ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಲಯ ಸಂಕೀರ್ಣ: ಚಿಗುರಿದ ಕನಸು!

Last Updated 19 ನವೆಂಬರ್ 2017, 4:32 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ಪಾರಂಪರಿಕ ಕಟ್ಟಡಗಳಲ್ಲಿ ಬ್ರಿಟಿಷರ ಆಡಳಿತದ ಅವಧಿಯಿಂದ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ನ್ಯಾಯಾಲಯಗಳೆಲ್ಲವೂ ಒಂದೇ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸಬೇಕು ಎಂಬ ಹಲವು ದಶಕಗಳ ಕನಸು ಈಗ ಚಿಗುರಿದೆ. ಈ ಚಿಗುರು ಎರಡು ವರ್ಷದೊಳಗೆ ಸಸಿಯಾಗಿ. ಮರವಾಗಿ ಫಲ ಕೊಡುವ ಗಟ್ಟಿ ನಿರೀಕ್ಷೆಯೂ ಮೂಡಿದೆ.

ಜಿಲ್ಲಾ ಕಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ 12 ವಿವಿಧ ನ್ಯಾಯಾಲಯಗಳ ಪೈಕಿ ಪ್ರಧಾನ ಜಿಲ್ಲಾ ಮತ್ತು ಸೆಶೆನ್ಸ್‌ ನ್ಯಾಯಾಲಯ, ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯ, 2ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ಸೇರಿ ನಾಲ್ಕು ನ್ಯಾಯಾಲಯಗಳಿಗೆ ಮಾತ್ರ ಕಾಯಂ ಕಟ್ಟಡಗಳಿವೆ. ಉಳಿದ ಎಂಟು ನ್ಯಾಯಾಲಯಗಳು ವಿವಿಧ ಕಟ್ಟಡಗಳಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿವೆ. ಇದರೊಂದಿಗೆ ಜಿಲ್ಲಾ ವಕೀಲರ ಸಂಘದ ಸದಸ್ಯರು ಮತ್ತು ಕಕ್ಷಿದಾರರಿಗೆ ಈಗಿನ ನ್ಯಾಯಾಲಯ ಆವರಣ ಹೆಚ್ಚು ಅನುಕೂಲಕರವಾಗಿ ಇಲ್ಲ ಎಂಬ ಸಂಕಟವೂ ದೂರವಾಗಲಿದೆ.

ಹಿನ್ನೆಲೆ: ‘ಈಗಿನ ನ್ಯಾಯಾಲಯ ಸಂಕೀರ್ಣವು ನ್ಯಾಯಾಂಗ ಚಟುವಟಿಕೆಗಳಿಗೆ ಅನುಕೂಲಕರವಾಗಿ ಇಲ್ಲ ಎಂಬ ಕುರಿತು 2013ರಲ್ಲಿ ಅಂದಿನ ಪ್ರಧಾನ ಜಿಲ್ಲಾ ಮತ್ತು ಸೆಶೆನ್ಸ್‌ ನ್ಯಾಯಾಧೀಶ ವಿಶ್ವೇಶ್ವರಭಟ್ ಅವರು ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದರು. ಆ ವರದಿಯ ಅನ್ವಯ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ್ದ ಅಂದಿನ ಹೈಕೋರ್ಟ್‌ ನ್ಯಾಯಮೂರ್ತಿ ಅಶೋಕ್‌ ಬಿ.ಹಿಂಚಿಗೇರಿ ಪ್ರತ್ಯೇಕ ಸಂಕೀರ್ಣದ ಅಗತ್ಯವನ್ನು ಪ್ರತಿಪಾದಿಸಿದರು.

ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಕೆ.ಶ್ರೀಧರರಾವ್‌ ಒಪ್ಪಿಗೆ ನೀಡಿದ್ದರು. ಸರ್ಕಾರವೂ ಅದನ್ನು ಅನುಮೋದಿಸಿತ್ತು’ ಎಂದು ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ.ರವಿರಾಜಶೇಖರರೆಡ್ಡಿ ‘ಪ್ರಜಾವಾಣಿ’ಗೆ ಶನಿವಾರ ತಿಳಿಸಿದರು.

₹ 90 ಕೋಟಿ: ’ನಗರದ ಪಾರ್ವತಿ ನಗರದಲ್ಲಿರುವ ನ್ಯಾಯಾಧೀಶರ ವಸತಿ ಸಮೂಹದ ಸಮೀಪ 18 ಎಕರೆ ಪ್ರದೇಶವನ್ನು ಗುರುತಿಸಿದ್ದು ಅಲ್ಲಿ ಸಂಕೀರ್ಣವನ್ನು ₹ 75 ಕೋಟಿ ವೆಚ್ಚದಲ್ಲಿ ಹಾಗೂ ವಕೀಲರ ಭವನವನ್ನು 15 ಕೋಟಿ ನಿರ್ಮಿಸಲು ಅನುದಾನ ಬಿಡುಗಡೆಯಾಗಿತ್ತು. ಹೈದರಾಬಾದ್‌ ಮೂಲದ ಕೆಎಂವಿ ಪ್ರಾಜೆಕ್ಟ್ಸ್‌ ಕಂಪೆನಿಯು ಸಂಕೀರ್ಣವನ್ನು ನಿರ್ಮಿಸಲಿದೆ. ಎರಡು ವರ್ಷದಲ್ಲಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಗಡುವು ನೀಡಲಾಗಿದೆ’ ಎಂದರು.

ಮೋಹಕ ಕಟ್ಟಡ: ಈಗ ಇರುವ ಸಂಕೀರ್ಣದಲ್ಲಿ 150ಕ್ಕೂ ಹೆಚ್ಚು ವರ್ಷಗಳ ಹಿಂದೆ ನಿರ್ಮಾಣವಾದ ಕೆಂಪು ಕಟ್ಟಡಗಳು ತಮ್ಮ ಮೋಹಕ ನಿಲುವಿನಿಂದ ಗಮನ ಸೆಳೆಯುತ್ತಿವೆ. ಹೊಸ ಸಂಕೀರ್ಣ ನಿರ್ಮಾಣವಾಗುವವರೆಗೂ ಇಲ್ಲಿಯೇ ನ್ಯಾಯಾಲಯಗಳು ಕಾರ್ಯನಿರ್ವಹಿಸಲಿದ್ದು, ನಂತರ ಈ ಕಟ್ಟಡಗಳ ನಿರ್ವಹಣೆ ಹೇಗೆ ನಡೆಯುತ್ತದೆ ಎಂಬದು ಕುತೂಹಲಕಾರಿಯಾಗಿದೆ.

ಏನೆಲ್ಲಾ ಇರಲಿವೆ?
ಜಿಲ್ಲಾ ಕೇಂದ್ರದಲ್ಲಿರುವ 12 ನ್ಯಾಯಾಲಯಗಳು ಪ್ರಧಾನ ಜಿಲ್ಲಾ ಮತ್ತು ಸೆಶೆನ್ಸ್‌ ನ್ಯಾಯಾಲಯ, ಒಂದನೇ ಮತ್ತು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶೆನ್ಸ್‌ ನ್ಯಾಯಾಲಯ, ಕೌಟುಂಬಿಕ ನ್ಯಾಯಾಲಯ, ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಲಯ, ಒಂದನೇ ಮತ್ತು ಎರಡನೇ ಹಿರಿಯ ಸಿವಿಲ್‌ ನ್ಯಾಯಾಲಯ, ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಒಂದನೇ, ಎರಡನೇ ಮುತ್ತು ಮೂರು ಮತ್ತು ನಾಲ್ಕನೇ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT