7

ಕೋಟೆ ಕಂದಕದಲ್ಲಿ ನಗರದ ಕೊಳಚೆ ನೀರು

Published:
Updated:
ಕೋಟೆ ಕಂದಕದಲ್ಲಿ ನಗರದ ಕೊಳಚೆ ನೀರು

ಬೀದರ್‌: ಹದಿನಾಲ್ಕನೇ ಶತಮಾನದಲ್ಲಿ ನಿರ್ಮಿಸಿದ ಬೀದರ್‌ ಕೋಟೆಯ ಮುಂಭಾಗದಲ್ಲಿ ನಗರದ ಕೊಳಚೆ ನೀರು ಹರಿಯ ಬಿಟ್ಟಿರುವ ಕಾರಣ ಕೋಟೆ ಸೌಂದರ್ಯ ಹಾಗೂ ಸ್ಮಾರಕಗಳಿಗೆ ಧಕ್ಕೆಯಾಗುತ್ತಿದೆ. ಕಂದಕದಲ್ಲಿ ಅಪಾರ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹವಾಗಿದೆ.

ಅಗ್ನಿಶಾಮಕ ಠಾಣೆಯಿಂದ ಜಿಲ್ಲಾಧಿಕಾರಿ ನಿವಾಸದ ಬಳಿ ರಸ್ತೆಗುಂಟ ಕಂದಕ ಇದೆ. ಓಲ್ಡ್‌ಸಿಟಿಯಲ್ಲಿದ್ದ ಹೊರಾಂಗಣ ಕೋಟೆಯ ಗೋಡೆ ಆಸ್ತಿತ್ವ ಕಳೆದುಕೊಂಡಿದೆ. ಈಗ  ದರ್ವಾಜಾಗಳು ಮಾತ್ರ ಉಳಿದುಕೊಂಡಿವೆ. ಓಲ್ಡ್‌ಸಿಟಿಯಿಂದ ಕೋಟೆಯ ವರೆಗೂ ಜಮುನಾ ಮೋರಿ ನಾಲೆ ಇದೆ. ಓಲ್ಡ್‌ಸಿಟಿಯ ಅನೇಕ ನಿವಾಸಿಗಳು ಮನೆಯೊಳಗೆ ಸೆಫ್ಟಿ ಟ್ಯಾಂಕ್‌ ಕಟ್ಟಿಸಿಕೊಂಡಿಲ್ಲ. ಶೌಚಾಲಯ ಪೈಪ್‌ ಜೋಡಿಸಿ ನೇರವಾಗಿ ಗಟಾರ ಹಾಗೂ ನಾಲೆಗೆ ಸಂಪರ್ಕ ಕಲ್ಪಿಸಿದ್ದಾರೆ.

ಮನೆಗಳ ಶೌಚಾಲಯದಿಂದ ಬರುವ ಮಲ ಹಾಗೂ ಬಚ್ಚಲು ಮನೆಯ ಹೊಲಸು ನೇರು ನೇರವಾಗಿ ನಾಲೆ ಸೇರುತ್ತಿದೆ. ಈ ನೀರು ಜಮುನಾ ಮೋರಿ ಮೂಲಕ ಕೋಟೆ ಮುಂದಿನ ಕಂದಕದಲ್ಲಿ ಸಂಗ್ರಹವಾಗುತ್ತಿದೆ. ಹೊಲಸು ತುಂಬಿಕೊಂಡಿರುವ ಕಾರಣ ಪ್ರವಾಸಿಗರು ಮೂಗು ಮುಚ್ಚಿಕೊಂಡು ಐತಿಹಾಸಿಕ ಕೋಟೆ ವೀಕ್ಷಣೆಗೆ ಬರುವಂತಾಗಿದೆ.

‘ನಗರಸಭೆಯವರು ಕೊಳಚೆ ನೀರು ಹರಿದು ಹೋಗಲು ಪ್ರತ್ಯೇಕ ವ್ಯವ್ಯಸ್ಥೆ ಮಾಡಿದರೆ ಕೋಟೆ ಆವರಣ ಸಹಜವಾಗಿ ಸ್ವಚ್ಛವಾಗಲಿದೆ. ಈ ಕುರಿತು ಜಿಲ್ಲಾಧಿಕಾರಿಗೆ ಪತ್ ಬರೆಯಲಾಗುವುದು. ಕೋಟೆ ಸೌಂದರ್ಯ ಕಾಪಾಡಲು ನೆರವಾ ಗುವಂತೆ ಮನವಿ ಮಾಡಲಾಗುವುದು’ ಎನ್ನುತ್ತಾರೆ ಎಎಸ್‌ಐನ ಸಹಾಯಕ ಸಂರಕ್ಷಣಾ ಧಿಕಾರಿ ವಿನಾಯಕ ಶಿರಹಟ್ಟಿ ಹೇಳುತ್ತಾರೆ.

ಜಿಲ್ಲಾಧಿಕಾರಿ ನಿವಾಸದ ಕೂಗಳತೆಯ ಅಂತರದಲ್ಲಿದ್ದರೂ ಅಧಿಕಾರಿಗಳು ಹೊಲಸು ನೀರು ಹರಿದು ಹೋಗಲು ವ್ಯವಸ್ಥೆ ಮಾಡಿಲ್ಲ. ನಗರಸಭೆಯ ಅಧಿಕಾರಿಗಳು ತಮಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲದಂತೆ ಇದ್ದಾರೆ. ಭಾರತೀಯ ಸರ್ವೇಕ್ಷಣಾ ಇಲಾಖೆಯ ಜಾಗದಲ್ಲಿ ಕಂದಕ ಇರುವ ಕಾರಣ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿ ಬಾರಿಯೂ ಜಿಲ್ಲಾಧಿಕಾರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

‘ನಗರದ ಭೂಕಾಲುವೆಗಳಿಗೂ ಶೌಚಾಲಯದ ನೀರು ಹರಿಯ ಬಿಡಲಾಗಿದ್ದು, ಅದನ್ನು ತಡೆದು ಒಳಚರಂಡಿಗೆ ಸಂಪರ್ಕ ಕಲ್ಪಿಸಬೇಕು. ಕೊಳಚೆ ನೀರು ಹರಿದು ಹೋಗಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಇದರಿಂದ ಕೋಟೆಯ ಕಂದಕಕ್ಕೆ ಹೊಲಸು ನೀರು ಬರುವುದು ನಿಂತು ಹೋಗಲಿದೆ. ನಗರಸಭೆಈ ಕೆಲಸ ಮಾಡಬೇಕಿದೆ’ ಎಂದು ಟೀಮ್‌ ಯುವಾದ ಸಂಚಾಲಕ ವಿನಯ ಮಾಳಗೆ ಹೇಳುತ್ತಾರೆ.

ಯುನೆಸ್ಕೊ ಹಾಗೂ ಇಂಡಿಯನ್‌ ಹೆರಿಟೇಜ್‌ ಸಿಟೀಸ್‌ ನೆಟ್‌ವರ್ಕ್‌ ಸಹಯೋಗದಲ್ಲಿ ಕಳೆದ ತಿಂಗಳು ನಡೆದ ‘ಸಾಂಸ್ಕೃತಿಕ ಗಡಿಯಲ್ಲಿ ಭೂಕಾಲುವೆ’ ಕುರಿತ ಮೂರು ದಿನಗಳ ಅಂತರರಾಷ್ಟ್ರೀಯ ಸಮಾವೇಶದಲ್ಲಿ ತಜ್ಞರು ಸ್ಥಳೀಯ ಆಡಳಿತದ ಬಗೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಕೊಳಚೆ ನೀರು ಕೋಟೆ ಮುಂಭಾಗದ ಕಂದಕಕ್ಕೆ ಹರಿದು ಬರದಂತೆ ತಡೆದು ಐತಿಹಾಸಿಕ ಸ್ಮಾರಕ ಉಳಿಸಿಕೊಳ್ಳಬೇಕು ಎಂದು ಮನವಿಮಾಡಿದ್ದರು.

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಅಕ್ಟೋಬರ್‌ 31 ರಂದು ಅಂತರರಾಷ್ಟ್ರೀಯ ಜಲತಜ್ಞರಾದ ಇರಾಕ್‌ನ ಮಜೀದ್‌ ಲಬಾಫ್ ಖನೈಕಿ, ತಜ್ಞರಾದ ಅಮೆರಿಕದ ಡಾ.ಲಾರ್ರಿ ಮೇಸ್‌, ಡಾ.ಡಾಲೆ ಲೈಟ್‌ಫೂಟ್‌, ಬೆಂಗಳೂರಿನ ಇಂಡಿಯನ್ ಹೆರಿಟೇಜ್ ಸಿಟೀಜ್ ನೆಟ್‌ವರ್ಕ್‌ ಫೌಂಡೇಶನ್‌ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎಸ್.ರಾಯ್ಕರ್, ಪಾರೋಮಿತಾ ಬಡೇದೇಸಾಯಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದರು.

ಜಿಲ್ಲಾ ನಗರ ಅಭಿವೃದ್ಧಿ ಕೋಶ ಹಾಗೂ ನಗರಸಭೆಯ ಅಧಿಕಾರಿಗಳಿಗೆ ಆದಷ್ಟು ಬೇಗ ಕ್ರಿಯಾ ಯೋಜನೆ ಸಿದ್ಧಡಿಸಿ ಪ್ರಸ್ತಾವ ಕಳಿಸಿಕೊಡುವಂತೆ ಸೂಚನೆ ನೀಡಿದ್ದರು. ಆದರೆ ಈವರೆಗೆ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ.

* *

ನಗರದಲ್ಲಿನ ಕೊಳಚೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿದರೆ ಸೊಳ್ಳೆಗಳು ಕಡಿಮೆ ಆಗಲಿವೆ. ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬರಲಿದೆ

ಮಹಮ್ಮದ್‌ ಶಾಹೇದ್‌ ಅಲಿ

ಬೀದರ್‌ ಯೂಥ್‌ ಎಂಪಾವರ್‌ಮೆಂಟ್‌ ಅಸೋಸಿಯೇಷನ್ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry