7

‘ಪದ್ಮಾವತಿ’ ಚಿತ್ರತಂಡಕ್ಕೆ ಸೆನ್ಸಾರ್ ಮಂಡಳಿ ಛೀಮಾರಿ

Published:
Updated:
‘ಪದ್ಮಾವತಿ’ ಚಿತ್ರತಂಡಕ್ಕೆ ಸೆನ್ಸಾರ್ ಮಂಡಳಿ ಛೀಮಾರಿ

ಮುಂಬೈ: ಸೆನ್ಸಾರ್ ಪ್ರಮಾಣ ಪತ್ರವಿಲ್ಲದಿದ್ದರೂ ಕೆಲವು ಸುದ್ದಿ ವಾಹಿನಿಗಳ ವರದಿಗಾರರಿಗೆ ಪದ್ಮಾವತಿ ಚಿತ್ರದ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟ ಚಿತ್ರ ತಂಡಕ್ಕೆ ಸೆನ್ಸಾರ್‌ ಮಂಡಳಿ ಶನಿವಾರ ಛೀಮಾರಿ ಹಾಕಿದೆ.

‘ಪ್ರಮಾಣೀಕರಣಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಚಿತ್ರದ ಕಥೆ ಕಾಲ್ಪನಿಕವೇ ಅಥವಾ ಇತಿಹಾಸ ಆಧಾರಿತವೇ ಎಂಬುದನ್ನು ಚಿತ್ರ ತಂಡ ಸ್ಪಷ್ಟಪಡಿಸಿರಲಿಲ್ಲ. ಹೀಗಾಗಿ ಚಿತ್ರವನ್ನು ವೀಕ್ಷಿಸದೆ ವಾಪಸ್ ಕಳುಹಿಸಲಾಗಿತ್ತು. ಆದರೆ, ಚಿತ್ರ ತಂಡ ಮಂಡಳಿ ಮೇಲೆ ಗೂಬೆ ಕೂರಿಸುತ್ತಿರುವುದು ಆಘಾತಕಾರಿಯಾಗಿದೆ’ ಎಂದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಅಧ್ಯಕ್ಷ ಪ್ರಸೂನ್ ಜೋಷಿ ಅಸಮಾಧಾನ ವ್ಯಕ್ತ

ಪಡಿಸಿದ್ದಾರೆ.

ಚಿತ್ರ ತಂಡ ಒಂದೆಡೆ ಅರ್ಜಿ ತಿರಸ್ಕರಿಸಲಾಗಿದೆ ಎಂದು ಬೊಬ್ಬೆ ಹೊಡೆಯುತ್ತಿದೆ. ಮತ್ತೊಂದೆಡೆ ಕೆಲವರಿಗಾಗಿ ಚಿತ್ರ ಪ್ರದರ್ಶನ ಏರ್ಪಡಿಸಿ ನಿಯಮ ಉಲ್ಲಂಘಿಸಿ ನಮ್ಮ ಮೇಲೆ ಒತ್ತಡ ತರಲು ಪ್ರಯತ್ನಿಸುತ್ತಿದೆ. ಚಿತ್ರ ತಂಡದ ಈ ನಡವಳಿಕೆ ಸೆನ್ಸಾರ್ ವ್ಯವಸ್ಥೆಗೆ ಧಕ್ಕೆ ತರುತ್ತದೆ’ ಎಂದು ಪ್ರಸೂನ್ ಬೇಸರ ವ್ಯಕ್ತಪಡಿಸಿದ್ದಾರೆ.

‘ಸಿಬಿಎಫ್‌ಸಿ ಮುಖ್ಯಸ್ಥ ಪ್ರಸೂನ್ ಜೋಷಿ ಅವರು ಈಗಾಗಲೇ ಚಿತ್ರವನ್ನು ವೀಕ್ಷಿಸಿದ್ದಾರೆ. ಚಲನಚಿತ್ರದಲ್ಲಿ ಆಕ್ಷೇಪಾರ್ಹವಾದ ಯಾವುದೇ ಸಂಗತಿಗಳು ಇಲ್ಲ ಎಂಬುದು ಅವರ ಅನಿಸಿಕೆ’ ಎಂಬ ಮಾಧ್ಯಮ ವರದಿಗಳನ್ನು ಪ್ರಸೂನ್ ಜೋಷಿ ನಿರಾಕರಿಸಿದ್ದಾರೆ.

ಪ್ರಮಾಣೀಕರಣಕ್ಕೆ 61 ದಿನ: ‘ಚಿತ್ರ ತಂಡ ಮತ್ತೆ ಅರ್ಜಿ ಸಲ್ಲಿಸಲಿ. ಅದರ ಸರದಿ ಬಂದಾಗ ಅರ್ಜಿಯನ್ನು ಪರಿಶೀಲಿಸುತ್ತೇವೆ. ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ’ ಎಂದು ಸೆನ್ಸಾರ್ ಮಂಡಳಿ ಸ್ಪಷ್ಟಪಡಿಸಿದೆ. ಅರ್ಜಿ ಸಲ್ಲಿಸಿದ ನಂತರ ಪ್ರಮಾಣಪತ್ರ ನೀಡಲು ಗರಿಷ್ಠ 61 ದಿನಗಳ ಕಾಲಾವಕಾಶ ತೆಗೆದುಕೊಳ್ಳಲು ಸೆನ್ಸಾರ್ ಮಂಡಳಿಗೆ ಅಧಿಕಾರವಿದೆ. ‘ಅರ್ಜಿಯಲ್ಲಿ ಸಣ್ಣ ದೋಷವಷ್ಟೇ ಇತ್ತು. ಆದರೆ ಪ್ರಮಾಣೀಕರಣಕ್ಕಾಗಿ ಚಿತ್ರವನ್ನು ವೀಕ್ಷಿಸದೇ ತಿರಸ್ಕರಿಸುವಂತಹ ದೋಷ ಅದಾಗಿರಲಿಲ್ಲ. ಪರಿಷ್ಕೃತ ಅರ್ಜಿಯನ್ನು ಶೀಘ್ರವೇ ಸಲ್ಲಿಸುತ್ತೇವೆ’ ಎಂದು ಚಿತ್ರದ ಸಹ ನಿರ್ಮಾಪಕ ಸಂಸ್ಥೆ ವಯಾಕಮ್ 18 ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry