7

‘ಸುಲಿಗೆಕೋರರು ಹುಟ್ಟುವ ಭಯ’

Published:
Updated:
‘ಸುಲಿಗೆಕೋರರು ಹುಟ್ಟುವ ಭಯ’

* ಮಸೂದೆ ಬಗ್ಗೆ ಗೊಂದಲ ಸೃಷ್ಟಿ ಆಗಿದ್ದು ಏಕೆ?

ರೋಗಿಗಳಿಗೆ ನೀಡುವ ಚಿಕಿತ್ಸೆಯ ದರ ನಿಯಂತ್ರಿಸಲು ಸರ್ಕಾರ ಮುಂದಾಯಿತು. ಮಾರ್ಗಸೂಚಿಯಲ್ಲಿ ಹೇಳಬೇಕಾದ ವಿಚಾರಗಳಿಗೆ ಕಾಯ್ದೆ ರೂಪಿಸಲಾಯಿತು. ಇವು ಈ ಗೊಂದಲ ಸೃಷ್ಟಿಗೆ ಕಾರಣ. ಮೊದಲೇ ನಮ್ಮನ್ನು ಕರೆದು ಚರ್ಚೆ ಮಾಡಿದ್ದರೆ ಆಗಲೇ ಸಮಸ್ಯೆ ಬಗೆಹರಿಯುತ್ತಿತ್ತು.

* ನಿಮ್ಮದು ಸೇವೆ ಎಂದು ಹೇಳಿಕೊಳ್ಳುತ್ತೀರಿ. ಅದು ವ್ಯಾಪಾರ ಆಗಿದೆಯಲ್ಲವೇ?

ನಮ್ಮನ್ನು ಈಗಾಗಲೇ ವ್ಯಾಪಾರ ಪರವಾನಗಿ ಹಾಗೂ ಗ್ರಾಹಕರ ಕಾಯ್ದೆ ವ್ಯಾಪ್ತಿಯಲ್ಲಿ ತರಲಾಗಿದೆ. ನಾವು ವೃತ್ತಿಯನ್ನು ಸೇವೆ ಎಂದು ಭಾವಿಸಿದರೂ, ಸರ್ಕಾರವೇ ನಮ್ಮನ್ನು ವ್ಯಾಪಾರಿಗಳೆಂದು ಪರಿಗಣಿಸಿದೆ. ನಮಗೂ ಇದು ಎರಡು ಅಲಗಿನ ಕತ್ತಿ.

* ವೈದ್ಯರೂ ಮುಷ್ಕರ ಹೂಡುವುದು, ಚಿಕಿತ್ಸೆ ನೀಡಲ್ಲ ಎನ್ನುವುದು, ಒಪಿಡಿ ಮುಚ್ಚುವುದು ಎಷ್ಟು ಸರಿ?

ಕರ್ನಾಟಕವು ವೈದ್ಯಕೀಯ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯುತ್ತಿದೆ. ಆಸ್ಪತ್ರೆಗಳು ಅತ್ಯುತ್ಕೃಷ್ಟ ವೈದ್ಯಕೀಯ ಉಪಕರಣಗಳನ್ನು ಅಳವಡಿಸುತ್ತಿವೆ. ಇಲ್ಲಿ ಒಳ್ಳೆಯ ಸೇವೆ ಸಿಗುತ್ತಿದೆ. ಇಲ್ಲಿ ಚಿಕಿತ್ಸೆ ಪಡೆಯಲು ವಿದೇಶಗಳಿಂದ ಜನ ಬರುತ್ತಾರೆ. ಕಳೆದ ಅಧಿವೇಶನದಲ್ಲಿ ಮಂಡಿಸಿದ ಮಸೂದೆಯೇ ಕಾಯ್ದೆ ಆಗುತ್ತಿದ್ದರೆ ಇಂಥ ಬೆಳವಣಿಗೆಗಳಿಗೆ ಅಡ್ಡಿ ಉಂಟಾಗುತ್ತಿತ್ತು. ವೈದ್ಯರ ಕುರಿತು ಒಡಕು ಭಾಷೆ ಬಳಸಿದ್ದು ನೋವು ಉಂಟು ಮಾಡಿದೆ. ಹಾಗಾಗಿ ಈ ದಾರಿ ಹಿಡಿಯಬೇಕಾಯಿತು.

* ಹೆಚ್ಚಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದರ ಪ್ರಕಟಿಸುವುದಿಲ್ಲ. ಕೇಸ್‌ ಶೀಟ್‌, ಪರೀಕ್ಷೆಯ ಫಲಿತಾಂಶವನ್ನು ನೀಡುವುದಿಲ್ಲ ಹೀಗೇಕೆ?

2007ರ ಕೆಪಿಎಂಇ ಕಾಯ್ದೆ ಪ್ರಕಾರ, ರೋಗಿ ಕೇಳಿದರೆ ವೈದ್ಯಕೀಯ ದಾಖಲೆ ಕೊಡಲೇ ಬೇಕು. ಯಾರೋ ಒಬ್ಬರು ಇಬ್ಬರು ಕೊಡದೇ ಇರಬಹುದು. ಕುರಿಮಂದೆಯಲ್ಲಿ ಕಪ್ಪುಕುರಿಯೂ ಇರುತ್ತದೆ. ಬಿಳಿ ಕುರಿಯೂ ಇರುತ್ತದೆ. ಶೇ 98 ರಷ್ಟು ಮಂದಿ ಸರಿಯಾಗಿಯೇ ಇದ್ದಾರೆ. ಶೇ 2ರಷ್ಟು ಮಂದಿ ತಪ್ಪು ಮಾಡುತ್ತಿರಬಹುದು. ತಪ್ಪು ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಲಿ. 2007ರ ಕಾಯ್ದೆ ಅಡಿಯೇ ಅನೇಕರು ಶಿಕ್ಷೆಗೆ ಗುರಿಯಾಗಿದ್ದಾರೆ.

* ಸತ್ತವರ ಹೆಸರಲ್ಲಿ ನಕಲಿ ಬಿಲ್‌ ಮಾಡುವುದು, ಸರ್ಕಾರಿ ಯೋಜನೆಗಳನ್ನೂ ದುರ್ಬಳಕೆ ಮಾಡುತ್ತಿರುವುದು ನಿಜವಲ್ಲವೇ?

ಸತ್ತವರ ಹೆಸರಲ್ಲಿ ಬಿಲ್‌ ಮಾಡಿಸಿಕೊಳ್ಳುವುದಕ್ಕಿಂತ ದೊಡ್ಡ ಆತ್ಮವಂಚನೆ ಬೇರೆ ಇಲ್ಲ. ಆ ಥರ ಕೆಲವರು ಮಾಡಿದ್ದಾರೆ. ಅಂಥವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬಹುದು. ಗ್ರಾಹಕರ ವೇದಿಕೆ ಮೂಲಕವೂ ನ್ಯಾಯ ಪಡೆಯಬಹುದು. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಶೇ 85ರಿಂದ 90ರಷ್ಟು ದೂರುಗಳನ್ನು ಗ್ರಾಹಕರ ವೇದಿಕೆಗಳು ವಿಲೇವಾರಿ ಮಾಡುತ್ತಿವೆ. ಜಿಲ್ಲೆಗಳಲ್ಲಿ ತಿಂಗಳಿಗೆ ಸರಾಸರಿ 200ರಷ್ಟು ಪ್ರಕರಣಗಳು ಇತ್ಯರ್ಥವಾಗುತ್ತಿವೆ.

* ಹೆಚ್ಚು ಬಿಲ್‌ ಮಾಡಲು, ರೋಗಿಗೆ ಅಗತ್ಯ ಇಲ್ಲದಿದ್ದರೂ ಬೇರೆ ಬೇರೆ ಪರೀಕ್ಷೆಗಳನ್ನು ನಡೆಸುತ್ತಾರೆ ಎಂಬ ಆರೋಪವೂ ಇದೆಯಲ್ಲ?

ಒಂದೆರಡುಕಡೆ ಹೀಗೆ ಮಾಡಿರಬಹುದು. ಈ ಹಿಂದೆ ವ್ಯಕ್ತಿಗೆ ಜ್ವರ ಬಂದರೆ ಅದಕ್ಕೆ ಮಾತ್ರವಲ್ಲದೆ ಇತರ ನಾಲ್ಕು ಕಾಯಿಲೆಗಳಿಗೂ ಚಿಕಿತ್ಸೆ ನೀಡುತ್ತಿದ್ದರು. ಈಗ ಏನಿದ್ದರೂ ಪುರಾವೆ ಆಧರಿತ ಚಿಕಿತ್ಸೆ. ಹಾಗಾಗಿ ಚಿಕಿತ್ಸೆ ವೆಚ್ಚ ಜಾಸ್ತಿ. ಗುಣಮಟ್ಟವೂ ಜಾಸ್ತಿ. ಜನ ಖಾಸಗಿ ಆಸ್ಪತ್ರೆಗಳನ್ನು ಹುಡುಕಿಕೊಂಡು ಹೋಗುವುದು ಅವರ ಮೇಲಿನ ನಂಬಿಕೆಯಿಂದ.

* ಚಿಕಿತ್ಸೆ ದರ ಪ್ರಕಟಿಸಬೇಕು ಎಂಬ ಅಂಶ ಈ ಹಿಂದಿನ ಕಾಯ್ದೆಯಲ್ಲಿಯೇ ಇದ್ದರೂ ಏಕೆ ಪಾಲಿಸುತ್ತಿಲ್ಲ?

ಸಣ್ಣ ಆಸ್ಪತ್ರೆಯಲ್ಲೂ 500ರಿಂದ 1000 ವಿಧಾನಗಳನ್ನು ಅನುರಿಸುತ್ತಾರೆ. ದರ ಪಟ್ಟಿಯನ್ನು ಗೋಡೆಯಲ್ಲಿ ಹಾಕುವುದು ಹಳೇಯ ವಿಧಾನ. ನಾವೀಗ ಆಧುನಿಕ ತಂತ್ರಜ್ಞಾನದ ಯುಗದಲ್ಲಿದ್ದೇವೆ. ಸಾಫ್ಟ್‌ ಕಾಪಿ ಕೊಡುತ್ತೇವೆ. ವೆಬ್‌ಸೈಟ್‌ನಲ್ಲಿ ಇದನ್ನು ಪ್ರಕಟಿಸುತ್ತೇವೆ.

* ನಿಯಮ ಪಾಲಿಸಿದ್ದರೆ, ಜನರೇಕೆ ಸಾಮಾಜಿಕ ಮಾಧ್ಯಮಗಳಲ್ಲಿ ಖಾಸಗಿ ಆಸ್ಪತ್ರೆಗಳ ವಿರುದ್ಧ ಹರಿಹಾಯುತ್ತಿದ್ದರು?

ಬಹಳಷ್ಟು ಆಸ್ಪತ್ರೆಗಳು ಪಾಲಿಸುತ್ತಿಲ್ಲ ಎಂಬುದು ನಿಜ. ಹಾಗಾಗಿ ಸ್ವಯಂ ಸುಧಾರಣೆ ಬಗ್ಗೆ, ಪಾರದರ್ಶಕತೆ ಕಾಪಾಡುವ ಬಗ್ಗೆ ವೈದ್ಯರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜನರಲ್ಲಿ ಆಕ್ರೋಶ ಇಲ್ಲದೇ ಇರುತ್ತಿದ್ದರೆ ಈ ಕಾಯ್ದೆಯೇ ರೂಪುಗೊಳ್ಳುತ್ತಿರಲಿಲ್ಲ. ನಮ್ಮನ್ನು ನಾವೇ ಈ ಪರಿಸ್ಥಿತಿಗೆ ತಳ್ಳಿಕೊಂಡಿದ್ದೇವೆಯೇ ಎಂದು ವೈದ್ಯರೂ ಆತ್ಮಾವಲೋಕನ ಮಾಡಿಕೊಳ್ಳಬೇಕು.

* ತಪ್ಪು ಮಾಡುವವರು ಕಾಯ್ದೆಗೆ ಭಯಪಡುವುದು ಸಹಜ. ಕುಂಬಳ ಕಾಯಿ ಕಳ್ಳ ಎಂದರೆ ನೀವು ಹೆಗಲು ಮುಟ್ಟಿನೋಡಿಕೊಳ್ಳುವುದೇಕೆ?

ಈಗಾಗಲೇ ವೈದ್ಯರನ್ನು ಸುಲಿಗೆ ಮಾಡುವ ಬಹಳಷ್ಟು ಹೋರಾಟಗಾರರು ಹುಟ್ಟಿಕೊಂಡಿದ್ದಾರೆ. ಅವರು ಒಂದು ಥರ ದಗಾಕೋರರು ಇದ್ದಂತೆ. ಭವಿಷ್ಯದಲ್ಲಿ ‘ಕೆಪಿಎಂಇ ಕಾಯ್ದೆ ಕಾರ್ಯಕರ್ತರು’ ಹುಟ್ಟಿಕೊಳ್ಳುತ್ತಾರೆ ಎಂಬ ಭಯ ನಮಗಿತ್ತು. ಕುಂದುಕೊರತೆ ಸಮಿತಿಗಳು ಬಂದರೆ ಅವು ಚೌಕಾಸಿ ಮಟ್ಟಕ್ಕೆ ಇಳಿಯುತ್ತಿದ್ದವು. ನಮ್ಮ ನಿಯಂತ್ರಣಕ್ಕೆ ಈಗಾಗಲೇ ಏಳು ಕಾಯ್ದೆಗಳಿವೆ. ಎಂಟನೆಯದು ಏಕೆ ಎಂಬುದಷ್ಟೇ ನಮ್ಮ ಪ್ರಶ್ನೆ.

* ಕಾಯ್ದೆಯಲ್ಲಿ ಬದಲಾವಣೆ ಮಾಡಿಲ್ಲ. ತಪ್ಪು ತಿಳಿವಳಿಕೆ ನಿವಾರಿಸಿದ್ದೇವೆ ಎಂದು ಆರೋಗ್ಯ ಸಚಿವರು ಹೇಳಿದ್ದಾರಲ್ಲ?

ಕೆಲವು ವಿಚಾರಗಳಲ್ಲಿ ವೈದ್ಯರಿಗೆ ಸ್ಪಷ್ಟತೆ ಇರಲಿಲ್ಲ ಎಂಬುದು ನಿಜ. ಬಿಪಿಎಲ್‌ನವರಿಗೆ ನಾವು ದರ ನಿಗದಿಪಡಿಸುತ್ತೇವೆ. ಎಪಿಎಲ್‌ನವರಿಗೆ ಎಷ್ಟು ಬೇಕಾದರೂ ದರ ವಿಧಿಸುವ ಸ್ವಾತಂತ್ರ್ಯ ನಿಮಗೆ ಇದೆ. ಆದರೆ ಅದರ ದರಪಟ್ಟಿಯನ್ನು ಪ್ರದರ್ಶಿಸಿ ಎಂದಿದ್ದಾರೆ. ಎಪಿಎಲ್‌ನವರಿಗೂ ಸಾರ್ವತ್ರಿಕ ಆರೋಗ್ಯ ಯೋಜನೆಯಡಿ ಶೇ 30ರಷ್ಟು ಹಣವನ್ನು ಸರ್ಕಾರ ಭರಿಸುತ್ತವೆ ಎಂದಿದ್ದಾರೆ. ಕುಂದುಕೊರತೆ ನಿವಾರಣಾ ಸಮಿತಿ ಮುಂದೆ ವಕೀಲರ ಜೊತೆ ಹಾಜರಾಗುವಂತಿಲ್ಲ ಎಂಬ ನಿರ್ಬಂಧ ವಿನಾಯಿತಿಗೆ ಒಪ್ಪಿದ್ದಾರೆ.

ದರ ವಿವಾದವನ್ನು ಬಗೆಹರಿಸಲು ಹಿಂದಿನ ಕಾಯ್ದೆಯಲ್ಲಿದ್ದ ಜಿಲ್ಲಾಧಿಕಾರಿ ಸಮಿತಿಗೇ ಈ ಅಧಿಕಾರ ಕೊಡಿ. ಚಿಕಿತ್ಸೆಯಲ್ಲಿ ಅಸಡ್ಡೆಗೆ ಸಂಬಂಧಿಸಿದ ವ್ಯಾಜ್ಯಗಳಿದ್ದರೆ ಅದನ್ನು ಕರ್ನಾಟಕ ವೈದ್ಯಕೀಯ ಪರಿಷತ್ತಿಗೆ ರವಾನಿಸಿ. ಕ್ರಿಮಿನಲ್‌ ಅಂಶಗಳಿದ್ದರೆ ಕೋರ್ಟ್‌ಗೆ ಒಪ್ಪಿಸಿ ಎಂಬ ಬೇಡಿಕೆಗೆ ಸರ್ಕಾರ ಒಪ್ಪಿದೆ. ದುರುದ್ದೇಶದಿಂದ ದೂರು ನೀಡಿದವರ ವಿರುದ್ಧ ಕ್ರಮಕ್ಕೂ ಸರ್ಕಾರ ಸಮ್ಮತಿಸಿದೆ. ಜೈಲು ಶಿಕ್ಷೆ ವಿಧಿಸುವ ಅಂಶವನ್ನು ಕೈಬಿಡುವುದಾಗಿ ಹೇಳಿದ್ದಾರೆ.⇒v

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry