7

ಬಯಲು ಶೌಚಕ್ಕೆ ಅಂತ್ಯ: ಡಿಸೆಂಬರ್‌ ಗಡುವು

Published:
Updated:

ಬಳ್ಳಾರಿ: ‘ಡಿಸೆಂಬರ್ ಒಳಗೆ ಬಯಲು ಶೌಚ ಪದ್ಧತಿಯನ್ನು ಕೊನೆಗೊಳಿಸದ ಪಂಚಾಯಿತಿಗಳಿಗೆ ಜನವರಿಯಿಂದ ಅನುದಾನ ಬಿಡುಗಡೆ ಮಾಡುವದಿಲ್ಲ. ಅಭಿವೃದ್ಧಿ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತು ಮಾಡಲಾಗುವುದು. ವೇತನ ಬಡ್ತಿಯನ್ನೂ ತಡೆಹಿಡಿಯಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಎಚ್ಚರಿಕೆ ನೀಡಿದರು.

ನಗರದ ಬಿಡಿಎಎ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಪಂಚಾಯಿತಿ ಏರ್ಪಡಿಸಿದ್ದ ‘ವಿಶ್ವ ಶೌಚಾಲಯ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಶೌಚಾಲಯ ನಿರ್ಮಾಣದ ಕಾರ್ಯಾದೇಶವನ್ನು ಪಡೆಯಲು ನಿರಾಕರಿಸುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು’ ಎಂದು ಸ್ಪಷ್ಟಪಡಿಸಿದರು. ‘ಶೌಚಾಲಯ ಹಾಗೂ ಮನೆಗಳ ನಿರ್ಮಾಣಕ್ಕಾಗಿ ಜಿಲ್ಲಾ ಪಂಚಾಯಿತಿಯೇ ಮರಳು ಪೂರೈಸುವ ಕುರಿತು ಚಿಂತನೆ ನಡೆಯುತ್ತದೆ’ ಎಂದರು.

‘ರಾಜ್ಯದಲ್ಲಿ 12 ಜಿಲ್ಲೆಗಳು ಬಯಲು ಶೌಚ ಪದ್ಧತಿಯಿಂದ ಮುಕ್ತಗೊಂಡಿವೆ. ಪಕ್ಕದ ದಾವಣಗೆರೆಯೂ ಆ ಪಟ್ಟಿಯಲ್ಲಿದೆ. ಆದರೆ ಬಳ್ಳಾರಿ ಮಾತ್ರ ಹಿಂದುಳಿದಿದೆ. ಅದಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಜನರಲ್ಲಿ ಯಾರು ಕಾರಣ ಎಂಬುದೇ ತಿಳಿಯದಾಗಿದೆ. ಹೀಗಾಗಿ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

‘ಅಧಿಕಾರಿಗಳು ಜನರ ಮನೆ ಬಾಗಿಲಿಗೆ ತೆರಳಿ ಶೌಚಾಲಯ ನಿರ್ಮಿಸುವಂತೆ ಪ್ರೇರಿಸಬೇಕು. ಜಿಲ್ಲೆಯ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೌಚಾಲಯದ ಬಗ್ಗೆ ಅರಿವು ಮೂಡಿಸಲು ಸಮವಸ್ತ್ರದ ಬಣ್ಣಗಳನ್ನು ಬದಲಾಯಿಸುವ ಚಿಂತನೆ ಇದೆ’ ಎಂದರು.

ಸನ್ಮಾನ: 2012ರ ಬೇಸ್‌ಲೈನ್‌ ಸರ್ವೆಯಲ್ಲಿ ಗುರುತಿಸಲಾದ ಎಲ್ಲ ಕುಟುಂಬಗಳಿಗೂ ಶೌಚಾಲಯ ನಿರ್ಮಿಸಿ ಗಮನ ಸೆಳೆದ ಜಿಲ್ಲೆಯ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಅವರು ಸನ್ಮಾನಿಸಿದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ಚಂದ್ರಶೇಖರ್ ಗುಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರಮೀಜಾ ಬಿ, ಕಾರ್ಯ ನಿರ್ವಹಣಾಧಿಕಾರಿಗಳಾದ ಬಳ್ಳಾರಿಯ ಜಾನಕಿ ರಾಂ, ಹೊಸಪೇಟೆಯ ವೆಂಕೋಬಪ್ಪ, ಸಿರುಗುಪ್ಪದ ಹನುಮಂತ ರೆಡ್ಡಿ, ಸಂಡೂರಿನ ಜೆ.ಎಂ.ಅನ್ನದಾನ ಸ್ವಾಮಿ, ಹಗರಿಬೊಮ್ಮನಹಹಳ್ಳಿಯ ಮಲ್ಲಾ ನಾಯ್ಕ ಹಾಗೂ ಅದೇ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ ವೇದಿಕೆಯಲ್ಲಿದ್ದರು. ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದರೂ, ಎರಡೂವರೆ ಗಂಟೆ ತಡವಾಗಿ ಮಧ್ಯಾಹ್ನ 12.30ಕ್ಕೆ ಆರಂಭವಾಯಿತು.

ಬೈಕ್‌, ಬೈಸಿಕಲ್‌ ಜಾಥಾ 

ಕಾರ್ಯಕ್ರಮಕ್ಕೂ ಮುನ್ನ ನಗರದ ವಿಮ್ಸ್‌ ಮೈದಾನದಿಂದ ಸಭಾಂಗಣದವರೆಗೆ ನಡೆದ ಬೈಕ್‌, ಬೈಸಿಕಲ್‌ ಜಾಗೃತಿ ಜಾಥಾಗೆ ಐಜಿಪಿ ಎಸ್‌.ಮುರುಗನ್‌ ಚಾಲನೆ ನೀಡಿದರು. ನಂತರ ಅವರೊಂದಿಗೆ ಎಸ್ಪಿ ಆರ್‌.ಚೇತನ್‌, ಸಿಇಓ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯಿತಿ ಸದಸ್ಯ ಅಲ್ಲಂ ಪ್ರಶಾಂತ್‌, ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಎಂ.ಎ.ಶಾಕೀಬ್‌ ಬೈಸಿಕಲ್‌ ಜಾಥಾದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಈ ಗಣ್ಯರು ಬೈಸಿಕಲ್‌ ತುಳಿಯುತ್ತಾ ಮುಂದೆ ಸಾಗಿದಾಗ ಚಿಣ್ಣರು, ಯುವಜನರು, ಅಧಿಕಾರಿಗಳು ಅನುಸರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry