7

ಭಾನುವಾರ, 19–11–1967

Published:
Updated:

ರಾಜ್ಯ ಸರ್ಕಾರದ ಆಶ್ಚರ್ಯ: ಕಾರವಾರ ಮೂಲಕ ರಫ್ತಿಗೆ ಸೂಯೆಜ್ ಬಿಕ್ಕಟ್ಟು ಅಡ್ಡಿಯೆ?

ಬೆಂಗಳೂರು, ನ. 18– ಸೂಯೆಜ್ ಕಾಲುವೆ ‘ಬಿಕ್ಕಟ್ಟಿನ ಕಾರಣ’ ಮೆಟಲ್ಸ್ ಮತ್ತು ಮಿನರಲ್ಸ್ ಟ್ರೇಡಿಂಗ್ ಕಾರ್ಪೊರೇಷನ್ ಹಠಾತ್ತನೆ ಕೈಗೊಂಡ ನಿರ್ಧಾರದ ಪರಿಣಾಮವಾಗಿ ರಾಜ್ಯದ ಕಾರವಾರ ಮತ್ತು ಬಿಳಿಕೆರೆ ಬಂದರುಗಳಿಂದ ಕಬ್ಬಿಣದ ಅದುರು ರಫ್ತು ಕಳೆದ ತಿಂಗಳು ಹದಿನೈದರಿಂದ ಸಂಪೂರ್ಣವಾಗಿ ನಿಂತು ಹೋಗಿದೆಯೆಂದು ವರದಿಯಾಗಿದೆ.

ಮುನ್ಸೂಚನೆಯೇ ಇಲ್ಲದೆ ಕೈಗೊಳ್ಳಲಾಯಿತೆಂದು ಹೇಳಲಾದ ಎಂ.ಎಂ.ಟಿ.ಸಿ.ಯ ಈ ನಿರ್ಧಾರವು ರಾಜ್ಯ ಸರ್ಕಾರಕ್ಕೆ ಆಶ್ಚರ್ಯವನ್ನುಂಟು ಮಾಡಿದ್ದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಈ ಬಗ್ಗೆ ಕೇಂದ್ರದೊಡನೆ ಪ್ರಸ್ತಾಪಿಸಿದ್ದಾರೆಂದು ತಿಳಿದು ಬಂದಿದೆ.

**

ಮಹಾಜನ್ ವರದಿ ಮಹಾರಾಷ್ಟ್ರ ಕಾಂಗ್ರೆಸ್ ತಿರಸ್ಕಾರ

ನಾಗಪುರ, ನ. 18– ಮಹಾಜನ್ ಆಯೋಗದ ವರದಿಯನ್ನು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯು ಇಂದು ನಿರಾಕರಿಸಿ ಗಡಿ ಪ್ರದೇಶದಲ್ಲಿರುವ ಜನತೆಗೆ ಕೇಂದ್ರ ಸರ್ಕಾರ ಮತ್ತು ಸಂಸತ್ತು ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಪಡಿಸಿತು.

ಮಹಾಜನ್ ಆಯೋಗಕ್ಕೆ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಮನವಿ ಪತ್ರದಲ್ಲಿ ವಿಶದವಾಗಿ ತಿಳಿಸಿರುವಂತೆ ನ್ಯಾಯಬದ್ಧವಾಗಿ ಪಕ್ಷಪಾತವಿಲ್ಲದೆ ಶಾಸ್ತ್ರೀಯ ರೀತಿಯಲ್ಲಿ ವಿವಾದವನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಅದು ಹೇಳಿದೆ.

**

ನನಸಾದ ವೆಂಕಟಪ್ಪ ಕಲಾಮಂಟಪ

ಬೆಂಗಳೂರು, ನ. 18– ‘ರಾಜ್ಯಕ್ಕೊಂದು ಆರ್ಟ್ ಗ್ಯಾಲರಿ’ ಕಲಾಪ್ರಿಯರು ಬಹು ದಿನಗಳಿಂದ ಕಾಣುತ್ತಿರುವ ಕನಸು.

ನಿವೇಶನ ಆಯ್ಕೆ, ಅಂದಾಜುಗಳ ಸಿದ್ಧತೆ, ಫೈಲುಗಳ ಅಲೆದಾಟ, ಅಧಿಕಾರಿಗಳ ಓಡಾಟ– ಮೂರು ವರ್ಷಗಳ ಶ್ರಮಕ್ಕೆ ಕೊನೆಗೊಮ್ಮೆ ವಿರಾಮ. ನಗರದ ಕಬ್ಬನ್‌ಪಾರ್ಕ್‌ನ, ಸರ್ಕಾರಿ ವಸ್ತು ಸಂಗ್ರಹಾಲಯದ ಪಕ್ಕದಲ್ಲಿಯೇ ದಿವಂಗತ ಕೆ. ವೆಂಕಟಪ್ಪ ಅವರ ಹೆಸರಿನಲ್ಲಿ ‘ಕಲಾಮಂಟಪ’ದ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ನೀಡಿ ಆದೇಶ ಹೊರಡಿಸಿದೆ.

**

ಹಿಂದಿ ಸಂಪರ್ಕ ಭಾಷೆಗೆ ತಮಿಳುನಾಡಿನ ತೀವ್ರ ವಿರೋಧ

ಅಣ್ಣಾಮಲೈನಗರ, ನ. 18– ಹಿಂದಿಯನ್ನು ಬಲಾತ್ಕಾರದಿಂದ ಅಡಳಿತ ಭಾಷೆಯನ್ನಾಗಿ ಹೇರುವುದನ್ನು ಒಪ್ಪಿಕೊಳ್ಳಬಾರದೆಂಬ ಜನತೆಯ ನಿರ್ಧಾರವನ್ನು ಡಿ.ಎಂ.ಕೆ. ಸರ್ಕಾರ ಪ್ರತಿನಿಧಿಸುತ್ತದೆ ಎಂದು ಮದ್ರಾಸ್ ಮುಖ್ಯಮಂತ್ರಿ ಶ್ರೀ ಸಿ.ಎನ್. ಅಣ್ಣಾದೊರೈರವರು ಇಂದು ತಿಳಿಸಿದರು.

**

ಯಾವುದೇ ಪರಿಸ್ಥಿತಿ ಎದುರಿಸಲೂ ಸಿದ್ಧ: ಅಜಯ್

ಕಲ್ಕತ್ತ, ನ. 18– ಯಾವುದೇ ಪರಿಸ್ಥಿತಿಯನ್ನು ಎದುರಿಸಲು ತಾವು ಸಿದ್ಧವಿರುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಶ್ರೀ ಅಜಯ ಮುಖರ್ಜಿ ಇಂದು ಇಲ್ಲಿ ನುಡಿದರು.

ಡಿಸೆಂಬರ್ 18 ರಂದು ನಡೆಯಲಿರುವ ಬಲಾಬಲ ಪರೀಕ್ಷೆಯಲ್ಲಿ ಸಂಯುಕ್ತ ರಂಗಕ್ಕೆ ಜಯ ದೊರೆಯುವುದೇ ಅಥವಾ ಸೋಲುಂಟಾಗುವುದೇ ಎಂಬುದನ್ನು ಹೇಳಲು ಸಾಧ್ಯವಿಲ್ಲವೆಂದೂ ಅವರು ತಿಳಿಸಿ ಜನತೆ ಸರ್ಕಾರದ ಬೆಂಬಲಕ್ಕಿದೆ ಎಂದೂ ಸರ್ಕಾರವನ್ನು ಉರುಳಿಸುವ ಯತ್ನವನ್ನು ಅದು ಸಹಿಸದೆಂದೂ ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry