7

ಪರಿವರ್ತನೆ ತರಲು ಒಂದು ಅವಕಾಶ

Published:
Updated:
ಪರಿವರ್ತನೆ ತರಲು ಒಂದು ಅವಕಾಶ

ಹಾಲಿವುಡ್ ಚಿತ್ರ ನಿರ್ಮಾಪಕ ಹಾರ್ವಿ ವೈನ್‌ಸ್ಟಿನ್‌ ಅವರ ಲೈಂಗಿಕ ದುರ್ನಡತೆಗೆ ಸಂಬಂಧಿಸಿದ ವರದಿಯನ್ನು ‘ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆ ಅಕ್ಟೋಬರ್ 5ರಂದು ಪ್ರಕಟಿಸಿತು. ಆಸ್ಕರ್‌ ಪ್ರಶಸ್ತಿಗೆ ಪಾತ್ರವಾದ ‘ದಿ ಕಿಂಗ್ಸ್‌ ಸ್ಪೀಚ್‌’ನಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ, ಸಿನಿಮಾ ಜಗತ್ತಿನ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ವೈನ್‌ಸ್ಟಿನ್‌ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಅಥವಾ ಕಿರುಕುಳಕ್ಕೆ ಗುರಿಯಾಗಿದ್ದೆವು ಎಂದು ಹೇಳಿಕೊಂಡ ನಟಿಯರ ಹೇಳಿಕೆಗಳನ್ನು ಪತ್ರಿಕೆ ಪ್ರಕಟಿಸಿತು. ವರದಿ ಪ್ರಕಟವಾದ ನಂತರ, ವೈನ್‌ಸ್ಟಿನ್‌ ಅವರಿಂದ ತಾವೂ ದೌರ್ಜನ್ಯಕ್ಕೆ ಗುರಿಯಾಗಿದ್ದಾಗಿ ಇನ್ನೊಂದಷ್ಟು ಜನ ಮಹಿಳೆಯರು ಹೇಳಿಕೊಂಡರು (ಹೀಗೆ ಹೇಳಿಕೊಂಡ ಮಹಿಳೆಯರ ಸಂಖ್ಯೆ ಅಕ್ಟೋಬರ್‌ ಅಂತ್ಯದ ವೇಳೆಗೆ 80 ದಾಟಿತ್ತು). ಇದಾದ ಒಂದೆರಡು ದಿನಗಳ ನಂತರ ವೈನ್‌ಸ್ಟಿನ್‌ ಅವರ ಕಂಪೆನಿಯ ನಿರ್ದೇಶಕರ ಮಂಡಳಿಯು ವೈನ್‌ಸ್ಟಿನ್ ಅವರನ್ನು ಹುದ್ದೆಯಿಂದ ವಜಾ ಮಾಡಿತು. ನಂತರದ ದಿನಗಳಲ್ಲಿ, ಖ್ಯಾತನಾಮರೂ ಸೇರಿದಂತೆ ಹಲವು ಮಹಿಳೆಯರು ತಾವು ಅನುಭವಿಸಿದ್ದನ್ನು ಬಹಿರಂಗವಾಗಿ ಹೇಳಿಕೊಳ್ಳಲು ಆರಂಭಿಸಿದರು. ಆಗ ಇತರ ಬಲಾಢ್ಯರ ಕಥೆಗಳತ್ತ ಗಮನ ತಿರುಗಿತು.

ನಿರ್ದೇಶಕ ಜೇಮ್ಸ್ ಟೊಬಾಕ್‌ (238ಕ್ಕೂ ಹೆಚ್ಚು ಮಹಿಳೆಯರು ಇವರ ವಿರುದ್ಧ ಆರೋಪ ಹೊರಿಸಿದ್ದಾರೆ), ನಟರಾದ ಡಸ್ಟಿನ್ ಹೊಫ್‌ಮ್ಯಾನ್‌, ಕೆವಿನ್ ಸ್ಪೆಸಿ, ಸ್ಟೀವನ್ ಸೀಗಲ್, ಬೆನ್ ಅಫ್ಲೆಕ್, ಹಾಸ್ಯಗಾರ ಲೂಯಿಸ್ ಸಿಕೆ, ರಾಜಕೀಯ ವಿಶ್ಲೇಷಕ ಮಾರ್ಕ್ ಹಾಲ್ಪರಿನ್, ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್‌ ಎಚ್‌ಡಬ್ಲ್ಯೂ ಬುಷ್ ಅವರೂ ಆರೋಪ ಹೊತ್ತವರ ಪಟ್ಟಿಯಲ್ಲಿ ಇದ್ದಾರೆ. ಈ ಬಗೆಯ ಆರೋಪಗಳು ಒಂದು ಕಾಲದ ರಿಪಬ್ಲಿಕನ್ ಅಭ್ಯರ್ಥಿ ಮತ್ತು ನಿವೃತ್ತ ನ್ಯಾಯಾಧೀಶ ರಾಯ್ ಮೋರ್ ಅವರ ಸೆನೆಟ್ ಪ್ರಚಾರ ಆಂದೋಲನವನ್ನು ಅಪಾಯಕ್ಕೆ ಸಿಲುಕಿಸಿದೆ. ಹಾಗೆಯೇ ಡೆಮಾಕ್ರಟಿಕ್ ಪಕ್ಷದ ಸೆನೆಟರ್ ಅಲ್ ಫ್ರಾಂಕನ್ ಅವರ ಮೇಲೂ ಆರೋಪ ಇದೆ.

ಇವರ ಪೈಕಿ ಬುಷ್‌ ಸೇರಿದಂತೆ ಹಲವು ಪುರುಷರು ತಮ್ಮ ವರ್ತನೆಗೆ ಕ್ಷಮೆ ಯಾಚಿಸಿದ್ದಾರೆ. ಮಹಿಳೆಯರು ತೋರಿದ ಧೈರ್ಯವು ಜಾಡ್ಯವೊಂದನ್ನು ಬಯಲುಗೊಳಿಸಿದೆ ಎಂಬುದು ಈಗ ಸ್ಪಷ್ಟವಾಗಿದೆ. ಶ್ರೀಮಂತ ಹಾಗೂ ಪ್ರಭಾವಿ ಪುರುಷನೊಬ್ಬನ ಬಣ್ಣ ಅಮೆರಿಕದಲ್ಲಿ ಹೀಗೆ ಬಯಲಾಗಿರುವುದು ಇದೇ ಮೊದಲಲ್ಲವಾದರೂ, ಅಮೆರಿಕದಲ್ಲಿ ಏನೋ ಬದಲಾವಣೆ ಆಗಿರುವಂತೆ ಕಾಣಿಸುತ್ತಿದೆ. ಅಮೆರಿಕದ ಅತ್ಯಂತ ಜನಪ್ರಿಯ ಹಾಸ್ಯಗಾರ ಬಿಲ್‌ ಕಾಸ್ಬಿ ಅವರು ತಮಗೆ ಮಾದಕ ವಸ್ತುಗಳನ್ನು ನೀಡಿ, ದೌರ್ಜನ್ಯ ನಡೆಸಿದ್ದರು ಎಂದು ಹತ್ತಾರು ಮಹಿಳೆಯರು 2014ರಲ್ಲಿ ಆರೋಪಿಸಿದ್ದರು. ಆದರೆ ಇವುಗಳಲ್ಲಿ ಬಹುತೇಕ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿರಲಿಲ್ಲ (ಅಪರಾಧ ನಡೆದ ಮೂರು ವರ್ಷಗಳ ನಂತರ ದೂರು ನೀಡಿದರೆ, ಅದನ್ನು ಆಧರಿಸಿ ಕ್ರಮ ಜರುಗಿಸಲು ಅವಕಾಶವಿಲ್ಲ). ಆದರೆ ಕಾಸ್ಬಿ ವಿರುದ್ಧದ ಒಂದು ಪ್ರಕರಣ ನ್ಯಾಯಾಲಯದಲ್ಲಿ ಇದೆ. ಅದರ ವಿಚಾರಣೆ ಮುಂದಿನ ವರ್ಷದಲ್ಲಿ ಅಂತಿಮಗೊಳ್ಳುವ ಸಾಧ್ಯತೆ ಇದೆ. ಕಾಸ್ಬಿ ಅವರ ಪ್ರಕರಣದ ಬಗ್ಗೆ ವ್ಯಾಪಕ ಪ್ರಚಾರ ದೊರೆಯಿತಾದರೂ, ವೈನ್‌ಸ್ಟಿನ್‌ ಪ್ರಕರಣದಲ್ಲಿ ವ್ಯಕ್ತವಾದಂತಹ ಪ್ರತಿಕ್ರಿಯೆಗಳು ಆಗ ಕಂಡುಬರಲಿಲ್ಲ. ಈಗ, ಖ್ಯಾತಿ ಪಡೆದಿರುವ ಒಬ್ಬಿಬ್ಬರು ಪುರುಷರ ಬಣ್ಣ ಬಯಲು ಮಾಡುವ ವರದಿಗಳು ಪ್ರತಿದಿನವೂ ಬರುತ್ತಿವೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಅಮೆರಿಕನ್ ಚಳವಳಿ’ಯಾಗಿ ಗುರುತಿಸಿಕೊಳ್ಳುವಂತಹ ಅಭಿಯಾನವೊಂದು ಟ್ವಿಟರ್ ಮೂಲಕ ರೂಪುಗೊಳ್ಳಲು ಆರಂಭವಾಯಿತು. ಇವೆಲ್ಲವುಗಳಿಗೆ ಭಾರತದಲ್ಲಿ ಪ್ರತಿಕ್ರಿಯೆ ಹೇಗಿತ್ತು? ಅಕಾಡೆಮಿಕ್ ವಲಯದಲ್ಲಿ ಇರುವವರ, ಅಂದರೆ ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ಶಿಕ್ಷಕರು ಹಾಗೂ ಪ್ರೊಫೆಸರ್‌ಗಳ ಒಂದು ಪಟ್ಟಿಯೊಂದಿಗೆ ಭಾರತದಲ್ಲಿನ ಪ್ರತಿಕ್ರಿಯೆ ಆರಂಭವಾಯಿತು. ಆರೋಪ ಹೊರಿಸಿದವರು ಅನಾಮಧೇಯರಾಗಿಯೇ ಉಳಿದರು. ಆದರೆ ಆ ಪಟ್ಟಿಯನ್ನು ಬಹಿರಂಗಪಡಿಸಿದ ಅಮೆರಿಕದಲ್ಲಿನ ವಿದ್ಯಾರ್ಥಿ ರಾಯಾ ಸರ್ಕಾರ್ ಅವರಿಗೆ ಆರೋಪ ಹೊರಿಸಿದವರು ಯಾರೆಂಬುದು ಗೊತ್ತಿರುವಂತಿದೆ. ಮದ್ರಾಸ್ ಸಂಗೀತ ಅಕಾಡೆಮಿಯ ನಿರ್ದೇಶಕರ ಸ್ಥಾನದಲ್ಲಿದ್ದವರು ತಮ್ಮ ಹೆಸರು ಪ್ರಕಟಗೊಂಡ ನಂತರ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ನವೆಂಬರ್ 16ರಂದು ವರದಿಯಾಗಿದೆ. ಆದರೆ ಅವರು ರಾಜೀನಾಮೆ ನೀಡಿರುವುದು ಆರೋಪ ಎದುರಾದ ಕಾರಣಕ್ಕೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ಆರೋಪಗಳ ಪಟ್ಟಿಯ ಮೂಲ ಏನೆಂಬುದಿಲ್ಲ ಎಂಬ ಕಾರಣಕ್ಕೆ ಈ ಪಟ್ಟಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿದೆ. ಆದರೆ, ಭಾರತದಲ್ಲಿ ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಗಮನಿಸಿ ಹೇಳುವುದಾದರೆ, ಮೂಲವನ್ನು ಹೇಳದೆಯೇ ಇರುವುದು ಆಶ್ಚರ್ಯ ಮೂಡಿಸುವಂತಹ ಸಂಗತಿಯೇನೂ ಅಲ್ಲ.

ಭಾರತದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಶೇಕಡ 99ರಷ್ಟು ಜನ ಅದನ್ನು ಪೊಲೀಸರಿಗೆ ತಿಳಿಸುವುದಿಲ್ಲ ಎಂದು ಸರ್ಕಾರದ ಅಂಕಿ-ಅಂಶಗಳು ಹೇಳುತ್ತವೆ. ಅಮೆರಿಕದಲ್ಲಿ ಕೂಡ ಮೂರನೆಯ ಒಂದು ಭಾಗದಷ್ಟು ಜನ ಮಾತ್ರ ಇಂತಹ ಪ್ರಕರಣಗಳ ಬಗ್ಗೆ ಪೊಲೀಸರಿಗೆ ತಿಳಿಸುತ್ತಾರೆ. ಇದು ವ್ಯಕ್ತಿಯ ಮೇಲೆ ನಡೆಯುವ ದೌರ್ಜನ್ಯ ಆಗಿರುವ ಕಾರಣ, ದೌರ್ಜನ್ಯದ ವಿವರಗಳನ್ನೆಲ್ಲ ನೆನಪಿಸಿಕೊಂಡು ಪೊಲೀಸರಿಗೆ ವಿವರ ನೀಡುವುದು ಸುಲಭದ ವಿಚಾರವಲ್ಲ.

ಭಾರತದಲ್ಲಿ ಇನ್ನೂ ಹಲವು ಸಂಗತಿಗಳು ಇವೆ. ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಕ್ಕೆ ಮಹಿಳೆಯರನ್ನೇ ಹೊಣೆ ಮಾಡುವ ನಮ್ಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ರಚನೆ ಅವುಗಳಲ್ಲಿ ಒಂದು. ‘ಮರ್ಯಾದೆ’ ಎಂಬ ಪರಿಕಲ್ಪನೆಯನ್ನು ಮಹಿಳೆಯ ಮೇಲೆ ಹೇರಿರುವ ಸಮಾಜ ನಮ್ಮದು. ಅಲ್ಲದೆ, ನಮ್ಮ ಸಮಾಜದಲ್ಲಿ ಬಲಾಢ್ಯ ಪುರುಷನೊಬ್ಬ ಎಂಥದ್ದೇ ತಪ್ಪು ಎಸಗಿದರೂ ಬಹುತೇಕ ಸಂದರ್ಭಗಳಲ್ಲಿ ಆತನಿಗೆ ಯಾವತ್ತೂ ಶಿಕ್ಷೆ ಆಗುವುದಿಲ್ಲ.

ಬಾಲಿವುಡ್‌ನಲ್ಲಿ ಅಧಿಕಾರವು ಕೆಲವೇ ವ್ಯಕ್ತಿಗಳ ಕೈಯಲ್ಲಿ ಇದೆ - ಅವರು ನಟರಾಗಿರಬಹುದು, ನಿರ್ಮಾಪಕರಾಗಿರಬಹುದು ಅಥವಾ ನಿರ್ದೇಶಕರಾಗಿರಬಹುದು. ಇಂಥ ಬಲಾಢ್ಯರ ವಿರುದ್ಧ ಆರೋಪ ಹೊರಿಸುವ ಮಹಿಳೆ ಪುನಃ ಬಾಲಿವುಡ್‌ನಲ್ಲಿ ಕೆಲಸ ಮಾಡುವ ಆಸೆಯನ್ನೇ ಬಿಡಬೇಕಾಗುತ್ತದೆ. ಇದರ ಜೊತೆಯಲ್ಲೇ ಆಕೆ ಅವಮಾನವನ್ನೂ ಎದುರಿಸಬೇಕಾಗುತ್ತದೆ. ಆರೋಪ ಎದುರಿಸಿದ ಪುರುಷರು ಬಹುತೇಕ ಸಂದರ್ಭಗಳಲ್ಲಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ.

ರಾಜಕೀಯದಲ್ಲಿನ ಪರಿಸ್ಥಿತಿ ಕೆಟ್ಟದ್ದಾಗಿದೆ. ಬೇಟೆಗಾರನಂತಿರುವ ಬಲಾಢ್ಯ ರಾಜಕಾರಣಿಯನ್ನು ಎದುರು ಹಾಕಿಕೊಂಡಾಗ ನ್ಯಾಯ ಸಿಗುವುದು ಬಹುತೇಕ ಅನುಮಾನ. ಅಲ್ಲದೆ, ವ್ಯಕ್ತಿಯ ಖಾಸಗಿತನವನ್ನು ಹರಣ ಮಾಡುವ ವಿಚಾರಗಳಲ್ಲಿ ರಾಜಕೀಯ ಪಕ್ಷಗಳಿಗೆ ಅಳುಕು ಎಂಬುದೇ ಇರುವುದಿಲ್ಲ. ಪ್ರೀತಿಯಲ್ಲಿ ಬಿದ್ದ ಕಾರಣಕ್ಕೇ ಮುಗ್ಧ ಮಹಿಳೆಯರನ್ನು ಅನ್ಯಾಯಕ್ಕೆ ಗುರಿ ಮಾಡಲಾಗುತ್ತದೆ. ರಹಸ್ಯವಾಗಿ ಚಿತ್ರೀಕರಿಸಲಾಗುವ ‘ಲೈಂಗಿಕ ಹಗರಣ’ಗಳು ಇದಕ್ಕೆ ಸಾಕ್ಷಿ.

ಈ ಎಲ್ಲ ಹೊರೆಗಳನ್ನು ಗಮನಿಸಿ ಹೇಳುವುದಾದರೆ, ಈ ಸಂದರ್ಭವು ಬದಲಾವಣೆಯ ಬಿಂದುವಾಗಿ ಪರಿಣಮಿಸುತ್ತದೆಯೇ ಎಂಬುದನ್ನು ನೋಡಬೇಕಿದೆ. ಈಗಿನ ವಾತಾವರಣ ಕಂಡು ಮಹಿಳೆಯರು ಉತ್ತೇಜನ ಪಡೆದು, ಇಂತಹ ದೌರ್ಜನ್ಯ ಹಾಗೂ ಕಿರುಕುಳಕ್ಕೆ ಗುರಿಯಾದ ಭಾರತದ ಹೆಣ್ಣುಮಕ್ಕಳು ತಮಗಾಗಿದ್ದನ್ನು ಬಹಿರಂಗವಾಗಿ ಹೇಳಿ, ಅಮೆರಿಕದ ಹೆಣ್ಣುಮಕ್ಕಳು ಮಾಡಿರುವಂತಹ ಕೆಲಸ ಮಾಡಬಹುದು. ಈ ಎಲ್ಲ ಕೆಲಸಗಳನ್ನೂ ಅವರೇ ಮಾಡಬೇಕು ಎನ್ನುವುದು ಕ್ರೌರ್ಯ ಎಂಬುದು ನಿಜ. ದೌರ್ಜನ್ಯಗಳನ್ನು ಕೊನೆಗೊಳಿಸಲು ಅಥವಾ ಅವುಗಳನ್ನು ಕಡಿಮೆ ಮಾಡಲು ಇರುವ ಏಕೈಕ ಪರಿಹಾರ ಕಾನೂನು ಕ್ರಮ ತಕ್ಷಣಕ್ಕೆ ಆಗುವಂತೆ ಮಾಡುವುದು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡುವುದು. ಆದರೆ ಸಮಸ್ಯೆಗೆ ಸಾಂಸ್ಕೃತಿಕ ಆಯಾಮಗಳೂ ಇದ್ದಾಗ, ಇಂಥ ಸನ್ನಿವೇಶಗಳು ಮಹತ್ವದ ಬದಲಾವಣೆ ತರಬಲ್ಲವು.

ಇತರ ಕೆಲವು ದೇಶಗಳು ತಮ್ಮ ಮಹಿಳೆಯರ ವಿಚಾರವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ. ವೈನ್‌ಸ್ಟಿನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಚೀನಾದ ಸರ್ಕಾರಿ ಮಾಧ್ಯಮ, ‘ಮಹಿಳೆಯರ ಮೇಲಿನ ದೌರ್ಜನ್ಯಗಳು ಚೀನಾದಲ್ಲಿ ಅಷ್ಟೇನೂ ವ್ಯಾಪಕವಾಗಿಲ್ಲ. ಏಕೆಂದರೆ ಚೀನಾದ ಪುರುಷರಿಗೆ ಮಹಿಳೆಯನ್ನು ರಕ್ಷಿಸುವುದನ್ನು ಹೇಳಿಕೊಟ್ಟಿರಲಾಗುತ್ತದೆ. ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸುವುದು, ಅವರನ್ನು ಲೈಂಗಿಕವಾಗಿ ದೌರ್ಜನ್ಯಕ್ಕೆ ಗುರಿಮಾಡುವುದು ಚೀನಾದ ಸಾಂಪ್ರದಾಯಿಕ ಮೌಲ್ಯಗಳಿಗೆ ವಿರುದ್ಧ’ ಎಂದು ಹೇಳಿದೆ. ಇದು ಅಸಂಬದ್ಧ ಮಾತು.

ಈಗ ಸಿಕ್ಕಿರುವ ಅವಕಾಶವನ್ನು ವ್ಯರ್ಥವಾಗಲು ಬಿಡುವುದು ನಾಚಿಕೆಗೇಡಿನ ಸಂಗತಿ ಆಗುತ್ತದೆ. ಏಕೆಂದರೆ, ಈಗಿನ ಸಂದರ್ಭ ಬಳಸಿ ದೊಡ್ಡ ಸಮೂಹವನ್ನು ಪರಿವರ್ತಿಸಬಹುದು. ದೌರ್ಜನ್ಯಕ್ಕೆ ಗುರಿಯಾದವರ ವಿಚಾರದಲ್ಲಿ ಹೆಚ್ಚು ಸೂಕ್ಷ್ಮವಾಗಿ ವರ್ತಿಸುವಂತೆ, ಅವರ ಬಗ್ಗೆ ಕರುಣೆ ಹೊಂದುವಂತೆ ಮಾಡಬಹುದು. ದೌರ್ಜನ್ಯಕ್ಕೆ ಗುರಿಯಾದ ವ್ಯಕ್ತಿಯಲ್ಲೇ ಅಪರಾಧ ಪ್ರಜ್ಞೆ ಮೂಡಿಸುವಂತಹ ಸಾಮಾಜಿಕ ಹಾಗೂ ಸಾಂಸ್ಕೃತಿಕ ನಿಯಮಗಳನ್ನು ಬದಿಗೆ ಸರಿಸಲು ಸಿದ್ಧರಾಗುವಂತೆಯೂ ಮಾಡಲು ಸಾಧ್ಯವಿದೆ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry