7

ಸಂಪನ್ಮೂಲ ಸಂಗ್ರಹಣೆಗೆ ಕಂಪನಿಗಳ ಗಮನ

ಕೆ. ಜಿ. ಕೃಪಾಲ್
Published:
Updated:
ಸಂಪನ್ಮೂಲ ಸಂಗ್ರಹಣೆಗೆ ಕಂಪನಿಗಳ ಗಮನ

ಅನೇಕ ಅಗ್ರಮಾನ್ಯ ಕಂಪನಿಗಳು ನಿರೀಕ್ಷೆಗಿಂತ ಉತ್ತಮ ಹಣಕಾಸು ಸಾಧನೆ  ಘೋಷಿಸಿವೆ. ಆದರೆ, ಈ ತ್ರೈಮಾಸಿಕದಲ್ಲಿ ಕಂಪನಿಗಳು ಪ್ರಕಟಿಸುವ ಲಾಭಾಂಶದಂತಹ ಕಾರ್ಪೊರೇಟ್ ಫಲಗಳು  ಮಾತ್ರ ಅತಿ ಕಡಿಮೆಯಾಗಿವೆ.  ಕಂಪನಿಗಳು ತಮ್ಮ ವಿವಿಧ ಯೋಜನೆಗಳಿಗೆ ಅವಶ್ಯಕವಿರುವ ಸಂಪನ್ಮೂಲ ಸಂಗ್ರಹಣೆಯತ್ತ ಗಮನಹರಿಸಿವೆಯೇ  ಹೊರತು  ಷೇರುದಾರರಿಗೆ ನೀಡಬೇಕಾದ ಫಲಗಳತ್ತ ಗಮನಹರಿಸಿಲ್ಲದೇ ಇರುವುದು ಖೇದಕರ. 

ಸೋಮವಾರ ಅತ್ಯುತ್ತಮ ಸಾಧನೆಯ ಅಂಶಗಳನ್ನು ಪ್ರಕಟಿಸಿದ ಕಂಪನಿ ಅಬ್ಬಾಟ್ ಇಂಡಿಯಾ  ಷೇರಿನ ಬೆಲೆ ಅಂದು ₹4,600 ರ ಸಮೀಪದಿಂದ ದಿನದ ಗರಿಷ್ಠ  ಆವರಣ ಮಿತಿ ₹5,401ನ್ನು ತಲುಪಿ ಸುಮಾರು ₹800 ರಷ್ಟು ಏರಿಕೆ ಪಡೆದುಕೊಂಡು, ಸ್ವಲ್ಪ ಸಮಯದ ನಂತರ ಮಾರಾಟದ ಒತ್ತಡಕ್ಕೊಳಪಟ್ಟು ₹5,056 ರ ಸಮೀಪ ಕೊನೆಗೊಂಡು ಭಾರಿ ಏರಿಳಿತ ಪ್ರದರ್ಶಿಸಿತು. ₹4,942 ರಲ್ಲಿ ವಾರಾಂತ್ಯ ಕಂಡಿತು.

ಬಿಎಎಸ್ಎ‌ ಇಂಡಿಯಾ ಕಂಪನಿ ಮಂಗಳವಾರ ಪ್ರಕಟಿಸಿದ ಅತ್ಯುತ್ತಮ ಅಂಕಿ ಅಂಶಗಳಿಗೆ ಪೇಟೆ ಸ್ಪಂಧಿಸಿ  ₹1,731 ರ ಸಮೀಪದಿಂದ ₹1,968 ರವರೆಗೂ ನೇರವಾಗಿ ಏರಿಕೆ ಕಂಡು ವಾರ್ಷಿಕ ಗರಿಷ್ಠ ದಾಖಲಿಸಿತು. ನಂತರ ದಿಸೆ ಬದಲಿಸಿ ₹1,827 ಕ್ಕೆ ಕುಸಿಯಿತು.

ಐಷರ್ ಮೋಟಾರ್ಸ್ ಲಿ ಕಂಪನಿ ಹಿಂದಿನ ತ್ರೈಮಾಸಿಕದ ಸಾಧನೆ ತೃಪ್ತಿಕರವಾಗಿಲ್ಲದೆ ಇರುವುದು ಷೇರಿನ ಬೆಲೆಯನ್ನು ₹30,960 ರ ದಿನದ ಗರಿಷ್ಠಮಟ್ಟದಿಂದ ₹29,648 ರವರೆಗೂ ನೇರ ಕುಸಿತ ಕಾಣುವಂತಾಯಿತು.  ಆದರೆ ಅಲ್ಲಿಂದ ಚೇತರಿಸಿಕೊಂಡು ₹30,083 ರಲ್ಲಿ ಕೊನೆಗೊಂಡಿತು.

ಇತ್ತೀಚಿಗೆ ಪ್ರತಿ ಷೇರಿಗೆ ₹800 ರಂತೆ ಸಾರ್ವಜನಿಕ ಷೇರು ವಿತರಣೆ ಮಾಡಿದ್ದ ನ್ಯೂ ಇಂಡಿಯಾ ಅಶುರನ್ಸ್ ಕಂಪನಿ ಲಿಮಿಟೆಡ್  ಸೋಮವಾರ ಪೇಟೆ ಪ್ರವೇಶ ಮಾಡಿತು. ಅಂದು ಷೇರಿನ ಬೆಲೆಯೂ ₹717 ರಿಂದ ₹749 ರವರೆಗೂ ವಹಿವಾಟಾಗಿ ₹725ರ ಸಮೀಪ ಕೊನೆಗೊಂಡು, ವಿತರಣೆ ಬೆಲೆ ತಲುಪಲು ಸಾಧ್ಯವಾಗದೆ ಹೂಡಿಕೆದಾರರಿಗೆ ನಷ್ಟ ಮಾಡಿತು.  ₹5 ರ ಮುಖಬೆಲೆಯ ಷೇರನ್ನು  ₹800 ರ ಅಗಾಧ ಬೆಲೆಯಲ್ಲಿ ವಿತರಣೆ ಮಾಡಿರುವುದೇ ಇದಕ್ಕೆ ಕಾರಣವಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಸರ್ಕಾರಿ  ವಲಯದ ಕಂಪೆನಿಗಳಾಗಲಿ, ಖಾಸಗಿ ಕಂಪೆನಿಗಳಾಗಲಿ, ಅವು ಪೇಟೆಯ ವಾತಾವರಣದ ಲಾಭ ಪಡೆಯಲು ಮುಂದಾಗುತ್ತವೆಯೇ ಹೊರತು ಹೂಡಿಕೆದಾರರ ಹಿತದ ದೃಷ್ಟಿಯಿಂದಲ್ಲ ಎಂಬುದು ದೃಢಪಟ್ಟಿದೆ.

ಕೇವಲ ಹತ್ತು ದಿನಗಳ ಹಿಂದಷ್ಟೇ ವಾರ್ಷಿಕ ಗರಿಷ್ಠ ಮಟ್ಟಕ್ಕೆ ಜಿಗಿದಿದ್ದ ಎಂಎಂಟಿಸಿ ಷೇರಿನ ಬೆಲೆಯು ಈ ವಾರ  ₹72.75 ರವರೆಗೂ ಕುಸಿಯಿತು. ಗುರುವಾರ ₹73.45 ರ ಕನಿಷ್ಠ ದರದಿಂದ ₹81.75 ರವರೆಗೂ ಜಿಗಿತ ಕಂಡು ₹80.95 ರಲ್ಲಿ ಕೊನೆಗೊಂಡಿದೆ.

ರಿಲಯನ್ಸ್ ಕಮ್ಯುನಿಕೇಶನ್ ಕಂಪನಿಯು ತನ್ನ ಡಾಲರ್ ಸಾಲದ ಮೇಲಿನ ಬಡ್ಡಿ ನೀಡಲು ತಪ್ಪಿದೆ ಎಂಬ ಕಾರಣಕ್ಕಾಗಿ ಅನಿಲ್ ಅಂಬಾನಿ ಸಮೂಹ ಕಂಪನಿಗಳಾದ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌, ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಹೋಮ್ ಫೈನಾನ್ಸ್ ಗಳಲ್ಲದೆ ಇತ್ತೀಚಿಗೆ ಆರಂಭಿಕ ಷೇರು ವಿತರಣೆ ಮಾಡಿದ ಮೊಟ್ಟಮೊದಲ ಅಸೆಟ್ ಮ್ಯಾನೇಜ್ ಮೆಂಟ್ ಕಂಪನಿ ರಿಲಯನ್ಸ್ ನಿಪ್ಪಾನ್ ಲೈಫ್ ಅಸೆಟ್ ಮ್ಯಾನೇಜ್ ಮೆಂಟ್ ಕಂಪನಿ ಗಳೆಲ್ಲವೂ ದಿಢೀರ್ ಕುಸಿತಕ್ಕೊಳಗಾದವು.

ರಿಲಯನ್ಸ್ ಕ್ಯಾಪಿಟಲ್ ಕಂಪನಿ ಷೇರಿನ ಬೆಲೆಯು ಈ ತಿಂಗಳ ಮೊದಲ ವಾರದಲ್ಲಿ  ₹593 ರ ಗರಿಷ್ಠದಲ್ಲಿದ್ದು ಬುಧವಾರ  ವಾರ್ಷಿಕ ಕನಿಷ್ಠ ₹400 ರ ಸಮೀಪಕ್ಕೆ  ಕುಸಿಯಿತು.  ಈ ಕುಸಿತಕ್ಕೆ ಕಂಪನಿಯ ಆಂತರಿಕ ಬೆಳವಣಿಗೆಗಳಾಗಲಿ, ಕಂಪನಿ ಸಂಬಂಧಿತ ಬಾಹ್ಯ ಕಾರಣಗಳಾಗಲಿ  ಇರದೇ  ಸಮೂಹ ಕಂಪನಿ ಮಾಡಿಕೊಂಡ ಎಡವಟ್ಟು ಕಾರಣವಾಗಿದೆ.  ಆದರೆ ಗುರುವಾರ ಷೇರಿನ ಬೆಲೆ ₹421 ರ ಆರಂಭಿಕ ಬೆಲೆಯಿಂದ ₹402ರ ಸಮಿಪಕ್ಕೆ ಕುಸಿದು ನಂತರ ಪುಟಿದೆದ್ದು ₹432 ರವರೆಗೂ ಚೇತರಿಸಿಕೊಂಡು ₹428 ರಲ್ಲಿ ಕೊನೆಗೊಂಡಿತು.

ಬೋನಸ್‌ ಷೇರು: ಬಾಲಕೃಷ್ಣ ಇಂಡಸ್ಟ್ರೀಸ್‌ ಮತ್ತು ವಕ್ರಾಂಗಿ ಕಂಪನಿಗಳು 1:1ರ ಅನುಪಾತದ ಬೋನಸ್‌ ಷೇರು ಪ್ರಕಡಿಸಿವೆ.

ಇನ್ಫೊಸಿಸ್‌ ಷೇರು ಮುರಖರೀದಿ: ಇನ್ಫೊಸಿಸ್‌ನಿಂದ ಷೇರು ಮರು ಖರೀದಿ ಪ್ರಕ್ರಿಯೆ ಆರಂಭಿಸುವ ವೇಳಾ ಪಟ್ಟಿ ಬಿಡುಗಡೆಯಾಗಿದೆ. ನವೆಂಬರ್ 30 ರಿಂದ ಆರಂಭವಾಗಿ ಡಿಸೆಂಬರ್ 14 ರವರೆಗೂ  ಈ  ಪ್ರಕ್ರಿಯೆ ನಡೆಯಲಿದ್ದು,  ಡಿಸೆಂಬರ್ 26 ರೊಳಗೆ ಎಲ್ಲ ಷೇರುದಾರರ ಖಾತೆಗೆ ಚುಕ್ತಾ ಮಾಡಲಾಗುವುದು.

ಕಂಪನಿಯು ಎರಡು ವಿಭಾಗಗಳಾಗಿ ವಿಂಗಡಿಸಿದೆ. ಸೆಬಿ ನಿಯಮದ ಪ್ರಕಾರ ಎರಡು ಲಕ್ಷ ರೂಪಾಯಿಗಳವರೆಗೂ ಷೇರುಗಳುಳ್ಳವರು ಸಣ್ಣ ಹೂಡಿಕೆದಾರರಾಗುವರು. ಅದರಂತೆ  ನವೆಂಬರ್ 1 ರಂದು ಷೇರಿನ ಬೆಲೆಯು ₹917.05 ಇದ್ದು ಅದರಂತೆ 215 ಷೇರು

ಹೊಂದಿರುವವರನ್ನು  ಮೀಸಲು ವಿಭಾಗಕ್ಕೆ ಸೇರಿಸಿ ಅವರಿಂದ ಕೊಳ್ಳುವ ಅನುಪಾತವು  ಪ್ರತಿ 81 ಷೇರಿನಲ್ಲಿ 23 ಷೇರುಗಳಾಗಿರುತ್ತವೆ.

ಎರಡು ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ ಷೇರು ಹೊಂದಿರುವವರು ಅಂದರೆ 216 ಷೇರುಗಳಿಗೂ ಹೆಚ್ಚಿನ ಷೇರು ಹೊಂದಿರುವವರನ್ನು ಸಾಮಾನ್ಯ ವಿಭಾಗವೆಂದು ಗುರುತಿಸಿ ಅವರು ಹೊಂದಿರುವ 163 ಷೇರುಗಳಲ್ಲಿ ಕೇವಲ 7 ಷೇರುಗಳನ್ನು ಹಿಂದೆ ಕೊಳ್ಳಲಾಗುವುದು. ಈ ಪ್ರಕ್ರಿಯೆಗಾಗಿ ಕಂಪನಿಯು ₹13,000 ಕೋಟಿವರೆಗೂ ವ್ಯಯಿಸಲಿದೆ.

ವಿತ್ತೀಯ ಪೇಟೆಗಳ ದೃಷ್ಟಿಯಿಂದ ಮೂಡೀಸ್‌ ರೇಟಿಂಗ್ ಉನ್ನತೀಕರಣವು ಸ್ವಾಗತಾರ್ಹವಾದರೂ, ಈಗಾಗಲೇ ಉತ್ತುಂಗದಲ್ಲಿರುವ ಪರಿಸ್ಥಿತಿಯಲ್ಲಿ ಈ ಕ್ರಮವು ಕೇವಲ ತಾತ್ಕಾಲಿಕ ಪ್ರಭಾವ ಬೀರುತ್ತದೆ ಎಂಬುದು ಶುಕ್ರವಾರದ ಪೇಟೆಯ ನಡೆ ಬಿಂಬಿಸುತ್ತದೆ.  ಮೂಲತಃ ಜನ

ಸಾಮಾನ್ಯರಲ್ಲಿ ಖರೀದಿಯ ಸಾಮರ್ಥ್ಯ ಹೆಚ್ಚುವವರೆಗೂ ಯಾವುದೇ ಸುಧಾರಣೆಗಳು ಯಶಸ್ವಿಯಾಗಲಾರವು.

ವಾರದ ವಿಶೇಷ

ಈಗಿನ ಷೇರುಪೇಟೆಗಳಲ್ಲಿ ವಹಿವಾಟು ಗುಚ್ಛ ಎಂಬುದಿಲ್ಲ,  ಯಾರು ಎಷ್ಟು ಷೇರು ಬೇಕಾದರೂ ಖರೀದಿಸಬಹುದು.  ಈ ಹಿಂದೆ ಭೌತಿಕ ಷೇರುಪತ್ರಗಳ ಸಮಯದಲ್ಲಿ ಷೇರುಗಳನ್ನು 50 ಅಥವಾ 100 ಷೇರುಗಳ ಗುಚ್ಛದಲ್ಲಿಯೇ ವ್ಯವಹರಿಸಬೇಕಿತ್ತು.  ಈಗ ಎಲ್ಲಾ ವಹಿವಾಟು ಡಿಮ್ಯಾಟ್ ರೂಪದಲ್ಲಿರುವುದರಿಂದ  ಹೂಡಿಕೆದಾರರಿಗೆ ಹೆಚ್ಚು ಅನುಕೂಲಕರವಾಗಿದೆ.

ವಿಶೇಷವಾಗಿ ಹೊಸದಾಗಿ ಷೇರುಪೇಟೆ ಪ್ರವೇಶಿಸುವವರಿಗಂತೂ ತುಂಬಾ ಅನುಕೂಲಕರ.  ವಿದ್ಯಾರ್ಥಿಗಳಾಗಲಿ, ಗೃಹಿಣಿಯರಾಗಲಿ, ನಿವೃತ್ತರಾದಿಯಾಗಿ ಬೇರೆ ಬೇರೆ ವೃತ್ತಿ ಪರರು ಷೇರುಪೇಟೆ ಪ್ರವೇಶಿಸಲು  ವಿಶೇಷವಾದ ತರಗತಿಗಳಿಗೆ ಹೋಗಿಯೇ  ಕಲಿಯಬೇಕಾದುದುರ ಅಗತ್ಯವಿಲ್ಲ. ಅವರು ತರಗತಿಗಳಿಗಾಗಿ ಹತ್ತಿಪ್ಪತ್ತು ಸಾವಿರ ರೂಪಾಯಿಗಳನ್ನು ವ್ಯಯಿಸುವ ಬದಲು ತಾವು ಹೂಡಿಕೆ ಮಾಡಬೇಕೆಂದಿರುವ ಮೊತ್ತದಲ್ಲಿ ಅಗ್ರಮಾನ್ಯ ಸಾಲಿನ, ಸಾಧನೆ ಆಧಾರಿತ, ಲಾಭಾಂಶ ಪ್ರಮಾಣ ಹೆಚ್ಚಿರುವ ಷೇರುಗಳಲ್ಲಿ  ಬೆಲೆ ಕುಸಿತವಿದ್ದಾಗ ಷೇರಿನ ಬೆಲೆಯಾಧಾರಿಸಿ 5 /10 /15 ರಂತೆ ಅಲ್ಪ ಪ್ರಮಾಣದ ಷೇರುಗಳನ್ನು ಖರೀದಿಸುವುದರಿಂದ ಪೇಟೆಗೆ ನೇರವಾಗಿ ಪ್ರವೇಶಿಸಿ ಅದರ ಅನುಭವ ಪಡೆಯಬಹುದು. ಇಲ್ಲಿ ಸ್ವಲ್ಪ ಮಟ್ಟಿನ ಹಾನಿಯಾದರೂ ಅದನ್ನು ಸರಿದೂಗಲು ಅನುಭವವನ್ನು ಪಡೆದಂತಾಗಿ ಮುಂದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದು ಸಾಧ್ಯ.

ತರಗತಿಗಳಲ್ಲಿ ತಿಳಿದುಕೊಂಡು ಪೇಟೆ ಪ್ರವೇಶ ಮಾಡಿದಾಗಲೂ ಸಹ ಇದೆ ರೀತಿ ಪ್ರಯತ್ನಗಳು ಬೇಕಾಗುವುದು.  ಈಗಿನ ದಿನಗಳಲ್ಲಿ ಸಾಧನೆಗಿಂತ ವಿಶ್ಲೇಷಣೆಗಳೇ ಹೆಚ್ಚು ಪ್ರಭಾವಿಯಾಗಿರುವುದರಿಂದ ಅಸ್ಥಿರತೆ ಹೆಚ್ಚಿರುತ್ತದೆ.  ಇದಕ್ಕೆ ಉದಾಹರಣೆ ಎಂದರೆ  ಇತ್ತೀಚಿಗೆ ಭಾರಿ ಕುಸಿತಕ್ಕೊಳಗಾಗಿರುವ ಲುಪಿನ್ ಲಿಮಿಟೆಡ್ ಷೇರು.  ಈ ಷೇರು ಒಂದೇ ತಿಂಗಳಲ್ಲಿ  ₹1,090 ರ ಸಮೀಪದಿಂದ ₹818 ರವರೆಗೂ ಕುಸಿದಿರುವುದು, ದೀರ್ಘಕಾಲೀನ ಹೂಡಿಕೆಗೆ ಅವಕಾಶವಾಗಿದೆ.

ಈ ಷೇರಿನ ಬೆಲೆ ಮತ್ತೆ ಇಳಿಯುವುದಿಲ್ಲ ಎಂಬ ಭಾವನೆ ಬೇಡ.  ನಾವು ಕೊಳ್ಳುವುದು ಕೇವಲ 5/ 10 ಷೇರುಗಳು ಮಾತ್ರ.  ಮತ್ತಷ್ಟು ಕುಸಿದರೆ ಮತ್ತೊಮ್ಮೆ ಸ್ವಲ್ಪ ಸ್ವಲ್ಪ ಸೇರಿಸಿಕೊಂಡು  ಹೂಡಿಕೆಗುಚ್ಛವನ್ನು ಬೆಳೆಸಿಕೊಳ್ಳಬಹುದು.   ಇದೆ ರೀತಿ ಪ್ರತಿ ತಿಂಗಳು ನಿರ್ವಹಿಸಿದಲ್ಲಿ  ಹತ್ತಾರು ಕಂಪನಿ ಷೇರುಗಳುಳ್ಳ  ಒಂದು ಸದೃಢ ಹೂಡಿಕೆ ಗುಚ್ಛವನ್ನು ಹೊಂದಿದಂತಾಗುತ್ತದೆ.  ಪ್ರಮುಖವಾಗಿ ‘ವ್ಯಾಲ್ಯೂ ಪಿಕ್’ ಮಾದರಿ ಅಳವಡಿಸುವುದು ಮುಖ್ಯ.  ಷೇರುಪೇಟೆಯ ಪ್ರಮುಖ ಗುಣ ಎಂದರೆ ‘ರೆಡಿ ಲಿಕ್ವಿಡಿಟಿ’. ಅವಶ್ಯಕತೆಯಿದ್ದಾಗ, ಅಪೇಕ್ಷಿಸಿದಾಗ ನಮ್ಮ ಷೇರುಗಳನ್ನು ಮಾರಾಟ ಮಾಡಿ ಹೊರಬರುವುದರ ಜೊತೆಗೆ ತ್ವರಿತವಾಗಿ ನಗದೀಕರಿಸಿಕೊಳ್ಳಬಹುದಾದ ಅಸ್ತಿ ಇದಾಗಿದೆ.ಪ್ರಯತ್ನಿಸಿ ನೋಡಿ.

(ಮೊ: 9886313380,ಸಂಜೆ 4.30 ರನಂತರ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry