ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಜೆ: ಬ್ರಿಟನ್‌ನಿಂದ ಅಧಿಕಾರ ದುರುಪಯೋಗ ಆರೋಪ

Last Updated 19 ನವೆಂಬರ್ 2017, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಅಂತರ ರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ನ್ಯಾಯಮೂರ್ತಿ ಹುದ್ದೆಗೆ  ಸಂಬಂಧಿಸಿದಂತೆ, ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯತ್ವವನ್ನು ಬ್ರಿಟನ್ ದುರುಪಯೋಗಪಡಿಸಿಕೊಳ್ಳಲು ಮುಂದಾಗಿದೆ ಎಂದು ರಾಜತಾಂತ್ರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತದ ದಲ್ವೀರ್ ಭಂಡಾರಿ ಹಾಗೂ ಬ್ರಿಟನ್‌ನ ಕ್ರಿಸ್ಟೋಫರ್ ಗ್ರೀನ್‌ ವುಡ್ ಅವರು ಐಸಿಜೆ ನ್ಯಾಯಮೂರ್ತಿ ಹುದ್ದೆಯ ಸ್ಪರ್ಧೆಯಲ್ಲಿದ್ದು, ಇಬ್ಬರ ನಡುವೆ ಪ್ರಬಲ ಪೈಪೋಟಿ ನಡೆದಿದೆ. 11 ಸುತ್ತಿನ ಮತದಾನದ ಬಳಿಕವೂ ಆಯ್ಕೆ ಕಗ್ಗಂಟಾಗಿದೆ. ಇದಕ್ಕಾಗಿ ಮರು ಚುನಾವಣೆ ನಡೆಸಲಾಗುತ್ತಿದೆ.

ಮರುಚುನಾವಣೆ ಸಂದರ್ಭದಲ್ಲಿ ’ಜಂಟಿ ಸಮಾವೇಶ ಪ್ರಕ್ರಿಯೆ’ ಅನುಸರಿಸುವಂತೆ ಬ್ರಿಟನ್ ಒತ್ತಡ ಹೇರುತ್ತಿದೆ. ಇದಕ್ಕೂ ಮೊದಲು 96 ವರ್ಷಗಳ ಹಿಂದೆ ಈ ಪ್ರಕ್ರಿಯೆ ಅನುಸರಿಸಲಾಗಿತ್ತು. ಈ ಪ್ರಕ್ರಿಯೆ ಕುರಿತು ಕಾನೂನಾತ್ಮಕವಾಗಿ ಭಿನ್ನಾಭಿಪ್ರಾಯಗಳಿವೆ. ಭಂಡಾರಿ ಅವರಿಗೆ ಹೆಚ್ಚಿನ ಬೆಂಬಲ ದೊರೆಯುವುದು ಖಚಿತ ವಾಗಿರುವುದರಿಂದ ಬ್ರಿಟನ್‌ ಈ ರೀತಿಯ ಕುತಂತ್ರ ಅನುಸರಿಸುತ್ತಿದೆ ಎಂದು ಅಧಿಕಾರಿಗಳು ಕಿಡಿಕಾರಿದ್ದಾರೆ.

’ಬ್ರಿಟನ್‌ ಹೊಲಸು ರಾಜಕೀಯ ಮಾಡುತ್ತಿದೆ. ಭದ್ರತಾ ಮಂಡಳಿಯ ಇತರ ಸದಸ್ಯರಿಗೂ ಈ ಬಗ್ಗೆ ಅಸಮಾಧಾನವಾಗಿದೆ’ ಎಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

’ಜಂಟಿ ಸಮಾವೇಶ ಪ್ರಕ್ರಿಯೆ’ ಅನ್ವಯ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮತ್ತು ಭದ್ರತಾ ಮಂಡಳಿಯ ತಲಾ ಮೂವರು ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗುತ್ತದೆ.

ಈ ಸಮಿತಿಯು ನ್ಯಾಯಮೂರ್ತಿ ಹುದ್ದೆಗೆ ಒಬ್ಬರ ಹೆಸರನ್ನು ಶಿಫಾರಸು ಮಾಡುತ್ತದೆ. ಬಳಿಕ ಮತ್ತೆ ಭದ್ರತಾ ಮಂಡಳಿ ಮತ್ತು ಸಾಮಾನ್ಯ ಸಭೆ ಸದಸ್ಯರು ನ್ಯಾಯಮೂರ್ತಿ ಆಯ್ಕೆಗಾಗಿ ಮತದಾನ ಮಾಡುತ್ತಾರೆ. ಆದರೆ, ಈ ಬಗ್ಗೆ ಹಲವು ರೀತಿಯ ಸಂಶಯಗಳು ಮೂಡಿವೆ.

ಸಾಮಾನ್ಯ ಸಭೆಯ ಸದಸ್ಯರು ಬಹುಮತಕ್ಕೆ ಆದ್ಯತೆ ನೀಡಿದರೆ ಅಥವಾ ಯಾರ ಹೆಸರನ್ನು ಶಿಫಾರಸು ಮಾಡ ದಿದ್ದರೆ ಅಥವಾ ಭದ್ರತಾ ಮಂಡಳಿ ಸದಸ್ಯರು ಸೂಚಿಸುವ ಹೆಸರನ್ನು ಒಪ್ಪದಿದ್ದರೆ ಏನಾಗುತ್ತದೆ ಎನ್ನುವ ಪ್ರಶ್ನೆಗಳು ಮೂಡಿವೆ. ಈ ಬಗ್ಗೆ ಸ್ಪಷ್ಟವಾದ ಉತ್ತರ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದಿನ ಎಲ್ಲಾ ಪ್ರಕರಣ ಗಳಲ್ಲೂ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಬಹುಮತ ಗಳಿಸಿದವರನ್ನು ನ್ಯಾಯಮೂರ್ತಿನ್ನಾಗಿ ಆಯ್ಕೆ ಮಾಡಲಾಗಿತ್ತು. ಭಂಡಾರಿ ಅವರು ಸಾಮಾನ್ಯ ಸಭೆಯಲ್ಲಿ ಎರಡನೇ ಮೂರು ಭಾಗದಷ್ಟು ಬಹುಮತ ಗಳಿಸಿ ಮುಂಚೂಣಿಯಲ್ಲಿದ್ದರೂ, ಭದ್ರತಾ ಮಂಡಳಿಯಲ್ಲಿ ಬಹುಮತ ಗಳಿಸಿಲ್ಲ.

ಐಸಿಜೆ ಚುನಾವಣೆಯಲ್ಲಿ ಜಯಗಳಿಸಲು ಅಭ್ಯರ್ಥಿಯು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ಮತ್ತು ಭದ್ರತಾ ಮಂಡಳಿಯಲ್ಲಿ ಬಹುಮತ ಗಳಿಸಬೇಕು. ಆದರೆ, ಈ ಬಾರಿ 11 ಸುತ್ತಿನ ಬಳಿಕವೂ ಇದು ಸಾಧ್ಯವಾಗಿಲ್ಲ. ಹೀಗಾಗಿ, ಸೋಮವಾರ 12ನೇ ಸುತ್ತಿನ ಮತದಾನಕ್ಕಾಗಿ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಸಾಮಾನ್ಯ ಸಭೆ ಮತ್ತು ಭದ್ರತಾ ಮಂಡಳಿಯ ಸಭೆ ಕರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT