ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಯ ನಾಳೆಗಳಿಗಾಗಿ ಹಂಬಲಿಸುತ್ತಾ...

Last Updated 19 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಜಗತ್ತು ವಿಸ್ತರಿಸುತ್ತಿದೆ. ಆಕಾಶಕಾಯಗಳೆಲ್ಲ ನಿತ್ಯವೂ ದೂರದೂರ ಸರಿಯುತ್ತಿವೆ. ಅಂತರ ಹಿಗ್ಗಿದಂತೆ ಅನುಬಂಧಗಳು ಸಡಿಲಗೊಳ್ಳುತ್ತಾ ಸಾಗಿದೆ. ನಿರಂತರವಾಗಿ ಜೀವವಿಕಾಸಗೊಳ್ಳುತ್ತಲೇ ಇದೆ. ಮೈಮನಸುಗಳಲ್ಲದೇ ಜ್ಞಾನ-ವಿಜ್ಞಾನಗಳಿಗೂ ಈಗ ನೂರ‍್ಮಡಿ ವೇಗ. ಎಲ್ಲೆಡೆ ಗೆಲ್ಲುವ, ಸಾವನ್ನೂ ಸಾಯಿಸುವ, ಕೃತಕ ಜೀವಸೃಷ್ಟಿಯಿಂದ ನಿಸರ್ಗಚಕ್ರವನ್ನು ತಿರುಚುವ ಧಾವಂತ. ಸಾವಧಾನವೇ ಇಲ್ಲಿ ಅವಸರದ ಬೆನ್ನೇರಿದೆ! ವಾಸ್ತವವನ್ನು ಒಪ್ಪಿಕೊಳ್ಳಬೇಕಿದೆ. ಕಾರಣ, ಇದು ವೇಗದ ಜಮಾನ!

ಇದೊಂದು ರೀತಿಯ ಸಂದಿಗ್ಧ ಕಾಲ. ಪ್ರೌಢಹಂತ ದಾಟಿಯಾದ ಮೇಲೆ ಬದುಕು ಕಲಿಸುವ ಕುಲುಮೆಯಾಗಿ, ಸ್ಪರ್ಧಾಜಗತ್ತಿನ ಬೆಳಕಿಂಡಿಯಾಗಿ ನಿಲ್ಲಬೇಕಿರುವುದು ಕಾಲೇಜು ಶಿಕ್ಷಣ. ಉನ್ನತ ಶಿಕ್ಷಣವನ್ನು ಹರಡುವ ಮಹತ್ವಾಕಾಂಕ್ಷೆಗೆ ಬಲ ಬರುವುದು ಆಗಲೇ.

ಪ್ರೌಢಾವಸ್ಥೆ ಮತ್ತು ನಂತರದ ದಿನಗಳಲ್ಲಿ ಮಕ್ಕಳ ಏಳ್ಗೆಯ ಸಮಾನ ಹೊಣೆಗಾರರಾದ ವಿದ್ಯಾರ್ಥಿ-ಶಿಕ್ಷಕ-ಪೋಷಕರ ನಡುವಿನ ತ್ರಿಕೋನಾನುಬಂಧ ಈಗೀಗ ಅದರುವುದಕ್ಕೆ ಶುರುವಾಗಿದೆ. ಅರಿವಿನ ತವರಾಗಬೇಕಾಗಿದ್ದ ಕಾಲೇಜಿನಲ್ಲಿ ಪೂರಕವಾಗಿ ಕನಿಷ್ಠ ಶಿಸ್ತು ಪಾಲಿಸಲಾಗದ ಅಸಹಾಯಕ ಸ್ಥಿತಿ ಬಹುತೇಕ ಉಪನ್ಯಾಸಕವರ್ಗ-ಆಡಳಿತ ಮಂಡಳಿಯದ್ದು. ಕಾಲೇಜು ಪೋಷಕರಸಭೆಯ ಚರ್ಚೆಯಲ್ಲೂ ಇಂಥದ್ದೊಂದು ಉತ್ತರ ತೋಚದ ಗಂಭೀರ ಪ್ರಶ್ನೆಯೊಂದು ಎದ್ದು ನಿಲ್ಲುತ್ತಿದೆ.

ಬಹಳಷ್ಟು ವಿದ್ಯಾರ್ಥಿಗಳ ಅಸಹಜ ವರ್ತನೆ, ಅವಿಧೇಯ ನಡವಳಿಕೆಗಳು ಸಂಸ್ಥೆಯ ಆಂತರಿಕ ಶಿಸ್ತಿಗೆ ಭಂಗ ತರುತ್ತಿರುವುದಲ್ಲದೆ ಕಲಿಕೆಯ ಪ್ರಾಮುಖ್ಯವನ್ನೇ ಕುಗ್ಗಿಸುತ್ತಿರುವ ಆತಂಕ ಅವರಿಗೆ. ವಿದ್ಯಾರ್ಥಿಗಳ ಈ ಅಸಹಜ ವರ್ತನೆಗೆ ಕಾಲೇಜು, ಮನೆ ಹಾಗು ವೈಯಕ್ತಿಕ ನೆಲೆಯಲ್ಲಿ ಕಾರಣವಾಗುವ ಸನ್ನಿವೇಶಗಳು, ವರ್ತನೆಯಿಂದಾಗುವ ಪರಿಣಾಮಗಳೆಲ್ಲ ಒಳನೋಟದಿಂದ ಗ್ರಹಿಸಬೇಕಾದ ಸೂಕ್ಷ್ಮ ಸಂಗತಿಗಳಾಗಿದ್ದು, ಮೂರೂ ಆಯಾಮಗಳಾದ ಶಿಕ್ಷಕ-ಪೋಷಕ-ವಿದ್ಯಾರ್ಥಿಗಳ ನೆಲೆಯಲ್ಲಿ ಚಿಕಿತ್ಸಕ ದೃಷ್ಟಿಯಲ್ಲಿ ನೋಡಬೇಕಾದ ತುರ್ತಿದೆ.

ಅದು ಕಾಲೇಜಿನ ಕಥೆಯಾದರೆ ಇತ್ತ ಬಹಳಷ್ಟು ಮನೆಗಳಲ್ಲಿ ಹೆತ್ತವರದು ತೀರದ ಗೋಳು. ಮೊಬೈಲ್ ಮಾಯೆಯಲ್ಲಿ ಹೂತುಹೋದ ಮಗನನ್ನು ಪೊಳ್ಳು-ಭ್ರಮೆಯ ಜಗತ್ತಿನಿಂದ ವಾಸ್ತವಕ್ಕೆ ಕರೆ ತರುವುದು ಸುಲಭವಲ್ಲ. ಯಾರ ಅಂಕೆಗೂ ನಿಲುಕದ ನಡೆ-ನೋಟ ಅವನದು. ಇನ್ನು ಮಗಳ ಕೈಲಿ ಅಷ್ಟಗಲದ ಮೊಬೈಲು, ಸೆಲ್ಫಿ ಕ್ಲಿಕ್ಕಿಸುವ ಗೀಳಲ್ಲೇ ಪೂರ್ತಿ ಕಳೆದು ಹೋಗಿದ್ದಾಳೆ. ಅವಳಿಗೆ ಫೇಸ್ಬುಕ್-ವಾಟ್ಸಾಪ್‌ಗಳಾಚೆಗಿನ ಸಂಸಾರ-ಸಂಬಂಧಗಳೆಲ್ಲಾ ವ್ಯರ್ಥಸಮಯ.

ಹಿಂದೆಲ್ಲಾ ನಡವಳಿಕೆಯನ್ನು ತಿದ್ದಿಕೊಳ್ಳುವುದಕ್ಕೆ ಮನೆಯ ಹಿರಿಯರದೊಂದು ಆಪ್ತನುಡಿ, ಅಂಗಡಿ ರಾಯರ ಕೊಂಕುಮಾತು, ಮೇಷ್ಟ್ರು ಅರಿವಿನಿಂದ ನೀಡುವ ವಕ್ರನೋಟವೊಂದು ಸಾಕಾಗುತ್ತಿತ್ತು. ಆದರೀಗ ಹುಡುಗರು ಆ ಹಂತ ದಾಟಿದ್ದಾರೆ. ಕಾಡಿದರೂ, ಬೇಡಿದರೂ ಭಾವನೆಗಳು ಬದಲಾಗುತ್ತಿಲ್ಲ. ಎಲ್ಲಾಕಾಲಕ್ಕೂ ದೇಶದ ಶಕ್ತಿಯೂ ಆಸ್ತಿಯೂ ಆಗಿರುವ ಯುವಜನತೆ, ಬೆಳಕಿನ ಬೀಜಗಳಾಗಿ ಉಳಿಯಬೇಕಿದೆ; ನಾಳಿನ ಭರವಸೆಗಳಾಗಿ ಬೆಳೆಯಬೇಕಿದೆ. ಆಧುನಿಕತೆಯ ಭರಾಟೆಯಲ್ಲಿ ಕೊಚ್ಚಿ ಹೋಗುತ್ತಾ, ನವಯುಗ
ದಲ್ಲಿನ ಮಾಯಾಮೃಗಗಳ ಬೆನ್ನುಹತ್ತಿರುವ ಯುವಸಮೂಹಕ್ಕೆ ಕೇವಲ ಅರೋಪ ಹೊರಿಸುವುದರಿಂದ ಪ್ರಯೋಜನವಿಲ್ಲ.

ಸಮಸ್ಯೆಯ ತಾಯಿಬೇರು ಇರುವುದು ಸಾಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆಯಲ್ಲಿ. ಗುಂಪು ಪ್ರವೃತ್ತಿ, ಜನರೇಷನ್ ಗ್ಯಾಪ್‌ನ್ನು ಅರ್ಥೈಸಿಕೊಂಡು ಬೆಳೆಯುವ ಭವಿಷ್ಯದ ಕುಡಿಗಳನ್ನು ‘ಹೊನ್ನ ಬಿತ್ತೇವ ಹೊಲಕೆಲ್ಲಾ...’ ಎಂಬಂತೆ ವ್ಯವಸ್ಥೆಯು ಆಸ್ಥೆಯಿಂದ ಪೊರೆಯಬೇಕಿದೆ. ಅದು ಜಾಗೃತಸಮಾಜದ ಜವಾಬ್ದಾರಿಯೂ ಹೌದು. ಜಾತಿ, ಹಣ, ಸ್ವಾರ್ಥ, ಭ್ರಷ್ಟಾಚಾರ, ಬಾಹ್ಯ ಸೌಂದರ್ಯಗಳ ಬೆನ್ನುಬೀಳದೆಯೇ, ಸಮಾಜವೀಗ ತನ್ನ ಸಂತತಿಯನ್ನು ತಿದ್ದುವ ನೈತಿಕತೆಯನ್ನು ಉಳಿಸಿಕೊಳ್ಳುವುದು ಮುಖ್ಯ. ಪರೀಕ್ಷೆಯಲ್ಲಿ ಅಂಕಗಳಿಸುವಷ್ಟು ಅಕ್ಷರಗಳ ಅರಿವನ್ನಷ್ಟೇ ಮಕ್ಕಳಿಗಿತ್ತರೆ ಸಾಲದು, ಸಂಸ್ಕಾರದ ತಳಹದಿಯ ಮೇಲೆ ಬದುಕನ್ನು ಕಟ್ಟಿಕೊಡಬೇಕು.

ಎಲ್ಲಕ್ಕಿಂತ ಮೊದಲು ಮನೆಮಂದಿಯ ನಡವಳಿಕೆಗಳೂ ಸರಿದಾರಿಗೆ ಮರಳಬೇಕು, ತಮ್ಮದೇ ಆರೋಗ್ಯ, ನೆಮ್ಮದಿ, ಬಾಂಧವ್ಯಗಳನ್ನು ಮರೆತು ಸಂಪತ್ತುಗಳಿಕೆಗೆ ಹಗಲಿರುಳು ಹೊಯ್ದಾಡುವ ಕೆಲವರು ಪೋಷಕರ ಆತ್ಮಾವಲೋಕನಕ್ಕಿದು ಸಕಾಲ.

ಸಾವಧಾನದ-ಧ್ಯಾನದ ಮಹತ್ವವನ್ನು ಮನಗಾಣಿಸುವುದು ಈಗ ಮೊದಲಿಗಿಂತ ಹೆಚ್ಚು ಅಗತ್ಯ. ಕ್ರೀಡೆ, ಸಾಹಿತ್ಯ-ಸಂಗೀತ, ಪುಸ್ತಕ ಓದುವವಂತಹ ಆರೋಗ್ಯಕರ ಹವ್ಯಾಸಗಳ ಹುಚ್ಚನ್ನು ಚಿಗುರಿನಲ್ಲೇ ಹಿಡಿಸಬೇಕಿದೆ. ಬೆವರಿನ ಬೆಲೆಯು ಮನೆಮಕ್ಕಳ ಕಣ್ಣಿಗೆ ಕಟ್ಟಬೇಕಿದೆ, ಹೃದಯವನ್ನು ತಟ್ಟಬೇಕಿದೆ. ಸರಳ ಜೀವನವಿಧಾನ ಮತ್ತು ಸಮಷ್ಟಿಪ್ರಜ್ಞೆಯಿಂದ ಮಾನವೀಯ ಮೌಲ್ಯಗಳಿಗೆ ಜಾಗ ನೀಡಿಬೇಕು. ಆಗ ಮಾತ್ರ ಕನಸಿನ ಭಾರತದಲ್ಲಿ ಯುವಜನತೆಯು ಸಾರ್ಥಕ ನಾಳೆಗಳನ್ನು ಸಂತುಷ್ಟಿಯಲ್ಲಿ ಬಾಳುವುದು ಸಾಧ್ಯವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT