7

‘ಕೈಗಾರಿಕಾ ಬೆಳವಣಿಗೆ: ಜಿಲ್ಲೆಗೆ ಮೊದಲ ಸ್ಥಾನ’

Published:
Updated:

ಬಿಡದಿ: ‘ರಾಜ್ಯದಲ್ಲಿ ತೀವ್ರ ಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ಜಿಲ್ಲೆಗಳಲ್ಲಿ ರಾಮನಗರವು ಮೊದಲ ಸ್ಥಾನದಲ್ಲಿದೆ. ಒಟ್ಟು ₹56.39 ಬಿಲಿಯನ್‌ನಷ್ಟು ಹೂಡಿಕೆ ಹೊಂದಿದೆ’ ಎಂದು ಜಿಲ್ಲಾಧಿಕಾರಿ ಬಿ.ಆರ್. ಮಮತಾ ತಿಳಿಸಿದರು.

ಬೆಂಗಳೂರಿನಲ್ಲಿ ಇದೇ 23, 24ರಂದು ನಡೆಯಲಿರುವ ಸರಬರಾಜುದಾರರ ಅಭಿವೃದ್ಧಿ ಹಾಗೂ ಹೂಡಿಕೆದಾರರ ಶೃಂಗ ಸಭೆಯ ಅಂಗವಾಗಿ ಇಲ್ಲಿನ ಈಗಲ್‌ಟನ್‌ ರೆಸಾರ್ಟ್‌ ನಲ್ಲಿ ಶನಿವಾರ ನಡೆದ ‘ರೋಡ್ ಶೋ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದ ಜಿಡಿಪಿಯಲ್ಲಿ ರಾಮನಗರದ ಪಾಲು ಶೇ 1.9ರಷ್ಟಿದೆ. ಇಲ್ಲಿ ಒಟ್ಟು 64 ಬೃಹತ್‌, ಮಧ್ಯಮ ಗಾತ್ರದ ಕೈಗಾರಿಕೆಗಳು ಹಾಗೂ 1633 ಸಣ್ಣ ಕೈಗಾರಿಕೆಗಳು ಇವೆ’ ಎಂದು ಅವರು ವಿವರಿಸಿದರು.

ವಿಶೇಷ ಆರ್ಥಿಕ ವಲಯ: ‘ಕೈಗಾರಿಕೆಗಳ ಬೆಳವಣಿಗೆಯಲ್ಲಿ ಜಿಲ್ಲೆಗೆ ವಿಫುಲ ಅವಕಾಶಗಳು ಇವೆ. ಸದ್ಯ ಒಟ್ಟು 13,817 ಎಕರೆಯಷ್ಟು ಲ್ಯಾಂಡ್ ಬ್ಯಾಂಕ್‌ ಇದ್ದು, 12,199 ಎಕರೆ ಜಮೀನನ್ನು ನೋಟಿಫೈ ಮಾಡಲಾಗಿದೆ. ರಾಮನಗರ ತಾಲ್ಲೂಕಿನ ಹರಿಸಂದ್ರದಲ್ಲಿ ಕೆಐಎಡಿಬಿ ನೇತೃತ್ವದಲ್ಲಿ ಎರಡು ವಿಶೇಷ ಆರ್ಥಿಕ ವಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ಆರ್ಎಂಡಿ ಕ್ಷೇತ್ರದಲ್ಲಿ ₨2683 ಕೋಟಿ ಹಾಗೂ ಸಿದ್ಧಉಡುಪು ಕ್ಷೇತ್ರದಲ್ಲಿ ₹120 ಕೋಟಿ ಹೂಡಿಕೆ ಹರಿದುಬರುವ ನಿರೀಕ್ಷೆ ಇದೆ’ ಎಂದು ಅವರು ವಿವರಿಸಿದರು.

‘ಬೆಂಗಳೂರಿಗೆ ಸಮೀಪ ಇರುವ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗಿಂತ ರಾಮನಗರವು ಹೆಚ್ಚಿನ ಅನುಕೂಲಗಳನ್ನು ಹೊಂದಿದೆ. ಇಲ್ಲಿನ ಬಿಡದಿ ಕೈಗಾರಿಕಾ ಪ್ರದೇಶವು 1,545 ಎಕರೆ ಪ್ರದೇಶದಲ್ಲಿ ವಿಸ್ತರಣೆಗೊಂಡಿದ್ದು, ಪ್ರಸಿದ್ಧ ಕಂಪೆನಿಗಳು ಉತ್ಪಾದನೆಯಲ್ಲಿ ತೊಡಗಿವೆ’ ಎಂದು ಅವರು ವಿವರಿಸಿದರು.

‘ಹಾರೋಹಳ್ಳಿ ಕೈಗಾರಿಕಾ ಪ್ರದೇಶವು ತೀವ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಕರ್ನಾಟಕ ಮುದ್ರಣಕಾರರ ಸಂಘದ ವತಿಯಿಂದ ಇಲ್ಲಿ 57 ಎಕರೆ ಪ್ರದೇಶದಲ್ಲಿ ಪ್ರಿಂಟೆಕ್‌ ಕ್ಲಸ್ಟರ್‌ ನಿರ್ಮಾಣ ಮಾಡುತ್ತಿದ್ದು, 89 ಉದ್ಯಮಗಳಿಗೆ ಹಂಚಿಕೆ ಮಾಡಲಾಗಿದೆ’ ಎಂದು ಅವರು ತಿಳಿಸಿದರು.

ಜಿಲ್ಲೆಯ ನಿರುದ್ಯೋಗಿಗಳಿಗೆ ಅವಕಾಶ ಕಲ್ಪಿಸುವ ಸಲುವಾಗಿ ಜಿಲ್ಲಾಡಳಿತವು ‘ಖಚಿತ ಉದ್ಯೋಗ’ ಎಂಬ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಇದೇ ತಿಂಗಳಾಂತ್ಯದವರೆಗೂ ನೋಂದಣಿಗೆ ಅವಕಾಶ ಇದೆ. ಮುಂದಿನ ತಿಂಗಳು ಉದ್ಯೋಗ ಆಕಾಂಕ್ಷಿಗಳ ಪಟ್ಟಿಯನ್ನು ಕೈಗಾರಿಕೆಗಳಿಗೆ ಬಿಡುಗಡೆ ಮಾಡಲಾಗುವುದು ಎಂದು ಅವರು ವಿವರಿಸಿದರು.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಗೌರವ ಪ್ರಧಾನ ಕಾರ್ಯದರ್ಶಿ ಟಿ.ಎಸ್. ಉಮಾಶಂಕರ್ ಮಾತನಾಡಿ ‘ನೋಟು ಅಮಾನ್ಯೀಕರಣ, ಜಿಎಸ್‌ಟಿಯಿಂದಾಗಿ ಸಣ್ಣ ಕೈಗಾರಿಕೆಗಳು ಜರ್ಜರಿತಗೊಂಡಿದ್ದು, ಈಗಷ್ಟೇ ಚೇತರಿಕೆಯ ಹಾದಿಯಲ್ಲಿವೆ. ಇಂತಹ ಕೈಗಾರಿಕೆಗಳಿಗೆ ಅವಕಾಶ ಮಾಡಿಕೊಡುವ ಸಲುವಾಗಿ ರಾಜ್ಯ ಸರ್ಕಾರದ ಸಹಯೋಗದಲ್ಲಿ ಈ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ. ಈಗಾಗಲೇ 600 ಕೈಗಾರಿಕಾ ಕಂಪೆನಿಗಳು ನೋಂದಾಯಿಸಿಕೊಂಡಿವೆ. ಈಗಲೂ ಆನ್‌ಲೈನ್‌ ಮೂಲಕ ನೋಂದಣಿಗೆ ಅವಕಾಶವಿದೆ’ ಎಂದರು.

ಹಾರೋಹಳ್ಳಿ ಕೈಗಾರಿಕೆಗಳ ಸಂಘದ ಪ್ರತಿನಿಧಿ ಮಧುಸೂದನ್‌ ಮಾತನಾಡಿ ‘ಹಾರೋಹಳ್ಳಿಯಲ್ಲಿ ಮೊದಲ ಹಂತದಲ್ಲಿ 1,100 ಹಾಗೂ ಎರಡನೇ ಹಂತದಲ್ಲಿ 1,300 ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳು ಸ್ಥಾಪನೆಗೊಳ್ಳುತ್ತಿವೆ. ಮೂರನೇ ಹಂತದಲ್ಲಿ 1,366 ಎಕರೆ ಭೂಸ್ವಾಧೀನ ಪ್ರಕ್ರಿಯೆ ನಡೆದಿದ್ದು, ಶೀಘ್ರದಲ್ಲಿಯೇ ಇದು ಏಷ್ಯಾದ ದೊಡ್ಡ ಕೈಗಾರಿಕಾ ಹೊಸಹತು ಆಗಿ ಹೊರಹೊಮ್ಮಲಿದೆ ಎಂದು ತಿಳಿಸಿದರು.

ಕೈಗಾರಿಕಾ ಪ್ರತಿನಿಧಿ ನಾಗರಾಜು ಸರಬರಾಜುದಾರರ ಅಭಿವೃದ್ಧಿ ಕುರಿತು ಮಾತನಾಡಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ದಿವ್ಯಾ ಗಂಗಾಧರ್‌ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸದಸ್ಯೆ ಲೀಲಾ ಮಂಜುನಾಥ್, ಮಂಚನಾಯಕನಹಳ್ಳಿ ಗ್ರಾ,ಪಂ. ಉಪಾಧ್ಯಕ್ಷೆ ಸುನಂದಾ ವೆಂಕಟೇಶ್, ಕಾಸಿಯಾದ ಜಂಟಿ ನಿರ್ದೇಶಕಿ ಲತಾ ಗಿರೀಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ವಿ.ಎಸ್. ಹೊನಮಾನೆ, ಮಂಡ್ಯ ಕೇಂದ್ರದ ಜಂಟಿ ನಿರ್ದೇಶಕ ಜಿ. ದೇವರಾಜ, ಹಾರೋಹಳ್ಳಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ನಂದಕುಮಾರ್, ಟಿಕೆಎಂ ಕಂಪೆನಿಯ ಉಪಾಧ್ಯಕ್ಷ ಶಶಿಕಾಂತ

ಮಹಿಳಾ ಉದ್ಯಮಿಗಳಾಗಿ ‘ಪಾರ್ಕ್‌’

‘ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಒಟ್ಟು 300 ಎಕರೆ ಪ್ರದೇಶದಲ್ಲಿ ‘ಮಹಿಳಾ ಉದ್ಯಮಿಗಳ ಪಾರ್ಕ್‌’ ಅನ್ನು ಸ್ಥಾಪಿಸಲಾಗುತ್ತಿದೆ’ ಎಂದು ಎಂದು ಜಿಲ್ಲಾಧಿಕಾರಿ ಮಮತಾ ತಿಳಿಸಿದರು.

ಮೊದಲ ಹಂತದಲ್ಲಿ 106 ಎಕರೆ ವಿಸ್ತೀರ್ಣದಲ್ಲಿ ಪಾರ್ಕ್‌ ಅಭಿವೃದ್ಧಿಗೊಳ್ಳಲಿದೆ. 100ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಸದರಿ ಪಾರ್ಕ್‌ನಲ್ಲಿ ಘಟಕ ತೆರೆಯಲು ಮುಂದೆ ಬಂದಿದ್ದಾರೆ’ ಎಂದರು.

* * 

ಬೆಂಗಳೂರಿನ ಶೃಂಗ ಸಭೆಯು ಸಣ್ಣ ಉದ್ದಿಮೆಗಳು ಹಾಗೂ ಸರಬರಾಜುದಾರರಿಗೆ ‘ಸ್ವಯಂವರ’ ಇದ್ದಂತೆ. ಉತ್ತಮ ಪ್ರದರ್ಶನ ಅಗತ್ಯ

ಡಾ. ಬಿ.ಆರ್. ಮಮತಾ

ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry