7

ಸ್ಮಾರಕ ಅಭಿವೃದ್ಧಿಗೆ ಪ್ರಸ್ತಾವ ಸಲ್ಲಿಸಿ

Published:
Updated:

ಬೀದರ್: ‘ಬೀದರ್‌ನಲ್ಲಿರುವ ಸ್ಮಾರಕಗಳ ಅಭಿವೃದ್ಧಿಗೆ ಅಂದಾಜು ₹ 150 ಕೋಟಿ ಅನುದಾನ ಬೇಕಾಗಲಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣ(ಎಎಸ್‌ಐ) ಇಲಾಖೆಯ ಅಧಿಕಾರಿಗಳು ಯೋಜನಾ ವರದಿಯೊಂದನ್ನು ಸಿದ್ಧಪಡಿಸಿ ಪ್ರಸ್ತಾವ ಸಲ್ಲಿಸಿದರೆ ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಹಣಕಾಸಿನ ನೆರವು ಒದಗಿಸಲಾಗುವುದು’ ಎಂದು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಹೇಳಿದರು.

ನಗರದ ಕೋಟೆ ಆವರಣದಲ್ಲಿ ಭಾನುವಾರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಧಾರವಾಡ ವಲಯದ ವತಿಯಿಂದ ಭಾನುವಾರ ಆಯೋಜಿಸಿದ್ದ ವಿಶ್ವ ಪರಂಪರೆ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಬೀದರ್‌ನಲ್ಲಿ ಅನೇಕ ಅಪರೂಪದ ಹಾಗೂ ಸುಂದರವಾದ ಸ್ಮಾರಕಗಳಿವೆ. ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರುವ ಅರ್ಹತೆ ಇಲ್ಲಿಯ ಸ್ಮಾರಕಗಳಿಗೆ ಇವೆ. ಸ್ಮಾರಕಗಳ ಮಹತ್ವವನ್ನು ಜನ ರಿಗೆ ತಿಳಿಸಿದರೆ ಅವು ಅತಿಕ್ರಮಣಕ್ಕೆ ಒಳಗಾಗುವುದನ್ನು ತಡೆಯಬಹು ದಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯ ಜನತೆ ಈಗಲೂ ನಾನು ಬೀದರ್‌ನಲ್ಲಿ ಕೆಲಸ ಮಾಡಬೇಕೆಂದು ಬಯಸುತ್ತಾರೆ. ಈಗ ನನ್ನ ಕಾರ್ಯವ್ಯಾಪ್ತಿ ವಿಸ್ತರಿಸಿದೆ. ಹೈದರಾಬಾದ್‌ ಕರ್ನಾಟಕದ ಎಲ್ಲ ಜಿಲ್ಲೆಗಳ ಅಭಿವೃದ್ಧಿಗೂ ಗಮನ ಹರಿಸಬೇಕಾಗುತ್ತದೆ’ ಎಂದು ಹೇಳಿದರು.

‘ಇಲ್ಲಿಯ ಜನರು ಸಹಕಾರ ನೀಡಿದ್ದಕ್ಕಾಗಿಯೇ ಇಂದು ವಿಶಾಲ ವಾದ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಾಯಿತು. ಸುಗಮ ಸಂಚಾರಕ್ಕಾಗಿ ಕೆಲವರು ಸ್ವಯಂ ಪ್ರೇರಣೆಯಿಂದ ತಮ್ಮ ಜಾಗವನ್ನು ಬಿಟ್ಟುಕೊಟ್ಟು ಜಿಲ್ಲಾ ಆಡಳಿತದೊಂದಿಗೆ ಕೈಜೋಡಿಸಿದರು. ಹೀಗಾಗಿ ಕೆಲಸ ಮಾಡಲು ನನಗೂ ಸ್ಫೂರ್ತಿ ದೊರೆಯಿತು’ ಎಂದರು.

‘ಕಲಬುರ್ಗಿ ಜನ ಸಹ ನಗರದಲ್ಲಿನ ಅತಿಕ್ರಮಣ ತೆರವುಗೊಳಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಕೆಲವೊಮ್ಮೆ ಸೂಕ್ಷ್ಮವಾಗಿ  ಸುಧಾರಣೆ ತರಬೇಕಾಗುತ್ತದೆ. ಹಣ ಕಾಸಿನ ಲಭ್ಯತೆ, ಅಧಿಕಾರಿಗಳಲ್ಲಿ ಇಚ್ಛಾ ಶಕ್ತಿ ಹಾಗೂ ಸಾರ್ವಜನಿಕರ ಸಹಕಾರ ಬೇಕು. ಅಂದಾಗ ಮಾತ್ರ ಅಭಿವೃದ್ಧಿಯತ್ತ ಹೆಜ್ಜೆ ಹಾಕಲು ಸಾಧ್ಯ’ ಎಂದು ತಿಳಿಸಿದರು.

ಬೀದರ್ ನಿವಾಸಿಗಳಿಗೆ ನಾಡಿನ ಪರಂಪರೆಯ ಬಗೆಗೆ ತಿಳಿವಳಿಕೆ ನೀಡುವ ಅಗತ್ಯವಿಲ್ಲ. ಅವರಿಗೆ ಎಲ್ಲವೂ ಗೊತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಅಧಿಕಾರಿಗಳಿಗೆ ಪರಂಪರೆಯ ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದು ಹೇಳಿದರು.

‘ಬೀದರ್‌ ಹಿಂದುಳಿದ ಜಿಲ್ಲೆಗಳಲ್ಲಿ ಗುರುತಿಸಿಕೊಂಡಿತ್ತು. ಹಿಂದೆ ಅಧಿ ಕಾರಿಗಳು ಇಲ್ಲಿಗೆ ಬಂದರೂ ಕೆಲವು ದಿನಗಳಲ್ಲಿ ವರ್ಗ ಮಾಡಿಕೊಂಡು ಬೇರೆ ಕಡೆಗೆ ಹೋಗುತ್ತಿದ್ದರು. ಜಿಲ್ಲೆ ಹಿಂದುಳಿಯಲು ಆಡಳಿತ ವೈಫಲ್ಯ ಕಾರಣ ಎನ್ನುವುದು ನನಗೆ ಮನವರಿಕೆ ಆಯಿತು. ನಾನು ಜಿಲ್ಲಾಧಿಕಾರಿ ಯಾಗಿದ್ದಾಗ ಆಡಳಿತ ಯಂತ್ರವನ್ನು ಚುರುಕುಗೊಳಿಸಿದೆ. ಜನರೂ ಸಹಕಾರ ನೀಡಿದರು. ಹೀಗಾಗಿ ಅಭಿವೃದ್ಧಿ ಸಾಧ್ಯವಾಯಿತು’ ಎಂದು ತಿಳಿಸಿದರು.

ಸಹಾಯಕ ಪುರತತ್ವ ಅಧಿಕಾರಿ ಎ.ಬಿ.ನಾಗೂರ, ‘ಬೀದರ್, ಕಲಬುರ್ಗಿ ಹಾಗೂ ವಿಜಯಪುರದಲ್ಲಿರುವ ಬಹಮನಿ ಸುಲ್ತಾನರ ಸ್ಮಾರಕಗಳನ್ನು ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸುವಂತೆ ಫೆಬ್ರುವರಿಯಲ್ಲಿ ಯುನೆಸ್ಕೊ ವಿಶ್ವ ಪರಂಪರೆ ಸಮಿತಿಗೆ ಪ್ರಸ್ತಾವ ಸಲ್ಲಿಸಲಾಗುವುದು. ತಜ್ಞರ ತಂಡ ಮುಂದಿನ ವಾರ ಬೀದರ್‌ಗೆ ಭೇಟಿ ನೀಡಿ ಸ್ಮಾರಕಗಳ ದಾಖಲೀಕರಣ ಮಾಡಿಕೊಳ್ಳಲಿದೆ’ ಎಂದು ಹೇಳಿದರು.

ಜ್ಞಾನಸುಧಾ ವಿದ್ಯಾಲಯದ ನಿರ್ದೇಶಕ ಮುನೇಶ್ವರ ಲಾಖಾ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ದರು. ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಜೀವನರಾವ್ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.‌

ಮೌನೇಶ್ವರ ಕುರವತ್ತಿ ಉಪ ಸ್ಥಿತರಿದ್ದರು. ಸಹಾಯಕ ಪುರತತ್ವ ಅಧಿಕಾರಿ ದೇವರಾಜ್‌ ಎಸ್‌.ಎಂ. ನಿರೂಪಿಸಿದರು. ಎಎಸ್‌ಐನ ಸಹಾಯಕ ಸಂರಕ್ಷಣಾಧಿಕಾರಿ ವಿನಾಯಕ ಶಿರಹಟ್ಟಿ ವಂದಿಸಿದರು. ಸಪ್ತಾಹದ ನಿಮಿತ್ತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಗಾಯನ, ನಿಬಂಧ ಮತ್ತು ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿತ್ತು.

* * 

ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಕಾಯಕತತ್ವಕ್ಕೆ ಮಹತ್ವ ನೀಡಿ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸಿದರೆ ಎಲ್ಲ ಪ್ರದೇಶಗಳೂ ಅಭಿವೃದ್ಧಿಯಾಗುತ್ತವೆ. ಮುನೇಶ್ವರ ಲಾಖಾ

ಜ್ಞಾನಸುಧಾ ವಿದ್ಯಾಲಯದ ನಿರ್ದೇಶಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry