6

ಕೆರೆಗೆ ಬಿದ್ದು ನಾಲ್ವರ ಸಾವು

Published:
Updated:

ಚನ್ನಪಟ್ಟಣ: ವಿರುಪಾಕ್ಷಿಪುರ ಗ್ರಾಮದಲ್ಲಿ ಬಟ್ಟೆ ತೊಳೆಯಲು ಕೆರೆಗೆ ಹೋಗಿದ್ದ ನಾಲ್ವರು ನೀರುಪಾಲಾಗಿದ್ದಾರೆ. ಗ್ರಾಮದ ಪುಟ್ಟೇಗೌಡ ಎಂಬುವರ ಪತ್ನಿ ಗಾಯತ್ರಿ (35), ಮಗಳು ಪೂರ್ಣಿಮಾ (10) ರಾಮೇಗೌಡ ಎಂಬುವರ ಮಗಳು ನಮ್ರತಾ (11) ಹಾಗೂ ಅನು (14) ಮೃತಪಟ್ಟವರು. ಅವರು ಗ್ರಾಮದ ಹೊರವಲಯದ ರಾಮಯ್ಯನ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದರು.

ಸೀರೆ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಅದನ್ನು ಹಿಡಿಯಲು ಗಾಯತ್ರಿ ನೀರಿಗಿಳಿದಿದ್ದಾರೆ. ಆಗ ಆಯತಪ್ಪಿ ಮೊದಲು ಕೆರೆಯೊಳಗೆ ಬಿದ್ದು ಮುಳುಗುತ್ತಿದ್ದಂತೆ ಅವರನ್ನು ರಕ್ಷಿಸಲು ಹೋದ ಮಗಳು ಪೂರ್ಣಿಮ ನೀರೊಳಗೆ ಮುಳುಗಿದ್ದಾಳೆ.

ಈ ಇಬ್ಬರನ್ನು ರಕ್ಷಿಸಲು ಹೋದ ನಮ್ರತಾ ಹಾಗೂ ಅನು ಅವರೂ ಆಯತಪ್ಪಿ ಕೆರೆಯೊಳಗೆ ಮುಳುಗಿದ್ದಾರೆ. ದಡದಲ್ಲಿದ್ದ ಇನ್ನಿಬ್ಬರು ಮಕ್ಕಳು ಇದ್ದರು ಎಂದು ತಿಳಿದುಬಂದಿದೆ. ನಾಲ್ವರೂ ಮುಳುಗುತ್ತಿದ್ದುದನ್ನು ಕಂಡು ಓಡಿಹೋಗಿ ಗ್ರಾಮದಲ್ಲಿ ವಿಚಾರ ತಿಳಿಸಿದ್ದಾರೆ. ತಕ್ಷಣ ಗ್ರಾಮದ ಮಂದಿ ೋಡಿಬಂದರೂ ಅಷ್ಟರಲ್ಲಿ ನಾಲ್ವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.

ಈ ಜಾಗದಲ್ಲಿ ಕೆರೆ ಹೂಳು ತೆಗೆಯಲಾಗಿತ್ತು. ಸುಮಾರು 15 ಅಡಿಗಳಷ್ಟು ಆಳವಿದ್ದು, ಅದು ತಿಳಿಯದೆ ನೀರಿನಲ್ಲಿ ಇಳಿದು ಈ ದುರ್ಘಟನೆ ನಡೆದಿದೆ ಎಂದು ಗ್ರಾಮಸ್ಥರು ತಿಳಿಸಿದರು. ಮೃತದೇಹಗಳನ್ನು ಗ್ರಾಮಸ್ಥರೇ ಹೊರತೆಗೆದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಅಕ್ಕೂರು ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು.

ನಾಲ್ಕು ಮಂದಿ ಮೃತಪಟ್ಟ ಕಾರಣ ಗ್ರಾಮದಲ್ಲಿ ಮೌನ ಮನೆಮಾಡಿತ್ತು. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕೆರೆ ಬಳಿ ಹಾಗೂ ಶವಗಳನ್ನು ಇಟ್ಟ ಸಾರ್ವಜನಿಕ ಆಸ್ಪತ್ರೆಯ ಬಳಿ ನೂರಾರು ಮಂದಿ ಸೇರಿದ್ದರು.

ವಿಷಯ ತಿಳಿದು ಜೆಡಿಎಸ್‌ ಮುಖಂಡರಾದ ಅನಿತಾ ಕುಮಾರಸ್ವಾಮಿ ಸಾರ್ವಜನಿಕ ಆಸ್ಪತ್ರೆ ಬಳಿಗೆ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ತಾಲ್ಲೂಕಿನ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಧನಂಜಯ, ಸಿಪಿಐ ಗೋಪಿನಾಥ್ ಭೇಟಿ ನೀಡಿದ್ದರು.

ಒಂದು ಲಕ್ಷ ಪರಿಹಾರ: ಮೂವರು ಮಕ್ಕಳು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಾರಣ ಶಿಕ್ಷಣ ಇಲಾಖೆ ವತಿಯಿಂದ ತಲಾ ₹1 ಲಕ್ಷ ಪರಿಹಾರ ಕೊಡಿಸುವುದಾಗಿ ಸ್ಥಳಕ್ಕೆ ಭೇಟಿ ನೀಡಿದ್ದ ಶಿಕ್ಷಣ ಇಲಾಖೆ ಅಧಿಕಾರಿ ಚಿಕ್ಕೇಗೌಡ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry