7

ಕಾಡಾನೆ ಹಿಂಡು ದಾಳಿ– ಫಸಲು ನಾಶ

Published:
Updated:
ಕಾಡಾನೆ ಹಿಂಡು ದಾಳಿ– ಫಸಲು ನಾಶ

ಉಯ್ಯಂಬಳ್ಳಿ (ಕನಕಪುರ): ಕಾಡಾನೆಗಳು ಗುಂಪಾಗಿ ಅರಣ್ಯದಿಂದ ಆಚೆ ಬಂದು ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಯಡಮಾರನಹಳ್ಳಿ ರೈತರ ಜಮೀನುಗಳಿಗೆ ದಾಳಿ ನಡೆಸಿ ರಾಗಿ ಮತ್ತು ಹುರುಳಿ ಫಸಲನ್ನು ಶುಕ್ರವಾರ ರಾತ್ರಿ ನಾಶ ಮಾಡಿವೆ.

ಕಾವೇರಿ ವನ್ಯಜೀವಿ ವಲಯ ಅರಣ್ಯ ಪ್ರದೇಶದಿಂದ ಶುಕ್ರವಾರ ರಾತ್ರಿ ಮೇವಿಗಾಗಿ 7 ಆನೆಗಳು ಆಚೆ ಬಂದಿವೆ, ರಾತ್ರಿಯಲ್ಲಿ ಹಲವು ರೈತರ ಜಮೀನುಗಳಲ್ಲಿ ಕಟಾವಿಗೆ ಬಂದಿದ್ದ ರಾಗಿ ಮತ್ತು ಹುರುಳಿಯನ್ನು ಮನಸೋ ಇಚ್ಚೆ ತಿಂದು ನಂತರ ನೀರು ಕುಡಿಯಲು ಯಡಮಾರನಹಳ್ಳಿ ಕೆರೆಗೆ ಬಂದಿವೆ.

ಶನಿವಾರ ಬೆಳಿಗ್ಗೆ ಆನೆಗಳು ಕೆರೆಯಲ್ಲಿ ಈಜಾಡುತ್ತಿರುವುದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ

ಮುಟ್ಟಿಸಿದ್ದಾರೆ. ಆನೆಗಳು ನೀರಿನಲ್ಲಿ ತಂಗಿರುವ ವಿಷಯ ತಿಳಿದ ರೈತರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆರೆಯ ಹತ್ತಿರ ಬಂದಿದ್ದಾರೆ.

ನೀರಿನಲ್ಲಿ ಆನೆಗಳಿಗೆ ಪಟಾಕಿ ಸಿಡಿಸಿ ಶಬ್ದ ಮಾಡುವ ಮೂಲಕ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿಗಳಾದ ಚಂದ್ರನಾಯ್ಕ್‌ ಮತ್ತು ಮುತ್ತುನಾಯ್ಕ್‌ ಸಿಬ್ಬಂದಿ ಜತೆಗೂಡಿ ಓಡಿಸುವ ಪ್ರಯತ್ನ ಮಾಡಿದ್ದಾರೆ. ಪಟಾಕಿ ಶಬ್ದಕ್ಕೆ ಹೆದರಿದ ಆನೆಗಳು ಗುಂಪಾಗಿ ಸಂಜೆವೇಳೆಗೆ ಮತ್ತೆ ಕಾವೇರಿ ವನ್ಯಜೀವಿ ವಲಯ ಅರಣ್ಯ ಪ್ರದೇಶಕ್ಕೆ ವಾಪಸಾಗಿವೆ.

ಸಾತನೂರು ಠಾಣೆಯ ಪೊಲೀಸರು ಹಾಗೂ ಸಾರ್ವಜನಿಕರು ಆನೆಗಳನ್ನು ಓಡಿಸುವಲ್ಲಿ ತಮಗೆ ಸಹಕರಿಸಿದ್ದರಿಂದ ಆನೆಗಳು ಸುಲಭವಾಗಿ ಓಡಿಸಲು ಸಾಧ್ಯವಾಯಿತೆಂದು ಡಿ.ಆರ್‌.ಒ.ಎಫ್‌. ಚಂದ್ರನಾಯ್ಕ್‌ ತಿಳಿಸಿದ್ದಾರೆ.

ಪರಿಹಾರಕ್ಕಾಗಿ ಒತ್ತಾಯ

ಕಾಡಾನೆಗಳು ಹಿಂಡಾಗಿ ಬಂದು ಚೆನ್ನಾಗಿ ಬಂದಿದ್ದ ರಾಗಿಫಸಲು ಮತ್ತು ಹುರುಳಿಯನ್ನು ಸಾಕಷ್ಟು ರೈತರ ಜಮೀನಿನಲ್ಲಿ ನಾಶಮಾಡಿವೆ ಎಂದು ರೈತರು ತಿಳಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳೇ ಬಂದು ಪರಿಸ್ಥಿತಿಯನ್ನು ಮತ್ತು ನಷ್ಟವಾಗಿರುವ ವಿಚಾರ ತಿಳಿದಿರುವುದರಿಂದ ತಾವೇ ವರದಿ ತಯಾರು ಮಾಡಿಕೊಂಡು ಇಲಾಖೆಯಿಂದ ಪರಿಹಾರ ಕೊಡಿಸಬೇಕೆಂದು ನಷ್ಟಕ್ಕೆ ಒಳಗಾಗಿರುವ ರೈತರು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry