ಮುಗಾಬೆ ಎಂಬ ಕ್ರಾಂತಿಕಾರಿಯ ವ್ಯಾಮೋಹದ ಕತೆ

7

ಮುಗಾಬೆ ಎಂಬ ಕ್ರಾಂತಿಕಾರಿಯ ವ್ಯಾಮೋಹದ ಕತೆ

Published:
Updated:
ಮುಗಾಬೆ ಎಂಬ ಕ್ರಾಂತಿಕಾರಿಯ ವ್ಯಾಮೋಹದ ಕತೆ

ಕ್ರಾಂತಿಕಾರಿ, ಗೆರಿಲ್ಲಾ ಹೋರಾಟಗಾರ ರಾಬರ್ಟ್ ಮುಗಾಬೆಯ ಬದುಕಿನ ಚಿತ್ರಣವನ್ನು ಕಪ್ಪು ಬಿಳುಪಿನಲ್ಲಿ ಕಟ್ಟಿ ಕೊಡುವುದು ಬಹಳ ಸುಲಭ. ಮುಗಾಬೆ ಅಧ್ಯಕ್ಷರಾಗಿರುವ ಜಿಂಬಾಬ್ವೆಯಲ್ಲಿ ಕಳೆದ ಕೆಲವು ದಿನಗಳಲ್ಲಿ ನಡೆದ ಬೆಳವಣಿಗೆಗಳು ಹಾಗೆ ಮಾಡುವಂತೆ ಪ್ರೇರೇಪಿಸುವಂತೆಯೂ ಇವೆ. ಆದರೆ ಹಾಗೆ ಮಾಡಿದರೆ ಅದು ಸತ್ಯಕ್ಕೆ ಮಾಡುವ ಅಪಚಾರವಾಗಬಹುದು.

ಮುಗಾಬೆಗೆ ಈಗ 93ರ ಇಳಿ ವಯಸ್ಸು, ಇತ್ತೀಚಿನ ವರ್ಷಗಳಲ್ಲಿ ಅನಾರೋಗ್ಯವೂ ಅವರನ್ನು ತೀವ್ರವಾಗಿ ಕಾಡುತ್ತಿದೆ. ಕಳೆದ 37 ವರ್ಷಗಳ ಆಡಳಿತದಲ್ಲಿ ವಿರೋಧಿಗಳನ್ನು ನಿರ್ದಯವಾಗಿ ದಮನ ಮಾಡಿದ್ದಾರೆ, ಚುನಾವಣೆಗಳಲ್ಲಿ ಅಕ್ರಮ ಎಸಗಿದ್ದಾರೆ, ಆರ್ಥಿಕವಾಗಿ ದೇಶವನ್ನು ತೀವ್ರ ಬಿಕ್ಕಟ್ಟಿಗೆ ತಳ್ಳಿದ್ದಾರೆ ಎಂಬ ಆರೋಪಗಳೆಲ್ಲ ಅವರ ಮೇಲೆ ಇವೆ. ಅವರು ಅಧಿಕಾರದ ಕಡು ವ್ಯಾಮೋಹಿ ಎಂಬುದು ಇನ್ನೊಂದು ಆಪಾದನೆ. ಅದನ್ನು ಸಮರ್ಥಿಸುವಂತೆ, ‘ನನ್ನನ್ನು ಅಧಿಕಾರದಿಂದ ಕೆಳಗೆ ಇಳಿಸಲು ದೇವರಿಂದ ಮಾತ್ರ ಸಾಧ್ಯ’ ಎಂದು ಅವರೇ ಹೇಳಿದ್ದುಂಟು. ತಮ್ಮ ಬಳಿಕ ಜಿಂಬಾಬ್ವೆಯ ಅಧ್ಯಕ್ಷ ಸ್ಥಾನವನ್ನು ಇನ್ನೂ ಯುವತಿ ಎಂದು ಹೇಳಬಹುದಾದ ಹೆಂಡತಿ, 52 ವರ್ಷ ವಯಸ್ಸಿನ ಗ್ರೇಸ್‍ಗೆ ಬಳುವಳಿಯಾಗಿ ಕೊಟ್ಟುಬಿಡಬೇಕು ಎಂಬ ಅತಿಯಾಸೆ ಮುಗಾಬೆ ಅವರಲ್ಲಿದೆ ಎಂಬುದು ಅವರ ಮೇಲಿನ ಹೊಸ ಆಪಾದನೆ.

ಆದರೆ, ಜಿಂಬಾಬ್ವೆಗೆ ರೊಡೇಷಿಯಾ ಎಂಬ ಹೆಸರಿಟ್ಟು ಅದನ್ನು ವಸಾಹತಾಗಿ ಮಾಡಿ ಆಳುತ್ತಿದ್ದ ಬ್ರಿಟಿಷರ ವಿರುದ್ಧ ಹೋರಾಡಿ ಜಿಂಬಾಬ್ವೆಯನ್ನು ಅದರ ನ್ಯಾಯಯುತ ಹಕ್ಕುದಾರರಿಗೆ ಒಪ್ಪಿಸುವಲ್ಲಿ ಮುಗಾಬೆ ನಡೆಸಿದ ಹೋರಾಟ ಅಪ್ರತಿಮವಾದುದು. ಮುಗಾಬೆ 1924ರಲ್ಲಿ ಜನಿಸಿದ್ದು ಸ್ಯಾಲಿಸ್‍ಬರಿಯ ಈಶಾನ್ಯದ ಕಟುಮಾ ಎಂಬಲ್ಲಿ (ಈಗ ಅದು ಜಿಂಬಾಬ್ವೆಯ ರಾಜಧಾನಿ ಹರಾರೆ). ಶಾಲಾ ಶಿಕ್ಷಕರಾಗಿದ್ದ ಮುಗಾಬೆ, ಏಳು ಪದವಿಗಳನ್ನು ಹೊಂದಿದ್ದಾರೆ. ಬ್ರಿಟಿಷರ ವಿರುದ್ಧ ಭಾರಿ ಗೆರಿಲ್ಲಾ ಯುದ್ಧವೊಂದನ್ನು ನಡೆಸಿದ್ದು ಮುಗಾಬೆಗೆ ದೊಡ್ಡ ಖ್ಯಾತಿ ತಂದು ಕೊಟ್ಟಿತು. ಸರ್ಕಾರದ ವಿರುದ್ಧ ಭಾಷಣ ಮಾಡಿದ ಅವರನ್ನು 1964ರಲ್ಲಿ ಬ್ರಿಟಿಷ್ ಸರ್ಕಾರ ಜೈಲಿಗೆ ತಳ್ಳಿತು. ಹತ್ತು ವರ್ಷದ ಸೆರೆವಾಸದ ಬಳಿಕ 1974ರಲ್ಲಿ ಜೈಲಿನಿಂದ ಹೊರಗೆ ಬರುವಾಗ ಮುಗಾಬೆ ದೊಡ್ಡ ನಾಯಕರಾಗಿ ಹೊರಹೊಮ್ಮಿದ್ದರು. ವಸಾಹತುಶಾಹಿ ಆಡಳಿತದ ವಿರುದ್ಧ ಜನರಲ್ಲಿ ಇದ್ದ ಆಕ್ರೋಶವನ್ನೆಲ್ಲಾ ಒಟ್ಟುಗೂಡಿಸಿ ಸ್ವಾತಂತ್ರ್ಯ ಹೋರಾಟದ ಚಿತ್ರಣವನ್ನೇ ಬದಲಿಸಿದರು.

1961ರಲ್ಲಿ ಘಾನಾದ ಸ್ಯಾಲಿ ಹ್ಯಾಫ್ರನ್‍ರನ್ನು ಮುಗಾಬೆ ಮದುವೆಯಾದರು. 1992ರಲ್ಲಿ ಕ್ಯಾನ್ಸರ್‌ನಿಂದ ಸ್ಯಾಲಿ ಮೃತಪಟ್ಟರು. ಜಿಂಬಾಬ್ವೆಯ ಜನರು ಇಂದಿಗೂ ಸ್ಯಾಲಿ ಅವರನ್ನು ತಾಯಿ ಎಂದೇ ಕರೆದು ಗೌರವಿಸುತ್ತಾರೆ.

ಮುಗಾಬೆ 1979ರಲ್ಲಿ ರೊಡೇಷಿಯಾಕ್ಕೆ ಹಿಂದಿರುಗಿದರು. 1980ರಲ್ಲಿ ರೊಡೇಷಿಯಾ ಸ್ವಾತಂತ್ರ್ಯ ಪಡೆದುಕೊಂಡು ಜಿಂಬಾಬ್ವೆ ಆಯಿತು. ದೇಶದ ಮೊದಲ ಪ್ರಧಾನಿಯಾಗಿ ಮುಗಾಬೆ ನೇಮಕವಾದರು.

ಮುಗಾಬೆ ಅವರ ಆಡಳಿತದ ಮೊದಲ ದಿನಗಳ ಬಗ್ಗೆ ದೇಶದೊಳಗೆ ಮತ್ತು ಹೊರಗೆ ಮೆಚ್ಚುಗೆ ಇತ್ತು. ಜಿಂಬಾಬ್ವೆಯ ಜನರಿಗೆ ಸಾಮಾಜಿಕ ಸೌಲಭ್ಯಗಳನ್ನು ದೊರಕಿಸಿಕೊಡಲು ಅವರು ಶಕ್ತಿ ಮೀರಿ ಶ್ರಮಿಸಿದ್ದರು. ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟ ಮಹತ್ವ ಮುಗಾಬೆ ಅವರ ಅತಿ ದೊಡ್ಡ ಸಾಧನೆ ಎಂದೇ ಹೇಳಬಹುದು. ಇಂದು ಜಿಂಬಾಬ್ವೆಯ ಸಾಕ್ಷರತೆಯ ಪ್ರಮಾಣ ಶೇ 90ಕ್ಕೂ ಹೆಚ್ಚು.

ಜನರಿಗೆ ಸಾಮಾಜಿಕ ಸೌಲಭ್ಯಗಳನ್ನು ಒದಗಿಸಲು ಕೊಟ್ಟಷ್ಟು ಅಥವಾ ಅದಕ್ಕಿಂತ ಹೆಚ್ಚು ಮಹತ್ವವನ್ನು ವಿರೋಧಿಗಳನ್ನು ದಮನಿಸಲೂ ಮುಗಾಬೆ ಕೊಟ್ಟರು. ಬದ್ಧ ರಾಜಕೀಯ ವೈರಿ ಜೊಷುವಾ ಕೊಮೊ ಬೆಂಬಲಿಗರನ್ನು ಅತ್ಯಂತ ಕ್ರೂರವಾಗಿ ಹತ್ತಿಕ್ಕಿದ್ದಾರೆ. ಮುಗಾಬೆ ಅವರ ಫಿಫ್ತ್ ಬ್ರಿಗೇಡ್ ಎಂಬ ಸೇನಾ ತುಕಡಿ ಜಿಂಬಾಬ್ವೆಯ ಡಿಬೆಲ್ ಪ್ರಾಂತ್ಯದಲ್ಲಿ ಜೊಷುವಾ ಬೆಂಬಲಿಗರ ಮೇಲೆ ರುದ್ರ ತಾಂಡವವಾಡಿತ್ತು. ಈ ತುಕಡಿಗೆ ಇಂತಹ ಕಾರ್ಯಾಚರಣೆಗಾಗಿಯೇ ಉತ್ತರ ಕೊರಿಯಾ ಸೇನೆಯಿಂದ ವಿಶೇಷ ತರಬೇತಿ ಕೊಡಿಸಲಾಗಿತ್ತು. ‘ಗುಕುರಾಹಂಡಿ’ ಎಂಬ ಹೆಸರಿನ ಈ ದಮನ ಅಭಿಯಾನದಲ್ಲಿ 20 ಸಾವಿರ ಜನರು ಜೀವ ಕಳೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.

ಜಿಂಬಾಬ್ವೆಯ ನೆಲ ಜಿಂಬಾಬ್ವೆಯ ಜನರ ಕೈಯಲ್ಲಿಯೇ ಇರಬೇಕು ಎಂಬುದು ಸ್ವಾತಂತ್ರ್ಯ ಸಮರದ ಸಂದರ್ಭದಲ್ಲಿಯೂ ಮುಗಾಬೆ ಹೋರಾಟದ ತಿರುಳಾಗಿತ್ತು. ಸ್ವಾತಂತ್ರ್ಯ ಬಂದ ಬಳಿಕ ಅದನ್ನು ಅವರು ಜಾರಿಗೆ ತರಲು ಯತ್ನಿಸಿದರು. ದೇಶದಲ್ಲಿದ್ದ ಶೇ 1.5ರಷ್ಟು ಬಿಳಿಯರ ಕೈಯಲ್ಲಿ 75 ಸಾವಿರ ಹೆಕ್ಟೇರ್ ಭೂಮಿ ಇತ್ತು. ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದ ಈ ನೆಲವೇ ಜಿಂಬಾಬ್ವೆಯ ಅರ್ಥ ವ್ಯವಸ್ಥೆಯ ಬೆನ್ನೆಲುಬಾಗಿತ್ತು. ಬಿಳಿಯರ ಕೈಯಲ್ಲಿದ್ದ ಭೂಮಿಯನ್ನು ಕಿತ್ತುಕೊಂಡು ಜಿಂಬಾಬ್ವೆಯ ಬಡವರಿಗೆ ಹಂಚಲಾಯಿತು. ಮುಗಾಬೆ ಅವರ ಭೂಸುಧಾರಣಾ ನೀತಿ ಏಕಕಾಲದಲ್ಲಿ ದೊಡ್ಡ ಯಶಸ್ಸು ಮತ್ತು ಅತಿ ದೊಡ್ಡ ವೈಫಲ್ಯವಾಗಿ ಕಾಣುತ್ತಿದೆ. ಆಫ್ರಿಕಾ ಖಂಡದ ಅತ್ಯಂತ ಶ್ರೀಮಂತ ದೇಶವಾಗಿದ್ದ ಜಿಂಬಾಬ್ವೆ, ಭೂಸುಧಾರಣೆ ಬಳಿಕ ಕುಸಿಯತೊಡಗಿತು. ಜನರಲ್ಲಿ ಹಂಚಿಹೋದ ವಾಣಿಜ್ಯ ಬೆಳೆಗಳ ತೋಟಗಳು ಒಣಗಿ ಹೋದವು. ಇದು ಜಿಂಬಾಬ್ವೆ ಅರ್ಥ ವ್ಯವಸ್ಥೆಯ ಪತನದ ಆರಂಭ ಎಂದು ಕೆಲವರು ಹೇಳುತ್ತಾರೆ. ಆದರೆ, ಎಲ್ಲ ಸಮುದಾಯಗಳ ಜನರ ಹಾಗೆಯೇ ಜಿಂಬಾಬ್ವೆಯ ಜನರಿಗೂ ಭೂಮಿ ಪವಿತ್ರವಾದುದು. ಅದ

ರೊಂದಿಗಿನ ಭಾವನಾತ್ಮಕ ನಂಟಿಗೆ ಬೆಲೆ ಕಟ್ಟಲಾಗದು. ಜಿಂಬಾಬ್ವೆಯ ಕಪ್ಪುಜನರಿಗೆ ಮುಗಾಬೆ ಕೊಟ್ಟ ಆತ್ಮವಿಶ್ವಾಸ ಬಹಳ ದೊಡ್ಡದೇ.

ಅಧಿಕಾರಕ್ಕೆ ಏರಿದ ಮುಗಾಬೆ ಸರ್ವಾಧಿಕಾರಿಯಂತೆ ವರ್ತಿಸತೊಡಗಿದರು ಎಂಬ ಟೀಕೆಗೆ ಕಾರಣಗಳಿವೆ. 2000ನೇ ಇಸವಿಯಲ್ಲಿ ಕರಡು ಸಂವಿಧಾನಕ್ಕೆ ಸಂಬಂಧಿಸಿ ನಡೆದ ಜನಮತಗಣನೆಯಲ್ಲಿ ಮುಗಾಬೆಗೆ ಸೋಲಾಗುತ್ತದೆ. ಆದರೆ ಈ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಗೆರಿಲ್ಲಾಗಳು ಮತ್ತು ಸೇನೆಯು ಜತೆಯಾಗಿ ಭಾರಿ ಹಿಂಸಾಚಾರ ಎಸಗಿ ಪರಿಸ್ಥಿತಿಯನ್ನು ಮುಗಾಬೆಗೆ ಬೇಕಾದಂತೆ ಪರಿವರ್ತಿಸುತ್ತದೆ.

2008ರ ಚುನಾವಣೆಯಲ್ಲಿ ಇದು ಪುನರಾವರ್ತನೆಯಾಗುತ್ತದೆ. 2008ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಮೊದಲ ಸುತ್ತಿನಲ್ಲಿ ಮೋರ್ಗನ್ ಸವನ್‍ಗಿರೈಗೆ ಮುನ್ನಡೆ ದೊರೆಯುತ್ತದೆ. ಎಂದಿನಂತೆ ಮುಗಾಬೆ ಸೇನೆಯು ಮೋರ್ಗನ್ ಬೆಂಬಲಿಗರನ್ನು ಹಿಡಿದು ಚಚ್ಚಲಾರಂಭಿಸುತ್ತದೆ. ಬೆಂಬಲಿಗರನ್ನು ರಕ್ಷಿಸುವುದಕ್ಕಾಗಿ ಮೋರ್ಗನ್ ಚುನಾವಣೆಯಿಂದ ಹಿಂದಕ್ಕೆ ಸರಿಯುತ್ತಾರೆ. ಈ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡರು ಎಂಬುದು ಒಂದು ಲೆಕ್ಕ.

ಮುಗಾಬೆ ಸರ್ವಾಧಿಕಾರಿ ಮನೋಭಾವ ತಳೆದರು ಎಂಬುದನ್ನು ಸೂಚಿಸುವ ಇನ್ನೂ ಒಂದು ಆಸಕ್ತಿಕರ ಅಂಶವಿದೆ. ತಮ್ಮ ಆಳ್ವಿಕೆಯ ಮೊದಲ 20 ವರ್ಷದಲ್ಲಿ ಸೂಟು ಬೂಟು ತೊಟ್ಟು ಕಾಣಿಸಿಕೊಳ್ಳುತ್ತಿದ್ದ ಮುಗಾಬೆ, ಬಳಿಕ ಆಫ್ರಿಕಾದ ಸರ್ವಾಧಿಕಾರಿಗಳು ಧರಿಸುತ್ತಿದ್ದ ರೀತಿಯ ಗಾಢ ಬಣ್ಣದ ಬಟ್ಟೆ ಧರಿಸತೊಡಗಿದರು.

1996ರಲ್ಲಿ ಗ್ರೇಸ್ ಮರುಫು ಅವರನ್ನು ಮುಗಾಬೆ ಮದುವೆಯಾದರು. ಆದರೆ ಆಗಲೇ ಅವರಿಗೆ ಇಬ್ಬರು ಮಕ್ಕಳಿದ್ದರು. ಬಡವರ ಪರ ಹೋರಾಟವೇ ತನ್ನ ಧ್ಯೇಯ ಎಂದು ಹೇಳಿಕೊಂಡ ಮುಗಾಬೆಯ ವೈಯಕ್ತಿಕ ಜೀವನ ಐಷಾರಾಮದಿಂದ ಕೂಡಿದ್ದು. ಹೆಂಡತಿ ಗ್ರೇಸ್ ಅವರ ವರ್ತನೆ ಈ ಐಷಾರಾಮವನ್ನು ಇನ್ನಷ್ಟು ಢಾಳಾಗಿ ಎತ್ತಿ ತೋರಿಸತೊಡಗಿದೆ. ಗ್ರೇಸ್ ಅವರ ಭಾರಿ ಮೌಲ್ಯದ ಆಭರಣಗಳ ಖರೀದಿ, ಅದಕ್ಕಾಗಿ ತಿರುಗಾಟ, ರೂಪದರ್ಶಿಯೊಬ್ಬರ ಮೇಲೆ ನಡೆಸಿದ ಹಲ್ಲೆಗಳು ಮುಗಾಬೆ ಮುಖಕ್ಕೆ ಮಸಿ ಬಳಿದಿವೆ. ಕೊನೆಗಾಲದಲ್ಲಿ ಅಧಿಕಾರವನ್ನು ಹೆಂಡತಿಗೆ ಕೊಟ್ಟು ಹೋಗಬೇಕು ಎಂಬ ಅವರ ಮಹದಾಸೆಯಿಂದಾಗಿ ಅವರು ದೊಡ್ಡ ಅವಮಾನಕ್ಕೆ ಈಡಾಗಬೇಕಾಯಿತು.

ಮುಗಾಬೆಯನ್ನು ಈಗಲೂ ಜನರು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟದ ಸಂಕೇತವಾಗಿಯೇ ನೋಡುತ್ತಾರೆ. ಹಾಗಾಗಿಯೇ ಜಿಂಬಾಬ್ವೆಯ ಜನರು ಅವರನ್ನು ಟೀಕಿಸುವುದಿಲ್ಲ. ಸ್ವಾತಂತ್ರ್ಯ ಸಮರದ ಮುಂಚೂಣಿಯಲ್ಲಿದ್ದ ಮುಗಾಬೆ, ಮಹಾತ್ಮ ಗಾಂಧಿಯ ಹಾಗೆ ಅಧಿಕಾರವನ್ನು ತ್ಯಜಿಸಿ ಜಿಂಬಾಬ್ವೆಯ ರಾಷ್ಟ್ರಪಿತ ಆಗಬಹುದಿತ್ತು. ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಅವರ ರೀತಿಯಲ್ಲಿ ಸ್ವಾತಂತ್ರ್ಯದ ಬಳಿಕ ದೇಶಕ್ಕೊಂದು ದಿಕ್ಕು ತೋರಿಸಿ, ಬದಿಗೆ ಸರಿದು ನಿಲ್ಲಬಹುದಿತ್ತು. ಆದರೆ ಮುಗಾಬೆ ತಮ್ಮದೇ ದಾರಿ ಹಿಡಿದರು. ತಮಗಷ್ಟೇ ಅಲ್ಲ, ತಮ್ಮ ಹೆಂಡತಿಗೂ ಅಧಿಕಾರ ಬೇಕು ಎಂಬ ಹಟ ಹಿಡಿದು ಇಡೀ ಜೀವನದ ಸಾಧನೆಗೆ ಕರಿಛಾಯೆ ಕವಿಯುವಂತೆ ಮಾಡಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry