ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಜ ಸ್ಥಿತಿಗೆ ವೈದ್ಯಕೀಯ ಸೇವೆ

Last Updated 19 ನವೆಂಬರ್ 2017, 4:49 IST
ಅಕ್ಷರ ಗಾತ್ರ

ಚಾಮರಾಜನಗರ: ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ತಿದ್ದುಪಡಿ ಮಸೂದೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ ಸಮ್ಮತಿ ನೀಡಿದ್ದರಿಂದ ಜಿಲ್ಲೆಯಲ್ಲಿ ಶುಕ್ರವಾರ ಸಂಜೆಯಿಂದಲೇ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ ಹಾಗೂ ಡಯಾಗ್ನೊಸ್ಟಿಕ್‌ ಕೇಂದ್ರಗಳು ಕಾರ್ಯಾರಂಭಿಸಿವೆ.

ಮುಷ್ಕರದ ಕಾರಣ ಜಿಲ್ಲೆಯಲ್ಲಿ ಇದೇ 3, 10, 13, 16 ಹಾಗೂ 17ರಂದು ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗ, ತುರ್ತು ಚಿಕಿತ್ಸಾ ಘಟಕ ಹಾಗೂ ಹೊಸ ರೋಗಿಗಳ ದಾಖಲಾತಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಗಿತ್ತು.

ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ತಾಲ್ಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆ, ಸಮುದಾಯ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನದಟ್ಟಣೆ ಹೆಚ್ಚಾಗಿ, ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಹೆಚ್ಚಿನ ಒತ್ತಡ ಉಂಟಾಗಿತ್ತು. ಪ್ರಸ್ತುತ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ ಮತ್ತಿತರ ವೈದ್ಯಕೀಯ ಸೇವಾ ಕೇಂದ್ರಗಳು ಪುನರಾರಂಭಗೊಂಡಿದ್ದು, ಸಾರ್ವಜನಿಕರಲ್ಲಿ ಸಮಾಧಾನ ಮೂಡಿಸಿದೆ.

ರೋಗಿಗಳ ಸಂಖ್ಯೆ ಏರಿಕೆ: ‘ಶುಕ್ರವಾರ ಸಂಜೆಯಿಂದಲೇ ಒಪಿಡಿ ಕಾರ್ಯಾರಂಭಿಸಿದೆ. ಆಸ್ಪತ್ರೆಯ ಎಲ್ಲ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿಯೇ ತೋರಿಸಬೇಕು ಎಂದು ಅನೇಕ ಜನರು ಕಾದಿದ್ದರು. ಹೀಗಾಗಿ ರೋಗಿಗಳ ಸಂಖ್ಯೆ ಮೊದಲಿಗಿಂತ ಸ್ವಲ್ಪ ಹೆಚ್ಚಾಗಿದೆ’ ಎಂದು ಬಸವರಾಜೇಂದ್ರ ಆಸ್ಪತ್ರೆಯ ಮುಖ್ಯ ವೈದ್ಯ ಬಸವರಾಜೇಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಷ್ಕರದಿಂದ ರೋಗಿಗಳಿಗೆ ತೊಂದರೆಯಾಗಿದೆ. ಈ ಬಗ್ಗೆ ನಮಗೂ ಬೇಸರವಾಗಿದೆ. ಆದರೆ, ರಾಜ್ಯ ಎಲ್ಲ ವೈದ್ಯರು ತೆಗೆದುಕೊಂಡಿರುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೆವು. ಬೇಡಿಕೆಯನ್ನು ಈಡೇರಿಸುವಂತೆ ಮೂರು ನಾಲ್ಕು ಬಾರಿ ಅವಕಾಶ ನೀಡಿದ್ದೆವು. ಆದರೆ, ಸರ್ಕಾರ ಸ್ಪಂದಿಸಲಿಲ್ಲ. ಹಾಗಾಗಿ, ಪ್ರತಿಭಟನೆಗೆ ಇಳಿಯಬೇಕಾಯಿತು. ಆ ನಂತರವಾದರೂ ಸರ್ಕಾರ ತಕ್ಷಣ ಸ್ಪಂದಿಸಿದ್ದರೆ ಇಷ್ಟೆಲ್ಲ ಸಮಸ್ಯೆಯಾಗುತ್ತಿರಲಿಲ್ಲ’ ಎಂದು ತಿಳಿಸಿದರು.

ಕಡಿಮೆಯಾದ ಒತ್ತಡ: ‘ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ 1,140 ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 36 ಜನ ರೋಗಿಗಳನ್ನು ದಾಖಲು ಮಾಡಲಾಗಿದೆ. ಖಾಸಗಿ ಡಯಾಗ್ನೊಸ್ಟಿಕ್‌ ಕೇಂದ್ರ ಮತ್ತು ಲ್ಯಾಬೊರೇಟರಿಗಳು ತೆರೆದಿದ್ದರಿಂದ ರಕ್ತ ಪರೀಕ್ಷೆ, ಎಕ್ಸರೇ, ಸ್ಕ್ಯಾನಿಂಗ್‌ ವಿಭಾಗದಲ್ಲಿ ಒತ್ತಡ ಕಡಿಮೆಯಾಗಿದೆ’ ಎಂದು ಜಿಲ್ಲಾ ಆಸ್ಪತ್ರೆಯ ಆರ್‌ಎಂಒ ಕೃಷ್ಣಪ್ರಸಾದ್‌ ತಿಳಿಸಿದರು.

‘ಖಾಸಗಿ ಆಸ್ಪತ್ರೆ ಮುಷ್ಕರ ಸ್ಥಗಿತವಾಗಿದ್ದರಿಂದ ವೈದ್ಯರಿಗೆ ಒತ್ತಡ ಕಡಿಮೆಯಾಗಿದೆ. ಆದರೆ, ಅವರಿಗೆ ರಜೆ ನೀಡದಂತೆ ಹೊರಡಿಸಿದ್ದ ಆದೇಶ ವಾಪಸ್‌ ಪಡೆಯುವ ಬಗ್ಗೆ ಅಧಿಕೃತವಾಗಿ ಯಾವುದೇ ಸೂಚನೆ ಬಂದಿಲ್ಲ. ಹಾಗಾಗಿ, ಅವರೆಲ್ಲರೂ ಕರ್ತವ್ಯಕ್ಕೆ ಹಾಜರಾಗಬೇಕಿದೆ. ತುರ್ತು ಪರಿಸ್ಥಿತಿಯಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಉತ್ತಮ ಸೇವೆ ಸಲ್ಲಿಸಿದ್ದಕ್ಕೆ ಸರ್ಕಾರದಿಂದ ಮೆಚ್ಚುಗೆ ವ್ಯಕ್ತವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT