7

‘ಮತ ಗಳಿಸಲು ಧರ್ಮ ಬಳಕೆ’

Published:
Updated:

ವಿಜಯಪುರ: ಕೇಂದ್ರ ಸರ್ಕಾರದಿಂದ ಸಾರ್ವಜನಿಕ ಜನಜೀವನ ಸುಧಾರಣೆ ಆಧಾರದ ಮೇಲೆ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಬದಲಿಗೆ ಮತ ಗಳಿಸುವ ಉದ್ದೇಶದಿಂದ ಧಾರ್ಮಿಕ ಆಧಾರದ ಮೇಲೆ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ ದೂರಿದರು. ಭಾನುವಾರ ಇಲ್ಲಿ ಆಯೋಜಿಸಿದ್ದ ಇಂದಿರಾಗಾಂಧಿ 100 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶಕ್ಕಾಗಿ ಪ್ರಾಣವನ್ನೇ ಬಲಿಯಾಗಿ ನೀಡಿರುವ ಇತಿಹಾಸವುಳ್ಳ ಕುಟುಂಬವನ್ನು ನಾವು ನೆನೆಸಬೇಕಾಗಿದೆ, ಇಂದಿರಾ ಗಾಂಧಿ ಕುಟುಂಬದವರು ಎಂದಿಗೂ ದುಬಾರಿ ಬೆಲೆಯ ವಸ್ತ್ರಗಳನ್ನು ಧರಿಸಿರಲಿಲ್ಲ. ನೆಹರು ಬಳಿಕ ಅಧಿಕಾರ ಚುಕ್ಕಾಣಿ ಹಿಡಿದ ಇಂದಿರಾಗಾಂಧಿ, ಬಡವರ ಪರವಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದರು’ ಎಂದು ಸ್ಮರಿಸಿದರು.

ನೂತನ ಕಾಂಗ್ರೆಸ್ ನಾಯಕ ವಿ.ಮಂಜುನಾಥ್ ಮಾತನಾಡಿ, ‘ದೇಶದ ಏಕತೆ ದೃಷ್ಟಿಯಿಂದ ಇಂದಿರಾ ಗಾಂಧಿಯವರು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. ದೇಶದ ಹಿತಕ್ಕಾಗಿ ದುಡಿದವರು. ಬಡವರು ಬ್ಯಾಂಕ್ ವ್ಯವಹಾರದಲ್ಲಿ ಭಾಗಿಯಾಗಬೇಕೆನ್ನುವ ಉದ್ದೇಶದಿಂದ ಬ್ಯಾಂಕ್ ರಾಷ್ಟ್ರೀಕರಣಗೊಳಿಸಿದರು’ ಎಂದರು.

ಪುರಸಭಾ ಸದಸ್ಯ ಎಂ.ಸತೀಶ್ ಕುಮಾರ್ ಮಾತನಾಡಿ, ಇಂದಿರಾ ಗಾಂಧಿ ಪಕ್ಷಕ್ಕಿಂತ ದೇಶವನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದರು, ದೇಶಕ್ಕಾಗಿ ಅವರು ಮಾಡಿರುವ ತ್ಯಾಗ ಮಹತ್ತರ ಎಂದರು.

ಜಿಲ್ಲಾ ಯುವ ಘಟಕದ ಅಧ್ಯಕ್ಷ ನಾಗೇಶ್, ಪುರಸಭಾ ಸದಸ್ಯ ಮಹೇಶ್ ಕುಮಾರ್, ಗೌಸ್ ಖಾನ್, ಮುಖಂಡ ಸಂಪತ್ ಕುಮಾರ್, ಮುನಿಕೃಷ್ಣಪ್ಪ, ತಿರುಮಲೇಶ್, ಕಾರ್ಯದರ್ಶಿ ಎಸ್.ಮಂಜುನಾಥ್, ಮಹಬೂಬ್ ಪಾಷ , ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಫೈಜಲ್, ಗಿರೀಶ್ ಯಾದವ್, ಅಮೃತ್ ರಾಜ್, ಲೇತ್ ನಾರಾಯಣಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry