6

ಜಿಎಸ್‌ಟಿ: ‘ಕಿಸ್’ ತತ್ವ ಮರೆತರೆ ಜೇಟ್ಲಿ ?

Published:
Updated:
ಜಿಎಸ್‌ಟಿ: ‘ಕಿಸ್’ ತತ್ವ ಮರೆತರೆ ಜೇಟ್ಲಿ ?

ಕೈಗಾರಿಕೆ, ಉದ್ದಿಮೆಗಳಲ್ಲಿ ಬಳಸುವ ಯಂತ್ರೋಪಕರಣಗಳ ತಯಾರಿಕೆಯಿಂದ ಹಿಡಿದು ವಿಮಾನದ ಜಟಿಲ ಕಾರ್ಯನಿರ್ವ

ಹಣೆಯ ವರೆಗೆ ವಿನ್ಯಾಸ ಸರಳವಾಗಿರಬೇಕು ಎನ್ನುವುದು ಸರ್ವತ್ರ ಒಪ್ಪಿತ ಚಿಂತನಾ ಕ್ರಮವಾಗಿದೆ. ‘ಮೂರ್ಖನೆ, ಅದೆಲ್ಲ ಸರಳವಾಗಿರಲಿ’ (Keep it simple, stupid) ಎನ್ನುವುದರ ಸಂಕ್ಷಿಪ್ತ ಪದವಾಗಿರುವ KISS ಎನ್ನುವ ಆಕರ್ಷಕ ನುಡಿಗಟ್ಟು, ವಿನ್ಯಾಸ ರೂಪಿಸುವ ಎಲ್ಲ ಕಡೆಗಳಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿ ಇದೆ. ಲಾಕ್‌ಹೀಡ್‌ ವಿಮಾನ ತಯಾರಿಸಿದ ಎಂಜಿನಿಯರ್‌ ಕೆಲ್ಲಿ ಜಾನ್ಸನ್‌ 1960ರಲ್ಲಿ ಬೇಹುಗಾರಿಕೆ ವಿಮಾನ ‘ಯು–2’ ಮತ್ತು ಬ್ಲ್ಯಾಕ್‌ಬರ್ಡ್‌ನ ವಿನ್ಯಾಸ ರೂಪಿಸುವಾಗ ಈ ಪದಪುಂಜವನ್ನು ಮೊದಲ ಬಾರಿಗೆ ಬಳಸಲಾಗಿತ್ತು.

ವಿಮಾನದ ವಿನ್ಯಾಸವೂ ಆದಷ್ಟು ಸರಳವಾಗಿರಬೇಕು. ಅದನ್ನು ಸಂಕೀರ್ಣಗೊಳಿಸುವ ಮೂರ್ಖತನವನ್ನು ಯಾರೊಬ್ಬರೂ ತೋರಬಾರದು ಎನ್ನುವುದನ್ನು ಈ ಪದಪುಂಜವು ಸಮರ್ಥವಾಗಿ ಧ್ವನಿಸುತ್ತದೆ. ‘Keep it simple stupid’ ಸಂದೇಶದಲ್ಲಿ ಕೆಲ್ಲಿ ಜಾನ್ಸನ್‌ ಎಲ್ಲಿಯೂ ಅಲ್ಪವಿರಾಮ ಬಳಸಿರಲಿಲ್ಲ. ವಿಮಾನ ವಿನ್ಯಾಸ ರೂಪಿಸುವ ಎಂಜಿನಿಯರನು ದಡ್ಡನಾಗಿದ್ದಾನೆ ಎಂದು ಜರೆಯುವುದು ಆತನ ಇಚ್ಛೆಯೂ ಆಗಿರಲಿಲ್ಲ. ವಿಮಾನದ ವಿನ್ಯಾಸವು ಸಾಧ್ಯವಾದಷ್ಟು ಸರಳವಾಗಿರಬೇಕು ಎನ್ನುವುದನ್ನು ತನ್ನ ತಂಡದ ಸದಸ್ಯರಿಗೆ ಮನದಟ್ಟು ಮಾಡಿಕೊಡಲು ಆತ ಈ ನುಡಿಗಟ್ಟು ಬಳಸಿದ್ದ. ರಣರಂಗದಲ್ಲಿ ಲಭ್ಯ ಇರುವ ಸಾಮಾನ್ಯ ಸಾಧನಗಳಿಂದ ಶತದಡ್ಡನೂ ವಿಮಾನವನ್ನು ದುರಸ್ತಿ ಮಾಡಲು ಸಾಧ್ಯವಾಗುವಂತಿರಬೇಕು ಎನ್ನುವುದು ಅವನ ಆಶಯವಾಗಿತ್ತು.

ಮಹಾನ್‌ ದಾರ್ಶನಿಕರು, ತತ್ವಜ್ಞಾನಿಗಳು ಮತ್ತು ವಿಜ್ಞಾನಿಗಳು ಸರಳತೆಯನ್ನೇ ಬೋಧಿಸುತ್ತಿದ್ದರಷ್ಟೇ ಅಲ್ಲ, ಅದನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಮಹಾತ್ಮ ಗಾಂಧಿ ಮತ್ತು ಥೊರೊ ಅವರೂ ಸರಳ ಜೀವನ ಬೋಧಿಸಿ ಅದನ್ನು ತಮ್ಮ ಬದುಕಿನ ವಿಧಾನವಾಗಿಸಿಕೊಂಡಿದ್ದರು. ಶ್ರೇಷ್ಠ ಕಲೆ, ಸಂಗೀತ, ಚಿತ್ರಕಲೆ, ಸಾಹಿತ್ಯ ಕೂಡ ಸರಳತೆಯನ್ನು ಆಧರಿಸಿದೆ. ಅಲ್ಬರ್ಟ್‌ ಐನ್‌ಸ್ಟೀನ್‌ ಅವರ ಪ್ರಸಿದ್ಧ ಹೇಳಿಕೆಯೊಂದು ಹೀಗಿದೆ– ‘ಆರು ವರ್ಷದ ಮಗುವಿಗೆ ಅರ್ಥವಾಗುವಂತೆ ವಿವರಿಸಲು ನಿನಗೆ ಸಾಧ್ಯವಾಗದಿದ್ದರೆ, ಅದನ್ನು ನೀನೂ ಸರಿಯಾಗಿ

ಅರ್ಥೈಸಿಕೊಂಡಿಲ್ಲ ಎಂದರ್ಥ’ ಎನ್ನುವುದು ಸರಳತೆಯ ಮಹತ್ವವನ್ನು ಧ್ವನಿಸುತ್ತದೆ. ‘ಸರಳತೆಯೇ ಅಂತಿಮ ಸೊಬಗು’ ಎನ್ನುತ್ತಾನೆ ಲಿಯೊನಾರ್ಡೊ ಡಾ ವಿಂಚಿ.

ಸರಳತೆಯನ್ನು ತರುವುದು ಹೇಳಿದಷ್ಟು ಸುಲಭವಲ್ಲ ಎನ್ನುವುದೂ ಇದರಿಂದ ಸ್ಪಷ್ಟಗೊಳ್ಳುತ್ತದೆ. ಅಧಿಕಾರಶಾಹಿಯು ಕೂಡ ಉದ್ದಕ್ಕೂ ‘ಕಿಸ್‌’ ತತ್ವವನ್ನು ಉಪೇಕ್ಷಿಸುತ್ತಲೇ ಬಂದಿದೆ. ಸರಳ ಸಂಗತಿಗಳನ್ನು ಹೆಚ್ಚು ಗೋಜಲುಗೊಳಿಸುವುದರಲ್ಲಿ ಅಧಿಕಾರಶಾಹಿಯ ಅತಿ ಬುದ್ಧಿವಂತಿಕೆಯು ವಿಶ್ವದಾದ್ಯಂತ ಕುಖ್ಯಾತವಾಗಿದೆ.

ದೇಶದಾದ್ಯಂತ ಲೆಕ್ಕವಿಲ್ಲದಷ್ಟು ಸೇವೆಗಳನ್ನು ಒದಗಿಸಲಾಗುತ್ತಿದೆ. ಜತೆಗೆ, ಗುಡಿ ಕೈಗಾರಿಕೆಗಳು ಮತ್ತು ಕಾರ್ಖಾನೆಗಳು ಒಂದು ಕೋಟಿಗೂ ಹೆಚ್ಚು ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸುತ್ತವೆ.

ವಿವಿಧ ಉತ್ಪನ್ನಗಳ ಒಂದು ಕೋಟಿಗಿಂತ ಹೆಚ್ಚು ವೈವಿಧ್ಯಮಯ ಸರಕುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಅಮೆಜಾನ್‌ ಅಂತರ್ಜಾಲ ತಾಣದಲ್ಲಿನ ಜಾಹೀರಾತು ಬಡಾಯಿ ಕೊಚ್ಚಿಕೊಳ್ಳುತ್ತದೆ. ಇಷ್ಟೇ ಅಲ್ಲ, ಪ್ರತಿ ದಿನ ಹೆಚ್ಚೆಚ್ಚು ಸರಕುಗಳನ್ನೂ ಅಮೆಜಾನ್‌, ತನ್ನ ಮಾರಾಟ ಜಾಲಕ್ಕೆ ಸೇರ್ಪಡೆ ಮಾಡುತ್ತಿದೆ. ದೇಶದಲ್ಲಿ ತಯಾರಾಗುವ ಇಂತಹ ಅಗಣಿತ ಸರಕು ಮತ್ತು ಸೇವೆಗಳನ್ನು ವಿಭಿನ್ನ ತೆರಿಗೆ ಹಂತಗಳಿಗೆ ಅನ್ವಯಿಸಿ ವಿಂಗಡಿಸಲು ಮತ್ತು ಗುರುತಿಸಲು ಅಧಿಕಾರಶಾಹಿಗೆ ಕೇಳಿಕೊಂಡರೆ ಖಂಡಿತವಾಗಿಯೂ ಅವ್ಯವಸ್ಥೆ ನಿರ್ಮಾಣವಾಗುವುದರಲ್ಲಿ ಸಂದೇಹವೇ ಇಲ್ಲ. ಈಗ ನಮ್ಮಲ್ಲಿಯೂ ಅದೇ ಆಗಿದೆ.

ನಮ್ಮ ತುಂಬ ಸಂಕೀರ್ಣಮಯ ಸಮಾಜದಲ್ಲಿ ಇರುವ ಬಡತನದ ವಿವಿಧ ಹಂತಗಳು, ಹಿಂದುಳಿದಿರುವಿಕೆಯ ಕಾರಣಕ್ಕೆ ವೈವಿಧ್ಯಮಯವಾಗಿರುವ ಸರಕು ಮತ್ತು ಸೇವೆಗಳ ಉಪಭೋಗದ ಸ್ವರೂಪವನ್ನು ವಿಶ್ಲೇಷಿಸುವಲ್ಲಿ ಅಧಿಕಾರಿಗಳು ವಿವೇಚನೆಯಿಂದ ನಡೆದುಕೊಂಡಿಲ್ಲ. ಅವರಲ್ಲಿ ದೂರದೃಷ್ಟಿಯ ಕೊರತೆಯೂ ಕಂಡುಬಂದಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ಹೊಸ ಮಧ್ಯಮ ವರ್ಗದಿಂದಾಗಿ ದೇಶದಾದ್ಯಂತ ಕಂಡು ಬರುತ್ತಿರುವ ಖರೀದಿ ಭರಾಟೆ ಮತ್ತು ಕೊಳ್ಳುಬಾಕ ಸಂಸ್ಕೃತಿಯನ್ನೂ ಅವರು ಗಂಭೀರವಾಗಿ ಪರಿಗಣಿಸಿಲ್ಲ.

ಏಕೀಕೃತ ಒಂದೇ ತೆರಿಗೆ ವ್ಯವಸ್ಥೆಯು ಹಲವಾರು ದೇಶಗಳಲ್ಲಿ ಯಶಸ್ವಿಯಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ತೆರಿಗೆ ಮುಕ್ತ ಪದಾರ್ಥಗಳ (ಶೂನ್ಯ ಜಿಎಸ್‌ಟಿ) ಒಂದು ಪಟ್ಟಿ ಮತ್ತು ಶೇ 10 ರಿಂದ ಶೇ 12ರ ತೆರಿಗೆಗೆ ಒಳಪಡುವ ಉಳಿದ ಸರಕುಗಳು– ಹೀಗೆ ಸರಕುಗಳನ್ನು ಕೇವಲ ಎರಡು ಭಾಗಗಳಾಗಿ ವಿಂಗಡಿಸಬೇಕಾಗಿತ್ತು. ಅಂದರೆ, ವಿನಾಯ್ತಿಗೆ ಒಳಪಟ್ಟಿರುವುದನ್ನು ಹೊರತುಪಡಿಸಿ ಪ್ರತಿಯೊಂದು ಸರಕಿನ ಮೇಲೆ ತೆರಿಗೆ ಇರುತ್ತದೆ. ಇದರಿಂದ ಯಾವುದೂ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಹಾಗಾದಾಗ, ತೆರಿಗೆ ಪಾವತಿಸುವುದು ಸುಲಭವಾಗಿರುತ್ತದೆ. ತೆರಿಗೆದಾರರ ಮೇಲೆ ನಿಗಾವಹಿಸಲು ಮತ್ತು ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ತರುವುದೂ ಸರಳವಾಗಿರುತ್ತದೆ. ವಹಿವಾಟುದಾರರು ತೆರಿಗೆ ತಪ್ಪಿಸುವುದಕ್ಕೆ, ಅಧಿಕಾರಶಾಹಿಯ ಭ್ರಷ್ಟಾಚಾರಕ್ಕೆ ಮತ್ತು ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲು ಇದರಿಂದ ಸಾಧ್ಯವಾಗಲಿದೆ.

ಇದಕ್ಕೆ ರಾಜಕೀಯ ಮಟ್ಟದಲ್ಲಿಯೂ ಸ್ಪಷ್ಟ ಚಿಂತನೆ ಮತ್ತು ರಾಜಕೀಯ ಇಚ್ಛಾಶಕ್ತಿ ಇರಬೇಕಾಗುತ್ತದೆ. ದುಶ್ಚಟ ಎಂದು ಪರಿಭಾವಿಸಲಾದ ತಂಬಾಕು, ಜೂಜಾಟದಂತಹ ಉತ್ಪನ್ನ ಹಾಗೂ ಸೇವೆಗಳಿಗೆ ವಿಧಿಸಲಾಗುವ ‘ಸಿನ್ ಟ್ಯಾಕ್ಸಸ್‌’ ('sin' taxes) ಉದಾಹರಣೆ ಗಮನಿಸಿ. ಇದಕ್ಕೆ ಯಾವುದೇ ಅರ್ಥವೇ ಇಲ್ಲ. ‘ಭಾರತದಲ್ಲಿಯೇ ತಯಾರಿಸಿ’ ಕಾರ್ಯಕ್ರಮದ ಮೂಲಕ ಉದ್ಯೋಗ ಸೃಷ್ಟಿಸುವ ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಸರ್ಕಾರದ ಸಮಗ್ರ ಯೋಜನೆಗಳಿಗೆ ಇದು ವಿರೋಧಾಭಾಸದ ನಿರ್ಧಾರವಾಗಿದೆ.

ಪಂಚತಾರಾ ಹೋಟೆಲ್‌ಗಳ ಕಾರ್ಯನಿರ್ವಹಣೆ ಮತ್ತು ವಹಿವಾಟನ್ನು ನೀವು ಸೂಕ್ಷ್ಮವಾಗಿ ಅವಲೋಕಿಸಿದರೆ 300 ಕೋಣೆಗಳನ್ನು ಹೊಂದಿರುವ ಹೋಟೆಲ್‌ವೊಂದು, ನೇರವಾಗಿ 500 ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಟ್ಟಿರುತ್ತದೆ. ಇವುಗಳಲ್ಲಿ ಪರಿಚಾರಕರು, ಮಾಣಿಗಳು, ಬಾಣಸಿಗರು, ಮ್ಯಾನೇಜರ್‌, ಹಣಕಾಸು ಕೆಲಸಗಳನ್ನು ನಿರ್ವಹಿಸುವ ಸಿಬ್ಬಂದಿ ಪ್ರಮಾಣವೇ ಶೇ 90ರಷ್ಟಿರುತ್ತವೆ. ಇದಲ್ಲದೇ ಹೆಲ್ತ್‌ ಕ್ಲಬ್‌, ಸ್ಪಾ, ಕರಕುಶಲ ಸರಕುಗಳ ಮಳಿಗೆ, ಸಭಾಂಗಣ, ಈಜುಗೊಳ ಸೇವೆಗಳಲ್ಲೂ ಅಸಂಖ್ಯ ನೌಕರರಿಗೆ ಉದ್ಯೋಗ ಅವಕಾಶಗಳು ಇರುತ್ತವೆ.

ಹೋಟೆಲ್ ಉದ್ಯಮಕ್ಕೆ ಪೂರಕ ಸರಕು ಮತ್ತು ಸೇವೆಗಳೂ ಸಾಕಷ್ಟಿವೆ. ಹಾಸಿಗೆ – ದಿಂಬು, ಪೀಠೋಪಕರಣ, ರತ್ನಗಂಬಳಿ, ಟವೆಲ್‌ ತಯಾರಿಕೆ, ಜವಳಿ, ಏರ್‌ಕಂಡಿಷನರ್‌, ಅಡುಗೆ ಮನೆ ಪಾತ್ರೆ, ವಿದ್ಯುತ್‌ ನಿರ್ವಹಣೆ, ಪುಷ್ಪ, ತರಕಾರಿ, ಧಾನ್ಯಗಳ ಪೂರೈಕೆ ವಲಯಗಳಲ್ಲೂ ಉದ್ಯೋಗ ಅವಕಾಶಗಳು ಇರುತ್ತವೆ.

ಇವೆಲ್ಲವೂ ಇತರ ಸರಕುಗಳ ತಯಾರಿಕಾ ಕೈಗಾರಿಕೆಗಳಲ್ಲಿ ಪರೋಕ್ಷವಾಗಿ ಉದ್ಯೋಗ ಸೃಷ್ಟಿಸುವುದರ ಜತೆಗೆ ವರಮಾನ ಹೆಚ್ಚಳಕ್ಕೂ ಕಾರಣವಾಗುತ್ತವೆ. ರೈತಾಪಿ ವರ್ಗ, ಕಟ್ಟಡ ನಿರ್ಮಾಣ ಕಾರ್ಮಿಕರಿಗೂ ಕೈತುಂಬ ಕೆಲಸ ಮತ್ತು ವರಮಾನ ವೃದ್ಧಿಗೆ ಅವಕಾಶಗಳು ಒದಗಿ ಬರುತ್ತವೆ. ಪಂಚತಾರಾ ಹೋಟೆಲ್‌ಗಳಿಗೆ ಶ್ರೀಮಂತ ವಿದೇಶಿ ಪ್ರವಾಸಿಗರು ಮತ್ತು ಹೂಡಿಕೆದಾರರ ಭೇಟಿಯಿಂದ ವಿದೇಶಿ ನೇರ ಬಂಡವಾಳ ಹೂಡಿಕೆಯೂ ಹೆಚ್ಚಳಗೊಳ್ಳುತ್ತದೆ.

ವಾಸ್ತವ ಸ್ಥಿತಿ ಹೀಗಿರುವಾಗ, ಪಂಚತಾರಾ ಹೋಟೆಲ್‌ಗಳ ಮೇಲೆ ದುಬಾರಿ ತೆರಿಗೆ ವಿಧಿಸುವುದು ಜಾಣ ನಿರ್ಧಾರವಾಗಲಾರದು. ಏರ್‌ಕಂಡಿಷನರ್‌, ಸ್ಯಾನಿಟರಿ ನ್ಯಾಪ್‌ಕಿನ್ಸ್‌ ಅಥವಾ ಚಾಕೊಲೆಟ್‌ ಮೇಲೆ ಗರಿಷ್ಠ ಹಂತದ ತೆರಿಗೆ ದರ ವಿಧಿಸುವ ಆಲೋಚನೆಯೂ ಇಂತಹದ್ದೇ ತಪ್ಪು ದೃಷ್ಟಿಕೋನದಿಂದ ಕೂಡಿದೆ. ಸಿರಿವಂತರು ವೆಚ್ಚ ಮಾಡುವುದಕ್ಕೆ ಉತ್ತೇಜನ ನೀಡಿ ಆರ್ಥಿಕತೆ ಚೇತರಿಸಿಕೊಂಡು ಹೊಸ ಉದ್ಯೋಗ ಅವಕಾಶ ಸೃಷ್ಟಿಸಲು ಹೆಚ್ಚೆಚ್ಚು ಜನರು ಚಾಕೊಲೆಟ್‌ ಮತ್ತು ಏರ್‌ಕಂಡಿಷನರ್‌ ಖರೀದಿಸುವಂತೆ ಮಾಡುವ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಕುದುರಿಸುವಂತಹ ತೆರಿಗೆ ವ್ಯವಸ್ಥೆ ಇರಬೇಕಾಗುತ್ತದೆ. ಅದರ ಬದಲಿಗೆ, ಬಡತನದಿಂದ ಕ್ರಮೇಣ ಹೊರ ಬರುತ್ತಿರುವ ಹೊಸ ಗ್ರಾಹಕ ವರ್ಗವನ್ನು ಇಂತಹ ಸರಕು ಖರೀದಿಸುವುದರಿಂದ ದೂರ ಇರಿಸುವಂತಹ ದುಬಾರಿ ತೆರಿಗೆ ವ್ಯವಸ್ಥೆ ರೂಪಿಸಲಾಗಿದೆ.

ಬ್ರೆಡ್‌, ತೆರಿಗೆ ವಿನಾಯ್ತಿಗೆ ಒಳಪಟ್ಟಿದೆ. ಆದರೆ, ಇದೇ ಬ್ರೆಡ್‌ನಿಂದ ತಯಾರಿಸುವ ತರಕಾರಿ ಸ್ಯಾಂಡ್‌ವಿಚ್‌ ಮೇಲೆ ಶೇ 12ರಷ್ಟು ತೆರಿಗೆ ವಿಧಿಸಲಾಗಿದೆ. ಇದು ಬೆಳೆಗಾರರ ಮೇಲೆ ನೇರವಾಗಿ ದುಷ್ಪರಿಣಾಮ ಬೀರುತ್ತಿದೆ. ಕಬ್ಬು ಮತ್ತು ದ್ರಾಕ್ಷಿ ಬೆಳೆಗಾರರ ಬೆನ್ನೆಲುಬು ಆಗಿರುವ ವೈನ್‌, ಬಿಯರ್‌ಗಳೂ ಇದೇ ಬಗೆಯಲ್ಲಿ ಗರಿಷ್ಠ ತೆರಿಗೆ ಹಂತ ವ್ಯಾಪ್ತಿಗೆ ತರಲಾಗಿದೆ.

‘ಕಿಸ್‌’ ತತ್ವದ ಕಾರಣಕ್ಕೇನೆ ಅಗ್ಗದ ವಿಮಾನ ಯಾನ ಸೇವೆಯು ಯಶಸ್ವಿಯಾಗಿದೆ. ಇಂತಹ ಸೇವೆ ಒದಗಿಸುವ ವಿಮಾನಗಳಲ್ಲಿ ಉಚಿತ ಆಹಾರ, ಪುಕ್ಕಟೆ ಸರಕು, ಫಸ್ಟ್‌ಕ್ಲಾಸ್‌ ಸೀಟು ಮತ್ತಿತರ ಸೌಲಭ್ಯಗಳಿಗೆ ತಿಲಾಂಜಲಿ ನೀಡಲಾಗಿತ್ತು. ಗರಿಷ್ಠ ಸೀಟುಗಳ ಅವಕಾಶ, ಅಂತರ್ಜಾಲದ ಮೂಲಕವೇ ನೇರವಾಗಿ ಟಿಕೆಟ್‌ ಖರೀದಿ ಸೌಲಭ್ಯ, ಮಧ್ಯವರ್ತಿಗಳ ಹಾವಳಿಗೆ ಕೊನೆ ಹಾಡಿರುವುದರಿಂದ ಅಗ್ಗದ ವಿಮಾನ ಯಾನ ಸೇವೆ ಪ್ರಗತಿ ಹಾದಿಯಲ್ಲಿ ಸಾಗಿದೆ. ‘ಅಗ್ಗದ ವಿಮಾನ ಯಾನ ಸೇವೆಯ ಮಾದರಿ ಎಂದರೆ ಏನು ಎಂದು ಒಂದು ಬಾರಿ ನನ್ನನ್ನು ಪ್ರಶ್ನಿಸಲಾ

ಗಿತ್ತು. ‘ಆಕಾಶದಲ್ಲಿ ಇರುವ ಉಡುಪಿ ಸೆಲ್ಫ್‌ ಸರ್ವೀಸ್‌ ಸೇವೆ’ ಎಂದು ನಾನು ಉತ್ತರಿಸಿದ್ದೆ.

ಹಣಕಾಸು ಸಚಿವಾಲಯದಲ್ಲಿ ಇರುವ ಅಧಿಕಾರಿಗಳು ಹೊಸ ತೆರಿಗೆ ವ್ಯವಸ್ಥೆಯಲ್ಲಿ ಇರುವ ಸಂಕೀರ್ಣ ಸ್ವರೂಪದ ಹಂತಗಳನ್ನು ಜಾಗರೂಕತೆಯಿಂದ ನಿವಾರಿಸಲು ಪ್ರಯತ್ನಿಸುತ್ತಿದ್ದಾರೆ. ಬಹುವಿಧದ ಕೈಗಾರಿಕೆಗಳು ಮತ್ತು ಆರ್ಥಿಕತೆಯ ಇತರ ವಲಯಗಳಿಗೆ ತಾತ್ಪೂರ್ತಿಕ ನೆಲೆಯಲ್ಲಿ ಸ್ಪಂದಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸಾಹಿತಿ ಮತ್ತು ವಿಮಾನ ಚಾಲಕನೂ ಆಗಿದ್ದ ಫ್ರಾನ್ಸ್‌ನ ಆಂಟೊನೆ ಸೇಂಟ್‌ ಎಕ್ಸುಪೆರಿ, ‘ಹೊಸದಾಗಿ ಏನನ್ನೂ ಸೇರ್ಪಡೆ ಮಾಡಲು ಉಳಿದಿಲ್ಲ ಎನ್ನುವಾಗ ಪರಿಪೂರ್ಣತೆ ಸಾಧ್ಯವಾಗುವುದಿಲ್ಲ. ಅದರ ಬದಲಿಗೆ, ಇದು ಇರಬಾರದಿತ್ತು ಎನ್ನಿಸದಿರುವ ಸ್ಥಿತಿ ಬಂದಾಗ ಮಾತ್ರ ಪರಿಪೂರ್ಣತೆ ಹಂತಕ್ಕೆ ತಲುಪಲಾಗುವುದು’ ಎಂದು ಹೇಳಿದ್ದರು.

ಕೇಂದ್ರ ಹಣಕಾಸು ಸಚಿವರು, ತೆರಿಗೆ ಹಂತಗಳ ಗೊಂದಲಮಯ ಹತ್ತಾರು ಸ್ವರೂಪಗಳನ್ನು ಯಾವುದೇ ಮುನ್ಸೂಚನೆ ಇಲ್ಲದೇ ಕೈಬಿಟ್ಟು ಒಂದೇ ತೆರಿಗೆ ವ್ಯವಸ್ಥೆ ಜಾರಿಗೆ ತರುವ ಧೈರ್ಯ ಮತ್ತು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ. ‘ಒಂದು ದೇಶ, ಒಂದು ತೆರಿಗೆ’ ನೀತಿಯನ್ನು ನಿಜವಾದ ಅರ್ಥದಲ್ಲಿ ಜಾರಿಗೆ ತರಲು ಮುಂದಾಬೇಕಾಗಿದೆ. ವಾಸ್ತುಶಿಲ್ಪ, ವಿಜ್ಞಾನ, ಕಲೆ, ಸಾಫ್ಟ್‌ವೇರ್‌ ಅಥವಾ ಜಿಎಸ್‌ಟಿ ಇರಲಿ, ಕಡಿಮೆಯೇ ಹೆಚ್ಚು ಲಾಭಕರ ಎನ್ನುವ ತತ್ವ ಅನುಸರಿಸುವುದೇ ಹೆಚ್ಚು ಜಾಣತನ ಮತ್ತು ಅದನ್ನೇ ಗಮನದಲ್ಲಿ ಇಟ್ಟುಕೊಂಡು ಮುಂದುವರೆಯಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry