7

ವಾಲ್ಮೀಕಿ ಶೋಷಿತರ ಪರ ನೇತಾರ

Published:
Updated:

ಚಾಮರಾಜನಗರ: ‘ರಾಮಾಯಣವನ್ನು ರಚಿಸಿದ ವಾಲ್ಮೀಕಿಯು ರಾವಣ, ವಾಲಿ, ಸುಗ್ರೀವ, ಆಂಜನೇಯರ ಕಥಾ ಪ್ರಸಂಗಗಳ ಮೂಲಕ ಶೋಷಿತರ ಪರ ನೇತಾರನಾಗಿ ಮತ್ತು ಭ್ರಾತೃತ್ವದ ಹರಿಕಾರನಾಗಿ ನಮಗೆ ಕಾಣಿಸುತ್ತಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಎಂ.ಸಿ. ಮೋಹನಕುಮಾರಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಮತ್ತು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಡೀ ಮಾನವ ಜನಾಂಗವನ್ನೇ ಬೆರಗುಗೊಳಿಸುವಂತಹ ರಾಮಾಯಣ ಮಹಾಕಾವ್ಯವನ್ನು ಬರೆದ ವಾಲ್ಮೀಕಿ, ಭಾರತೀಯರೆಲ್ಲರ ಹೆಮ್ಮೆಯ ಪ್ರತೀಕ ಎಂಬುದರಲ್ಲಿ ಅತಿಶಯೋಕ್ತಿಯಿಲ್ಲ. ಅಂತಹ ಮಹರ್ಷಿಯನ್ನು ಒಂದು ಜಾತಿಗೆ ಸೀಮಿತಗೊಳಿಸಿ ಸಂಕುಚಿತಗೊಳಿಸಬಾರದು ಎಂದು ತಿಳಿಸಿದರು.

ಪಿತೃವಾಕ್ಯ ಪರಿಪಾಲನೆ, ವನವಾಸ, ಸಿಂಹಾಸನ ತ್ಯಾಗ, ಸಹೋದರತೆ, ಸಮಾನತೆ ಎಂಬ ಉದಾತ್ತ ಜೀವನ ಮೌಲ್ಯಗಳನ್ನು ರಾಮ, ಲಕ್ಷ್ಮಣ, ಭರತರ ವ್ಯಕ್ತಿತ್ವಗಳಲ್ಲಿ ಅಭಿವ್ಯಕ್ತಿಸಿರುವ ವಾಲ್ಮೀಕಿ ಒಬ್ಬ ಜಾತ್ಯತೀತ ಮತ್ತು ಸಮಾಜ ಸುಧಾರಕರಾಗಿದ್ದರು ಎನ್ನುವುದು ತಿಳಿದುಬರುತ್ತದೆ ಎಂದರು.

ಸಾವಿರಾರು ವರ್ಷಗಳಷ್ಟು ಹಿಂದೆಯೇ ಅವಿಭಕ್ತ ಕುಟುಂಬ, ವಂಶಾಡಳಿತ, ನಿರಂಕುಶ ಪ್ರಭುತ್ವದಂತಹ ವಿಚಾರಗಳ ಬಗ್ಗೆ ಚಿಂತಿಸಿದ್ದ ವಾಲ್ಮೀಕಿ ಮಹರ್ಷಿ, ನಾವು ಈಗ ಎದುರಿಸುತ್ತಿರುವ ಅನೇಕ ಸಂದಿಗ್ದತೆಗಳಿಗೆ ಆಗಲೇ ಪರಿಹಾರ ಸೂಚಿಸಿದ್ದರು ಎಂದು ಹೇಳಿದರು.

ಸಂಸದ ಆರ್‌. ಧ್ರುವನಾರಾಯಣ ಮಾತನಾಡಿ, ನಮ್ಮ ದೇಶದಲ್ಲಿ ಸಮಾನತೆ, ಸಾಮಾಜಿಕ ಸುಧಾರಣೆಗಾಗಿ ಅನೇಕ ಮಹನೀಯರು ಹೋರಾಡಿದ್ದಾರೆ. ಆದರೆ, ಅವರನ್ನು ಜಾತಿಯ ಕಣ್ಣಿನಿಂದಲೇ ಗುರುತಿಸುತ್ತಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಬೇರೆ ದೇಶಗಳಲ್ಲಿ ನಾಯಕರನ್ನು ಗುರುತಿಸಲು ಜಾತಿ ಅಡ್ಡಿ ಬರುವುದಿಲ್ಲ. ನಮ್ಮಲ್ಲಿ ಆ ವಿಶಾಲ ಮನೋಭಾವ ಇಲ್ಲ. ಮುಖಂಡರು, ಅಧಿಕಾರಿಗಳು, ಸಾಧಕರು ಎಲ್ಲರ ಜಾತಿಯೇ ಪ್ರಮುಖವಾಗುತ್ತಿದೆ. ಹೀಗಾಗಿ ದೇಶ ಉದ್ದೇಶಿತ ವೇಗದಲ್ಲಿ ಬೆಳವಣಿಗೆ ಹೊಂದುತ್ತಿಲ್ಲ ಎಂದು ವಿಷಾದಿಸಿದರು.

ಜಯಂತಿ ಆಚರಣೆ ದಿನ ಅದ್ದೂರಿ ಮೆರವಣಿಗೆ ಮಾಡಿದರೆ ಪ್ರಯೋಜನವಿಲ್ಲ. ಸಮುದಾಯಗಳ ಮುಖಂಡರು ಮತ್ತು ಸಂಘ ಸಂಸ್ಥೆಗಳು ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ಹುಣಸೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ಬಿ. ನಂಜುಂಡಸ್ವಾಮಿ ಮುಖ್ಯ ಭಾಷಣ ಮಾಡಿದರು. ಕಾರ್ಯಕ್ರಮಕ್ಕೂ ಮುನ್ನ ಇತ್ತೀಚೆಗೆ ನಿಧನರಾದ ಎಚ್‌.ಡಿ. ಕೋಟೆ ಶಾಸಕ ಚಿಕ್ಕಮಾದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಶಾಸಕ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಆರ್. ಉಮೇಶ್, ನಗರಸಭೆ ಅಧ್ಯಕ್ಷೆ ಶೋಭಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ. ಚಂದ್ರು, ಚೂಡಾ ಅಧ್ಯಕ್ಷ ಸುಹೇಲ್ ಆಲಿಖಾನ್, ಮಾಜಿ ಶಾಸಕ ಎಸ್. ಬಾಲರಾಜು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಕೆ. ಬೊಮ್ಮಯ್ಯ, ಕೆರೆಹಳ್ಳಿ ನವೀನ್, ಕೆ.ಪಿ. ಸದಾಶಿವಮೂರ್ತಿ, ಬಾಲರಾಜ್, ಶಶಿಕಲಾ, ಶಿವಮ್ಮ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‌ ಕುಮಾರ್‌ ಇತರರು ಇದ್ದರು.

ಗಮನ ಸೆಳೆದ ಮೆರವಣಿಗೆ

ಮೆರವಣಿಗೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ ಚಾಲನೆ ನೀಡಿದರು.ಜಾನಪದ ಕಲಾತಂಡಗಳು, ವಿವಿಧ ಸಂಘ ಸಂಸ್ಥೆಗಳು ಮಹರ್ಷಿ ವಾಲ್ಮೀಕಿ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಿದವು.

ಪ್ರವಾಸಿ ಮಂದಿರದಿಂದ ಭುವನೇಶ್ವರಿ ವೃತ್ತ, ಸಂತೇಮರಹಳ್ಳಿ ವೃತ್ತದ ಮೂಲಕ ಮಾರಿಗುಡಿ ದೇವಸ್ಥಾನದ ಆವರಣಕ್ಕೆ ಸಾಗಿತು.ವೀರಗಾಸೆ, ಡೊಳ್ಳುಕುಣಿತ, ಹುಲಿವೇಷ, ಪೂಜಾಕುಣಿತದ ಪ್ರದರ್ಶನ ಆಕರ್ಷಣೆಯಾಗಿತ್ತು. ಮಹರ್ಷಿ ವಾಲ್ಮೀಕಿಯ ವೇಷಧಾರಿ ಗಮನ ಸೆಳೆದರು.

ಮೂರೂವರೆ ಗಂಟೆ ವಿಳಂಬ!

ಕಾರ್ಯಕ್ರಮ ನಿಗದಿತ ಸಮಯಕ್ಕಿಂತ ಮೂರೂವರೆ ಗಂಟೆ ತಡವಾಗಿ ಆರಂಭವಾಗಿದ್ದರಿಂದ ಜನರು ಕಾದು ಹೈರಾಣಾದರು. 11 ಗಂಟೆಗೆ ಆರಂಭವಾಗಬೇಕಿದ್ದ ವೇದಿಕೆ ಕಾರ್ಯಕ್ರಮ ಆರಂಭವಾಗಿದ್ದು ಮಧ್ಯಾಹ್ನ 2.30ಕ್ಕೆ. ಬೆಳಿಗ್ಗೆ 9 ಗಂಟೆಗೆ ಆರಂಭವಾಗಬೇಕಿದ್ದ ಮೆರವಣಿಗೆಗೆ 11 ಗಂಟೆಗೆ ಚಾಲನೆ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry