಕ್ಲಿನಿಕ್‌ಗಳು ಬಂದ್‌ ಆಗಿದ್ದವು. ವಿಮ್ಸ್‌ ಆಸ್ಪತ್ರೆಗೆ ಹೋದರೆ ಅಲ್ಲಿ ಚೀಟ ಪಡೆಯಲು ನೂಕುನುಗ್ಗಲು. ಪಡೆದ ಬಳಿಕ ವೈದ್ಯರಿಗಾಗಿ ಹುಡುಕಾಡಿ ಸೋತು ಮನೆಗೆ ವಾಪಸು ಬಂದೆ’ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆಯನ್ನು (ಕೆಪಿಎಂಇ) ವಿರೋಧಿಸಿ ಖಾಸಗಿ ವೈದ್ಯರು ನಡೆಸುತ್ತಿದ್ದ ಮುಷ್ಕರ ಐದನೇ ದಿನಕ್ಕೆ ಅಂತ್ಯಕಂಡಿದೆ. ಬೇಡಿಕೆ ಈಡೇರಿಕೆ ಭರವಸೆ ದೊರೆತ ಬಳಿಕ ವೈದ್ಯರು ಹರ್ಷಚಿತ್ತರಾಗಿದ್ದರೆ. ಜನಸಾಮಾನ್ಯರು ಮಾತ್ರ ಮುಷ್ಕರದಿಂದ ಎದುರಾದ ಕಹಿ ಅನುಭವಗಳ ನೆನಪಿನಲ್ಲೇ ಉಳಿದಿದ್ದಾರೆ.

ಮುಷ್ಕರ ಕೊನೆಗೊಳ್ಳುವ ಮುನ್ನ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಲ್ಲರೂ ವೈದ್ಯರ ಕುರಿತು ತಮ್ಮ ಸಿಟ್ಟನ್ನು ಹೊರಹಾಕಿದರು. ಮುಷ್ಕರ ಕೊನೆಗೊಂಡಿದೆ ಎಂದು ಗೊತ್ತಾದ ಬಳಿಕ ಹಲವರು ಸಮಾಧಾನದ ನಿಟ್ಟುಸಿರು ಬಿಟ್ಟರು.

ಮಧ್ಯಾಹ್ನಕ್ಕೇ 650 ರೋಗಿಗಳು: ‘ಮುಷ್ಕರ ಕೊನೆಗೊಳ್ಳುವ ದಿನ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ವಿಮ್ಸ್‌ ಹೊರರೋಗಿ ಘಟಕದಲ್ಲಿ 650 ರೋಗಿಗಳು ದಾಖಲಾಗಿದ್ದರು’ ಎಂದು ಆಸ್ಪತ್ರೆಯ ಡಾ.ಗಿರಿರಾಜ ಜೀರ ತಿಳಿಸಿದರು.

‘ಕ್ಲಿನಿಕ್‌ ಮಾರಿಬಿಡುವೆ’
ಶುಕ್ರವಾರ ಮಧ್ಯಾಹ್ನ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಮಸೂದೆ ಕುರಿತು ಆಕ್ಷೇಪಿಸಿದ್ದ ನಗರದ ವೈದ್ಯ ಡಾ.ಶ್ರೀನಿವಾಸ ಸಾಗರ್‌, ‘ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ (ಕೆಪಿಎಂಇ) ಜಾರಿಗೆ ಬಂದರೆ ನಾನು ನನ್ನ ಕ್ಲಿನಿಕ್‌ ಅನ್ನು ಮಾರಿಬಿಡುತ್ತೇನೆ. ಅದನ್ನು ಮಾನ್ಯ ಮುಖ್ಯಮಂತ್ರಿಯೇ ಖರೀದಿಸಬೇಕು’ ಎಂದು ಬರೆದುಕೊಂಡಿದ್ದರು.

* * 

ವೈದ್ಯರು ಹೀಗೆ ಮುಷ್ಕರ ನಡೆಸಿದರೆ ಮಕ್ಕಳು, ಮುದುಕರ ಗತಿ ಏನು? ಸದ್ಯ ಮುಷ್ಕರ ಕೊನೆಗೊಂಡಿದೆ ಎಂದು ತಿಳಿದು ಸಮಾಧಾನವಾಯಿತು.
ಬಿ.ಸುನೀತಾ,
ಗೃಹಿಣಿ, ಕೌಲ್‌ಬಜಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT