ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ: ಪ್ರಗತಿಯ ದಾರಿ ದೂರ...!

Last Updated 19 ನವೆಂಬರ್ 2017, 4:37 IST
ಅಕ್ಷರ ಗಾತ್ರ

ಬಳ್ಳಾರಿ: ಶೌಚಾಲಯ ನಿರ್ಮಾಣದಲ್ಲಿ ಶರವೇಗದ ಕಾರ್ಯಾಚರಣೆ ನಡೆಸಿರುವ ಜಿಲ್ಲಾ ಪಂಚಾಯಿತಿಯು ಶೌಚಾಲಯ ರಹಿತರ ಕುರಿತು ಐದು ವರ್ಷದ ಹಿಂದೆ, ಅಂದರೆ 2012ರಲ್ಲಿ ನಡೆದಿದ್ದ ಬೇಸ್‌ಲೈನ್‌ ಸಮೀಕ್ಷೆಯನ್ನೇ ಪ್ರಗತಿಯ ಮಾನದಂಡವನ್ನಾಗಿ ಇರಿಸಿಕೊಂಡಿದೆ.

ಈ ಸಮೀಕ್ಷೆಯಲ್ಲಿ ಗುರುತಿಸಲಾಗಿದ್ದ ಕುಟುಂಬಗಳ ಪೈಕಿ ಇಂದಿನವರೆಗೆ ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಇನ್ನೂ ಶೌಚಾಲಯ ನಿರ್ಮಿಸಿಕೊಂಡಿಲ್ಲ. ಅವುಗಳೊಂದಿಗೆ, ನಂತರದ ಐದು ವರ್ಷದಲ್ಲಿ ಇನ್ನಷ್ಟು ಕುಟುಂಬಗಳು ರೂಪುಗೊಂಡಿವೆ. ಈ ಕುಟಂಬಗಳ ಪೈಕಿ ಎಷ್ಟು ಶೌಚಾಲಯಗಳನ್ನು ನಿರ್ಮಿಸಿಕೊಂಡಿವೆ ಅಥವಾ ನಿರ್ಮಿಸಿಕೊಂಡಿಲ್ಲ ಎಂಬ ಲೆಕ್ಕವನ್ನು ಸದ್ಯಕ್ಕೆ ಜಿಲ್ಲಾ ಪಂಚಾಯಿತಿ ಸಾಧನೆಯ ದಾರಿಯಲ್ಲಿ ಪರಿಗಣಿಸಿಲ್ಲ.

ಸಮೀಕ್ಷೆಯಲ್ಲಿ ಗುರುತಿಸಲಾದ ಕುಟುಂಬಗಳ ಪೈಕಿ ಎಲ್ಲ ಕುಟುಂಬಗಳೂ ಶೌಚಾಲಯ ನಿರ್ಮಿಸಿಕೊಂಡಿರುವ 23 ಪಂಚಾಯಿತಿಗಳನ್ನು ಸ್ವಚ್ಛ ಭಾರತ್‌ ಮಿಷನ್‌ ಅಡಿ ‘ಬಯಲು ಶೌಚ ಮುಕ್ತ’ ಎಂದು ಘೋಷಿಸಿರುವ ಪಂಚಾಯಿತಿ, ಈ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳನ್ನು ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ನಗರದಲ್ಲಿ ಭಾನುವಾರ ಸನ್ಮಾನಿಸಲಿದೆ.

ಅಸಮಾಧಾನ: ಅ.25ರಂದು ಜಿಲ್ಲಾ ಪಂಚಾಯಿತಿಯಲ್ಲಿ ಸಭೆ ನಡೆಸಿದ್ದ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ, ‘ಶೌಚಾಲಯ ನಿರ್ಮಾಣದ ಗುರಿ ಮುಟ್ಟಲು ಏನು ಕಷ್ಟ?’ ಎಂದು ಖಾರವಾಗಿ ಕೇಳಿದ್ದರು.

’2018ರ ಗಣರಾಜ್ಯೋತ್ಸವದ ಒಳಗೆ ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿಸಲು ಸರ್ಕಾರ ಪಣತೊಟ್ಟಿದೆ. ಅದಕ್ಕೆ ಇನ್ನು ಮೂರು ತಿಂಗಳು ಮಾತ್ರ ಉಳಿದಿದೆ’ ಎಂದು ಎಚ್ಚರಿಕೆ ನೀಡಿದ್ದರು.

ಅವರಿಗೆ ಉತ್ತರಿಸಿದ್ದ ಮುಖ್ಯಕಾರ್ಯನಿರ್ವಹಣಾಧಿಕರಿ ಡಾ.ಕೆ.ವಿ.ರಾಜೇಂದ್ರ, ‘ಹಣಕಾಸಿನ ಕೊರತೆ ಎದುರಾಗಿದ್ದು. ಶೌಚಾಲಯ ನಿರ್ಮಿಸಿಕೊಂಡವರಿಗೆ ಸಕಾಲದಲ್ಲಿ ಪ್ರೋತ್ಸಾಹಧನ ದೊರೆಯುತ್ತಿಲ್ಲ. ಸುಮಾರು ₨ 3.12 ಕೋಟಿಯಷ್ಟು ಪ್ರೋತ್ಸಾಹಧನ ನೀಡಬೇಕಾಗಿದ್ದು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಕೋರಿದ್ದರು.

‘ಅಂದು ಸಲ್ಲಿಸಿದ ಕೋರಿಕೆ ಮೇರೆಗೆ ಅನುದಾನ ಬಿಡುಗಡೆಯಾಗಿದ್ದರಿಂದ ಶೌಚಾಲಯ ನಿರ್ಮಾಣ ಕಾರ್ಯ ವೇಗ ಪಡೆಯಿತು’ ಎಂದು ಡಾ.ರಾಜೇಂದ್ರ ‘ಪ್ರಜಾವಾಣಿ’ಗೆ ಶನಿವಾರ ತಿಳಿಸಿದರು.

ಎರಡು ತಾಲ್ಲೂಕು ಶೀಘ್ರ: ಡಿಸೆಂಬರ್‌ ಒಳಗೆ ಹಡಗಲಿ ಮತ್ತು ಹೊಸಪೇಟೆಯನ್ನು ಸಂಪೂರ್ಣ ಬಯಲು ಶೌಚ ಮುಕ್ತ ತಾಲ್ಲೂಕೆಂದು ಘೋಷಿಸಲು ನಿರ್ಧರಿಸಲಾಗಿದೆ. ಈ ಎರಡೂ ತಾಲ್ಲೂಕುಗಳಲ್ಲಿ 5 ಸಾವಿರಕ್ಕಿಂತ ಕಡಿಮೆ ಮಂದಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕಾಗಿದೆ.ಶೌಚಾಲಯ ದಿನಾಚರಣೆ ಬಳಿಕ ಶೌಚಾಲಯ ಸಪ್ತಾಹವನ್ನು ಹಮ್ಮಿಕೊಳ್ಳಲಾಗುವುದು. ಉಳಿದ ಐದು ತಾಲ್ಲೂಕುಗಳಲ್ಲೂ ಗುರಿ ಸಾಧನೆಗೆ ಒತ್ತು ನೀಡಲಾಗುವುದು’ ಎಂದರು.

ಬಯಲು ಬಹಿರ್ದೆಸೆ ಮುಕ್ತ ಪಂಚಾಯಿತಿಗಳು
ಬಳ್ಳಾರಿ ತಾಲ್ಲೂಕಿನ ಕೊಳಗಲ್ಲು, ಕೊರ್ಲಗುಂದಿ, ಗೆಣಿಕೆಹಾಳ್‌, ಹೊಸಪೇಟೆ ತಾಲ್ಲೂಕಿನ ಕಲ್ಲಹಳ್ಳಿ, ನಂ.10 ಮುದ್ದಾಪುರ, ಮಲಪನಗುಡಿ, ಬೈಲುಹೊದ್ದಿಗೇರಿ, ಹೊಸೂರು, ಹಡಗಲಿಯ ಹರಗನೂರು, ಇಟ್ಟಿಗಿ, ಮಾಗಳ, ಮಕ್ಕರಬ್ಬಿ, ಹ್ಯಾರಡಾ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬೆಣ್ಣೆಕಲ್ಲು, ಕೂಡ್ಲಿಗಿ ತಾಲ್ಲೂಕಿನ ಗಂಡಬೊಮ್ಮನಹಳ್ಳಿ, ಮೊರಬ್ಬ, ಗುಂಡುಮುಣುಗು, ಜರ್ಮಲಿ, ಸಂಡೂರು ತಾಲ್ಲೂಕಿನ ಭುಜಂಗನಗರ, ದೇವಗಿರಿ, ಬನ್ನಿಹಟ್ಟಿ , ವಡ್ಡು ಹಾಗೂ ಸಿರುಗುಪ್ಪ ತಾಲ್ಲೂಕಿನ ಕುಡುದರಹಾಳ್‌

2,89,147 ಬೇಸ್‌ಲೈನ್‌ ಸಮೀಕ್ಷೆಗೆ ಒಳಗಾಗಿದ್ದ ಕುಟುಂಬಗಳು
1,80,895 ಇದುವರೆಗೆ ಶೌಚಾಲಯ ನಿರ್ಮಿಸಿಕೊಂಡ ಕುಟುಂಬಗಳು
1,08,252 ಶೌಚಾಲಯ ನಿರ್ಮಿಸಿಕೊಳ್ಳಬೇಕಾದ ಕುಟುಂಬಗಳು

* * 

ಜನವರಿ ವೇಳೆಗೆ ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಬಯಲು ಶೌಚ ಮುಕ್ತ ಎಂದು ಘೋಷಿಸುವ ಸಲುವಾಗಿ ಶೌಚಾಲಯ ನಿರ್ಮಾಣ ಕಾರ್ಯ ನಿರಂತರವಾಗಿ ನಡೆದಿದೆ
ಡಾ.ಕೆ.ವಿ.ರಾಜೇಂದ್ರ, ಜಿಪಂ ಸಿಇಓ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT