7

ಮರದ ನೆರಳಲ್ಲೇ ತರಗತಿ, ನೆಲವೇ ಬೆಂಚು

Published:
Updated:
ಮರದ ನೆರಳಲ್ಲೇ ತರಗತಿ, ನೆಲವೇ ಬೆಂಚು

ಸಂತೇಮರಹಳ್ಳಿ: ಶಾಲಾ ಬಯಲಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ, ಬಿಸಿಲು, ತುಂತುರು ಮಳೆಗೆ ಮೈಯೊಡ್ಡಿ ಪಾಠ ಕೇಳುವ ಅನಿವಾರ್ಯ. ಬಯಲು ಬಹಿರ್ದೆಸೆ, ದುರಸ್ತಿ ಕಾಣದ ಕೊಠಡಿಗಳು, ಬಿಡಾಡಿ ದನಗಳ ತಾಣ. ಸಂತೇಮರಹಳ್ಳಿ ಹೋಬಳಿಯ ತೆಳ್ಳನೂರು ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿಯಿದು.

ಸರ್ಕಾರ ಹಾಗೂ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಹಣ ವ್ಯಯಿಸುತ್ತಿದೆ. ಆದರೇ, ಇಲ್ಲಿನ ಶಾಲೆ ಅಭಿವೃದ್ಧಿಗೆ ಯಾವುದೇ ಅನುದಾನ ಇಲ್ಲದೇ ಶಿಕ್ಷಕರು ಹಾಗೂ ಮಕ್ಕಳು ಪರಿತಪಿಸುವಂತಾಗಿದೆ.

ಇಲ್ಲಿನ ವಿದ್ಯಾರ್ಥಿಗಳ ದಾಖಲಾತಿಗೆ ಅನುಗುಣವಾಗಿ ಕೊಠಡಿಗಳಿಲ್ಲ. ಆದ್ದರಿಂದ ಬೆಳಿಗ್ಗೆಯಿಂದ ಶಾಲೆ ಬಿಡುವವರೆಗೂ ಮಕ್ಕಳು ಬಯಲಿನಲ್ಲಿ ಪಾಠ ಕೇಳಬೇಕಾದ ಪರಿಸ್ಥಿತಿಯಿದೆ. ಬಿಸಿಲು, ಮಳೆ ಲೆಕ್ಕಿಸದೇ ಶಿಕ್ಷಕರು ಪಾಠ ಪ್ರವಚನ ಬೋಧಿಸಬೇಕಾಗಿದೆ.

ವಿದ್ಯಾರ್ಥಿಗಳಿಗೆ ನೆಲವೇ ಬೆಂಚು, ಮರವೇ ಮೇಲ್ಛಾವಣಿಯಾಗಿದೆ. ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ತರಗತಿಗಳು ನಡೆಯುತ್ತಿದ್ದು, 100 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ 7 ಶಿಕ್ಷಕರು ಇದ್ದಾರೆ.

ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕೊರತೆ ಇಲ್ಲದ ಈ ಶಾಲೆಯಲ್ಲಿ ಕೊಠಡಿಗಳ ಸಮಸ್ಯೆ ಪ್ರಮುಖವಾಗಿದೆ. ಪ್ರತಿ ತರಗತಿಗೆ ಒಂದು ಕೊಠಡಿಯಂತೆ 8 ಕೊಠಡಿಗಳು ಅವಶ್ಯವಿದೆ. ಶಾಲೆಯಲ್ಲಿ ಮುಖ್ಯ ಶಿಕ್ಷಕರ ಕೊಠಡಿ ಸೇರಿದಂತೆ 4 ಕೊಠಡಿಗಳು ಮಾತ್ರ ಇವೆ. ಪ್ರತಿ ಕೊಠಡಿಯಲ್ಲಿ 2 ತರಗತಿಗಳನ್ನು ಅನಿವಾರ್ಯವಾಗಿ ನಡೆಸಬೇಕಾಗಿದೆ.

‘ಒಂದೇ ಸಮಯದಲ್ಲಿ ಒಂದು ಕೊಠಡಿಯಲ್ಲಿ 2 ತರಗತಿಗಳಿಗೆ ಬೋಧಿಸಲು ಆಗವುದಿಲ್ಲ. ಆದ್ದರಿಂದ ಕೆಲವು ತರಗತಿಯನ್ನು ಶಾಲೆಯ ಆವರಣದಲ್ಲಿ, ಮರದ ನೆರಳಲ್ಲಿ ಕೂರಿಸಿ ಪಾಠ ಹೇಳಿ ಕೊಡಬೇಕಾಗಿದೆ. ಮುಖ್ಯ ಶಿಕ್ಷಕರ ಕೊಠಡಿಯಲ್ಲಿಯೂ ಒಂದು ತರಗತಿಯನ್ನು ನಡೆಸುತ್ತಿದ್ದು, ಮಳೆ ಗಾಳಿಗೆ ಈ ಕೊಠಡಿಯು ದುರಸ್ತಿಗೊಂಡಿದೆ’ ಎನ್ನುತ್ತಾರೆ ಶಿಕ್ಷಕರು.

ಕಳೆದ ಒಂದು ವರ್ಷದ ಹಿಂದೆ ಒಂದು ಕೊಠಡಿ ದುರಸ್ತಿಗೊಂಡಿತ್ತು. ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲಿಸಿದಾಗ ‘ಈ ಕೊಠಡಿಯಲ್ಲಿ ಮಕ್ಕಳಿಗೆ ಬೋಧನೆ ಮಾಡುವುದು ಬೇಡ’, ನೂತನ ಕಟ್ಟಡಕ್ಕೆ ಶಿಫಾರಸ್ಸು ಮಾಡುವುದಾಗಿ ಹೇಳಿ ಹೋದವರು ಇಂದಿಗೂ ಗಮನ ಹರಿಸಿಲ್ಲ. ದುರಸ್ತಿಗೊಂಡಿರುವ ಕೊಠಡಿಗೆ ಬೀಗ ಜಡಿದು ವಿದ್ಯಾರ್ಥಿಗಳು ಇದರತ್ತ ಸುಳಿಯದಂತೆ ಶಿಕ್ಷಕರು ನೋಡಿಕೊಳ್ಳುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕೊಠಡಿಗಳ ಸಮಸ್ಯೆಯನ್ನು ಪೋಷಕರ ಸಮೇತ ಮನವಿ ಮಾಡಿಕೊಳ್ಳಲಾಗಿದೆ. ಆದರೂ ಯಾವ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲಿ ಶಾಲೆ ಕೊಠಡಿಗಳ ಸಮಸ್ಯೆ ಬಗೆಹರಿಸಿಲ್ಲ ಎಂಬುದು ಈ ಶಾಲೆಯ ಪೋಷಕರ ದೂರು.

ಕಡ್ಡಾಯವಾಗಿ ಶಾಲೆಗಳಲ್ಲಿ ಶೌಚಾಲಯ ಇರಬೇಕು. ಆದರೇ, ಇಲ್ಲಿರುವ ಶೌಚಾಲಯಗಳು ಹಾಳಾಗಿವೆ. ಮೂಲಸೌಲಭ್ಯ ಇಲ್ಲದಂತಾಗಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬಯಲು ಶೌಚಾಲಯ ಆಶ್ರಯಿಸಬೇಕಾಗಿದೆ.

ಶಾಲೆಗೆ ಸುತ್ತುಗೋಡೆ ಇಲ್ಲದ ಕಾರಣ ಬಿಡಾಡಿ ದನಗಳು, ನಾಯಿಗಳು ಶಾಲೆಯ ಅಂಗಳ ಹಾಗೂ ಕೊಠಡಿಗಳ ಸನಿಹದಲ್ಲಿ ಆಶ್ರಯ ಪಡೆದುಕೊಳ್ಳುತ್ತಿವೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಿ ಶಾಲೆ ಸಮಸ್ಯೆಗೆ ಸ್ಪಂದಿಸಿ ಅಭಿವೃದ್ಧಿಪಡಿಸಬೇಕಾಗಿದೆ.

‘ಪ್ರತಿ ವರ್ಷ ಶಾಲೆಗೆ ದಾಖಲಾತಿ ಹೆಚ್ಚಾಗುತ್ತಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳ ಅವಶ್ಯಕತೆ ಇದೆ. ಮಕ್ಕಳಿಗೆ ಪಾಠ ಪ್ರವಚನಕ್ಕೆ ತೊಂದರೆಯಾಗದಂತೆ ಶಿಕ್ಷಕರ ಸಹಕಾರ ದಿಂದ ನೋಡಿಕೊಳ್ಳುತ್ತಿದೇವೆ. ಶಾಲೆಯ ಸಮಸ್ಯೆಯನ್ನು ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ. ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ’ ಎಂದು ಮುಖ್ಯ ಶಿಕ್ಷಕಿ ಟಿ.ಕೆ. ಮಲ್ಲಮ್ಮ ಹೇಳುತ್ತಾರೆ.

ಕೊಠಡಿಗಳ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ನೂತನ ಕೊಠಡಿಗಳ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದಾರೆ. ‘ಶಾಸಕರ ಅನುದಾನದಲ್ಲಿ ಕೊಠಡಿ ಹಾಗೂ ಶೌಚಾಲಯ ನಿರ್ಮಾಣಕ್ಕೆ ಮನವಿ ಮಾಡಲಾಗಿದೆ’ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮೀಪತಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry