7

ಶಾಲು ಹೊದಿಸಿ ಹೊಡೆಯುವುದೆಂದರೆ ಇದು!

Published:
Updated:

ಬೆಂಗಳೂರು: ವಿದ್ವಾಂಸರ ಮಾತುಗಳು ಚಿಂತನೆಗೆ ಹಚ್ಚುವುದರ ಜೊತೆಯಲ್ಲೇ ಹೇಗೆ ಹೊಟ್ಟೆ ಹುಣ್ಣಾಗುವಂತೆ ನಗಿಸಬಲ್ಲವು ಎನ್ನುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಅಂಕಿತ ಪುಸ್ತಕ ಪುರಸ್ಕಾರ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಸಾಕ್ಷಿಯಾಯಿತು.

ಅಂದು ಮುಖ್ಯ ಭಾಷಣಕಾರರಾಗಿದ್ದ ಕವಿ ಡಾ.ಸಿದ್ದಲಿಂಗಯ್ಯ ಅವರು, ಹಿಂದೆ ಒಮ್ಮೆ ತಿ.ನಂ.ಶ್ರೀಕಂಠಯ್ಯ ಹಾಗೂ ಬಸವಾರಾಧ್ಯ ಅವರ ನಡುವೆ ನಡೆದ ಸಂಭಾಷಣೆಯನ್ನು ನೆನಪಿಸಿಕೊಟ್ಟು ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.

ಅವರು ಪ್ರಸ್ತಾ‍‍ಪಿಸಿದ ಸಂಭಾಷಣೆಯ ವಿವರ ಹೀಗಿದೆ; ಕನ್ನಡ ಸಾಹಿತ್ಯ ಪರಿಷತ್‌ ನಿಘಂಟು ಸಮಿತಿಯಲ್ಲಿ ಕೆಲಸ ಮಾಡುತ್ತಿದ್ದ ಬಸವರಾಧ್ಯ ಅವರು ಸಮಿತಿಯ ಸದಸ್ಯರಾಗಿದ್ದ ತಿ.ನಂ.ಶ್ರೀಕಂಠಯ್ಯ ಅವರಿಗೆ ಒಂದು ಹಸ್ತ ಪ್ರತಿ ನೀಡಿದ್ದರಂತೆ. ಕಣ್ತಪ್ಪಿನಿಂದ ಆ ಹಸ್ತಪ್ರತಿಯ ಒಂದು ವಾಕ್ಯದಲ್ಲಿ ಅರ್ಧವಿರಾಮ ಬಿಟ್ಟುಬಿಟ್ಟಿದ್ದಂತೆ. ಇದರಿಂದ, ಗುರುಗಳಾದ ತಿ.ನಂ.ಶ್ರೀ ಅವರು ‘ಶಿಷ್ಯನಿಗೆ ಸರಿಯಾಗಿ ಬರೆಯಲೂ ಬರುವುದಿಲ್ಲ’ ಎಂದು ಎಲ್ಲಿ ಬೇಜಾರು ಮಾಡಿಕೊಳ್ಳುತ್ತಾರೋ ಎಂಬ ಭಯದಿಂದ ಬಸವರಾಧ್ಯರು ಚಡಪಡಿಸುತ್ತಿದ್ದಂತೆ. ಕೊನೆಗೆ ಗುರುಗಳ ಬಳಿಹೋಗಿ, ‘ಒಂದು ಪ್ರಮಾದವಾಗಿದೆ. ‘ಕಾಮ (ಅರ್ಧವಿರಾಮ) ಬಿಟ್ಟುಬಿಟ್ಟಿದ್ದೇನೆ, ದಯವಿಟ್ಟು ಕ್ಷಮಿಸಬೇಕು’ ಎಂದು ಕೇಳಿದರಂತೆ.

ಬಸವರಾಧ್ಯರ ಆತಂಕವನ್ನು ಅರಿತ ತಿ.ನಂ.ಶ್ರೀ, ಅವರಿಗೆ ಧೈರ್ಯ ತುಂಬುವಂತೆ, ‘ಹೌದೇನಯ್ಯ, ಎಂತೆಂಥ ಮಹಾನ್‌ ಋಷಿಮುನಿಗಳು ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡಿದರೂ ಅವರಿಗೆ ‘ಕಾಮ’ ಬಿಡಲು ಸಾಧ್ಯವಾಗಲಿಲ್ಲ. ನೀನು ತಪಸ್ಸು ಮಾಡದೇ ‘ಕಾಮ’ ಬಿಟ್ಟಿದ್ದೀಯಾ ಎಂದರೆ, ನೀನೇ ಗ್ರೇಟ್‌ ಕಣಯ್ಯ’ ಎಂದರಂತೆ!

ಸಿದ್ದಲಿಂಗಯ್ಯ ಮಾತು ಮುಗಿಯುವಾಗ ಸಭೆಯಲ್ಲಿ ನಗೆಯ ಭಾರಿ ಅಲೆಗಳು ಎದ್ದಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry